ಮೃತ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ( Karnataka Student )
- ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿ ಶವವಾಗಿ ಪತ್ತೆ
- ಸುಮಾರು ಆರು ದಿನಗಳ ನಂತರ ಶವವಾಗಿ ಪತ್ತೆಯಾದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ
- ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಮತ್ತೆ ಚಿಂತಿಸುವಂತೆ ಮಾಡಿದ ಘಟನೆ
ಬೆಂಗಳೂರು: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿ ( Karnataka Student ), ಸುಮಾರು ಆರು ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದಾನೆ. ಈ ಒಂದು ಘಟನೆ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಮತ್ತೆ ಚಿಂತಿಸುವಂತೆ ಮಾಡಿದೆ.
ಮೃತ ವಿದ್ಯಾರ್ಥಿಯನ್ನು ಸಾಕೇತ್ ಶ್ರೀನಿವಾಸಯ್ಯ (22) ಎಂದು ಗುರುತಿಸಲಾಗಿದೆ. ಈತ ಕ್ಯಾಲಿಫೋರ್ನಿಯಾ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ ರಾಸಾಯನಿಕ ಮತ್ತು ಜೈವಿಕ ಅಣು ಇಂಜಿನಿಯರಿಂಗ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು. ಕಳೆದ ಫೆಬ್ರವರಿ 9ರಂದು ನಾಪತ್ತೆಯಾಗಿದ್ದ ಸಾಕೇತ್, ಇದೀಗ ಶವವಾಗಿ ಪತ್ತೆಯಾಗಿದ್ದಾನೆ. ಮಗನ ಸಾವಿನ ಸುದ್ದಿ ಕೇಳಿದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಕ್ಯಾಲಿಫೋರ್ನಿಯಾ ಪೊಲೀಸರು ಸಾಕೇತ್ ಮೃತದೇಹವನ್ನು ವಶಪಡಿಸಿಕೊಂಡಿರುವುದನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದೆ. ಅಲ್ಲದೆ, ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ವಾಪಸ್ ಕಳುಹಿಸಲು ಅಗತ್ಯವಿರುವ ಎಲ್ಲಾ ನೆರವನ್ನು ನೀಡುವುದಾಗಿಯೂ ಭರವಸೆ ನೀಡಿದೆ. ಈ ಕಷ್ಟಕರ ಸಮಯದಲ್ಲಿ ಸಾಕೇತ್ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನಾವು ಸಂತಾಪಗಳನ್ನು ವ್ಯಕ್ತಪಡಿಸುತ್ತೇವೆ ಎಂದು ರಾಯಭಾರ ಕಚೇರಿ ತನ್ನ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ಅಂದಹಾಗೆ, ಸಾಕೇತ್, ತನ್ನ ಕ್ಯಾಂಪಸ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡನು. ಇದಾದ ನಂತರ ಆತ ನಾಪತ್ತೆಯಾದನು. ಆತನಿಗಾಗಿ ಲೇಕ್ ಅಂಜಾ ಮತ್ತು ಬರ್ಕ್ಲಿ ಹಿಲ್ಸ್ ಪ್ರದೇಶ ಸೇರಿದಂತೆ ನಗರದಾದ್ಯಂತ ಪೊಲೀಸರು ಹುಡುಕಾಟ ನಡೆಸಿದರು. ಹೀಗಿರುವಾಗ, ಸಾಕೇತ್ ಅವರ ಪಾಸ್‌ಪೋರ್ಟ್ ಮತ್ತು ಲ್ಯಾಪ್‌ಟಾಪ್ ಇದ್ದ ಬ್ಯಾಗ್ ಒಂದು ಟಿಲ್ಡೆನ್ ಪ್ರಾದೇಶಿಕ ಉದ್ಯಾನವನ ಹಾಗೂ ತನ್ನ ಕ್ಯಾಂಪಸ್ಗೆ ತುಂಬಾ ಹತ್ತಿರವಿದ್ದ ನಿವಾಸದ ಬಳಿ ಪತ್ತೆಯಾಯಿತು. ಅದೇ ಸ್ಥಳದಲ್ಲಿ ಹುಡುಕಾಡಿದಾಗ ಆತನ ಮೃತದೇಹವನ್ನು ಪತ್ತೆಯಾಯಿತು.
ಇನ್ನು ಸಾಕೇತ್ ಸಾವಿಗೆ ಕಾರಣ ಏನೆಂಬುದು ಬಹಿರಂಗವಾಗಿಲ್ಲ. ಆತ್ಮಹತ್ಯೆಯೋ? ಕೊಲೆಯೋ? ಎಂಬುದು ನಿಖರವಾಗಿ ತಿಳಿದಿಲ್ಲ. ಸದ್ಯ ಕ್ಯಾಲಿಫೋರ್ನಿಯಾ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಅಂದಹಾಗೆ, ಐಐಟಿ ಮದ್ರಾಸ್‌ನ ಹಳೆಯ ವಿದ್ಯಾರ್ಥಿಯಾಗಿದ್ದ ಸಾಕೇತ್, ಬರ್ಕ್ಲಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು. ಇವರು ಮೂಲತಃ ಕರ್ನಾಟಕದ ತುಮಕೂರು ಜಿಲ್ಲೆಯವರು. ನಮ್ಮ ಮಗ ವಿದೇಶದಲ್ಲಿ ಚೆನ್ನಾಗಿ ಓದಿಕೊಂಡು, ಉನ್ನತ ಸ್ಥಾನಕ್ಕೇರುತ್ತಾನೆ ಅಂತ ತುಂಬಾ ಆಸೆ ಇಟ್ಟುಕೊಂಡಿದ್ದ ಕುಟುಂಬದಲ್ಲಿ ಇದೀಗ ನೀರವ ಮೌನ ಆವರಿಸಿದೆ, (ಏಜೆನ್ಸೀಸ್).