ಪುಟಿನ್ ಎದುರಿಗೆ ಪ್ರೇಯಸಿಗೆ ಪ್ರೀತಿ ನಿವೇದನೆ
- ಪುಟಿನ್ ಪತ್ರಿಕಾಗೋಷ್ಠಿಯಲ್ಲಿ ಪ್ರೇಮ ನಿವೇದನೆ
- ಪ್ರೇಯಸಿಗೆ 'ವಿಲ್ ಯೂ ಮ್ಯಾರಿ ಮೀ' ಎಂದ ಪ್ರಿಯಕರ
- ರಷ್ಯಾ ಅಧ್ಯಕ್ಷ ಪುಟಿನ್ ಸೇರಿ ಹಲವರಿಂದ ಚಪ್ಪಾಳೆ
ಮಾಸ್ಕೋ: ಸೆಲೆಬ್ರಿಟಿಗಳು ತಮ್ಮ ಪ್ರೀತಿ-ಪಾತ್ರರಿಗೆ ವಿಭಿನ್ನ ರೀತಿಯಲ್ಲಿ ಪ್ರೀತಿ ನಿವೇದನೆ (ಪ್ರಪೋಸ್) ಮಾಡುವುದನ್ನು ನಾವೆಲ್ಲರೂ ನೋಡಿದ್ದೇವೆ. ಕ್ರೀಡಾಪಟುಗಳು ಕ್ರೀಡಾಂಗಣದಲ್ಲಿ ಪ್ರೀತಿ ಸಂಬಂಧವನ್ನು ಬಹಿರಂಗಪಡಿಸಿದರೆ, ಸಿನಿ ತಾರೆಯರು ವೇದಿಕೆಗಳಲ್ಲಿ ಎಲ್ಲರ ಮುಂದೆ ವ್ಯಕ್ತಪಡಿಸುತ್ತಾರೆ. ಇಂತಹ ಅನೇಕ ಸನ್ನಿವೇಶಗಳು ಈ ಹಿಂದೆ ನಡೆದಿವೆ. ಇದಕ್ಕೆ ಹಲವು ನಿದರ್ಶನಗಳು ಸಹ ಇವೆ.
ಇತ್ತೀಚೆಗೆ, ರಷ್ಯಾದಲ್ಲಿ ಇದೇ ರೀತಿಯ ಘಟನೆ ನಡೆದಿರುವುದು ಸದ್ಯ ನೆಟ್ಟಿಗರ ಅಚ್ಚರಿಗೆ ಕಾರಣವಾಗಿದೆ. ಪುಟಿನ್ ಮ್ಯಾರಥಾನ್ ಪತ್ರಿಕಾಗೋಷ್ಠಿಯಲ್ಲಿದ್ದ ವೇಳೆ ತನ್ನ ಪತ್ರಕರ್ತೆ ಗೆಳತಿಗೆ ಯುವಕ ಪ್ರಪೋಸ್ ಮಾಡಿದ್ದಾನೆ. ಅದು ಗಂಭೀರವಾದ ಚರ್ಚೆಯಲ್ಲಿದ್ದ ಸಮಯದಲ್ಲೇ ಹೀಗಾಗಿರುವುದು ಹುಬ್ಬೇರುವ ಸಂಗತಿ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಪುಟಿನ್ ಪ್ರತಿಬಾರಿ ವರ್ಷದ ಕೊನೆಯಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಾರೆ. ಅಂತೆಯೇ, ಕರೆದಿದ್ದ ಪತ್ರಿಕಾಗೋಷ್ಠಿಯ ನೇರ ಪ್ರಸಾರವಾಗುತ್ತಿದ್ದಾಗ, ಯುವ ಪತ್ರಕರ್ತ ಕಿರಿಲ್ ಬಜೆನೋವ್ (23) ರಷ್ಯಾ ಅಧ್ಯಕ್ಷರ ಮಾತುಕತೆಯ ಮಧ್ಯೆಯೇ ಎದ್ದುನಿಂತು ತನ್ನ ಗೆಳತಿಗೆ ಪ್ರಪೋಸ್ ಮಾಡಿದ. ಈ ದೃಶ್ಯವನ್ನು ನೋಡ್ತಿದ್ದಂತೆ ಒಂದು ನಿಮಿಷ ಪುಟಿನ್ ಅವರು ಅಚ್ಚರಿಗೆ ಒಳಗಾದರು.
ಅಚ್ಚರಿ ಎಂದರೆ ಈ ಸಂದರ್ಭದಲ್ಲಿ, ಪುಟಿನ್ ಕೂಡ ಚಪ್ಪಾಳೆ ತಟ್ಟಿ, ನವ ಜೋಡಿಗೆ ಮೌಖಿಕವಾಗಿ ಶುಭಕೋರಿದರು. ಇದೇ ವೇಳೆ ಪತ್ರಿಕಾಗೋಷ್ಠಿಯಲ್ಲಿದ್ದವರು ಮತ್ತೊಮ್ಮೆ ಚಪ್ಪಾಳೆ ತಟ್ಟಿದರು. ಇನ್ನು ಪುಟಿನ್ರನ್ನು ನೇರವಾಗಿ ಉದ್ದೇಶಿಸಿದ ಬಜೆನೋವ್, "ಮಾನ್ಯ ಅಧ್ಯಕ್ಷರೇ, ನಮ್ಮ ಮದುವೆಯಲ್ಲಿ ನಿಮ್ಮನ್ನು ನೋಡಲು ನಮಗೆ ತುಂಬಾ ಸಂತೋಷವಿದೆ" ಎಂದು ಆಹ್ವಾನಿಸಿದರು. ಆದರೆ, ಬರುವುದಾಗಿ ಹೇಳದ ಪುಟಿನ್, ಕಿರುನಗೆ ಬೀರಿದ್ದಾರೆ,(ಏಜೆನ್ಸೀಸ್).