ಪೆಟ್ಟಿಗೆ ಬಾಗಿಲು ತೆಗೆದ ತಕ್ಷಣ ಹರಿಯುತ್ತೆ ಹಿಮ ಗಾಳಿ (Human Refrigerator ಚಿತ್ರ X)
ಜಪಾನ್: ವಿಶ್ವದಾದ್ಯಂತ ಒಂದೆಡೆ ಮಳೆ ಮತ್ತು ಚಂಡಮಾರುತದ ಅಬ್ಬರವಿದ್ದರೆ, ಇನ್ನೊಂದೆಡೆ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ತೀವ್ರವಾದ ಬಿಸಿಲು ಮತ್ತು ಆರ್ದ್ರತೆಯಿಂದಾಗಿ ಜನರು ಕಂಗಾಲಾಗಿದ್ದಾರೆ. ಜಪಾನ್‌ನಲ್ಲಿ ಬೇಸಿಗೆಯ ತಾಪಮಾನವು ನಿಯಮಿತವಾಗಿ 35 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಾಗುತ್ತಿದ್ದು, ದೇಶದ ಹವಾಮಾನ ಇಲಾಖೆಯು ಇಂತಹ ಅಸಹನೀಯ ಬಿಸಿಲಿನ ದಿನಗಳಿಗೆ (Human Refrigerator) ಹೊಸ ಪಾರಿಭಾಷಿಕ ಪದಗಳನ್ನು ಬಳಸಲು ಪ್ರಾರಂಭಿಸಿದೆ.
ಅಷ್ಟೇ ಅಲ್ಲದೆ ರಾಷ್ಟ್ರೀಯ ಪ್ರಸಾರ ಸಂಸ್ಥೆಯಾದ ಎನ್‌ಹೆಚ್‌ಕೆ ಸಾರ್ವಜನಿಕರಿಗೆ ಶಾಖಾಘಾತದ ಕುರಿತು ನಿರಂತರ ಎಚ್ಚರಿಕೆಗಳನ್ನು ನೀಡುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಹಾಗೂ ಜನರನ್ನು ಉಷ್ಣತೆಯ ತೊಂದರೆಗಳಿಂದ ರಕ್ಷಿಸಲು ಜಪಾನ್‌ನ ಪ್ರಮುಖ ಕೈಗಾರಿಕಾ ಉಪಕರಣ ತಯಾರಿಕಾ ಸಂಸ್ಥೆಯಾದ 'ಟ್ರಸ್ಕೊ ನಕಾಯಾಮ ಕಾರ್ಪ್' ಎಂಬ ಕಂಪನಿಯು 'ದೋ ಹೈಮನ್ ಬಾಕ್ಸ್' ಎಂಬ ವಿಶಿಷ್ಟ ತಂತ್ರಜ್ಞಾನವನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಈ ಸಾಧನವು ಮಾನವನಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಅತ್ಯಾಧುನಿಕ, ಬೃಹತ್ ಗಾತ್ರದ ಮಾನವ ರೆಫ್ರಿಜರೇಟರ್ ಆಗಿದೆ. ಇದರಲ್ಲಿ ಎತ್ತರವಾದ ಸ್ಟೇನ್ಲೆಸ್- ಸ್ಟೀಲ್ ಪೆಟ್ಟಿಗೆಯಂತಿರುವ ಈ ಸಾಧನಕ್ಕೆ ಚಕ್ರಗಳು, ಗಾಜಿನ ಬಾಗಿಲು ಹಾಗೂ ವಿಶ್ರಮಿಸಲು ಸಣ್ಣ ಬೆಂಚ್ ವ್ಯವಸ್ಥೆಯನ್ನು ಮಾಡಲಾಗಿದೆ. ಇದನ್ನು ಯಾವುದೇ ವಿದ್ಯುತ್ ಸಾಕೆಟ್ಗೆ ಪ್ಲಗ್ ಮಾಡುವ ಮೂಲಕ ಸುಲಭವಾಗಿ ಬಳಸಬಹುದು.
ಈ ಬಾಕ್ಸ್‌ನ ಒಳಗಿನ ತಾಪಮಾನವನ್ನು ನಿರಂತರವಾಗಿ 15 ಡಿಗ್ರಿ ಸೆಲ್ಸಿಯಸ್‌ನಷ್ಟು ತಂಪಾಗಿ ಇರಿಸಲಾಗುತ್ತದೆ. ಒಬ್ಬ ವ್ಯಕ್ತಿ ಒಳಗೆ ಕುಳಿತ ತಕ್ಷಣ, ಇದು 5 ಡಿಗ್ರಿ ಸೆಲ್ಸಿಯಸ್‌ನಷ್ಟು ತಂಪಾದ ಗಾಳಿಯ ರಭಸದ ಧಾರೆಗಳನ್ನು ನೇರವಾಗಿ ತಲೆ, ಕುತ್ತಿಗೆ ಮತ್ತು ಹೆಗಲ ಭಾಗಕ್ಕೆ ಹರಿಸುತ್ತದೆ. ಬಿಸಿಲಿನಿಂದ ಬಂದ ವ್ಯಕ್ತಿಗೆ ತಕ್ಷಣ ತಂಪಾಗಿಸಿ ಹೀಟ್ ಸ್ಟ್ರೋಕ್ ಅಥವಾ ಗಂಭೀರ ಆರೋಗ್ಯ ಸಮಸ್ಯೆಯನ್ನು ತಡೆಯುವುದು ಇದರ ಪ್ರಮುಖ ಉದ್ದೇಶವಾಗಿದೆ.
ಈ ಸಾಧನವನ್ನು ಸುಮ್ಮನೆ ಕುಳಿತು ವಿಶ್ರಾಂತಿ ಪಡೆಯುವ ಲೌಂಜ್ ರೀತಿಯಲ್ಲಿ ಬಳಸುವ ಬದಲು, ತುರ್ತು ಪ್ರಥಮ ಚಿಕಿತ್ಸೆಯ ಸ್ವರೂಪದ ತಂಪಾಗಿಸುವ ಉಪಕರಣವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಟ್ರಸ್ಕೊ ಕಂಪನಿಯ ಉತ್ಪನ್ನ ವಿಭಾಗದ ಜನರಲ್ ಮ್ಯಾನೇಜರ್ ಫುಮಿಯಾಕಿ ಮತ್ಸುಬಾರಾ ತಿಳಿಸಿದ್ದಾರೆ.
ಸಾಮಾನ್ಯವಾಗಿ ಹವಾನಿಯಂತ್ರಣ ಅಂದರೆ ಎಸಿ ಸೌಲಭ್ಯವಿಲ್ಲದ ಸ್ಥಳಗಳಾದ ನಿರ್ಮಾಣ ಹಂತದ ಪ್ರದೇಶಗಳು, ಉಕ್ಕಿನ ಕಾರ್ಖಾನೆಗಳು, ಗಾಲ್ಫ್ ಮೈದಾನಗಳು, ವಿಶ್ವವಿದ್ಯಾಲಯಗಳು ಮತ್ತು ಹೊರಾಂಗಣ ಕಾರ್ಯಕ್ರಮಗಳಲ್ಲಿ ಇದನ್ನು ಬಳಸಲಾಗುತ್ತದೆ. ಇತ್ತೀಚೆಗೆ ಜಪಾನ್‌ನ ಕುಮಮೊಟೊದಲ್ಲಿ ಸಂಭವಿಸಿದ ಭೂಕಂಪದ ವೇಳೆಯಲ್ಲೂ ಸಂತ್ರಸ್ತರ ಪರಿಹಾರ ಶಿಬಿರಗಳಿಗೆ ಈ ಘಟಕಗಳನ್ನು ಕಳುಹಿಸಿಕೊಡಲಾಗಿತ್ತು.
ಸುಮಾರು ಒಂದು ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿರುವ ಟ್ರಸ್ಕೊ ಕಂಪನಿಯು, ಈ ವರ್ಷದ ಆರಂಭದಲ್ಲಿ ಮಾರಾಟಕ್ಕೆ ಬಂದಂದಿನಿಂದ ಇಲ್ಲಿಯವರೆಗೆ ಸುಮಾರು 1.5 ಮಿಲಿಯನ್ ಯೆನ್ ಅಂದರೆ ಅಂದಾಜು 9,500 ಅಮೆರಿಕನ್ ಡಾಲರ್ ಬೆಲೆಯ 200 ಕ್ಕೂ ಹೆಚ್ಚು ಘಟಕಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿದೆ.
ತೀವ್ರವಾದ ಬೇಸಿಗೆಯಿಂದಾಗಿ ಜಪಾನ್ ಸರ್ಕಾರವು ಕಾರ್ಮಿಕರ ಸುರಕ್ಷತೆಗೆ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿರುವುದರಿಂದ ಕಂಪನಿಯ ತಂಪಾಗಿಸುವ ಉತ್ಪನ್ನಗಳಿಗೆ ಬೇಡಿಕೆ ದ್ವಿಗುಣಗೊಂಡಿದೆ. ಪ್ರಸ್ತುತ ಜರ್ಮನಿ ಮತ್ತು ಅಮೆರಿಕದಂತಹ ವಿದೇಶಗಳಿಂದಲೂ ಈ ಮಾನವ ರೆಫ್ರಿಜರೇಟರ್‌ಗಾಗಿ ವಿಚಾರಣೆಗಳು ಬರುತ್ತಿದ್ದು, ಮುಂಬರುವ ದಿನಗಳಲ್ಲಿ ಶಾಪಿಂಗ್ ಮಾಲ್‌ಗಳು, ಪ್ರದರ್ಶನಗಳು ಹಾಗೂ ಸಾರ್ವಜನಿಕ ಸಮಾರಂಭಗಳಲ್ಲಿಯೂ ಇದಕ್ಕೆ ಭಾರಿ ಬೇಡಿಕೆ ವ್ಯಕ್ತವಾಗುವ ನಿರೀಕ್ಷೆಯಿದೆ (ಏಜೆನ್ಸೀಸ್).