ಅಮೆರಿಕಕ್ಕೆ ಜೈಶಂಕರ್ ಖಡಕ್ ವಾರ್ನಿಂಗ್! ವೀಸಾ ಕಠಿಣ ನಿಯಮಗಳ ಬಗ್ಗೆ ತೀವ್ರ ಆಕ್ಷೇಪ; ನಮ್ಮ ಗುರಿ ಭಾರತವಲ್ಲ ಎಂದ ಮಾರ್ಕೊ ರುಬಿಯೊ!
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನೂತನ ವೀಸಾ ನೀತಿಗಳು ಹಾಗೂ ಕಠಿಣ ವಲಸೆ ನಿಯಮಗಳ ವಿರುದ್ಧ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್((JaishankarVsRubio) ಭಾನುವಾರ (ಮೇ, 24) ದೆಹಲಿಯ ಜಂಟಿ ಸುದ್ದಿಗೋಷ್ಠಿಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಎದುರೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭಾರತೀಯ ಉದ್ಯಮಿಗಳು, ತಂತ್ರಜ್ಞರು ಹಾಗೂ ಪ್ರವಾಸಿಗರು ಎದುರಿಸುತ್ತಿರುವ ವೀಸಾ ವಿಳಂಬದ ಸಮಸ್ಯೆಗಳನ್ನು ಜೈಶಂಕರ್ ಅತ್ಯಂತ ಗಂಭೀರವಾಗಿ ಪ್ರಸ್ತಾಪಿಸಿದ್ದು, ಅಮೆರಿಕವನ್ನು ಡಿಫೆನ್ಸ್‌ಗೆ ತಳ್ಳಿದ್ದಾರೆ. ಭಾರತದ ಈ ಆಕ್ರಮಣಕಾರಿ ನಿಲುವಿಗೆ ತಕ್ಷಣವೇ ಸ್ಪಷ್ಟನೆ ನೀಡಿರುವ ಮಾರ್ಕೊ ರುಬಿಯೊ, ಅಮೆರಿಕದ ಹೊಸ ನಿಯಮಗಳು ಭಾರತವನ್ನು ಗುರಿಯಾಗಿಸಿಕೊಂಡು ಮಾಡಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ದ್ವಿಪಕ್ಷೀಯ ಮಾತುಕತೆಯ ನಂತರ ಜಂಟಿ ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೈಶಂಕರ್, ಕಾನೂನುಬದ್ಧವಾಗಿ ಪ್ರಯಾಣಿಸುವ ಭಾರತೀಯ ನಾಗರಿಕರಿಗೆ ಯಾವುದೇ ಅಡೆತಡೆಗಳು ಉಂಟಾಗಬಾರದು ಎಂದು ಅಮೆರಿಕಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಜನರೊಂದಿಗಿನ ಸಂಬಂಧವೇ ಭಾರತ-ಯುಎಸ್ ಸ್ನೇಹದ ಹೃದಯ: ಜೈಶಂಕರ್ ಕಳಕಳಿ
ಸುದ್ದಿಗೋಷ್ಠಿಯಲ್ಲಿ ವೀಸಾ ಬಿಕ್ಕಟ್ಟನ್ನು ಅತ್ಯಂತ ತಾರ್ಕಿಕವಾಗಿ ಮಂಡಿಸಿದ ಎಸ್. ಜೈಶಂಕರ್, ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯಕ್ಕೆ ಉಭಯ ದೇಶಗಳ ಜನರ ನಡುವಿನ ಒಡನಾಟವೇ ಮೂಲ ಆಧಾರವಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಪ್ರಜೆಗಳು ಅಮೆರಿಕ ವೀಸಾ ಪಡೆಯಲು ಎದುರಿಸುತ್ತಿರುವ ತೀವ್ರ ವಿಳಂಬ ಮತ್ತು ಕಠಿಣ ಸವಾಲುಗಳನ್ನು ನಾನು ಕಾರ್ಯದರ್ಶಿ ರುಬಿಯೊ ಅವರ ಗಮನಕ್ಕೆ ತಂದಿದ್ದೇನೆ. ಅಕ್ರಮ ವಲಸೆಯನ್ನು ತಡೆಯಲು ಅಮೆರಿಕ ಕೈಗೊಳ್ಳುವ ಕ್ರಮಗಳಿಗೆ ನಮ್ಮ ಸಹಕಾರವಿದೆ. ಆದರೆ, ಅದರ ನೆಪದಲ್ಲಿ ಕಾನೂನುಬದ್ಧವಾಗಿ ಹೋಗುವ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ತಂತ್ರಜ್ಞರಿಗೆ ತೊಂದರೆಯಾಗಬಾರದು. ಇದು ನಮ್ಮ ದ್ವಿಪಕ್ಷೀಯ ವ್ಯಾಪಾರ ಮತ್ತು ತಂತ್ರಜ್ಞಾನದ ಸಹಭಾಗಿತ್ವದ ಮೇಲೂ ಕೆಟ್ಟ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದಾರೆ.
ಇದು ಭಾರತದ ಮೇಲಿನ ದಾಳಿಯಲ್ಲ: ಮಾರ್ಕೊ ರುಬಿಯೊ ಸ್ಪಷ್ಟನೆ
ಭಾರತದ ಆಕ್ಷೇಪಗಳಿಗೆ ಸಮಾಧಾನಕರವಾಗಿಯೇ ಪ್ರತಿಕ್ರಿಯಿಸಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, J1, F1 (ವಿದ್ಯಾರ್ಥಿ ವೀಸಾ) ಮತ್ತು ಬಹುಮುಖ್ಯವಾದ H-1B ವೀಸಾ ವಿಭಾಗಗಳಲ್ಲಿ ತರಲಾಗಿರುವ ಬದಲಾವಣೆಗಳು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಇದು ಭಾರತವನ್ನು ಟಾರ್ಗೆಟ್ ಮಾಡಿ ಮಾಡಿರುವ ವ್ಯವಸ್ಥೆಯಲ್ಲ. ಇದನ್ನು ಜಾಗತಿಕವಾಗಿ ಎಲ್ಲ ದೇಶಗಳಿಗೂ ಅನ್ವಯಿಸಲಾಗುತ್ತಿದೆ. ಸದ್ಯ ಅಮೆರಿಕ ತನ್ನ ವಲಸೆ ನಿಯಮಗಳನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸುತ್ತಿದೆ. ಯಾವುದೇ ಹೊಸ ಬದಲಾವಣೆಯ ಸಂಕ್ರಾಂತಿ ಕಾಲದಲ್ಲಿ ಇಂತಹ ಸಣ್ಣಪುಟ್ಟ ಗೊಂದಲಗಳು ಮತ್ತು ಅಡಚಣೆಗಳು ಸಹಜ ಎಂದರು.
ಮುಂದುವರಿದು ಮಾತನಾಡಿದ ಅವರು, ಕಳೆದ ಕೆಲವು ವರ್ಷಗಳಲ್ಲಿ ಸುಮಾರು 2 ಕೋಟಿಗೂ ಹೆಚ್ಚು ಜನ ಅಕ್ರಮವಾಗಿ ಅಮೆರಿಕದ ಗಡಿಯೊಳಗೆ ನುಗ್ಗಿದ್ದಾರೆ. ಇದರಿಂದಾಗಿ ನಮ್ಮ ದೇಶದಲ್ಲಿ ದೊಡ್ಡ ವಲಸೆ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಭದ್ರತಾ ಸವಾಲನ್ನು ಎದುರಿಸಲು ಟ್ರಂಪ್ ಆಡಳಿತ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಆದರೆ ಇದಕ್ಕೆ ಭಾರತ ಕಾರಣವಲ್ಲ ಎಂಬುದನ್ನು ನಾವು ಬಲ್ಲೆವು ಎಂದು ವೀಸಾ ನಿಯಮಗಳ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟರು.
ಹೊಸ ನಿಯಮಗಳಿಂದ ಭಾರತೀಯ ತಂತ್ರಜ್ಞರಿಗೆ ಮತ್ತಷ್ಟು ಲಾಭ!
ಟ್ರಂಪ್ ಸರ್ಕಾರದ ವಲಸೆ ಸುಧಾರಣೆಗಳು ಪೂರ್ಣಗೊಂಡ ನಂತರ, ಈ ಹೊಸ ವ್ಯವಸ್ಥೆಯು ಭಾರತದ ವೃತ್ತಿಪರರಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂಬ ಭರವಸೆಯನ್ನು ರುಬಿಯೊ ನೀಡಿದ್ದಾರೆ. ಒಮ್ಮೆ ನಮ್ಮ ವಲಸೆ ವ್ಯವಸ್ಥೆಯ ಆಧುನೀಕರಣ ಪೂರ್ಣಗೊಂಡರೆ, ಅದು ಹಿಂದಿಗಿಂತಲೂ ಅತ್ಯಂತ ವೇಗವಾಗಿ ಮತ್ತು ಪಾರದರ್ಶಕವಾಗಿ ಕೆಲಸ ಮಾಡಲಿದೆ. ಅಮೆರಿಕಕ್ಕೆ ಬಂದು ಹೊಸ ಆವಿಷ್ಕಾರಗಳನ್ನು ಮಾಡಲು ಬಯಸುವ ಭಾರತೀಯ ಪ್ರತಿಭೆಗಳು ಮತ್ತು ಉದ್ಯಮಿಗಳಿಗೆ ಈ ಹೊಸ ನಿಯಮಗಳು ಭವಿಷ್ಯದಲ್ಲಿ ಹಳೆಯ ವ್ಯವಸ್ಥೆಗಿಂತಲೂ ಹೆಚ್ಚಿನ ಲಾಭವನ್ನು ತಂದುಕೊಡಲಿವೆ ಎಂದು ಭಾರತೀಯ ಐಟಿ ವಲಯದ ಆತಂಕವನ್ನು ದೂರ ಮಾಡಲು ಯತ್ನಿಸಿದರು.
ಕ್ವಾಡ್ ಸಭೆಯ ಮುನ್ನಡೆ; ಭಾರತ ಪ್ರವಾಸದಲ್ಲಿ ರುಬಿಯೊ ಬ್ಯುಸಿ!
ಮೇ 23 ರಂದು ಭಾರತಕ್ಕೆ ಆಗಮಿಸಿದ ಮಾರ್ಕೊ ರುಬಿಯೊ ಮೊದಲು ಕೋಲ್ಕತ್ತಾಗೆ ಭೇಟಿ ನೀಡಿ ಮಿಷನರೀಸ್ ಆಫ್ ಚಾರಿಟಿ ಪ್ರಧಾನ ಕಚೇರಿಯನ್ನು ಸಂದರ್ಶಿಸಿದ್ದರು. ತದನಂತರ ನವದೆಹಲಿಗೆ ಆಗಮಿಸಿ ಈ ಪ್ರಮುಖ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ದೆಹಲಿಯ ಪ್ರವಾಸದ ನಂತರ ಅವರು ಆಗ್ರಾ ಮತ್ತು ಜೈಪುರಕ್ಕೂ ಭೇಟಿ ನೀಡಲಿದ್ದು, ನಂತರ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳನ್ನೊಳಗೊಂಡ ಅತ್ಯಂತ ಪ್ರಮುಖ ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವೀಸಾ ವಿಷಯದಲ್ಲಿ ಭಾರತ ತಳೆದಿರುವ ಈ ಬಿಗುವಿನ ನಿಲುವು ಮುಂಬರುವ ಜಾಗತಿಕ ಸಭೆಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆಯಿದೆ,(ಏಜೆನ್ಸೀಸ್).