- ಅಯತೊಲ್ಲಾ ಖಮೇನಿ ಹತ್ಯೆ ಬೆನ್ನಲ್ಲೇ ಸೇಡಿಗೆ ಸಜ್ಜಾದ ಇರಾನ್
- ಯುಎಸ್ ನೆಲೆಗಳಾದ ಯುಎಇ, ಸೌದಿ ಅರೇಬಿಯಾ, ಕುವೈತ್, ಕತಾರ್ ಮೇಲೆ ಇರಾನ್ ಕ್ಷಿಪಣಿ ದಾಳಿ
- ಯುಎಸ್‌ಎಸ್ ಅಬ್ರಹಾಂ ಲಿಂಕನ್ ಮೇಲೆ 4 ಕ್ಷಿಪಣಿ ದಾಳಿ
Israel-Iran War: ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ಕ್ಷಿಪಣಿ ದಾಳಿಯಲ್ಲಿ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಉಸಿರು ಚೆಲ್ಲಿದ್ದಾರೆ. ಸ್ವತಃ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕುರಿತು ಘೋಷಿಸಿದ್ದಾರೆ. ಟ್ರಂಪ್ ಮಾತ್ರವಲ್ಲದೆ, ಇರಾನ್ ಮಾಧ್ಯಮಗಳು ಕೂಡ ಖಮೇನಿ ಸಾವಿನ ಕುರಿತು ವರದಿ ಮಾಡಿವೆ. ಯುಎಸ್-ಇಸ್ರೇಲಿ ದಾಳಿಯ ಬೆನ್ನಲ್ಲೇ ಸೇಡಿನ ಜ್ವಾಲೆ ಜೋರಾಗಿದೆ. ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಒಂದಷ್ಟು ಬೆಳವಣಿಗೆಗಳೇ ಇದಕ್ಕೆ ಜ್ವಲಂತ ಸಾಕ್ಷಿ.
ತಮ್ಮ ಸುಪ್ರೀಂ ಲೀಡರ್ ಖಮೇನಿ ಅವರನ್ನು ಹತ್ಯೆಗೈದ ಹಿನ್ನೆಲೆ ಇಸ್ರೇಲ್ ಮತ್ತು ಅಮೆರಿಕ ವಿರುದ್ಧ ಇರಾನ್ ಪ್ರತಿಕಾರ ತೀರಿಸಿಕೊಳ್ಳಲು ಮುಂದಾಗಿದೆ. ಈಗಾಗಲೇ ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ದಾಳಿ ನಡೆಸಿರುವ ಇರಾನ್ ಸೇನೆ, ಯುಎಸ್ ನೆಲೆಗಳಾದ ಯುಎಇ, ಸೌದಿ ಅರೇಬಿಯಾ, ಕುವೈತ್, ಕತಾರ್ ಮತ್ತು ಬಹ್ರೇನ್‌ನಂತಹ ದೇಶಗಳ ಮೇಲೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಮೂಲಕ ದಾಳಿ ಮಾಡಿದೆ.
ಇದರೊಟ್ಟಿಗೆ ''ಆಪರೇಷನ್ ಟ್ರೂ ಪ್ರಾಮಿಸ್ 4'' ಪ್ರಾರಂಭಿಸುವುದಾಗಿಯೂ ಘೋಷಿಸಿದೆ. ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಎನ್ನುವಂತೆ ಪಣತೊಟ್ಟು ನಿಂತಿರುವ ಇರಾನ್, ಸಮುದ್ರ ಹಾಗೂ ಭೂಮಿ ಉಗ್ರರಿಗೆ ಸ್ಮಶಾನವೇ ಸರಿ ಎಂದಿದೆ. ಇದರ ನಡುವೆ, ಅರೇಬಿಯನ್ ಸಮುದ್ರದಲ್ಲಿ ನೆಲೆಗೊಂಡಿರುವ ಪರಮಾಣು ಚಾಲಿತ ಯುದ್ಧನೌಕೆಯಾದ ಬಲಿಷ್ಠ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಮೇಲೆ ದಾಳಿ ಮಾಡಿರುವುದಾಗಿ ಇರಾನ್ ಘೋಷಿಸಿದೆ.
ಇರಾನಿನ ಮಾಧ್ಯಮಗಳ ಪ್ರಕಾರ, ಯುದ್ಧನೌಕೆಯ ಮೇಲೆ 4 ಕ್ಷಿಪಣಿಗಳಿಂದ ದಾಳಿ ಮಾಡಲಾಗಿದೆ. ಆಪರೇಷನ್ ಟ್ರೂ ಪ್ರಾಮಿಸ್ 4ರ ಭಾಗವಾಗಿ ಈ ದಾಳಿ ಕೈಗೊಂಡಿದ್ದೇವೆ ಎಂದು ತಿಳಿಸಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಯುಎಸ್ ರಕ್ಷಣಾ ಇಲಾಖೆ, ಇರಾನ್ ಕ್ಷಿಪಣಿ ದಾಳಿ ಎನ್ನಲಾದ ಯಾವುದೇ ಘಟನೆಗಳು ನಡೆದಿಲ್ಲ. ಅವರ ಕ್ಷಿಪಣಿಗಳು ನಮ್ಮ ರಾಡರ್ನ ಸಹ ತಲುಪಿಲ್ಲ ಎಂದು ಹೇಳಿದೆ,(ಏಜೆನ್ಸೀಸ್).