Netanyahu  
ವಿದೇಶ

ಭಾರತದ ನಿಲುವಿಗೆ ಇಸ್ರೇಲ್​​ ಅಧ್ಯಕ್ಷರ ಮೆಚ್ಚುಗೆ: ಮೋದಿಗೆ ನೆತನ್ಯಾಹು ವಿಶೇಷ ಧನ್ಯವಾದ! | Netanyahu

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Netanyahu) ನಡುವೆ ಮಹತ್ವದ ದೂರವಾಣಿ ಮಾತುಕತೆ ನಡೆದಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ನೆತನ್ಯಾಹು, ಭಾರತದ ಬೆಂಬಲವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ನೆತನ್ಯಾಹು-ಮೋದಿ ದೀರ್ಘ ಮಾತುಕತೆಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಜೊತೆ "ದೀರ್ಘಾವಧಿಯ" ಚರ್ಚೆ ನಡೆಸಿರುವುದಾಗಿ ನೆತನ್ಯಾಹು ಸೋಮವಾರ ಖಚಿತಪಡಿಸಿದ್ದಾರೆ. ಇರಾನ್‌ನಿಂದ ಹೆಚ್ಚುತ್ತಿರುವ ದಾಳಿಗಳು ಮತ್ತು ಈ ಭಾಗದ ಭದ್ರತೆಯ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ.

ನೆತನ್ಯಾಹು ಶ್ಲಾಘನೆ

ಇರಾನ್ ವಿರುದ್ಧದ ಹೋರಾಟದಲ್ಲಿ ಇಸ್ರೇಲ್‌ನ ಬೆಂಬಲಕ್ಕೆ ನಿಂತಿರುವ ಭಾರತದ ನಡೆಯನ್ನು ನೆತನ್ಯಾಹು ಮುಕ್ತವಾಗಿ ಹೊಗಳಿದ್ದಾರೆ. "ಯಹೂದಿ ಜನರ ಪರವಾಗಿ ದೃಢವಾಗಿ ನಿಂತಿದ್ದಕ್ಕಾಗಿ ಪ್ರಧಾನಿ ಮೋದಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ" ಎಂದು ನೆತನ್ಯಾಹು ಹೇಳಿದ್ದಾರೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC) ಇಸ್ರೇಲ್ ಮೇಲೆ ನಡೆಸುತ್ತಿರುವ ಕ್ಷಿಪಣಿ ದಾಳಿಗಳ ನಡುವೆ ಭಾರತದ ಈ ನಿಲುವು ಮಹತ್ವದ್ದಾಗಿದೆ.

ನಾಗರಿಕರ ರಕ್ಷಣೆಗೆ ಮೋದಿ ಒತ್ತು

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ನೆತನ್ಯಾಹು ಜೊತೆ ಮಾತನಾಡಿರುವುದನ್ನು ಖಚಿತಪಡಿಸಿದ್ದರು. ಇಸ್ರೇಲ್-ಇರಾನ್ ಸಂಘರ್ಷದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾರತದ ಕಳವಳವನ್ನು ವ್ಯಕ್ತಪಡಿಸಿದ ಮೋದಿ, ನಾಗರಿಕರ ರಕ್ಷಣೆ (protecting civilians) ಅತ್ಯಂತ ಮುಖ್ಯ ಎಂದು ಒತ್ತಿ ಹೇಳಿದ್ದಾರೆ. ಸಂಘರ್ಷವು ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆಯಲು ರಾಜತಾಂತ್ರಿಕ ಮಾತುಕತೆಗಳಿಗೆ ಭಾರತ ಕರೆ ನೀಡಿದೆ.

ಭಾರತದ ರಾಜತಾಂತ್ರಿಕ ನಿಲುವು

ಗಲ್ಫ್ ರಾಷ್ಟ್ರಗಳಲ್ಲಿ ಲಕ್ಷಾಂತರ ಭಾರತೀಯರು ನೆಲೆಸಿರುವುದರಿಂದ, ಈ ಯುದ್ಧವು ಭಾರತಕ್ಕೆ ಅತ್ಯಂತ ಸಂವೇದನಾಶೀಲ ವಿಷಯವಾಗಿದೆ. ಪ್ರಧಾನಿ ಮೋದಿ ಅವರು ಸೌದಿ ಅರೇಬಿಯಾ, ಬಹ್ರೇನ್, ಯುಎಇ ನಾಯಕರೊಂದಿಗೂ ಮಾತುಕತೆ ನಡೆಸಿ, ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್​).