ಜಪಾನ್ ಪ್ರಧಾನಿ ಹೇಳಿಕೆಗೆ ಟೀಕೆಗಳ ಸುರಿಮಳೆ
- ಜಪಾನ್ ಪ್ರಧಾನಿ ಸನೈ ತಕೈಚಿಯವರ ಹೇಳಿಕೆ ಬೆನ್ನಲ್ಲೇ ಭುಗಿಲೆದ್ದ ಭಾರಿ ಚರ್ಚೆ
- ದಿನಕ್ಕೆ ಕೇವಲ 3 ಗಂಟೆ ಅಷ್ಟೇ ನಿದ್ರೆ ಮಾಡುತ್ತೇನೆ ಎಂದ ಪ್ರಧಾನಿ
- ಸನೈ ತಕೈಚಿಯ ಹೇಳಿಕೆಗೆ ಯುವಜನತೆಯಿಂದ ಪ್ರಶ್ನೆಗಳ ಸುರಿಮಳೆಯೇ ಹರಿದುಬಂದಿದೆ
Japan PM: ಜಪಾನ್ ಪ್ರಧಾನಿ ಸನೈ ತಕೈಚಿ ಅವರು ನೀಡಿದ ಶಾಕಿಂಗ್ ಹೇಳಿಕೆಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳಿಗೆ ಗ್ರಾಸವಾಗಿದೆ. ಭಾರಿ ಸಂಚಲನಕ್ಕೂ ಕಾರಣವಾಗಿರುವ ಅವರ ಸನೈ ಹೇಳಿಕೆಯನ್ನು ಯುವಜನತೆ ಟೀಕಿಸಿ, ವ್ಯಂಗ್ಯವಾಡಿರುವುದು ಕಂಡುಬಂದಿದೆ.
5 ಗಂಟೆ ನಿದ್ರೆ ಆಯ್ತು!
ನಾನು ಪ್ರತಿದಿನ ಶೂನ್ಯದಿಂದ 3 ಗಂಟೆಗಳ ಕಾಲ ಮಾತ್ರ ನಿದ್ರಿಸುವುದು ಎಂಬ ಪ್ರಧಾನಿ ಹೇಳಿಕೆ ಹೊರಬಿದ್ದಿದ್ದೇ ತಡ ಕ್ಷಣಮಾತ್ರದಲ್ಲಿ ವೈರಲ್ ಆಗಿದೆ. ಈ ಮೂಲಕ ಜಪಾನ್ ಮಂದಿಯ ಬದುಕಿನ ಶೈಲಿ, ಹೆಚ್ಚಿನ ಕೆಲಸದ ಒತ್ತಡ ಮತ್ತು ಹೆಚ್ಚಿನ ಅವಧಿಯ ಕೆಲಸದ ಸಂಸ್ಕೃತಿ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಅದೇ ಸಮಯದಲ್ಲಿ, ನಿದ್ರಾಹೀನತೆಯು ದೇಶದ ಆಡಳಿತದ ಮೇಲೆ, ವಿಶೇಷವಾಗಿ ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರಬಹುದು ಎಂದು ವಿರೋಧ ಪಕ್ಷದ ನಾಯಕರು ಅಸಮಾಧಾನ ಹೊರಹಾಕಿದ್ದಾರೆ.
'ಸಮುದ್ರ ದಿನ' ಒತ್ತಡದ ಕೆಲಸಕ್ಕೆ ಬ್ರೇಕ್
ರಾಷ್ಟ್ರೀಯ ರಜಾದಿನವಾದ ಸಮುದ್ರ ದಿನದಂದು ಅನೇಕ ಜಪಾನಿನ ಜನರು ವಿಶ್ರಾಂತಿ ಪಡೆಯಲು ಬೀಚ್, ಪ್ರವಾಸ ಕೈಗೊಂಡರೆ, ಸನೈ ತಕೈಚಿ ಅವರು ನೀತಿ ದಾಖಲೆಗಳನ್ನು ಓದಲು, ಸಾವಿರಾರು ಇಮೇಲ್‌ಗಳಿಗೆ ಉತ್ತರಿಸಲು ಮತ್ತು ಮನೆಗೆಲಸ ಮಾಡಿಕೊಳ್ಳಲು ತಮ್ಮ ಸಮಯವನ್ನು ಕಳೆದಿದ್ದಾಗಿ ಹೇಳಿಕೊಂಡಿದ್ದಾರೆ. ಹಲವು ದಿನಗಳ ನಂತರ ಸೋಮವಾರ ನಾನು 5 ಗಂಟೆಗಳ ಕಾಲ ಮಲಗಿದ್ದೆ. ರಜೆಯ ದಿನದಂದು ಬಟ್ಟೆಗಳನ್ನು ಸ್ವತಃ ನಾನೇ ಇಸ್ತ್ರಿ ಮಾಡಿಕೊಂಡೆ, ಹಳೆಯ ಸ್ಕರ್ಟ್‌ಗಳನ್ನು ಸರಿ ಮಾಡಿಕೊಳ್ಳುವುದು ಮತ್ತು ಕೋಟ್‌ಗಳಿಗೆ ಬಟನ್ ಹಾಕುವುದು ಸೇರಿ ಮುಂತಾದ ಮನೆಗೆಲಸಗಳನ್ನು ಮಾಡಿಕೊಂಡೆ ಎಂದು ಪೋಸ್ಟ್ನಲ್ಲಿ ವಿವರಿಸಿದ್ದಾರೆ
ವಿರೋಧ ಪಕ್ಷದಿಂದ ಭಾರಿ ಟೀಕೆ
ಸನೈ ತಕೈಚಿ ಅವರ ಈ ಹೇಳಿಕೆಗಳನ್ನು ವಿರೋಧ ಪಕ್ಷದ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ. ನಿರಂತರ ನಿದ್ರಾಹೀನತೆಯು ಮದ್ಯಪಾನ ಮಾಡಿದಂತೆಯೇ. ಇದು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಜತೆಗೆ ರಾಷ್ಟ್ರೀಯ ಬಿಕ್ಕಟ್ಟುಗಳನ್ನು ಎದುರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಈ ಮಧ್ಯೆ, ಅನೇಕ ರಾಜಕೀಯ ನಾಯಕರು ಮತ್ತು ತಜ್ಞರು ಸನೈ ತಕೈಚಿ ಅವರ ಬೆನ್ನಿಗೆ ನಿಂತಿದ್ದಾರೆ. ಟೋಕಿಯೊದಲ್ಲಿರುವ ನ್ಯಾಷನಲ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಫಾರ್ ಪಾಲಿಸಿ ಸ್ಟಡೀಸ್‌ನ ಪ್ರಾಧ್ಯಾಪಕ ಯೊಕೊ ಇವಾಮಾ, ಹಿಂದೆ, ಜಪಾನಿನ ಪ್ರಧಾನ ಮಂತ್ರಿಗಳ ಕುಟುಂಬಗಳಲ್ಲಿ ಪತ್ನಿಯರು ಮನೆಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಆದರೆ, ತಕೈಚಿ ಸ್ವತಃ ತಾವೇ ಅದನ್ನೆಲ್ಲ ನಿರ್ವಹಿಸುತ್ತಿದ್ದಾರೆ. ಇದು ಒಳ್ಳೆಯದೇ ಎಂದರು.
ವರ್ಕ್ಲೈಫ್ ಬ್ಯಾಲೆನ್ಸ್ ಬಗ್ಗೆ ಕಳವಳ
ಸನೈ ತಕೈಚಿ ಅವರ ಕಾಮೆಂಟ್‌ಗಳಿಗೆ ಜಪಾನ್ ಯುವಜನತೆಯ ಅತಿಯಾದ ಕೆಲಸದ ಸಂಸ್ಕೃತಿ ಮತ್ತೊಮ್ಮೆ ಗಮನಕ್ಕೆ ಬಂದಿದೆ. ಜಪಾನ್ ಬದ್ಧತೆಯ ಸಂಕೇತವಾಗಿ ದೀರ್ಘ ಗಂಟೆಗಳ ಕಾಲ ಕೆಲಸ ಮಾಡುವ ಸಂಪ್ರದಾಯವನ್ನು ಹೊಂದಿದೆ. 2016ರಲ್ಲಿ, ಪ್ರಮುಖ ಜಾಹೀರಾತು ಸಂಸ್ಥೆ ಡೆಂಟ್ಸುವಿನ ಉದ್ಯೋಗಿ ಮತ್ಸುರಿ ತಕಹಶಿ ಒಂದು ತಿಂಗಳಲ್ಲಿ 100 ಗಂಟೆಗಳಿಗಿಂತ ಹೆಚ್ಚು ಓವರ್‌ಟೈಮ್ ಕೆಲಸ ಮಾಡಿದ ಹಿನ್ನಲೆ ಆತ್ಮಹತ್ಯೆಗೆ ಶರಣಾದರು. ಇದು ದೊಡ್ಡ ವಿವಾದಕ್ಕೆ ಕಾರಣವಾಯಿತು. ಈಗ ಇದನ್ನೇ ಮುಂದಿಟ್ಟುಕೊಂಡು ಹಲವು ಉದ್ಯೋಗಿಗಳು ಹೀಗಾದರೆ ವರ್ಕ್ಲೈಫ್ ಬ್ಯಾಲೆನ್ಸ್ ಕಥೆ ಹೇಗೆ? ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ,(ಏಜೆನ್ಸೀಸ್).