ವಿದೇಶ

ಇಸ್ರೇಲ್‌ನಲ್ಲಿ ನೆತನ್ಯಾಹು ಯುಗಾಂತ್ಯ..? ಐಸೆನ್‌ಕೋಟ್‌ಗೆ ಸರ್ಕಾರ ರಚನೆಯ ಆಹ್ವಾನ ನೀಡಿದ ಅಧ್ಯಕ್ಷ ಹೆರ್ಜಾಗ್! | Gadi Eisenkot

Gadi Eisenkot: ಇಸ್ರೇಲ್ ರಾಜಕೀಯದಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಂಡುಬಂದಿದ್ದು, ಪ್ರಸ್ತುತ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ದೊಡ್ಡ ಹಿನ್ನಡೆಯಾಗಿದೆ. ಯಶಾರ್ ಪಕ್ಷದ ಅಧ್ಯಕ್ಷ ಹಾಗೂ ಇಸ್ರೇಲ್ ರಕ್ಷಣಾ ಪಡೆಗಳ ಮಾಜಿ ಮುಖ್ಯಸ್ಥರಾದ ಗಡಿ ಐಸೆನ್‌ಕೋಟ್​ಗೆ ಮುಂದಿನ ಸರ್ಕಾರವನ್ನು ರಚಿಸುವಂತೆ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ. 120 ಸದಸ್ಯರ ನೆಸ್ಸೆಟ್‌ನಲ್ಲಿ ಸ್ಪಷ್ಟ ಬಹುಮತಕ್ಕೆ ಅಗತ್ಯವಿರುವ ಸಂಖ್ಯಾಬಲ ಲಭಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಅಧ್ಯಕ್ಷೀಯ ಭವನವು ವಿವಿಧ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರವನ್ನು ಶನಿವಾರ ಪ್ರಕಟಿಸಿತು. 120 ಸದಸ್ಯರ ಸಂಸತ್ತಿನಲ್ಲಿ ಸರ್ಕಾರ ರಚಿಸಲು ಕನಿಷ್ಠ 61 ಸದಸ್ಯರ ಬೆಂಬಲ ಅಗತ್ಯವಿರುತ್ತದೆ. ಆದರೆ, ಗಡಿ ಐಸೆನ್‌ಕೋಟ್ ಅವರಿಗೆ ಬರೋಬ್ಬರಿ 67 ಸದಸ್ಯರ ಬೆಂಬಲ ಲಭಿಸಿದೆ. ಇದನ್ನು ಅಧ್ಯಕ್ಷರ ಕಚೇರಿ ತಮ್ಮ ಎಕ್ಸ್ ಖಾತೆಯಲ್ಲಿ ಖಚಿತಪಡಿಸಿದ್ದು, ನವೆಂಬರ್ 8 ರ ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಐಸೆನ್‌ಕೋಟ್​ಗೆ ಸರ್ಕಾರ ರಚನೆಯ ಅಧಿಕೃತ ಅಧಿಕಾರ ಹಸ್ತಾಂತರಿಸಲಾಗುವುದು ಎಂದು ತಿಳಿಸಿದೆ.

ಬೆಂಬಲ ನೀಡಿದ ಪ್ರಮುಖ ಪಕ್ಷಗಳ ವಿವರ

ಐಸೆನ್‌ಕೋಟ್​ಗೆ ಯಹೂದಿ ವಿರೋಧ ಪಕ್ಷಗಳ ಒಕ್ಕೂಟದ ಯಶಾರ್, ಟುಗೆದರ್, ದಿ ಡೆಮಾಕ್ರಾಟ್ಸ್ ಮತ್ತು ಯಿಸ್ರೇಲ್ ಬೈತೇನು ಪಕ್ಷಗಳಿಂದ 48 ಸ್ಥಾನಗಳ ಬೆಂಬಲ ದೊರೆತಿದೆ. ಇದರ ಜೊತೆಗೆ ಅರಬ್ ಒಕ್ಕೂಟಗಳಾದ ರಮ್ ಪಕ್ಷದಿಂದ 8 ಸ್ಥಾನಗಳು ಹಾಗೂ ಜಾಯಿಂಟ್ ಲಿಸ್ಟ್ ಪಕ್ಷದಿಂದ 11 ಸ್ಥಾನಗಳ ಬೆಂಬಲ ಲಭಿಸಿದೆ.

ಮತ್ತೊಂದೆಡೆ, ಸುದೀರ್ಘ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಬೆಂಜಮಿನ್ ನೆತನ್ಯಾಹು ಅವರಿಗೆ ಕೇವಲ 46 ಸದಸ್ಯರ ಬೆಂಬಲ ಮಾತ್ರ ದೊರೆಯಿತು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವರ ಬಲಪಂಥೀಯ ಒಕ್ಕೂಟವು 53 ಸ್ಥಾನಗಳನ್ನು ಹೊಂದಿದ್ದರೂ, ಮೈತ್ರಿಯಲ್ಲಿದ್ದ ಅಲ್ಟ್ರಾ-ಆರ್ಥೊಡಾಕ್ಸ್ ಯುನೈಟೆಡ್ ತೋರಾ ಜುದಾಯಿಸಂ ಪಕ್ಷವು ಯಾವುದೇ ಅಭ್ಯರ್ಥಿಗೆ ಬೆಂಬಲ ನೀಡದೆ ತಟಸ್ಥವಾಗಿ ಉಳಿಯಲು ನಿರ್ಧರಿಸಿತು. ಯುನೈಟೆಡ್ ತೋರಾ ಜುದಾಯಿಸಂ ಪಕ್ಷದ ಈ ಹಠಾತ್ ನಿರ್ಧಾರವು ನೆತನ್ಯಾಹು ಅವರ ಸಾಂಪ್ರದಾಯಿಕ ಮೈತ್ರಿಕೂಟಕ್ಕೆ ಬಿದ್ದ ದೊಡ್ಡ ಹೊಡೆತವಾಗಿದ್ದು, ಐಸೆನ್‌ಕೋಟ್​ಗೆ ಸುಲಭವಾಗಿ ಮೇಲುಗೈ ಸಾಧಿಸಲು ನೆರವಾಯಿತು.

ಮಾಜಿ ಮಿಲಿಟರಿ ಮುಖ್ಯಸ್ಥ ಐಸೆನ್‌ಕೋಟ್, ಪ್ರಸ್ತುತ ಸಂಕೀರ್ಣ ಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸಲು ಪ್ರಮುಖ ಮಾರ್ಗದರ್ಶಿ ಸೂತ್ರಗಳನ್ನು ಮುಂದಿಟ್ಟಿದ್ದಾರೆ. ಇಸ್ರೇಲ್ ಅನ್ನು ಯಹೂದಿ ಮತ್ತು ಪ್ರಜಾಸತ್ತಾತ್ಮಕ ರಾಷ್ಟ್ರವೆಂದು ಸ್ಪಷ್ಟವಾಗಿ ಗುರುತಿಸುವುದು, ದೇಶದ ಮೂಲ ಸ್ವಾತಂತ್ರ್ಯ ಘೋಷಣೆಯ ತತ್ವಗಳನ್ನು ಎತ್ತಿಹಿಡಿಯುವುದು, ದೇಶದ ಎಲ್ಲಾ ಸಮುದಾಯಗಳ ನಾಗರಿಕರಿಗೂ ಸಾರ್ವತ್ರಿಕ ರಾಷ್ಟ್ರೀಯ ಮತ್ತು ಮಿಲಿಟರಿ ಕಡ್ಡಾಯ ಸೇವೆಯನ್ನು ಜಾರಿಗೆ ತರುವುದು ಹಾಗೂ ಹಮಾಸ್ ಸಂಘಟನೆಯ ಮಿಲಿಟರಿ ಮತ್ತು ರಾಜಕೀಯ ರೆಕ್ಕೆಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವುದು ಅವರ ಮುಖ್ಯ ಆದ್ಯತೆಗಳಾಗಿವೆ.

ಮುಂದಿನ ರಾಜಕೀಯ ಬೆಳವಣಿಗೆಗಳೇನು..?

ಅಧಿಕೃತವಾಗಿ ಅಧಿಕಾರಿ ಸ್ವೀಕರಿಸಿದ ನಂತರ, ಗಡಿ ಐಸೆನ್‌ಕೋಟ್​ಗೆ ಪೂರ್ಣ ಪ್ರಮಾಣದ ಸರ್ಕಾರವನ್ನು ರಚಿಸಲು ಆರು ವಾರಗಳ ಕಾನೂನುಬದ್ಧ ಕಾಲಾವಕಾಶ ಸಿಗಲಿದೆ. ಈ ಅವಧಿಯಲ್ಲಿ ಅವರು ತಮ್ಮನ್ನು ಬೆಂಬಲಿಸಿದ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಮಂತ್ರಿಗಿರಿ ಹಂಚಿಕೆ, ನೀತಿ-ನಿಯಮಗಳು ಮತ್ತು ಆಡಳಿತಾತ್ಮಕ ಒಪ್ಪಂದಗಳ ಕುರಿತು ಮಾತುಕತೆಗಳನ್ನು ನಡೆಸಬೇಕಾಗಿದೆ. ನೆಸ್ಸೆಟ್‌ನಲ್ಲಿ ಅಂತಿಮವಾಗಿ ಬಹುಮತ ಸಾಬೀತುಪಡಿಸಿ, ಸ್ಥಿರ ಸರ್ಕಾರವನ್ನು ಅಸ್ತಿತ್ವಕ್ಕೆ ತರುವುದೇ ಐಸೆನ್‌ಕೋಟ್ ಮುಂದಿರುವ ಪ್ರಮುಖ ಸವಾಲಾಗಿದೆ. ಇತ್ತೀಚಿನ ಚುನಾವಣಾ ಫಲಿತಾಂಶಗಳು ಇಸ್ರೇಲ್ ರಾಜಕೀಯದ ದಿಕ್ಕನ್ನೇ ಬದಲಾಯಿಸಿದ್ದು, ದೇಶದಲ್ಲಿ ನೆತನ್ಯಾಹು ಯುಗ ಅಂತ್ಯಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ(ಏಜೆನ್ಸೀಸ್​).