ನವದೆಹಲಿ: ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ(Khamenei) ಅವರ ಅಂತಿಮ ವಿದಾಯ ಸಮಾರಂಭದ ವೇಳೆ ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ಹಾಗೂ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಭಾವುಕರಾಗಿ ಕಣ್ಣೀರಿಟ್ಟರು. ತೆಹ್ರಾನ್‌ನಲ್ಲಿ ಶುಕ್ರವಾರ ನಡೆದ ಈ ಸಮಾರಂಭದಲ್ಲಿ ಇರಾನ್‌ನ ಉನ್ನತ ನಾಯಕರು, ವಿವಿಧ ದೇಶಗಳ ಗಣ್ಯರು ಹಾಗೂ ವಿದೇಶಿ ಪ್ರತಿನಿಧಿಗಳು ಭಾಗವಹಿಸಿದರು ಎಂದು ಇರಾನ್‌ನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ವರದಿಗಳ ಪ್ರಕಾರ, ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಇರಾನ್ ಹೇಳಿರುವ ಖಮೇನಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಭಾರತ ಸೇರಿ ಹಲವು ದೇಶಗಳ ಉನ್ನತ ಮಟ್ಟದ ನಿಯೋಗಗಳು ತೆಹ್ರಾನ್‌ಗೆ ಆಗಮಿಸಿವೆ. ಸಮಾರಂಭಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಗಿ ಭದ್ರತಾ ವ್ಯವಸ್ಥೆ
ತೆಹ್ರಾನ್ ಗವರ್ನರ್ ಮೊಹಮ್ಮದ್ ಸಾಧೆಘ್ ಮೊತಮೇಡಿಯನ್ ಮಾತನಾಡಿ, ಅಂತಿಮ ವಿದಾಯ ಸಮಾರಂಭಕ್ಕೆ ಅತ್ಯುನ್ನತ ಮಟ್ಟದ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಸಾರ್ವಜನಿಕರಿಗೆ ತೆಹ್ರಾನ್‌ನ ಪ್ರಾರ್ಥನಾ ಮೈದಾನದ ಪ್ರವೇಶ ನೀಡಲಾಗುವುದು. ಪರಿಸ್ಥಿತಿಗೆ ಅನುಗುಣವಾಗಿ ಸಮಯದಲ್ಲಿ ಬದಲಾವಣೆ ಮಾಡುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾರತದಿಂದಲೂ ಪ್ರತಿನಿಧಿಗಳ ಭಾಗಿ
ಅಂತಿಮ ಶ್ರದ್ಧಾಂಜಲಿ ಸಮಾರಂಭದಲ್ಲಿ ಭಾರತದ ಪರವಾಗಿ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಪಬಿತ್ರ ಮಾರ್ಗರಿಟಾ ಹಾಗೂ ಬಿಹಾರ ರಾಜ್ಯಪಾಲ ಸಯ್ಯದ್ ಅತಾ ಹಸ್ನೈನ್ ಭಾಗವಹಿಸಿದರು. ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದು, ಸಮಾರಂಭದಲ್ಲಿ ಮೆಹಬೂಬಾ ಮುಫ್ತಿ, ಸಲ್ಮಾನ್ ಖುರ್ಷಿದ್ ಸೇರಿದಂತೆ ಹಲವು ಭಾರತೀಯ ಗಣ್ಯರು ಉಪಸ್ಥಿತರಿದ್ದ ಚಿತ್ರಗಳನ್ನು ಪ್ರಕಟಿಸಿದೆ.
ಹಲವು ದೇಶಗಳ ಉನ್ನತ ನಾಯಕರು ಹಾಜರು
ಸಮಾರಂಭದಲ್ಲಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್, ನ್ಯಾಯಾಂಗ ಮುಖ್ಯಸ್ಥ ಘೊಲಾಂ-ಹೊಸೇನ್ ಮೊಹ್ಸೇನಿ ಎಜೆಯಿ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಿದರು. ವಿದೇಶಿ ಗಣ್ಯರಲ್ಲಿ ಶೆಹಬಾಜ್ ಶರೀಫ್, ಅಸಿಮ್ ಮುನೀರ್, ನಿಕೋಲ್ ಪಶಿನಿಯನ್, ದಿಮಿತ್ರಿ ಮೆಡ್ವೆಡೆವ್ ಸೇರಿದಂತೆ ಹಲವು ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಇದಲ್ಲದೆ ಇರಾಕ್, ಅಜರ್‌ಬೈಜಾನ್, ಬಾಂಗ್ಲಾದೇಶ, ಉಜ್ಬೇಕಿಸ್ತಾನ, ಬೆಲಾರಸ್, ಕಿರ್ಗಿಸ್ತಾನ್ ಸೇರಿದಂತೆ ಹಲವು ದೇಶಗಳ ಸಂಸತ್ ಸ್ಪೀಕರ್‌ಗಳು ಹಾಗೂ ವಿವಿಧ ರಾಷ್ಟ್ರಗಳ ವಿದೇಶಾಂಗ ಸಚಿವರು, ವಿಶೇಷ ಪ್ರತಿನಿಧಿಗಳು ಕೂಡ ಉಪಸ್ಥಿತರಿದ್ದರು.
100ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳ ನಿರೀಕ್ಷೆ
ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘಾಯಿ ಅವರ ಪ್ರಕಾರ, ಸುಮಾರು 100 ದೇಶಗಳ ಪ್ರತಿನಿಧಿಗಳು, ಗಣ್ಯರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಕನಿಷ್ಠ ಎಂಟು ರಾಷ್ಟ್ರಗಳ ಅಧ್ಯಕ್ಷರು ಅಥವಾ ಪ್ರಧಾನಿಗಳು ಹಾಗೂ 12 ದೇಶಗಳ ಸಂಸತ್ ಸ್ಪೀಕರ್‌ಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಲವು ರಾಷ್ಟ್ರಗಳು ವಿದೇಶಾಂಗ ಸಚಿವರು ಅಥವಾ ವಿಶೇಷ ಪ್ರತಿನಿಧಿಗಳ ಮಟ್ಟದಲ್ಲಿ ಭಾಗವಹಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಅಂತಿಮ ವಿಧಿವಿಧಾನ ಮುಂದುವರಿಕೆ
ಇರಾನ್ ಅಧಿಕಾರಿಗಳ ಅಂದಾಜಿನ ಪ್ರಕಾರ, ಬಹುದಿನಗಳ ಅಂತಿಮ ವಿಧಿವಿಧಾನಗಳಲ್ಲಿ 1.5 ರಿಂದ 2 ಕೋಟಿ ಜನರು ಭಾಗವಹಿಸುವ ಸಾಧ್ಯತೆ ಇದೆ. ಖಮೇನಿ ಅವರ ಪಾರ್ಥಿವ ಶರೀರವನ್ನು ತೆಹ್ರಾನ್‌ನ ಗ್ರ್ಯಾಂಡ್ ಮೊಸಲ್ಲಾದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದು, ಬಳಿಕ ತೆಹ್ರಾನ್‌ನಲ್ಲಿ ಅಂತಿಮ ಯಾತ್ರೆ ನಡೆಯಲಿದೆ. ನಂತರ ಕೋಮ್, ಬಾಗ್ದಾದ್, ಕರ್ಬಲಾ ಮತ್ತು ನಜಫ್‌ನಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು, ಜುಲೈ 9ರಂದು ಮಶ್ಹದ್‌ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ವರದಿಗಳು ತಿಳಿಸಿವೆ,(ಏಜೆನ್ಸೀಸ್).