ಇಸ್ರೇಲ್-ಇರಾನ್ ಯುದ್ಧ; ನೆರೆರಾಷ್ಟ್ರದ ಅಂತ್ಯಕ್ಕೆ ಶುರುವಾಯ್ತಾ ಕೌಂಟ್‌ಡೌನ್! ರಕ್ಷಣಾ ಸಚಿವ ನಡುಗುತ್ತಿರುವುದೇಕೆ..?
ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧವು ಪಾಕಿಸ್ತಾನದ ಪಾಲಿಗೆ ಮರಣಶಾಸನವಾಗಲಿದೆಯೇ ಎಂಬ ಪ್ರಶ್ನೆ ಹೇಳುವಂತಹ ಪೋಸ್ಟ್ನ್ನು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್(Khawaja Asif) ಅವರ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇಸ್ರೇಲ್ ಜಯಗಳಿಸಿದರೆ ಪಾಕಿಸ್ತಾನವು ನೆರೆಹೊರೆಯ ರಾಷ್ಟ್ರಗಳ ಕೈಯಲ್ಲಿ ವೈರಿಗಳಿಂದ ಸುತ್ತುವರಿದ ಗುಲಾಮಿ ರಾಷ್ಟ್ರ ಆಗಲಿದೆ ಎಂದು ಆಸಿಫ್ ಎಚ್ಚರಿಸಿದ್ದಾರೆ.
ಜಿಯೋನಿಸ್ಟ್' ಸಂಚಿನ ಆರೋಪ
ಈ ಬಗ್ಗೆ Xನಲ್ಲಿ ಪೋಸ್ಟ್ ಮಾಡಿರುವ ಖವಾಜಾ ಆಸಿಫ್, ಪ್ರಸ್ತುತ ಇರಾನ್ ಮೇಲೆ ಹೇರಲಾಗಿರುವ ಯುದ್ಧವು ವ್ಯವಸ್ಥಿತ ಸಂಚು ಎಂದು ಬಣ್ಣಿಸಿದ್ದಾರೆ. ಇರಾನ್ ಮಾತುಕತೆಗೆ ಸಿದ್ಧವಿದ್ದರೂ ಸಹ, ಜಿಯೋನಿಸ್ಟ್ ಶಕ್ತಿಗಳು ತಮ್ಮ ಪ್ರಾದೇಶಿಕ ಪ್ರಭಾವವನ್ನು ವಿಸ್ತರಿಸಲು ಈ ಸಂಘರ್ಷವನ್ನು ಸೃಷ್ಟಿಸಿವೆ ಎಂದು ಇಸ್ರೇಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 1948ರಲ್ಲಿ ಇಸ್ರೇಲ್ ಸ್ಥಾಪನೆಯಾದಾಗಿನಿಂದ ಇಸ್ಲಾಮಿಕ್ ಜಗತ್ತಿನಲ್ಲಿ ನಡೆಯುತ್ತಿರುವ ಪ್ರತಿಯೊಂದು ಸಂಘರ್ಷದ ಹಿಂದೆ ಈ ಜಿಯೋನಿಸಂ ಸಿದ್ಧಾಂತವೇ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಭಾರತ-ಇರಾನ್-ಅಫ್ಘಾನಿಸ್ತಾನ ಒಕ್ಕೂಟದ ಭೀತಿ
ಆಸಿಫ್ ಆತಂಕಕ್ಕೆ ಮುಖ್ಯ ಕೇಂದ್ರಬಿಂದು ಭಾರತವಾಗಿದೆ. ಇಸ್ರೇಲ್ ಈ ಯುದ್ಧದಲ್ಲಿ ಮೇಲುಗೈ ಸಾಧಿಸಿದರೆ, ಅದು ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಒಂದು ವೇಳೆ ಇರಾನ್ ದುರ್ಬಲಗೊಂಡರೆ ಅಥವಾ ಇಸ್ರೇಲ್ ಪ್ರಭಾವ ಹೆಚ್ಚಾದರೆ, ಭಾರತವು ಇರಾನ್ ಮತ್ತು ಅಫ್ಘಾನಿಸ್ತಾನದೊಂದಿಗೆ ಕೈಜೋಡಿಸಿ ಪಾಕಿಸ್ತಾನವನ್ನು ಮೂರೂ ದಿಕ್ಕುಗಳಿಂದ ಮುತ್ತಿಗೆ ಹಾಕುವ ಸಾಧ್ಯತೆಯಿದೆ ಎಂಬುದು ಪಾಕ್ ರಕ್ಷಣಾ ಸಚಿವನ ವಾದವಾಗಿದೆ.
ಅಫ್ಘಾನಿಸ್ತಾನ, ಇರಾನ್ ಮತ್ತು ಭಾರತವು ಪಾಕಿಸ್ತಾನದ ವಿರುದ್ಧ ಒಂದೇ ಕಾರ್ಯಸೂಚಿಯಡಿ ಒಂದಾಗಲಿವೆ. ಇದು ನಮ್ಮ ಗಡಿಗಳನ್ನು ಅಸುರಕ್ಷಿತಗೊಳಿಸುತ್ತದೆ ಮತ್ತು ಪಾಕಿಸ್ತಾನವನ್ನು ಶತ್ರುಗಳಿಂದ ಸುತ್ತುವರೆದ ದಾಸ್ಯ ರಾಷ್ಟ್ರ ಆಗಿ ಪರಿವರ್ತಿಸುತ್ತದೆ ಎಂದು ಆಸಿಫ್ ಭವಿಷ್ಯ ನುಡಿದಿದ್ದಾರೆ.
ಅಣ್ವಸ್ತ್ರವೇ ರಕ್ಷಾಕವಚ
ದೇಶದೊಳಗೆ ಎಷ್ಟೇ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, 250 ಮಿಲಿಯನ್ ಪಾಕಿಸ್ತಾನಿಗಳು ಈ ಅಂತಾರರಾಷ್ಟ್ರೀಯ ಪಿತೂರಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಖವಾಜ ಕರೆ ನೀಡಿದ್ದಾರೆ. ಪಾಕಿಸ್ತಾನವು ಅಣ್ವಸ್ತ್ರ ಹೊಂದಿರುವ ದೇಶವಾಗಿರುವುದು ಮತ್ತು ನಮ್ಮ ಸಶಸ್ತ್ರ ಪಡೆಗಳ ಶಕ್ತಿಯೇ ನಮ್ಮನ್ನು ಇಂತಹ ಶಕ್ತಿಗಳಿಂದ ರಕ್ಷಿಸುತ್ತಿದೆ ಎಂದು ದೇಶದ ಮಿಲಿಟರಿ ಬಲವನ್ನು ಸಮರ್ಥಿಸಿಕೊಂಡಿದ್ದಾರೆ.
ಪ್ರಸ್ತುತ ಪರಿಸ್ಥಿತಿ ಏನು..?
ಇತ್ತೀಚೆಗೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಸುಪ್ರೀಂ ಲೀಡರ್ ಅಲಿ ಖಮೇನಿ ಸೇರಿದಂತೆ ಉನ್ನತ ನಾಯಕರು ಹತರಾಗಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕನ್ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ. ಈ ಉದ್ವಿಗ್ನತೆಯು ಪಾಕಿಸ್ತಾನದ ನೆರೆಯ ರಾಷ್ಟ್ರಗಳಾದ ಇರಾನ್ ಮತ್ತು ಅಫ್ಘಾನಿಸ್ತಾನದೊಂದಿಗೆ ತನ್ನ ಗಡಿ ಹಂಚಿಕೊಂಡಿರುವ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ತನ್ನ ಆರ್ಥಿಕ ಪರಿಸ್ಥಿತಿಯಿಂದ ನಲುಗಿರುವ ಪಾಕಿಸ್ತಾನವು, ಅಂತಾರಾಷ್ಟ್ರೀಯ ಮಟ್ಟದ ಬಿಕ್ಕಟ್ಟನ್ನು ಬಳಸಿ ದೇಶದ ಜನರಲ್ಲಿ ರಾಷ್ಟ್ರೀಯತೆಯನ್ನು ಜಾಗೃತಗೊಳಿಸಲು ಪ್ರಯತ್ನಿಸುತ್ತಿದೆಯೇ ಎಂಬ ಪ್ರಶ್ನೆಯೂ ಎದ್ದಿದೆ. ಆದರೆ, ಇರಾನ್ ಮತ್ತು ಅಫ್ಘಾನಿಸ್ತಾನದೊಂದಿಗೆ ಪಾಕಿಸ್ತಾನದ ಸಂಬಂಧ ಕಳೆದ ಕೆಲವು ಸಮಯದಿಂದ ಅಸ್ಥಿರವಾಗಿರುವುದು ಈ ಆತಂಕಕ್ಕೆ ಪುಷ್ಟಿ ನೀಡುತ್ತಿದೆ,(ಏಜೆನ್ಸೀಸ್).