ಬಾಂಗ್ಲಾದೇಶದ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ  
ವಿದೇಶ

ಬಾಂಗ್ಲಾದ ಮೊಟ್ಟ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾಗೂ ಭಾರತಕ್ಕೂ ಇದೆ ಈ ಒಂದು ಅವಿನಾಭಾವ ನಂಟು! Begum Khaleda Zia

ಪ್ರಮುಖ ಮುಖ್ಯಾಂಶಗಳು

  • ಬಾಂಗ್ಲಾದೇಶದ ಮೊಟ್ಟ ಮೊದಲ ಮಹಿಳಾ ಪ್ರಧಾನಿ ಬೇಗಂ ಖಲೀದಾ ಜಿಯಾ ನಿಧನ
  • ದೀರ್ಘಕಾಲ ಅನಾರೋಗ್ಯ ಕಾರಣದಿಂದಾಗಿ ಮಂಗಳವಾರ (ಡಿ.30) ಕೊನೆಯುಸಿರೆಳೆದ ಜಿಯಾ
  • ಜಿಯಾ ಅವರಿಗೆ ಭಾರತದೊಂದಿಗೆ ಒಂದು ಅವಿನಾಭವ ಸಂಬಂಧವಿದೆ
ಢಾಕಾ: ಬಾಂಗ್ಲಾದೇಶದ ಮೊಟ್ಟ ಮೊದಲ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆ ಹೊಂದಿದ್ದ ಬೇಗಂ ಖಲೀದಾ ಜಿಯಾ ( Begum Khaleda Zia ) ಅವರು ದೀರ್ಘಕಾಲ ಅನಾರೋಗ್ಯ ಕಾರಣದಿಂದಾಗಿ ಮಂಗಳವಾರ (ಡಿ.30) ಕೊನೆಯುಸಿರೆಳೆದಿದ್ದಾರೆ. ಈ ವಿಚಾರವನ್ನು ಜಿಯಾ ಅವರ ಬಾಂಗ್ಲಾದೇಶ ನ್ಯಾಷನಲಿಸ್ಟ್​ ಪಾರ್ಟಿ ( ಬಿಎನ್​ಪಿ ) ಅಧಿಕೃತವಾಗಿ ತಿಳಿಸಿದೆ. ಅಂದಹಾಗೆ ಜಿಯಾ ಅವರು ಬಾಂಗ್ಲಾ ಕಂಡ ಉತ್ತಮ ನಾಯಕಿಯರಲ್ಲಿ ಒಬ್ಬರು. ಇವರಿಗೆ ಭಾರತದೊಂದಿಗೆ ಒಂದು ಅವಿನಾಭವ ಸಂಬಂಧವು ಕೂಡ ಇದೆ.
ಜಿಯಾ ಅವರು ಲಿವರ್​ ಸಿರೋಸಿಸ್​, ಮಧುಮೇಹ, ಸಂಧಿವಾತ, ಎದೆ ಮತ್ತು ಹೃದಯದ ಸಮಸ್ಯೆಗಳು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಢಾಕಾದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅನೇಕ ದಿನಗಳಿಂದ ವಿಶೇಷ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಜಿಯಾ ಅವರು ಬಾಂಗ್ಲಾದೇಶದಲ್ಲಿ ಬಲವಾದ ರಾಜಕೀಯ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ದಕ್ಷಿಣ ಏಷ್ಯಾದ ರಾಜಕೀಯದಲ್ಲಿ ಜಿಯಾ ಅವರು ಪ್ರಭಾವಶಾಲಿ ವ್ಯಕ್ತಿಯಾಗಿದ್ದರು.

ಯಾರು ಈ ಖಲೀದ್​ ಜಿಯಾ?

ಜಿಯಾ ಅವರು 1945ರ ಆಗಸ್ಟ್ 15ರಂದು ದಿನಾಜ್‌ಪುರ (ಈಗ ಬಾಂಗ್ಲಾದೇಶದಲ್ಲಿ) ಜನಿಸಿದರು. ಅವರ ತಂದೆ ಇಸ್ಕಂದರ್ ಮಜುಮ್ದಾರ್ ಹಾಗೂ ತಾಯಿ ತೈಯಬಾ ಮಜುಮ್ದಾರ್. ಜಿಯಾ ಅವರು 1960ರಲ್ಲಿ ಕ್ಯಾಪ್ಟನ್ ಜಿಯಾವುರ್ ರೆಹಮಾನ್ ಅವರನ್ನು ವಿವಾಹವಾದರು. ಜಿಯಾವುರ್ ರೆಹಮಾನ್ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ನಂತರ ರಾಷ್ಟ್ರಪತಿಯಾದರು. 1971ರ ಬಾಂಗ್ಲಾದೇಶ ಸ್ವಾತಂತ್ರ್ಯ ಯುದ್ಧದ ಸಮಯದಲ್ಲಿ ಪಾಕಿಸ್ತಾನಿ ಸೇನೆಯಿಂದ ಬಂಧನಕ್ಕೊಳಗಾಗಿ ಮಕ್ಕಳೊಂದಿಗೆ ಜಿಯಾ ಅವರು ಸೆರೆಯಲ್ಲಿದ್ದರು. 1981ರಲ್ಲಿ ಗಂಡ ಜಿಯಾವುರ್ ರೆಹಮಾನ್ ಹತ್ಯೆಯ ನಂತರ ರಾಜಕಾರಣಕ್ಕೆ ಪ್ರವೇಶಿಸಿದರು ಮತ್ತು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP)ಯ ಅಧ್ಯಕ್ಷೆಯಾದರು. 1980ರ ದಶಕದಲ್ಲಿ ಸೈನಿಕ ಆಡಳಿತದ ವಿರುದ್ಧ ಹೋರಾಟ ನಡೆಸಿ ಪ್ರಜಾಪ್ರಭುತ್ವ ಮರುಸ್ಥಾಪನೆಗೆ ಕಾರಣರಾದರು. 1991 ರಿಂದ 1996 ಹಾಗೂ 2001 ರಿಂದ 2006ರ ವರೆಗೆ ಎರಡು ಅವಧಿಗೆ ಬಾಂಗ್ಲಾದೇಶದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದರು. ಮುಸ್ಲಿಂ ಸಮುದಾಯದಲ್ಲಿ ಪಾಕಿಸ್ತಾನದ ಬೇನಜೀರ್ ಭುಟ್ಟೋ ಬಳಿಕ ಎರಡನೇ ಮಹಿಳಾ ಪ್ರಧಾನಿಯಾದರು. ಅವರ ಆಡಳಿತದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಥಮಿಕ ಶಿಕ್ಷಣ ಉಚಿತಗೊಳಿಸುವುದು, ಹುಡುಗಿಯರಿಗೆ ಉಚಿತ ಶಿಕ್ಷಣ ಮತ್ತು ಆಹಾರ ಕಾರ್ಯಕ್ರಮಗಳಂತಹ ಸುಧಾರಣೆಗಳು ಜಾರಿಗೊಂಡವು. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ತೀವ್ರ ರಾಜಕೀಯ ಎತುರಾಳಿತನವಿತ್ತು. ಹೀಗಾಗಿಯೇ ಅವರ ನಡುವಿನ ಹೋರಾಟವನ್ನು ಬ್ಯಾಟಲಿಂಗ್ ಬೇಗಂಗಳು ಎಂದು ಕರೆಯಲಾಗುತ್ತಿತ್ತು.
ಜಿಯಾ ಅವರು 2018ರಲ್ಲಿ ಭ್ರಷ್ಟಾಚಾರ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾದ್ದರು. ಆದರೆ, ತಮ್ಮ ವಿರುದ್ಧದ ಆರೋಪ ರಾಜಕೀಯ ಪ್ರೇರಿತ ಎಂದಿದ್ದರು. 2020ರಲ್ಲಿ ಅನಾರೋಗ್ಯ ಕಾರಣದಿಂದ ಅವರನ್ನು ಹೌಸ್ ಅರೆಸ್ಟ್‌ ಮಾಡಲಾಯಿತು. 2024ರಲ್ಲಿ ಶೇಖ್ ಹಸೀನಾ ಸರ್ಕಾರ ಪತನದ ನಂತರ ಅವರು ಬಿಡುಗಡೆಯಾದರು. 2025ರಲ್ಲಿ ಭ್ರಷ್ಟಾಚಾರ ಪ್ರಕರಣಗಳಲ್ಲಿ ಖುಲಾಸೆಗೊಂಡರು. ಇದೀಗ ಖಲೀದಾ ಜಿಯಾ ಅವರು ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಭಾರತದ ಜತೆಗಿನ ನಂಟೇನು?

ಅಂದಹಾಗೆ, ಖಲೀದಾ ಜಿಯಾ ಅವರು 1945ರಲ್ಲಿ ಬ್ರಿಟಿಷ್ ಭಾರತದ ಬಂಗಾಳ ಪ್ರೆಸಿಡೆನ್ಸಿಯ (ಈಗ ಪಶ್ಚಿಮ ಬಂಗಾಳದಲ್ಲಿರುವ ಜಲ್ಪೈಗುರಿ) ಆಗಿನ ಅವಿಭಜಿತ ದಿನಾಜ್‌ಪುರ ಜಿಲ್ಲೆಯಲ್ಲಿ ಜನಿಸಿದ ಕಾರಣ ಜಿಯಾ ಅವರಿಗೆ ಭಾರತದ ಸಂಪರ್ಕವಿದೆ. ಭಾರತ ಮತ್ತು ಬಾಂಗ್ಲಾ ವಿಭಜನೆಯ ನಂತರ ಖಲೀದಾ ಮತ್ತು ಅವರ ಕುಟುಂಬ ದಿನಾಜ್‌ಪುರ ಪಟ್ಟಣಕ್ಕೆ (ಈಗ ಬಾಂಗ್ಲಾದೇಶದಲ್ಲಿದೆ) ವಲಸೆ ಬಂದರು. 2006 ರಲ್ಲಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವ ತಿಂಗಳುಗಳ ಮೊದಲು ಖಲೀದಾ ಜಿಯಾ ಅವರು ಭಾರತಕ್ಕೆ ಭೇಟಿ ನೀಡಿದ್ದರು. ಅಲ್ಲದೆ, 2012 ಅಕ್ಟೋಬರ್​ ತಿಂಗಳಲ್ಲಿ ಖಲೀದಾ ಅವರು ಭಾರತಕ್ಕೆ ಭೇಟಿ ನೀಡಿ ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ವಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿದ್ದರು. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ಒಂದು ವರ್ಷದ ನಂತರ ಬಾಂಗ್ಲಾದೇಶಕ್ಕೆ ಭೇಟಿ ನೀಡಿ ಖಲೀದಾ ಜಿಯಾ ಅವರನ್ನು ಭೇಟಿಯಾಗಿದ್ದರು. 
ಹಲವು ವರ್ಷಗಳ ಅನಾರೋಗ್ಯ ಮತ್ತು ಜೈಲುವಾಸದ ಹೊರತಾಗಿಯೂ, ಖಲೀದಾ ಜಿಯಾ ಅವರು ನವೆಂಬರ್‌ನಲ್ಲಿ, 2026ರ ಫೆಬ್ರವರಿಯಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಪ್ರಚಾರ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದರು. ಈ ತಿಂಗಳ ಆರಂಭದಲ್ಲಿ ಜಿಯಾ ಅವರನ್ನು ವಿಶೇಷ ಏರ್ ಆಂಬ್ಯುಲೆನ್ಸ್‌ನಲ್ಲಿ ಲಂಡನ್‌ಗೆ ಕರೆದೊಯ್ಯುವ ಯೋಜನೆಗಳಿದ್ದವು ಆದರೆ, ಅವರ ಸ್ಥಿತಿ ಸಾಕಷ್ಟು ಸ್ಥಿರವಾಗಿರಲಿಲ್ಲ. ಹೀಗಾಗಿ ಆ ಯೋಜನೆಯನ್ನು ಕೈಬಿಡಲಾಯಿತು. ಅಂದಹಾಗೆ, ಖಲೀದಾ ಅವರ ಮಗ ತಾರಿಕ್ ರೆಹಮಾನ್, 17 ವರ್ಷಗಳ ಸ್ವಯಂ-ದೇಶಭ್ರಷ್ಟತೆಯ ನಂತರ ಕಳೆದ ವಾರ ಬಾಂಗ್ಲಾದೇಶಕ್ಕೆ ಮರಳಿದ್ದಾರೆ. ಫೆಬ್ರವರಿ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಮೂಲಕ ಬಿಎನ್‌ಪಿ ಪಕ್ಷವನ್ನು ರೆಹಮಾನ್​ ಮುನ್ನಡೆಸಲಿದ್ದಾರೆ. ಈ ಚುನಾವಣೆಯಲ್ಲಿ ಅವರ ಪಕ್ಷವು ಬಹುಮತ ಗಳಿಸಿದರೆ ಅವರನ್ನು ಪ್ರಧಾನಿ ಮಾಡುವ ನಿರೀಕ್ಷೆಯಿದೆ, (ಏಜೆನ್ಸೀಸ್​).