ತೆಹ್ರಾನ್/ಜೆರುಸಲೆಮ್: ಮಧ್ಯಪ್ರಾಚ್ಯದ ಸಂಘರ್ಷ ಈಗ ಭೀಕರ ಸ್ವರೂಪ ಪಡೆದುಕೊಂಡಿದೆ. ಇಸ್ರೇಲ್ ರಕ್ಷಣಾ ಪಡೆ (IDF) ಇರಾನ್‌ನ ರಾಜಧಾನಿ ತೆಹ್ರಾನ್ ಮೇಲೆ ದಾಳಿ ಆರಂಭಿಸಿದ್ದು, ಪ್ರಮುಖ ನಾಗರಿಕ ಮತ್ತು ಮಿಲಿಟರಿ ವಿಮಾನ ನಿಲ್ದಾಣವಾದ ಮೆಹ್ರಾಬಾದ್ (Mehrabad Airport) ಅನ್ನು ಗುರಿಯಾಗಿಸಿಕೊಂಡಿದೆ.
ಮೆಹ್ರಾಬಾದ್ ವಿಮಾನ ನಿಲ್ದಾಣದ ಆವರಣದಿಂದ ದಟ್ಟವಾದ ಹೊಗೆಯ ಮೋಡಗಳು ಆಕಾಶಕ್ಕೆ ಏರುತ್ತಿರುವ ವಿಡಿಯೋ ಮತ್ತು ಫೋಟೋಗಳು ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿವೆ.
ಇರಾನ್ ಪ್ರಭುತ್ವದ ಆಯಕಟ್ಟಿನ ಸ್ಥಳಗಳನ್ನು ಗುರಿಯಾಗಿಸಿಕೊಂಡು ನಾವು "ವ್ಯಾಪಕ" (Extensive) ವೈಮಾನಿಕ ದಾಳಿ ನಡೆಸುತ್ತಿದ್ದೇವೆ ಎಂದು ಇಸ್ರೇಲ್ ಅಧಿಕೃತವಾಗಿ ಘೋಷಿಸಿದೆ. ಇರಾನ್‌ನ ಮಿಲಿಟರಿ ಶಕ್ತಿ ಮತ್ತು ಮೂಲಸೌಕರ್ಯಗಳನ್ನು ನಾಶಪಡಿಸುವುದೇ ಈ ದಾಳಿಯ ಮುಖ್ಯ ಉದ್ದೇಶ ಎಂದು ಐಡಿಎಫ್ (IDF) ವಕ್ತಾರರು ತಿಳಿಸಿದ್ದಾರೆ. ದಾಳಿಯ ತೀವ್ರತೆಗೆ ತೆಹ್ರಾನ್ ನಗರದಾದ್ಯಂತ ಸರಣಿ ಸ್ಫೋಟದ ಶಬ್ದಗಳು ಕೇಳಿಬರುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ದಾಳಿ ಯಾಕೆ?
ಮೆಹ್ರಾಬಾದ್ ವಿಮಾನ ನಿಲ್ದಾಣವು ಇರಾನ್‌ನ ವಾಯುಪಡೆಯ ಪ್ರಮುಖ ಕೇಂದ್ರವೂ ಹೌದು. ಇಲ್ಲಿಂದಲೇ ಇರಾನ್‌ನ ಮಿಲಿಟರಿ ವಿಮಾನಗಳು ಮತ್ತು ಡ್ರೋನ್‌ಗಳು ಹಾರಾಟ ನಡೆಸುತ್ತವೆ. ಈ ನಿಲ್ದಾಣವನ್ನು ಧ್ವಂಸಗೊಳಿಸುವ ಮೂಲಕ ಇರಾನ್‌ನ ವಾಯು ಪ್ರತಿದಾಳಿಯ ಶಕ್ತಿಯನ್ನು ಕುಂಠಿತಗೊಳಿಸಲು ಇಸ್ರೇಲ್ ಈ ಸಾಹಸಕ್ಕೆ ಕೈಹಾಕಿದೆ. ಇರಾನ್‌ನ ಅರೆ-ಅಧಿಕೃತ ಸುದ್ಧಿ ಸಂಸ್ಥೆ 'ಮೆಹ್ರ್' (Mehr News), ವಿಮಾನ ನಿಲ್ದಾಣದ ಸುತ್ತಮುತ್ತ ಸಂಭವಿಸಿದ ಹಾನಿಯ ಚಿತ್ರಗಳನ್ನು ಹಂಚಿಕೊಂಡಿದ್ದು, ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವರದಿ ಮಾಡಿದೆ.
ತೆಹ್ರಾನ್ ಮೇಲೆ ನಡೆದ ಈ ನೇರ ದಾಳಿಯು ಜಾಗತಿಕ ತೈಲ ಪೂರೈಕೆಯ ಮೇಲೆ ಭಾರಿ ಪರಿಣಾಮ ಬೀರಲಿದೆ. ಈಗಾಗಲೇ ಕಚ್ಚಾ ತೈಲ ಬೆಲೆ ಗಗನಕ್ಕೇರುತ್ತಿದ್ದು, ಭಾರತ ಸೇರಿದಂತೆ ಹಲವು ದೇಶಗಳು ಇಂಧನ ಬಿಕ್ಕಟ್ಟಿನ ಆತಂಕದಲ್ಲಿವೆ. ಇಸ್ರೇಲ್ ಮತ್ತು ಇರಾನ್ ನಡುವಿನ ಈ ನೇರ ಯುದ್ಧವು ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡುತ್ತದೆಯೇ ಎಂಬ ಭೀತಿ ಈಗ ವಿಶ್ವದಾದ್ಯಂತ ಆವರಿಸಿದೆ.
ಭಾರತೀಯರಿಗೆ ಎಚ್ಚರಿಕೆ!
ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿರುವ ಭಾರತೀಯ ನಾಗರಿಕರಿಗೆ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮತ್ತು ಮನೆಯಿಂದ ಹೊರಬರದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇಸ್ರೇಲ್ ದಾಳಿಯನ್ನು ಮುಂದುವರಿಸುವ ಮುನ್ಸೂಚನೆ ನೀಡಿರುವುದರಿಂದ ಮುಂದಿನ ಕೆಲವು ಗಂಟೆಗಳು ಅತ್ಯಂತ ನಿರ್ಣಾಯಕವಾಗಿವೆ,(ಏಜೆನ್ಸೀಸ್).