ಕುಖ್ಯಾತ ಲೈಂಗಿಕ ಅಪರಾಧಿ ಜತೆ ಬಿಲ್​ ಕ್ಲಿಂಟನ್​, ಮೈಕಲ್​ ಜಾಕ್ಸನ್​ 
ವಿದೇಶ

ಅಮೆರಿಕದಲ್ಲಿ ಬಿರುಗಾಳಿ ಎಬ್ಬಿಸಿದ ಎಪ್ಸ್ಟೀನ್‌ ಫೈಲ್ಸ್​: ಕುಖ್ಯಾತ ಲೈಂಗಿಕ ಅಪರಾಧಿ ಜತೆ ಬಿಲ್​ ಕ್ಲಿಂಟನ್​, ಮೈಕಲ್​ ಜಾಕ್ಸನ್​! Jeffrey Epstein

ಪ್ರಮುಖ ಮುಖ್ಯಾಂಶಗಳು

  • ಅಮೆರಿಕದ ಕುಖ್ಯಾತ ಲೈಂಗಿಕ ಅಪರಾಧಿ ಮತ್ತು ಉದ್ಯಮಿ ಜೆಫ್ರಿ ಎಪ್ಸ್ಟೀನ್‌ ಕಡತ ಬಿಡುಗಡೆ
  • ಜೆಫ್ರಿ ಎಪ್ಸ್ಟೀನ್‌ ಕುರಿತು ನಡೆಸಿದ ತನಿಖೆಗೆ ಸಂಬಂಧಿಸಿದ ಸಾವಿರಾರು ಪುಟಗಳ ದಾಖಲೆ ರಿಲೀಸ್​
  • ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಖ್ಯಾತ ಪಾಪ್​ ಗಾಯಕ ಮೈಕೆಲ್ ಜಾಕ್ಸನ್ ಫೋಟೋ ರಿವೀಲ್​
ವಾಷಿಂಗ್ಟನ್​: ಅಮೆರಿಕದ ಕುಖ್ಯಾತ ಲೈಂಗಿಕ ಅಪರಾಧಿ ಮತ್ತು ಉದ್ಯಮಿ ಜೆಫ್ರಿ ಎಪ್ಸ್ಟೀನ್‌ ( Jeffrey Epstein )ಗೆ ಸಂಬಂಧಿಸಿದ ನಿಗೂಢ ಕಡತಗಳನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿರುವ ಸಂಗತಿಗಳು ಅಮೆರಿಕದಲ್ಲಿ ಬಿರುಗಾಳಿ ಎಬ್ಬಿಸಿದೆ.
ಜೆಫ್ರಿ ಎಪ್ಸ್ಟೀನ್‌ ಕುರಿತು ನಡೆಸಿದ ತನಿಖೆಗೆ ಸಂಬಂಧಿಸಿದ ಸಾವಿರಾರು ಪುಟಗಳ ದಾಖಲೆಗಳನ್ನು ಯುಎಸ್ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದೆ. ಈ ಕಡತಗಳಿಗೆ ಇತ್ತೀಚೆಗಷ್ಟೆ ಟ್ರಂಪ್​ ಸಹಿ ಹಾಕಿ, ಬಿಡುಗಡೆ ಮಾಡುವಂತೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಎಪ್ಸ್ಟೀನ್​ಗೆ ಸಂಬಂಧಿಸಿದ ಎಲ್ಲ ಫೈಲ್‌ಗಳನ್ನು ಶುಕ್ರವಾರ (ಡಿ.19) ಬಿಡುಗಡೆ ಮಾಡಲಾಯಿತು.
ಈ ಬಗ್ಗೆ ಮಾತನಾಡಿರುವ ಅಮೆರಿಕದ ಡೆಪ್ಯೂಟಿ ಅಟಾರ್ನಿ ಜನರಲ್​ ಟಾಡ್​ ಬ್ಲಾಂಚೆ, ನಾವು ಪ್ರಸ್ತುತ ಸ್ವಲ್ಪ ದಾಖಲೆಗಳನ್ನು ಮಾತ್ರ ಬಿಡುಗಡೆ ಮಾಡುತ್ತಿದ್ದೇವೆ. ಮುಂಬರುವ ವಾರಗಳಲ್ಲಿ ಇನ್ನು ಹೆಚ್ಚಿನ ಸಂಗತಿಗಳು ಹೊರಗಡೆ ಬರಲಿವೆ ಎಂದು ಹೇಳಿಕೆ ನೀಡಿದ್ದಾರೆ.
ಹೊಸದಾಗಿ ಬಿಡುಗಡೆ ಮಾಡಿರುವ ಫೋಟೋಗಳಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಖ್ಯಾತ ಪಾಪ್​ ಗಾಯಕ ಮೈಕೆಲ್ ಜಾಕ್ಸನ್ ಕಾಣಿಸಿಕೊಂಡಿದ್ದಾರೆ. ಬಿಲ್ ಕ್ಲಿಂಟನ್ ಅವರು ಗುರುತು ಸಿಗದ ಮಹಿಳೆಯೊಂದಿಗೆ ನೀರಿನಲ್ಲಿ ಆಟವಾಡುತ್ತಿರುವ ದೃಶ್ಯ ಫೋಟೋದಲ್ಲಿದೆ. ಅಲ್ಲದೆ, ಬಿಲ್ ಕ್ಲಿಂಟನ್ ಅವರು ಮಹಿಳೆಯೊಂದಿಗೆ ಬಾತ್​ಟಬ್​ನಲ್ಲಿ ಮಲಗಿರುವ ಫೋಟೋ ಕೂಡ ದಾಖಲೆಗಳಲ್ಲಿ ಇದೆ. ಆದರೆ, ಕ್ಲಿಂಟನ್​ ಅವರು ಯಾವ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಸದ್ಯ ಬಹಿರಂಗಪಡಿಸಲಾಗಿಲ್ಲ. ಹೊಸದಾಗಿ ಬಿಡುಗಡೆಯಾದ ಫೋಟೋಗಳಲ್ಲಿ ಹೆಚ್ಚಾಗಿ ಬಿಲ್ ಕ್ಲಿಂಟನ್ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಅಮೆರಿಕದ ಅಧ್ಯಕ್ಷರಾಗಿರುವ ಟ್ರಂಪ್ ಅವರ ಯಾವುದೇ ಫೋಟೋಗಳು ಇಲ್ಲ. ಆದರೆ, ಟ್ರಂಪ್​ಗೂ ಜೆಫ್ರಿ ಎಪ್ಸ್ಟೀನ್‌ಗೂ ಸಂಬಂಧ ಇದ್ದಿದ್ದು ಎಲ್ಲರಿಗೂ ತಿಳಿದಿದೆ.
ದಿವಂಗತ ಪಾಪ್ ತಾರೆ ಮೈಕೆಲ್ ಜಾಕ್ಸನ್ ಕೂಡ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರೋಲಿಂಗ್ ಸ್ಟೋನ್ಸ್‌ನ ಫ್ರಂಟ್‌ಮ್ಯಾನ್ ಮಿಕ್ ಜಾಗರ್ ಅವರಂತಹ ಉನ್ನತ ವ್ಯಕ್ತಿಗಳೊಂದಿಗೆ ಎಪ್ಸ್ಟೀನ್ ಕಾಣಿಸಿಕೊಂಡಿದ್ದಾನೆ. ಗಮನಾರ್ಹ ಸಂಗತಿ ಏನೆಂದರೆ, ಟ್ರಂಪ್ ಸಹಿ ಮಾಡಿದ ಚೆಕ್ ಒಂದು ಚಿತ್ರದಲ್ಲಿ ಕಾಣಿಸಿಕೊಂಡಿದೆ. ಎಪ್ಸ್ಟೀನ್​ನ 50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ತೆಗೆದ ಆಲ್ಬಮ್ ಫೋಟೋಗಳಲ್ಲಿ ಚೆಕ್​ ಕಾಣಿಸಿಕೊಂಡಿದೆ. ಆದರೆ, ಶ್ವೇತಭವನವು ಈ ಫೋಟೋದ ಬಗ್ಗೆ ಈವರೆಗೂ ಯಾವುದೇ ಕಾಮೆಂಟ್ ಮಾಡಿಲ್ಲ. ಇತರ ಹಲವಾರು ದಾಖಲೆಗಳಲ್ಲಿ ನಗ್ನ ಮತ್ತು ಕಡಿಮೆ ಬಟ್ಟೆ ಧರಿಸಿದ ಫೋಟೋಗಳು ಇವೆ.
ಇನ್ನು ಬಿಲ್ ಕ್ಲಿಂಟನ್ ಅವರ ಫೋಟೋಗಳಿಗೆ ವೈಟ್ ಹೌಸ್​ನ ಸಂವಹನ ನಿರ್ದೇಶಕ ಸ್ಟೀವನ್ ಚೆಯುಂಗ್ ತಮ್ಮ ಎಕ್ಸ್​ನಲ್ಲಿ ಪ್ರತಿಕ್ರಿಯಿಸಿದ್ದು, ಬಿಲ್ ಕ್ಲಿಂಟನ್ ಜಗತ್ತಿನಲ್ಲಿ ಯಾವುದೇ ಚಿಂತೆಗಳಿಲ್ಲದೆ ಶಾಂತಿಯಿಂದ ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ, ವೈಟ್​ಹೌಸ್ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್ ಲೀವಿಟ್ ಕೂಡ ಬಿಲ್ ಕ್ಲಿಂಟನ್ ಅವರ ಫೋಟೋಗಳನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದು, "ಛೀ!!" ಎಂದು ಕಾಮೆಂಟ್ ಮಾಡಿದ್ದಾರೆ.

ಯಾರು ಈ ಜೆಫ್ರಿ ಎಪ್ಸ್ಟೀನ್‌?

ಜೆಫ್ರಿ ಎಡ್ವರ್ಡ್ ಎಪ್ಸ್ಟೀನ್ (1953-2019) ಅಮೆರಿಕದ ಶ್ರೀಮಂತ ಹಣಕಾಸು ಉದ್ಯಮಿ ಮತ್ತು ಲೈಂಗಿಕ ಅಪರಾಧಿ. ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿ, ಕಳ್ಳಸಾಗಾಣೆ ಮಾಡಿದ ಆರೋಪ ಆತನ ಮೇಲಿದೆ. 2008ರಲ್ಲಿ ಶಿಕ್ಷೆಗೆ ಒಳಗಾಗಿದ್ದ ಮತ್ತು 2019ರಲ್ಲಿ ಮತ್ತೆ ಬಂಧನಕ್ಕೊಳಗಾಗಿ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡನು. ಬಿಲ್ ಕ್ಲಿಂಟನ್, ಡೊನಾಲ್ಡ್ ಟ್ರಂಪ್, ಪ್ರಿನ್ಸ್ ಆಂಡ್ರ್ಯೂ ಸೇರಿದಂತೆ ಹಲವು ಪ್ರಭಾವಿ ವ್ಯಕ್ತಿಗಳೊಂದಿಗೆ ಈ ಎಪ್ಸ್ಟೀನ್ ಸಂಪರ್ಕ ಹೊಂದಿದ್ದ ಆದರೆ, ಅವರ ಮೇಲೆ ಯಾವುದೇ ನೇರ ಆರೋಪಗಳಿಲ್ಲ, (ಏಜೆನ್ಸೀಸ್​).