ದಾಳಿಯಲ್ಲಿ ಇರಾನ್ ಐಆರ್‌ಜಿಸಿ ನೌಕಾಪಡೆ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಸತ್ತಿದ್ದಾರೆಂದ ಇಸ್ರೇಲ್
- ಬಂದರ್ ಅಬ್ಬಾಸ್ ಮೇಲೆ ಇಸ್ರೇಲ್ ದಾಳಿ
- ದಾಳಿಯಲ್ಲಿ ಇರಾನ್ ಐಆರ್‌ಜಿಸಿ ನೌಕಾಪಡೆ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಸತ್ತಿದ್ದಾರೆಂದ ಇಸ್ರೇಲ್
- ಹಾರ್ಮುಜ್ನಲ್ಲಿ ಹೈ-ಅಲರ್ಟ್ ಘೋಷಣೆ
- ಇರಾನಿನಿಂದ ಹೊರಬರದ ಅಧಿಕೃತ ಹೇಳಿಕೆ
ಇಸ್ರೇಲ್: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾಗಿ ಹೆಚ್ಚು ಕಡಿಮೆ ಒಂದು ತಿಂಗಳು ಕಳೆಯುತ್ತಾ ಬಂದರು ಸಂಪೂರ್ಣ ಶಾಂತಿ ಇಲ್ಲಿವರೆಗೆ ಸ್ಥಾಪನೆಯಾಗಿಲ್ಲ. ಅಮೆರಿಕ ಹಾಗೂ ಇರಾನ್ ಶಾಂತಿ ಬಗ್ಗೆ ಮಾತನಾಡುತ್ತಿದ್ದರೂ ಇಸ್ರೇಲ್ ಯುದ್ಧ ನಿಲ್ಲಿಸುವ ಮನಸ್ಥಿತಿಯಲ್ಲಿ ಕಂಡು ಬರುತ್ತಿಲ್ಲ.
ನಾವು ಐಆರ್‌ಜಿಸಿ ನೇವಿ ಮುಖ್ಯಸ್ಥನನ್ನು ಕೊಂದಿದ್ದೆವೆ: ಇಸ್ರೇಲ್
ಗುರುವಾರ (ಮಾರ್ಚ್ 26) ಬಂದರ್ ಅಬ್ಬಾಸ್ ಮೇಲೆ ಇಸ್ರೇಲ್ ನಡೆಸಿರುವ ದಾಳಿಯಲ್ಲಿ ಐಆರ್‌ಜಿಸಿ ನೌಕಾಪಡೆ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ (Alireza Tangsiri) ಸಾವನ್ನಪ್ಪಿರುವುದಾಗಿ ಇಸ್ರೇಲ್ ತಿಳಿಸಿದೆ. ಆದರೆ ಈ ಕುರಿತು ಇರಾನಿನಿಂದ ಯಾವುದೇ ಸ್ಪಷ್ಟೀಕರಣ ದೊರೆತಿಲ್ಲ.
ಬಂದರ್ ಅಬ್ಬಾಸ್ ಇದು ಹಾರ್ಮುಜ್ ಜಲಸಂಧಿ ಬಳಿಯಲ್ಲಿರುವ ಪ್ರದೇಶವಾಗಿದ್ದು, ಈಗ ಇಸ್ರೇಲ್ ಇಲ್ಲಿ ದಾಳಿ ಮಾಡುವ ಮೂಲಕ ಮತ್ತೆ ಹಾರ್ಮುಜ್ನಲ್ಲಿ ಹಡಗುಗಳ ಓಡಾಟ ಸ್ಥಗಿತವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇರಾನ್ನಿಂದ ಹೊರಬರದ ಹೇಳಿಕೆ!
ತಮ್ಮ ನೌಕಾಪಡೆ ಮುಖ್ಯಸ್ಥನನ್ನು ಇಸ್ರೇಲ್ ಕೊಂದಿರುವುದಾಗಿ ಹೇಳಿಕೆ ನೀಡಿದರೂ ಸಹ, ಇರಾನ್ ಇಲ್ಲಿವರೆಗೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಂತರಾಷ್ಟ್ರೀಯ ಮಾಧ್ಯಮಗಳ ಪ್ರಕಾರ ಇಂದು (ಮಾರ್ಚ್ 26) ಸಂಜೆ ಹೊತ್ತಿಗೆ ಇರಾನಿನಿಂದ ಮಾಧ್ಯಮ ಪ್ರಕಟಣೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಆದರೆ ಒಂದು ವೇಳೆ ಅಲಿರೆಜಾ ತಂಗ್ಸಿರಿಯನ್ನು ಇಸ್ರೇಲ್ ಕೊಂದಿರುವುದು ನಿಜವಾದರೆ, ಇದು ಇರಾನ್ ಪಾಲಿಗೆ ದೊಡ್ಡ ಹೊಡೆತವಾಗಿದ್ದು, ಮುಂದಿನ ದಿನಗಳಲ್ಲಿ ಯುದ್ಧ ಇನ್ನೂ ಭೀಕರತೆಯನ್ನು ಕಾಣಬಹುದು ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಯಾರು ಈ ಅಲಿರೆಜಾ ತಂಗ್ಸಿರಿ ?
ಅಲಿರೆಜಾ ತಂಗ್ಸಿರಿ ಇರಾನಿನ ಪ್ರಭಾವಿ ಮಿಲಿಟರಿ ಅಧಿಕಾರಿಗಳಲ್ಲಿ ಒಬ್ಬರಾಗಿದ್ದು, ಪ್ರಸ್ತುತ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆಯ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2018 ರಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇವರನ್ನು ಈ ಉನ್ನತ ಹುದ್ದೆಗೆ ನೇಮಿಸಿದ್ದರು.
ತಂಗ್ಸಿರಿ ಪರ್ಷಿಯನ್ ಕೊಲ್ಲಿ ಮತ್ತು ಹಾರ್ಮುಜ್ ಜಲಸಂಧಿಯ ಕಾರ್ಯತಂತ್ರದ ಭದ್ರತೆಯಲ್ಲಿ ಪ್ರಮುಖ ಪಾತ್ರ ಹಾಗೂ ನಿರ್ಧಾರಗಳನ್ನು ತೆಗೆದುಕೊಳ್ಳತ್ತಿದ್ದರು. ಇರಾನ್‌ನ ನೌಕಾ ಶಕ್ತಿಯನ್ನು ಬಲಪಡಿಸುವಲ್ಲಿ ಮತ್ತು ಸಣ್ಣ, ವೇಗದ ಆಕ್ರಮಣಕಾರಿ ದೋಣಿಗಳ ಬಳಕೆಯನ್ನು ಹೆಚ್ಚಿಸುವಲ್ಲಿ ಇವರು ಹೆಸರುವಾಸಿಯಾಗಿದ್ದಾರೆ. ಇವರ ನಾಯಕತ್ವದಲ್ಲಿ ಇರಾನ್ ನೌಕಾಪಡೆಯು ತನ್ನ ಕರಾವಳಿ ರಕ್ಷಣಾ ವ್ಯವಸ್ಥೆ ಮತ್ತು ಕ್ಷಿಪಣಿ ತಂತ್ರಜ್ಞಾನವನ್ನು ಗಣನೀಯವಾಗಿ ಅಭಿವೃದ್ಧಿಪಡಿಸಿಕೊಂಡಿದೆ.
ಇರಾನ್ ಮತ್ತು ಅಮೆರಿಕದ ನಡುವಿನ ಉದ್ವಿಗ್ನತೆಯ ಸಮಯದಲ್ಲಿ ಇವರ ಹೇಳಿಕೆಗಳು ಮತ್ತು ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದು, ಈ ಹಿನ್ನಲೆಯಲ್ಲಿ ಇಸ್ರೇಲ್ ಇವರನ್ನು ಗುರುಯಾಗಿಟ್ಟುಕೊಂಡು ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ,(ಏಜನ್ಸೀಸ್).