ತಮ್ಮದೇ ಸರ್ಕಾರಕ್ಕೆ ಛೀಮಾರಿ ಹಾಕಿದ ಪಾಕಿಸ್ತಾನಿಗಳು
- ಪಾಕಿಸ್ತಾನದಲ್ಲಿ ಗಗನಕ್ಕೇರಿದ ಪೆಟ್ರೋಲ್ ಬೆಲೆ
- ಪೆಟ್ರೋಲ್, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಸಾರ್ವಜನಿಕರ ಆಕ್ರೋಶ
- ಜಮಾತ್-ಎ-ಇಸ್ಲಾಮಿ ನೇತೃತ್ವದಲ್ಲಿ ಪ್ರಮುಖ ನಗರಗಳಲ್ಲಿ ಪ್ರತಿಭಟನೆ
Pakistan inflation: ಪೆಟ್ರೋಲ್ ಬೆಲೆ ಮತ್ತು ದಿನನಿತ್ಯ ವಸ್ತುಗಳ ಬೆಲೆಯನ್ನು ದಿಢೀರ್ ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರವನ್ನು ಖಂಡಿಸಿ, ರಾವಲ್ಪಿಂಡಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜನಸಾಮಾನ್ಯರು ಹಾಗೂ ರಾಜಕೀಯ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಜಮಾತ್-ಎ-ಇಸ್ಲಾಮಿ ಮುಖ್ಯಸ್ಥ ಹಫೀಜ್ ನಯೀಮುರ್ ರೆಹಮಾನ್ ಕೊಟ್ಟ ಕರೆಯ ಬೆನ್ನಲ್ಲೇ ಲಕ್ಷಾಂತರ ಸಂಖ್ಯೆಯಲ್ಲಿ ಬೀದಿಗಿಳಿದ ಜನರು, ರಾವಲ್ಪಿಂಡಿಯ ಲಿಯಾಕತ್ ಬಾಗ್‌ನಲ್ಲಿ ಸರ್ಕಾರದ ಆರ್ಥಿಕ ನೀತಿಗಳು ಹಾಗೂ ಏರುತ್ತಿರುವ ಇಂಧನ ಬೆಲೆಗಳ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೆ ನಿಲ್ಲದ ಪ್ರತಿಭಟನಾಕಾರರ ಕಿಚ್ಚು, ಪೆಟ್ರೋಲ್ ಮತ್ತು ಅಗತ್ಯ ವಸ್ತುಗಳ ಬೆಲೆಯನ್ನು ತಕ್ಷಣಕ್ಕೆ ಇಳಿಸಬೇಕು. ಇಲ್ಲದಿದ್ದರೆ, ಇದಕ್ಕಿಂತ ದೊಡ್ಡ ಮಟ್ಟದಲ್ಲಿ ಹೋರಾಟ ಕೈಗೊಳ್ಳುತ್ತೇವೆ ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕರಾಚಿ, ಲಾಹೋರ್, ಪೇಶಾವರ, ಕ್ವೆಟ್ಟಾ, ಇಸ್ಲಾಮಾಬಾದ್, ರಾವಲ್ಪಿಂಡಿ ಮತ್ತು ಅಬೋಟಾಬಾದ್‌ನಂತಹ ನಗರಗಳಲ್ಲಿ ಪ್ರತಿಭಟನೆಗಳು, ಧರಣಿಗಳು ಮತ್ತು ರ್ಯಾಲಿಗಳನ್ನು ನಡೆಸಲಾಗಿದೆ. ಪ್ರಮುಖ ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಪ್ರತಿಭಟನೆ ಕೈಗೊಂಡ ಜನರು, ತೆರಿಗೆ ಹಿಂಪಡೆಯಬೇಕು ಹಾಗೂ 113 ರೂ. ಆಗಿರುವ ಪೆಟ್ರೋಲ್ ಬೆಲೆಯನ್ನು ಇಳಿಸಬೇಕು ಎಂದು ಆಗ್ರಹಿಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಭಾರಿ ಪ್ರತಿಭಟನೆ ಬೆನ್ನಲ್ಲೇ ತೆರಿಗೆಯನ್ನು ಕಡಿಮೆ ಮಾಡಲು ಐಎಂಎಫ್ ಒಪ್ಪಿಗೆ ಸೂಚಿಸಿದ್ದಾಗಿ ಸರ್ಕಾರ ತಿಳಿಸಿದೆ.
ಇರಾನ್ ಯುದ್ಧ ಮತ್ತು ಆರ್ಥಿಕ ಬಿಕ್ಕಟ್ಟಿನಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ 327.62 ರೂ. ಆಗಿದ್ದು, ಡಿಸೇಲ್ 380.86 ರೂ. ಆಗಿದೆ. ಪ್ರಸ್ತುತ ಇಂಧನ ಮೇಲೆ ಹಾಕಲಾಗಿರುವ ಸುಂಕವನ್ನು ತೆಗೆಯುವಂತೆ ಸರ್ಕಾರವನ್ನು ಒತ್ತಾಯಿಸಿರುವ ಪಾಕ್ ಜನರ ಆಕ್ರೋಶಕ್ಕೆ ಮಣಿಯಲಿದೆಯಾ ಶೆಹಬಾಜ್ ಷರೀಫ್ ಸರ್ಕಾರ? ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).