Kannada Festivals 
ವಿದೇಶ

ಪ್ರಪಂಚದಲ್ಲೆಡೆ ಕನ್ನಡದ ಕಂಪು: ವಿಶ್ವದ ಪ್ರಮುಖ ಕನ್ನಡ ಕೂಟಗಳ ಕಿರುನೋಟ | Kannada Festivals

ಬೆಂಕಿ ಬಸಣ್ಣ, ನ್ಯೂಯಾರ್ಕ್
ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ರಾಷ್ಟ್ರಕವಿ ಕುವೆಂಪು ಅವರ ಮಾತಿನಂತೆ ನಮ್ಮ ಕನ್ನಡಿಗರು ಪ್ರಪಂಚದ ವಿವಿಧ ದೇಶಗಳಲ್ಲಿ ನೆಲೆಸಿದ್ದರೂ ಅಲ್ಲಿ ಕನ್ನಡಾಂಬೆಯ ತೇರನ್ನು ಎಳೆಯುತ್ತಿದ್ದಾರೆ. ತಾವು ನೆಲೆಸಿದ ಊರುಗಳಲ್ಲಿ ಕನ್ನಡ ಸಂಘಗಳನ್ನು ಸ್ಥಾಪಿಸಿ, ‘ಕನ್ನಡ-ಕಲಿ’ ಶಾಲೆಗಳನ್ನು ಪ್ರಾರಂಭಿಸಿ, ಕನ್ನಡದ ಕಂಪನ್ನು ಹರಡುವ ಪವಿತ್ರ ಕಾರ್ಯದಲ್ಲಿ ತೊಡಗಿದ್ದಾರೆ.
ಬನ್ನಿ ಸ್ನೇಹಿತರೇ, ಅಂಟಾರ್ಟಿಕಾ ಖಂಡವೊಂದನ್ನು ಬಿಟ್ಟು, ಜಗತ್ತಿನ ಉಳಿದೆಲ್ಲಾ ಖಂಡಗಳಲ್ಲಿಯೂ ಇರುವ ಪ್ರಮುಖ ಕನ್ನಡ ಸಂಘಗಳ ಪಯಣವನ್ನು ಮಾಡಿಬರೋಣ.ಅಮೆರಿಕದಲ್ಲಿರುವ ‘ನಾವಿಕ’ (ನಾವು ವಿಶ್ವ ಕನ್ನಡಿಗರು) ಸಂಸ್ಥೆಯು ಒಂದು ವರ್ಷ ಅಮೆರಿಕದ ಒಳಗಡೆ ಮತ್ತೊಂದು ವರ್ಷ ಅಮೆರಿಕದ ಹೊರಗಡೆ ಹೀಗೆ ಪ್ರತಿ ವರ್ಷವೂ ನಾವಿಕ ವಿಶ್ವ ಕನ್ನಡ ಸಮ್ಮೇಳನಗಳನ್ನು ಆಯೋಜಿಸುತ್ತ ಬಂದಿದೆ.
ಇದೇ ವರ್ಷ ಆ. 29ರಿಂದ 31ರವರೆಗೆ ಮೂರು ದಿವಸಗಳ ಕಾಲ ಫ್ಲೋರಿಡಾದಲ್ಲಿ ಅಧ್ಯಕ್ಷ ಶಿವಕುಮಾರ್ ಮತ್ತು ಸಂಚಾಲಕ ಹರ್ಷಿತ್​ಗೌಡ ಅವರ ನೇತೃತ್ವದಲ್ಲಿ 8ನೇ ನಾವಿಕ ವಿಶ್ವ ಕನ್ನಡ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದೆ. ಅಮೆರಿಕದ ಹೊರಗಡೆ 2024ರಲ್ಲಿ ಯುರೋಪಿನ ಫ್ರಾಂಕ್​ಫರ್ಟ್ ನಲ್ಲಿ, 2022ರಲ್ಲಿ ಆಫ್ರಿಕಾದ ನೈರೋಬಿಯಲ್ಲಿ ಮತ್ತು ಅದಕ್ಕೂ ಮೊದಲು ಭಾರತದ ಮೈಸೂರು, ಬೆಂಗಳೂರಿನಲ್ಲಿ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನಗಳನ್ನು ಆಯೋಜಿಸಿದೆ. 2019ರಲ್ಲಿ ಅಮೆರಿಕದ ಸಿನ್ಸಿನಾಟಿಯಲ್ಲಿ ನಾವಿಕ ವಿಶ್ವ ಕನ್ನಡ ಸಮ್ಮೇಳನ ನಡೆದಿತ್ತು.
ಅಮೆರಿಕದಲ್ಲಿ ಕನ್ನಡಿಗರ ರಾಷ್ಟ್ರ ಮಟ್ಟದ ಇನ್ನೊಂದು ಪ್ರಮುಖ ಸಂಸ್ಥೆ, ಅಮರನಾಥ್ ಗೌಡ ಅಧ್ಯಕ್ಷರಾಗಿರುವ ‘ಅಕ್ಕ’. ಅದರ ವಿಸõತ ರೂಪ ‘ಅಮೆರಿಕ ಕನ್ನಡ ಕೂಟಗಳ ಆಗರ’ (ಅಸೋಸಿಯೇಶನ್ ಆಫ್ ಕನ್ನಡ ಕೂಟಾಸ್ ಆಫ್ ಅಮೆರಿಕ). ಅಮೆರಿಕದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಅಕ್ಕ ವಿಶ್ವ ಕನ್ನಡ ಸಮ್ಮೇಳನ 2000ರಲ್ಲಿ ಹ್ಯೂಸ್ಟನ್​ನಲ್ಲಿ ವಿಜೃಂಭಣೆಯಿಂದ ನಡೆಯಿತು. 2024ರಲ್ಲಿ 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ನಡೆದಿದ್ದು ವರ್ಜೀನಿಯಾದ ರಿಚ್ಮಂಡ್​ನಲ್ಲಿ.
ಹೊನ್ನುಡಿ, ಕನ್ನಡ ಕಹಳೆ: ಯೂರೋಪ್ ಖಂಡದಲ್ಲಿ ಸುಮಾರು 50ಕ್ಕೂ ಹೆಚ್ಚು ಕನ್ನಡ ಕೂಟಗಳಿವೆ. ಜರ್ಮನಿಯ ಫ್ರಾಂಕ್​ಫರ್ಟ್ ರೈನ್ ಮೈನ್ ಕನ್ನಡ ಕೂಟವು ನಾವಿಕ ಸಂಸ್ಥೆಯ ಸಹಯೋಗದೊಂದಿಗೆ 2024ರಲ್ಲಿ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಿತ್ತು. ಇದರಲ್ಲಿ ಯೂರೋಪ್ ಖಂಡದ ಹಲವಾರು ಕನ್ನಡ ಸಂಘಗಳು ಭಾಗವಹಿಸಿದ್ದವು. ಲಂಡನ್​ನಲ್ಲಿರುವ ಕನ್ನಡ ಸಂಘ ತುಂಬ ದೊಡ್ಡದಾಗಿದ್ದು ಇವರ ಕಾರ್ಯಕ್ರಮಗಳಲ್ಲಿ ಸಾವಿರಾರು ಕನ್ನಡಿಗರು ಭಾಗವಹಿಸುತ್ತಾರೆ. ಜರ್ಮನಿಯ ಮ್ಯೂನಿಕ್​ನಲ್ಲಿರುವ ಸಿರಿಗನ್ನಡ ಕೂಟವು ‘ಹೊನ್ನುಡಿ’ ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಿದೆ ಮತ್ತು ‘ಕನ್ನಡ ಕಹಳೆ- ಸಾಹಿತ್ಯ ಸಂಜೆ’ ಹೆಸರಿನ ವೇದಿಕೆಯನ್ನು ಕಲ್ಪಿಸಿ ಲೇಖಕರಿಗೆ ತಮ್ಮ ಸಾಹಿತ್ಯಕ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿದೆ. ಹೀಗೆ ಜಗತ್ತಿನ ಎಲ್ಲ ಖಂಡಗಳಲ್ಲಿಯೂ ನಮ್ಮ ಕನ್ನಡ ಸಂಘಗಳು ಸಕ್ರಿಯವಾಗಿದ್ದು ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಸಾಕಾರಗೊಳಿಸುತ್ತಿವೆ.

‘ಕನ್ನಡ ಕಲಿ’ಗಳು!

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿರುವ ಕರ್ನಾಟಕ ಸಾಂಸ್ಕೃತಿಕ ಸಂಘ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿದೆ. ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟ ಅತ್ಯಂತ ದೊಡ್ಡ ಸಂಘಗಳಲ್ಲಿ ಒಂದಾಗಿದ್ದು ಅದು ನಡೆಸುವ ‘ಕನ್ನಡ ಕಲಿ’ ಶಾಲೆಯಲ್ಲಿ 600ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಉತ್ತರ ಕ್ಯಾರೋಲಿನ ರಾಜ್ಯದ ರಿಸರ್ಚ್ ಟ್ರಯಾಂಗಲ್ ಪಾರ್ಕ್ ಏರಿಯಾದಲ್ಲಿರುವ, ಸಂಪಿಗೆ ಕನ್ನಡ ಕೂಟದ ಸವಿತಾ ರವಿಶಂಕರ್ ದಂಪತಿ ಪ್ರಾರಂಭಿಸಿದ ‘ಕನ್ನಡ ಕಲಿ’ ಶಾಲೆಯು ಅಮೆರಿಕದಲ್ಲಿ ಅಧಿಕೃತ ಮಾನ್ಯತೆ ಪಡೆದ ಮೊದಲ ಕನ್ನಡ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2008ರಲ್ಲಿ ಪ್ರಾರಂಭವಾದ ಶಾರ್ಲೆಟ್​ನಲ್ಲಿರುವ ಕ್ಯಾರೋಲಿನ ಕನ್ನಡ ಬಳಗವು ಈಗ ಹೆಮ್ಮರವಾಗಿ ಬೆಳೆದಿದೆ. ಅಮೆರಿಕದ ಮಧ್ಯಭಾಗದಲ್ಲಿರುವ, ಶಶಿಕಿರಣ್ ಕುಣಿಗಲ್ ಅಧ್ಯಕ್ಷರಾಗಿರುವ ಕೊಲೊರಾಡೊ ಕನ್ನಡ ಕೂಟ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ‘ಕನ್ನಡ ಕಲಿ’ ಶಾಲೆಯನ್ನು ತುಂಬ ವ್ಯವಸ್ಥಿತವಾಗಿ ನಡೆಸುತ್ತ ಬರುತ್ತಿದೆ.


ಗಮನ ಸೆಳೆಯುವ ಹೆಸರುಗಳು

ಪ್ರತಿಯೊಂದು ಕನ್ನಡ ಕೂಟವೂ ವಿಶಿಷ್ಟ ಹೆಸರುಗಳೊಂದಿಗೆ ಗಮನ ಸೆಳೆಯುತ್ತವೆಯಲ್ಲದೆ ಸಕ್ರಿಯವಾಗಿ ಕನ್ನಡ ತಾಯಿಯ ಸೇವೆಯನ್ನು ಮಾಡುತ್ತಿವೆ. ಅಮೆರಿಕದ ರಾಜಧಾನಿ ವಾಷಿಂಗ್ಟನ್​ನಲ್ಲಿ ‘ಕಾವೇರಿ’ ಕನ್ನಡ ಸಂಘ, ಮಿಚಿಗನ್ ರಾಜ್ಯದಲ್ಲಿ ‘ಪಂಪ’ ಕನ್ನಡ ಕೂಟ, ಗ್ರೇಟರ್ ಲ್ಯಾನ್ಸಿಂಗ್ ಕನ್ನಡ ಸಂಘ, ಮಿನ್ನೆಸೋಟ ರಾಜ್ಯದಲ್ಲಿ ‘ಸಂಗೀತ’ ಕನ್ನಡ ಕೂಟ, ಮಿಸ್ಸೋರಿ ರಾಜ್ಯದಲ್ಲಿ ‘ಸಂಗಮ’ ಕನ್ನಡ ಕೂಟ, ನ್ಯೂಯಾರ್ಕ್ ಸಿಟಿಯ ಕನ್ನಡ ಕೂಟ 50ನೇ ವರ್ಷದ ಮತ್ತು ನ್ಯೂಜೆರ್ಸಿಯ ‘ಬೃಂದಾವನ’ ಕನ್ನಡ ಕೂಟ 20ನೇ ವರ್ಷದ ಸಂಭ್ರಮವನ್ನು ಆಚರಿಸಿವೆ. ಸಿಯಾಟಲ್​ನ ‘ಸಹ್ಯಾದ್ರಿ’ ಕನ್ನಡ ಸಂಘ, ಕ್ಲೀವ್​ಲ್ಯಾಂಡಿನ ‘ಕಸ್ತೂರಿ’ ಕನ್ನಡ ಸಂಘ, ಸಿನ್ಸಿನಾಟಿಯ ‘ಸಿಂಚನ’ ಕನ್ನಡ ಬಳಗ, ಫಿಲಡೆಲ್ಪಿಯಾದ ‘ನವೋದಯ’ ಕನ್ನಡ ಸಂಘ, ಟೆಕ್ಸಾಸ್​ನ ‘ಕುವೆಂಪು’ ಕನ್ನಡ ಸಂಘ ನಿರಂತರವಾಗಿ ಕನ್ನಡ ಸೇವೆ ಮಾಡುತ್ತಿವೆ.

ಕನ್ನಡ ಶಾಲೆ ಸ್ಥಾಪನೆ

ಶಶಿಧರ್ ನಾಗರಾಜಪ್ಪ ಅಧ್ಯಕ್ಷರಾಗಿರುವ ದುಬೈ ಕರ್ನಾಟಕ ಸಂಘ 40ಕ್ಕೂ ಹೆಚ್ಚು ವರ್ಷಗಳಿಂದ ಸಕ್ರಿಯವಾಗಿದ್ದು ಅಲ್ಲಿಯ ಕನ್ನಡ ಪಾಠ ಶಾಲೆಯಲ್ಲಿ 1250 ಮಕ್ಕಳು ಉಚಿತವಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 60ಕ್ಕೂ ಹೆಚ್ಚು ಸ್ವಯಂ ಸೇವಕರು ಮತ್ತು ಶಿಕ್ಷಕರಿದ್ದಾರೆ. ಇದು ಕರ್ನಾಟಕದ ಹೊರಗಡೆ ಇರುವ ಅತ್ಯಂತ ದೊಡ್ಡ ಕನ್ನಡ ಪಾಠಶಾಲೆ ಎಂದು ಖ್ಯಾತಿ ಪಡೆದಿದೆ. 1996ರಲ್ಲಿ ಅಧಿಕೃತವಾಗಿ ನೋಂದಣಿಯಾದ ಸಿಂಗಪುರ ಕನ್ನಡ ಸಂಘ ಈವರೆಗೆ ಮೂರು ಬಾರಿ (2006, 2011, 2016) ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನಗಳನ್ನು ಆಯೋಜಿಸಿದೆ. ಥಾಯ್ಲೆಂಡ್​ನಲ್ಲಿರುವ ಥಾಯ್ ಕನ್ನಡ ಬಳಗ ಮತ್ತು ಚೀನಾದಲ್ಲಿರುವ ಹಾಂಗ್​ಕಾಂಗ್ ಕನ್ನಡ ಸಂಘಗಳು ಕಳೆದ 22 ವರ್ಷಗಳಿಂದ ಸಕ್ರಿಯವಾಗಿವೆ.

ವಿಶಿಷ್ಟ ಕಾರ್ಯಕ್ರಮ ಆಯೋಜನೆ

ಮೇರಿಲ್ಯಾಂಡ್ ಶರಾವತಿ ಕನ್ನಡ ಬಳಗ 2024ರಲ್ಲಿ ಕನ್ನಡ ಸಾಹಿತ್ಯ ರಂಗದೊಂದಿಗೆ ಜಂಟಿಯಾಗಿ ‘ವಸಂತ ಸಾಹಿತ್ಯೋತ್ಸವ’ ಆಯೋಜಿಸಿ ಅಮೆರಿಕದ ಎಲ್ಲ ಲೇಖಕರನ್ನು ಮತ್ತು ಕನ್ನಡ ಸಾಹಿತ್ಯ ಪ್ರೇಮಿಗಳನ್ನು ಒಂದೇ ಸೂರಿನಡಿ ತಂದಿತ್ತು. ನ್ಯೂಯಾರ್ಕ್​ನ ರಾಜಧಾನಿ ಅಲ್ಬನಿಯಲ್ಲಿರುವ ಕನ್ನಡ ಕೂಟ ಆಫ್ ಕ್ಯಾಪಿಟಲ್ ಡಿಸ್ಟ್ರಿಕ್ಟ್ (ಕೆಕೆಸಿಡಿ) ಚಿಕ್ಕ ಸಂಘವಾದರೂ ಪ್ರತಿ ತಿಂಗಳು ವಿನೂತನ, ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಅತ್ಯಂತ ಸಕ್ರಿಯವಾಗಿದೆ. ಯಕ್ಷಗಾನ ತರಬೇತಿ ಏಷ್ಯಾ ಖಂಡದಲ್ಲಿರುವ, ‘ಮುತ್ತಿನ ದ್ವೀಪ’ ಎಂದು ಹೆಸರಾಗಿರುವ ಬಹರೈನ್ ದೇಶದಲ್ಲಿರುವ ಕನ್ನಡ ಸಂಘವು ಕರ್ನಾಟಕ ಸರಕಾರದ ಅನುದಾನ ಪಡೆದು ‘ಕನ್ನಡ ಭವನ’ ನಿರ್ವಿುಸಿದೆ. ಅಲ್ಲಿ ನೆಲೆಸಿರುವ ಕನ್ನಡಿಗರ ಪಾಲಿಗೆ ಅದು Home Away From Home ಆಗಿದೆ. ‘ಕನ್ನಡ ಕಲಿ’ ಕಾರ್ಯಕ್ರಮದ ಜೊತೆಗೆ ಯಕ್ಷಗಾನ ತರಬೇತಿಯನ್ನೂ ಕೊಡುತ್ತಿದೆ. ಆಳ್ವಾಸ್ ನುಡಿ ಸಿರಿ ಪ್ರಶಸ್ತಿಯನ್ನೂ ಈ ಸಂಘ ಗಳಿಸಿದೆ. ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಪ್ರತಿ ವರ್ಷ ‘ಕಾವೇರಿ’ ಹೆಸರಿನ ವಾರ್ಷಿಕ ಸ್ಮರಣ ಸಂಚಿಕೆಯನ್ನು ಹೊರ ತರುತ್ತಿದೆ. ರವಿ ಶೆಟ್ಟಿ ಅಧ್ಯಕ್ಷರಾಗಿರುವ ಕತಾರ್ ಕರ್ನಾಟಕ ಸಂಘವು 2024ರಲ್ಲಿ ರಜತ ಮಹೋತ್ಸವವನ್ನು ಆಚರಿಸಿಕೊಂಡಿದೆ.

ಸುವರ್ಣ ಸಂವತ್ಸರ

ಕೆನಡಾ ದೇಶದ ಟೊರಾಂಟೊದಲ್ಲಿರುವ ಕನ್ನಡ ಸಂಘ 1973ರಲ್ಲಿ ಪ್ರಾರಂಭಗೊಂಡಿದ್ದು ಕಳೆದ ವರ್ಷ 50ನೇ ಹುಟ್ಟುಹಬ್ಬದ ಅಂಗವಾಗಿ ಅದ್ದೂರಿಯಿಂದ ‘ಸುವರ್ಣ ಸಂವತ್ಸರ’ವನ್ನು ಆಚರಿಸಿಕೊಂಡಿದೆ. ಆಫ್ರಿಕಾ ಖಂಡದ ಕೀನ್ಯಾ ದೇಶದ ರಾಜಧಾನಿ ನೈರೋಬಿಯಲ್ಲಿರುವ ಕನ್ನಡ ಸಾಂಸ್ಕೃತಿಕ ಸಂಘ 20 ವರ್ಷಗಳನ್ನು ಪೂರೈಸಿದೆ ಹಾಗೂ ನಾವಿಕ ಸಂಸ್ಥೆಯ ಸಹಯೋಗದೊಂದಿಗೆ 2022ರಲ್ಲಿ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿದೆ. ದಕ್ಷಿಣ ಆಫ್ರಿಕಾದ ಕೇಪ್​ಟೌನ್​ನಲ್ಲಿ ಕಳೆದ ವರ್ಷ ಪ್ರಶಾಂತ ರೇವಣ್ಣ ನವರ ನಾಯಕತ್ವದಲ್ಲಿ ಹೊಸ ಕನ್ನಡ ಸಂಘ ಪ್ರಾರಂಭವಾಗಿದೆ.

ಕನ್ನಡ ಭವನ, ಗ್ರಂಥಾಲಯ, ರೇಡಿಯೋ, ಪತ್ರಿಕೆ...

ಆಸ್ಟ್ರೇಲಿಯಾದ ಮೆಲ್ಬರ್ನ್ ನಗರದಲ್ಲಿ ‘ಕನ್ನಡ ಭವನ’ 2023ಯಲ್ಲಿ ಉದ್ಘಾಟನೆಯಾಯಿತು. ಇದರೊಂದಿಗೆ ಆಸ್ಟ್ರೇಲಿಯಾದ ಕನ್ನಡಿಗರ ಬಹುಕಾಲದ ಕನಸು ನನಸಾಯಿತು. 2004ರಲ್ಲಿ ಪ್ರಾರಂಭಗೊಂಡ ಇಲ್ಲಿಯ ಕನ್ನಡ ಗ್ರಂಥಾಲಯದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪುಸ್ತಕಗಳು ಮತ್ತು ಮಾಸ ಪತ್ರಿಕೆಗಳಿವೆ. ಆಸ್ಟ್ರೇಲಿಯಾದಲ್ಲಿ ಕಳೆದ 44 ವರ್ಷಗಳಿಂದ ಅಮೋಘವಾಗಿ ಕನ್ನಡ ಸೇವೆ ಮಾಡುತ್ತಿರುವ ಸಿಡ್ನಿ ಕನ್ನಡ ಸಂಘಕ್ಕೆ ಕರ್ನಾಟಕ ರಾಜ್ಯ ಸರ್ಕಾರ 2003ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕ್ಯಾನ್ಬೆರಾ ಮತ್ತು ಕ್ವೀನ್ಸ್​ಲ್ಯಾಂಡ್​ನಲ್ಲಿರುವ ಕನ್ನಡ ಸಂಘಗಳೂ ಕನ್ನಡ ಸೇವೆಯಲ್ಲಿ ಮಾದರಿಯಾಗಿವೆ. ಆಸ್ಟ್ರೇಲಿಯಾದ ಸಮೀಪವಿರುವ ಪುಟ್ಟ ದೇಶ ನ್ಯೂಜಿಲೆಂಡ್​ನಲ್ಲಿರುವ ಕನ್ನಡ ಸಂಘ 30 ವರ್ಷಗಳನ್ನು ಪೂರೈಸಿದೆ. ‘ಕನ್ನಡ ವಾಣಿ’ ರೇಡಿಯೋ ಕಾರ್ಯಕ್ರಮ, ತ್ರೖೆಮಾಸಿಕ ಪತ್ರಿಕೆಗಳ ಬಿಡುಗಡೆ, ಕನ್ನಡ ಗ್ರಂಥಾಲಯ- ಹೀಗೆ ವಿವಿಧ ಕಾರ್ಯಕ್ರಮ, ಚಟುವಟಿಕೆಗಳಲ್ಲಿ ಅದು ಸಕ್ರಿಯವಾಗಿದೆ.

ವಿಶ್ವ ಕನ್ನಡ ಕೂಟಗಳ ಕೈಪಿಡಿ

ವಿದೇಶಗಳಲ್ಲಿರುವ ಎಲ್ಲ ಕನ್ನಡ ಸಂಘಗಳ ಮಾಹಿತಿ ಕ್ರೋಡೀಕರಿಸಿ ಒಂದು ಸಮಗ್ರ ಪುಸ್ತಕ ಹೊರತರಬೇಕೆಂಬ ಮಹತ್ವಾಕಾಂಕ್ಷೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್ ಜೋಶಿ ನನ್ನೊಂದಿಗೆ ಹಂಚಿಕೊಂಡು, ಈ ಪುಸ್ತಕಕ್ಕೆ ನಾನು ಪ್ರಧಾನ ಸಂಪಾದಕನಾಗಬೇಕೆಂದು ಕೇಳಿಕೊಂಡಿದ್ದರು. ತಕ್ಷಣವೇ ನಾನು ಜರ್ಮನಿಯ ಶೋಭಾ ಚೌಹಾಣ್, ಸಿಂಗಾಪುರದ ವೆಂಕಟ ರತ್ನಯ್ಯ, ಆಸ್ಟ್ರೇಲಿಯಾದ ಭಾಗ್ಯ ಪಾಟೀಲ್, ದುಬೈನ ಶಶಿಧರ ನಾಗರಾಜಪ್ಪ, ಕತಾರ್​ನ ಸುಬ್ರಹ್ಮಣ್ಯ ಹೆಬ್ಬಾಗಿಲು, ಅಮೆರಿಕದಲ್ಲಿರುವ ಅಕ್ಷತಾ, ಅರ್ಪಿತಾ, ಪ್ರಸನ್ನಕುಮಾರ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ನಿವೇದಿತಾ ಹಾವನೂರ-ಹೊನ್ನತ್ತಿ ಅವರನ್ನು ಒಳಗೊಂಡ ಸಂಪಾದಕ ಮಂಡಳಿಯನ್ನು ರಚಿಸಿಕೊಂಡು ಮೂರೇ ತಿಂಗಳಲ್ಲಿ ಪುಸ್ತಕವನ್ನು ಹೊರತಂದೆವು. ಕಳೆದ ವರ್ಷ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ವಿಶ್ವ ಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆಯಾಯಿತು.