Iran Thanks India: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅಂತ್ಯಕ್ರಿಯೆಯಲ್ಲಿ ಯಾರೂ ಪಾಲ್ಗೊಳ್ಳಬಾರದು ಎಂಬ ಅಮೆರಿಕದ ಬೆದರಿಕೆಗೆ ಮಣಿದು ಜಗತ್ತಿನ 13 ದೇಶಗಳು ಇರಾನ್‌ನಿಂದ ದೂರವುಳಿದಿದ್ದವು. ಇಂತಹ ಕಠಿಣ ಸಂದರ್ಭದಲ್ಲಿ ಭಾರತ ಮಾತ್ರ ತನ್ನ ಅಧಿಕೃತ ನಿಯೋಗವನ್ನು ಕಳುಹಿಸಿ ಇರಾನ್ ಜೊತೆ ನಿಂತಿದೆ. ಜಾಗತಿಕ ಮಟ್ಟದ ಈ ಭಾರಿ ಒತ್ತಡದ ನಡುವೆಯೂ ತನಗೆ ಬೆಂಬಲ ನೀಡಿದ ಭಾರತದ ಈ ಅಪರೂಪದ ಸ್ನೇಹಕ್ಕೆ ಇರಾನ್ ಸರ್ಕಾರ ಈಗ ಸಾರ್ವಜನಿಕವಾಗಿ ಅತ್ಯಂತ ಭಾವುಕವಾಗಿ ಧನ್ಯವಾದ ಅರ್ಪಿಸಿದೆ. ಅಷ್ಟಕ್ಕೂ ತೆರೆಮರೆಯಲ್ಲಿ ನಡೆದಿದ್ದ ಆ ರಾಜತಾಂತ್ರಿಕ ಬೆಳವಣಿಗೆ ಏನು ಗೊತ್ತಾ..? ಇಲ್ಲಿದೆ ನೋಡಿ ಸಂಪೂರ್ಣ ವರದಿ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಬೆಂಬಲಿತ ತಸ್ನಿಮ್ ಸುದ್ದಿ ಸಂಸ್ಥೆಯ ಪ್ರಕಾರ, ಖಮೇನಿ ಅಂತ್ಯಕ್ರಿಯೆಯು ಜಾಗತಿಕ ರಾಜತಾಂತ್ರಿಕ ಕದನಕ್ಕೆ ಸಾಕ್ಷಿಯಾಗಿತ್ತು. ಅಂತ್ಯಕ್ರಿಯೆಗೆ ಒಂದು ವಾರ ಇರುವ ಮುನ್ನವೇ ಅಮೆರಿಕವು ಪ್ರಮುಖ ದೇಶಗಳು ಟೆಹ್ರಾನ್‌ಗೆ ಅಧಿಕೃತ ನಿಯೋಗಗಳನ್ನು ಕಳುಹಿಸದಂತೆ ತಡೆಯಲು ವ್ಯವಸ್ಥಿತ ಷಡ್ಯಂತ್ರ ರೂಪಿಸಿತ್ತು ಎಂದು ಇರಾನ್ ಮೂಲಗಳು ಆರೋಪಿಸಿವೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರು ಖುದ್ದಾಗಿ ಕನಿಷ್ಠ ಐದು ಅರಬ್ ದೇಶಗಳ ಸರ್ಕಾರಗಳನ್ನು ಸಂಪರ್ಕಿಸಿ ಭೇಟಿ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೆ, ವಿವಿಧ ದೇಶಗಳಲ್ಲಿರುವ ಅಮೆರಿಕದ ರಾಯಭಾರಿಗಳು ಅಲ್ಲಿನ ಸರ್ಕಾರಗಳಿಗೆ ಎಚ್ಚರಿಕೆ ನೀಡಿ, ಇರಾನ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದನ್ನು ವಾಷಿಂಗ್ಟನ್ ವಿರುದ್ಧದ ನಡೆ ಎಂದು ಪರಿಗಣಿಸಲಾಗುವುದು ಮತ್ತು ಇದರಿಂದ ದ್ವಿಪಕ್ಷೀಯ ಸಂಬಂಧ ಹಾಗೂ ಅಭಿವೃದ್ಧಿ ಅನುದಾನದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಹೆದರಿಸಿದ್ದರು.
ಈ ಒತ್ತಡಕ್ಕೆ ಮಣಿದು ಮೂರು ಪೂರ್ವ ಯುರೋಪಿಯನ್ ರಾಷ್ಟ್ರಗಳು, ಐದು ಆಫ್ರಿಕನ್ ದೇಶಗಳು ಮತ್ತು ಎರಡು ಪ್ರಮುಖ ಪೂರ್ವ ಏಷ್ಯಾದ ದೇಶಗಳು ಸೇರಿದಂತೆ ಒಟ್ಟು 13 ರಾಷ್ಟ್ರಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿದವು ಅಥವಾ ಪ್ರಾತಿನಿಧ್ಯದ ಮಟ್ಟವನ್ನು ಕಡಿತಗೊಳಿಸಿದವು. ಗಲ್ಫ್ ರಾಷ್ಟ್ರಗಳ ಪೈಕಿ ಸೌದಿ ಅರೇಬಿಯಾ, ಕತಾರ್ ಮತ್ತು ಒಮಾನ್ ಅಧಿಕೃತ ನಿಯೋಗವನ್ನು ಕಳುಹಿಸಿದ್ದರೆ, ಯುಎಇ, ಕುವೈತ್ ಮತ್ತು ಬಹ್ರೇನ್ ಅಮೆರಿಕದ ಮಾತಿಗೆ ಹೆದರಿ ದೂರವುಳಿದಿದ್ದವು ಎನ್ನಲಾಗಿದೆ.
ಆದರೆ, ಜಾಗತಿಕ ರಾಜಕೀಯದ ಈ ಬಿರುಗಾಳಿಯ ನಡುವೆಯೂ ಭಾರತವು ತನ್ನ ತಟಸ್ಥ ಮತ್ತು ಸ್ವತಂತ್ರ ವಿದೇಶಾಂಗ ನೀತಿಯನ್ನು ಎತ್ತಿಹಿಡಿಯಿತು. ಭಾರತ ಸರ್ಕಾರದ ಪರವಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ಮತ್ತು ಬಿಹಾರದ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಸೈಯದ್ ಅತಾ ಹಸ್ನೈನ್ (ನಿವೃತ್ತ) ಅವರನ್ನೊಳಗೊಂಡ ಉನ್ನತ ಮಟ್ಟದ ಅಧಿಕೃತ ನಿಯೋಗ ಟೆಹ್ರಾನ್‌ಗೆ ಭೇಟಿ ನೀಡಿ ಗೌರವ ಸಲ್ಲಿಸಿತು. ಈ ನಿಯೋಗದೊಂದಿಗೆ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಮತ್ತು ಭಾರತದ ವಿವಿಧ ಧರ್ಮಗಳನ್ನು ಪ್ರತಿನಿಧಿಸುವ ಪ್ರಮುಖ ಧಾರ್ಮಿಕ ಮುಖಂಡರು ಭಾಗವಹಿಸಿದ್ದರು.
ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯ ಸಂಘರ್ಷಗಳ ನಡುವೆಯೂ ಭಾರತವು ತನ್ನ ಹಿತಾಸಕ್ತಿಗಳನ್ನು ಸಮತೋಲನಗೊಳಿಸುವಲ್ಲಿ ಯಶಸ್ವಿಯಾಗಿದೆ. ಒಂದೆಡೆ ಅಮೆರಿಕ, ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳೊಂದಿಗೆ ಅತ್ಯಂತ ನಿಕಟ ಬಾಂಧವ್ಯ ಹೊಂದಿರುವ ಭಾರತ, ಮತ್ತೊಂದೆಡೆ ಇರಾನ್‌ನೊಂದಿಗಿನ ಇಂಧನ ಭದ್ರತೆ ಮತ್ತು ಚಾಬಹಾರ್ ಬಂದರಿನಂತಹ ಯೋಜನೆಗಳ ಕಾರಣಕ್ಕಾಗಿ ತನ್ನ ಸ್ವತಂತ್ರ ನಿಲುವನ್ನು ಬಿಟ್ಟುಕೊಟ್ಟಿಲ್ಲ. ಇರಾನ್‌ನ ಇಡೀ ದೇಶವೇ ರಾಷ್ಟ್ರೀಯ ಶೋಕದಲ್ಲಿರುವ ಈ ಸಂದರ್ಭದಲ್ಲಿ, ನೂರಾರು ದೇಶಗಳ ನಡುವೆ ಭಾರತಕ್ಕೆ ಇರಾನ್ ಸಾರ್ವಜನಿಕವಾಗಿ ವಿಶೇಷ ಧನ್ಯವಾದ ಅರ್ಪಿಸಿರುವುದು ಜಾಗತಿಕ ರಾಜಕಾರಣದಲ್ಲಿ ಭಾರತದ ರಾಜತಾಂತ್ರಿಕ ಶಕ್ತಿ ಮತ್ತು ನೈತಿಕ ನಿಲುವನ್ನು ಜಗತ್ತಿಗೆ ಸಾಬೀತುಪಡಿಸಿದೆ(ಏಜೆನ್ಸೀಸ್).