ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
- ಇಸ್ರೇಲ್ ಮತ್ತು ಲೆಬನಾನ್ ನಡುವಿನ ಯುದ್ಧ ಸಂಘರ್ಷಕ್ಕೆ 10 ದಿನಗಳ ಬ್ರೇಕ್
- 34 ವರ್ಷಗಳ ಮೊದಲ ಭೇಟಿ ಕಡೆಗೂ ಯಶಸ್ವಿ
- ಕದನ ವಿರಾಮಕ್ಕೆ ಅಸ್ತು ಎಂದಿದ್ದಾಗಿ ಡೊನಾಲ್ಡ್ ಟ್ರಂಪ್ ಘೋಷಣೆ
ವಾಷಿಂಗ್ಟನ್: ಇಸ್ರೇಲ್ ಮತ್ತು ಲೆಬನಾನ್ ನಡುವಿನ ಯುದ್ಧ ಸಂಘರ್ಷಕ್ಕೆ ಕಡೆಗೂ 10 ದಿನಗಳ ಕದನ ವಿರಾಮ ಸಿಕ್ಕಿದೆ. ಈ ಎರಡು ದೇಶಗಳು ಸೀಜ್ ಫೈರ್ಗೆ ಒಪ್ಪಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಇಸ್ರೇಲ್ ಮತ್ತು ಲೆಬನಾನ್ ನಡುವೆ 10 ದಿನಗಳ ಕಾಲ ಕದನ ವಿರಾಮ ಜಾರಿಗೆ ತರಲಾಗುವುದು. ಶಾಂತಿ ಸ್ಥಾಪಿಸಲು ಎರಡೂ ದೇಶಗಳ ನಾಯಕರು ಇದಕ್ಕೆ ಅಸ್ತು ಎಂದಿದ್ದಾರೆ. 34 ವರ್ಷಗಳಲ್ಲಿ ಇಬ್ಬರು ನಾಯಕರು ವಾಷಿಂಗ್ಟನ್‌ನಲ್ಲಿ ಭೇಟಿಯಾಗುತ್ತಿರುವುದು ಇದೇ ಮೊದಲು. ಇಸ್ರೇಲ್ ಮತ್ತು ಲೆಬನಾನ್ ನಡುವೆ ಶಾಂತಿ ಸ್ಥಾಪಿಸಲು ಕೆಲಸ ಮಾಡುವಂತೆ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್‌ಗೆ ಸೂಚನೆ ನೀಡಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.
ಲೆಬನಾನ್‌ನ ಅತ್ಯಂತ ಗೌರವಾನ್ವಿತ ಅಧ್ಯಕ್ಷ ಜೋಸೆಫ್ ಔನ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ನಾನು ಒಳ್ಳೆಯ ಸಂಭಾಷಣೆ ನಡೆಸಿದೆ. ತಮ್ಮ ದೇಶಗಳ ನಡುವೆ ಶಾಂತಿಯನ್ನು ಸಾಧಿಸುವ ಸಲುವಾಗಿ, ಈ ಇಬ್ಬರು ನಾಯಕರು 10 ದಿನಗಳ ಕದನ ವಿರಾಮವನ್ನು ಔಪಚಾರಿಕವಾಗಿ ಒಪ್ಪಿಕೊಂಡಿದ್ದಾರೆ. ಈ ಎರಡೂ ದೇಶಗಳು 34 ವರ್ಷಗಳಲ್ಲಿ ಮೊದಲ ಬಾರಿಗೆ ವಾಷಿಂಗ್ಟನ್ ಡಿ.ಸಿ.ಯಲ್ಲಿ ನಮ್ಮ ಮಹಾನ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರ ಸಮ್ಮುಖದಲ್ಲಿ ಭೇಟಿಯಾಗಿವೆ ಎಂದರು.
ಜೆ.ಡಿ. ವ್ಯಾನ್ಸ್, ಕಾರ್ಯದರ್ಶಿ ರುಬಿಯೊ ಮತ್ತು ಜಂಟಿ ಮುಖ್ಯಸ್ಥರ ಅಧ್ಯಕ್ಷ ಡಾನ್ ರೆಜಿನ್ ಕೈನೆ ಅವರಿಗೆ ಶಾಶ್ವತ ಶಾಂತಿಯನ್ನು ಸಾಧಿಸಲು ಇಸ್ರೇಲ್ ಮತ್ತು ಲೆಬನಾನ್‌ನೊಂದಿಗೆ ಕೆಲಸ ಮಾಡಲು ನಾನು ಸೂಚಿಸಿರುವೆ. ಜಾಗತಿಕವಾಗಿ 9 ಯುದ್ಧಗಳನ್ನು ಪರಿಹರಿಸುವ ಗೌರವ ನನಗೆ ಸಿಕ್ಕಿದೆ. ಇದು ನನ್ನ 10ನೇ ಯುದ್ಧ" ಎಂದು ಟ್ರಂಪ್ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ,(ಏಜೆನ್ಸೀಸ್).