Kim daughter 
ವಿದೇಶ

ಅಜ್ಜನ ಸಮಾಧಿಗೆ ಕಿಮ್ ಪುತ್ರಿ ಭೇಟಿ: ಉ.ಕೊರಿಯಾದ ಮುಂದಿನ ‘ಕ್ವೀನ್’? ವಿಶ್ವಾದ್ಯಂತ ಚರ್ಚೆ!

ಪ್ಯಾಂಗ್ಯಾಂಗ್: ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್ ಅವರ ಮಗಳು ಕಿಮ್ ಜೂ-ಏ ಅವರು ತಮ್ಮ ತಂದೆ-ತಾಯಿಯೊಂದಿಗೆ ಕುಮ್ಸುಸನ್ ಪ್ಯಾಲೇಸ್ ಆಫ್ ದಿ ಸನ್ ಎಂಬ ರಾಜ್ಯ ಸಮಾಧಿಗೆ(ತಮ್ಮ ಅಜ್ಜ-ಅಜ್ಜಿಯ ಸಮಾಧಿ) ಮೊದಲ ಬಾರಿಗೆ ಸಾರ್ವಜನಿಕ ಭೇಟಿ ನೀಡಿದ್ದಾರೆ.
ಹೊಸ ವರ್ಷದ ಸಂದರ್ಭದಲ್ಲಿ ಜನವರಿ 1ರಂದು ನಡೆದ ಈ ಭೇಟಿಯ ಛಾಯಾಚಿತ್ರಗಳನ್ನು ಉತ್ತರ ಕೊರಿಯಾದ ಅಧಿಕೃತ ಸುದ್ದಿ ಸಂಸ್ಥೆ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ (KCNA) ಬಿಡುಗಡೆ ಮಾಡಿದೆ.
ಕಿಮ್ ಜಾಂಗ್-ಉನ್ ಅವರು ಪ್ರಮುಖ ದಿನಗಳಲ್ಲಿ ಮತ್ತು ವಾರ್ಷಿಕೋತ್ಸವಗಳಲ್ಲಿ ಈ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸುವುದು ಸಾಂಪ್ರದಾಯಿಕವಾಗಿದೆ. ಈ ಬಾರಿ ಅವರ ಪತ್ನಿ ರಿ ಸೋಲ್-ಜೂ ಮತ್ತು ಮಗಳು ಜೂ-ಏ ಅವರೊಂದಿಗೆ ಇದ್ದರು. ಛಾಯಾಚಿತ್ರಗಳಲ್ಲಿ ಜೂ-ಏ ಅವರು ತಮ್ಮ ತಂದೆ-ತಾಯಿಯ ನಡುವೆ ನಿಂತು ಬಾಗಿ ಗೌರವ ಸಲ್ಲಿಸುತ್ತಿರುವುದು ಕಂಡುಬಂದಿದೆ.
ಕಳೆದ ಮೂರು ವರ್ಷಗಳಲ್ಲಿ ಜೂ-ಏ ಅವರು ರಾಜ್ಯ ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕ್ಷಿಪಣಿ ಪ್ರಯೋಗಗಳು, ಸೈನ್ಯ ಕಾರ್ಯಕ್ರಮಗಳು ಮತ್ತು ಇತ್ತೀಚೆಗೆ ಚೀನಾಕ್ಕೆ ಭೇಟಿಯಲ್ಲೂ ಅವರು ತಂದೆಯೊಂದಿಗೆ ಇದ್ದರು. ಇದು ಅವರನ್ನು ಉತ್ತರ ಕೊರಿಯಾದ ನಾಲ್ಕನೇ ತಲೆಮಾರಿನ ನಾಯಕಿಯಾಗಿ ತಯಾರು ಮಾಡಲಾಗುತ್ತಿದೆ ಎಂಬ ಊಹಾಪೋಹಗಳನ್ನು ಅಧಿಕವಾಗಿದೆ.
ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆ ಮತ್ತು ವಿಶ್ಲೇಷಕರು ಈ ದಿಶೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಆದರೆ ಜೂ-ಏ ಅವರ ವಯಸ್ಸು ಸುಮಾರು 13 ಎಂದು ಅಂದಾಜಿಸಲಾಗಿದ್ದು, ಅಧಿಕೃತವಾಗಿ ಉತ್ತರಾಧಿಕಾರಿ ಎಂದು ಘೋಷಿಸಲು ಇನ್ನೂ ಸಮಯ(ವಯಸ್ಸು ಹೆಚ್ಚಾಗಬೇಕು) ಇದೆ ಎಂದು ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ವಿಶ್ಲೇಷಕ ಹಾಂಗ್ ಮಿನ್ ಅವರು, "ಅವರು ಪಕ್ಷದ ಸದಸ್ಯತ್ವಕ್ಕೆ ಸಹ ಅರ್ಹರಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.ಈ ಭೇಟಿಯು ಕಿಮ್ ಕುಟುಂಬದ ವಂಶಪಾರಂಪರ್ಯವನ್ನು ಒತ್ತಿಹೇಳುವ ಮತ್ತೊಂದು ಹೆಜ್ಜೆಯಾಗಿದೆ. ಮುಂದಿನ ರೂಲಿಂಗ್ ಪಾರ್ಟಿ ಕಾಂಗ್ರೆಸ್‌ನಲ್ಲಿ ಜೂ-ಏ ಅವರ ಪಾತ್ರವನ್ನು ಔಪಚಾರಿಕಗೊಳಿಸಬಹುದು ಎಂಬ ಚರ್ಚೆಗಳೂ ಕೂಡ ಇದೀಗ ನಡೆಯುತ್ತಿವೆ,(ಏಜೆನ್ಸೀಸ್​).