ಟ್ರಂಪ್ ಮನವಿಗೂ ಕ್ಯಾರೆ ಎನ್ನದ ಇಸ್ರೇಲ್: ಇರಾನ್ ಮೇಲೆ ಪ್ರತೀಕಾರದ ವಾಯು ದಾಳಿ! ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ!
ಟೆಲ್ ಅವೀವ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಮತ್ತಷ್ಟು ಭೀಕರ ರೂಪ ಪಡೆದುಕೊಂಡಿದೆ. ತನ್ನ ಉತ್ತರ ಭಾಗದ ಮೇಲೆ ಇರಾನ್(Israel Strikes Iran) ನಡೆಸಿದ ಭೀಕರ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ಇಸ್ರೇಲ್ ಕೆಲವೇ ಗಂಟೆಗಳಲ್ಲಿ ಭೀಕರ ತಿರುಗೇಟು ನೀಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಯಮದ ಮನವಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿರುವ ಇಸ್ರೇಲ್ ವಾಯುಪಡೆಯು ಇರಾನ್‌ನ ಪಶ್ಚಿಮ ಮತ್ತು ಕೇಂದ್ರ ಭಾಗದಲ್ಲಿರುವ ಪ್ರಮುಖ ಸೇನಾ ನೆಲೆಗಳ ಮೇಲೆ ಮುಂಜಾನೆ ವೈಮಾನಿಕ ದಾಳಿ ನಡೆಸಿದೆ.
ಇದರೊಂದಿಗೆ, ಕಳೆದ ಏಪ್ರಿಲ್‌ನಿಂದೀಚೆಗೆ ತಹಬದಿಗೆ ಬಂದಿದ್ದ ಇಸ್ರೇಲ್-ಇರಾನ್ ನೇರ ಸಂಘರ್ಷವು ಈಗ ಮತ್ತೆ ಮುಕ್ತ ಯುದ್ಧದತ್ತ ಮುನ್ನುಗ್ಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದೆ.
ಇರಾನ್‌ನ ಮಿಲಿಟರಿ ನೆಲೆಗಳೇ ಟಾರ್ಗೆಟ್!
ದಾಳಿಯ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಇಸ್ರೇಲ್ ರಕ್ಷಣಾ ಪಡೆ (IDF), ಇರಾನ್‌ನ ಭಯೋತ್ಪಾದಕ ಆಡಳಿತಕ್ಕೆ ಸೇರಿದ ಪಶ್ಚಿಮ ಮತ್ತು ಕೇಂದ್ರ ಭಾಗದ ಪ್ರಮುಖ ಮಿಲಿಟರಿ ಗುರಿಗಳ ಮೇಲೆ ಇಸ್ರೇಲ್ ವಾಯುಪಡೆ ಯಶಸ್ವಿ ದಾಳಿ ನಡೆಸಿದೆ ಎಂದು ತಿಳಿಸಿದೆ.
ಇದೇ ವೇಳೆ, ಲೆಬನಾನ್ ರಾಜಧಾನಿ ಬೈರೂತ್ ಮೇಲೆಯೂ ಇಸ್ರೇಲ್ ಜಂಟಿ ದಾಳಿ ಮುಂದುವರಿಸಿದ್ದು, ಭೀಕರ ಸ್ಫೋಟಗಳು ಸಂಭವಿಸಿವೆ. ಮತ್ತೊಂದೆಡೆ, ನೆರೆದೇಶವಾದ ಜೋರ್ಡಾನ್ ವಾಯುಪ್ರದೇಶದಲ್ಲೂ ಕ್ಷಿಪಣಿ ಮತ್ತು ಡ್ರೋನ್‌ಗಳು ಹಾರಾಡುತ್ತಿರುವುದು ಪತ್ತೆಯಾಗಿದ್ದು, ಅಮೆರಿಕ ರಾಯಭಾರ ಕಚೇರಿಯು ಜೋರ್ಡಾನ್‌ನಲ್ಲಿರುವ ತನ್ನ ನಾಗರಿಕರಿಗೆ ತಕ್ಷಣವೇ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ತುರ್ತು ಎಚ್ಚರಿಕೆ ನೀಡಿದೆ.
ಟ್ರಂಪ್ ಮಾತಿಗೆ ಬೆಲೆ ಕೊಡದ ನೆತನ್ಯಾಹು!
ಅಮೆರಿಕದ ಹಿರಿಯ ಅಧಿಕಾರಿಗಳ ಮೂಲಗಳ ಪ್ರಕಾರ, ಇರಾನ್ ಕ್ಷಿಪಣಿ ದಾಳಿ ನಡೆಸಿದ ತಕ್ಷಣವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ತುರ್ತು ಫೋನ್ ಕರೆ ಮಾಡಿದ್ದರು. ಇರಾನ್ ವಿರುದ್ಧ ಸದ್ಯಕ್ಕೆ ಯಾವುದೇ ಪ್ರತೀಕಾರದ ದಾಳಿ ನಡೆಸಬೇಡಿ, ರಾಜತಾಂತ್ರಿಕ ಮಾತುಕತೆಗೆ ಕಾಲಾವಕಾಶ ಕೊಡಿ. ನಾವು ಇರಾನ್ ಜೊತೆ ಒಂದು ಒಳ್ಳೆಯ ಒಪ್ಪಂದ ಮಾಡಿಕೊಳ್ಳುವ ತೀರಾ ಹತ್ತಿರದಲ್ಲಿದ್ದೇವೆ ಎಂದು ಟ್ರಂಪ್ ಮನವಿ ಮಾಡಿದ್ದರು ಎನ್ನಲಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ್ದ ಟ್ರಂಪ್, ನಮ್ಮ ಸಂಧಾನದ ಒಪ್ಪಂದವನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ನೆತನ್ಯಾಹುಗೆ ಬೇರೆ ದಾರಿಯಿಲ್ಲ. ಇಲ್ಲಿ ನಿರ್ಧಾರ ತೆಗೆದುಕೊಳ್ಳುವುದು ನಾನೇ ಹೊರತು ಅವರಲ್ಲ ಎಂದು ಖಡಕ್ ಆಗಿ ಹೇಳಿದ್ದರು. ಆದರೆ, ಇಸ್ರೇಲ್ ಮಾತ್ರ ಟ್ರಂಪ್ ಅವರ ಈ ಎಚ್ಚರಿಕೆ ಮತ್ತು ಮನವಿ ಎರಡನ್ನೂ ಗಾಳಿಗೆ ತೂರಿ ಇರಾನ್ ಮೇಲೆ ಬಾಂಬ್‌ಗಳ ಮಳೆಗರೆದಿದೆ.
ಇರಾನ್ ಮಾಡಿದ್ದು 'ದೊಡ್ಡ ತಪ್ಪು': ಇಸ್ರೇಲ್ ಸೇನೆ
ಭಾನುವಾರ ರಾತ್ರಿ ಇರಾನ್ ತನ್ನ 'ರಮತ್ ಡೇವಿಡ್' ವಾಯುನೆಲೆಯನ್ನು ಗುರಿಯಾಗಿಸಿಕೊಂಡು ನಡೆಸಿದ ಕ್ಷಿಪಣಿ ದಾಳಿಯ ಬೆನ್ನಲ್ಲೇ ಇಸ್ರೇಲ್ ಸೇನೆಯ ವಕ್ತಾರ ಎಫಿ ಡೆಫ್ರಿನ್ ತೀರಾ ಆಕ್ರೋಶ ಹೊರಹಾಕಿದ್ದಾರೆ. ಇಸ್ರೇಲ್ ಮೇಲೆ ದಾಳಿ ಮಾಡುವ ಮೂಲಕ ಇರಾನ್ ಅತ್ಯಂತ ಭೀಕರವಾದ ತಪ್ಪು ಮಾಡಿದೆ. ನಮ್ಮ ಸೇನಾ ಮುಖ್ಯಸ್ಥರು ಮುಂದಿನ ರಣತಂತ್ರಗಳಿಗೆ ಅನುಮೋದನೆ ನೀಡಿದ್ದಾರೆ. ಲೆಬನಾನ್ ಸೇರಿದಂತೆ ನಮ್ಮನ್ನು ಕೆಣಕುವ ಎಲ್ಲಾ ಕಡೆಗಳಲ್ಲೂ ನಮ್ಮ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಇಸ್ರೇಲ್ ದೇಶಾದ್ಯಂತ ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಅಮೆರಿಕ ನೆಲೆಗಳಿಗೂ ಇರಾನ್ ವಾರ್ನಿಂಗ್!
ಇತ್ತ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ (IRGC) ಸಹ ಮತ್ತೊಂದು ಪ್ರಕಟಣೆ ಹೊರಡಿಸಿದ್ದು, ಭಾನುವಾರ ರಾತ್ರಿ ನಾವು ನಡೆಸಿದ ದಾಳಿ ಕೇವಲ ಒಂದು ಸಣ್ಣ ಮುನ್ಸೂಚನೆ ಅಷ್ಟೇ. ಇಸ್ರೇಲ್ ಏನಾದರೂ ಮತ್ತೆ ನಮಗೆ ತಿರುಗೇಟು ನೀಡಲು ಬಂದರೆ, ಮುಂದಿನ ದಾಳಿ ಅತ್ಯಂತ ಭೀಕರವಾಗಿರಲಿದ್ದು, ಈ ವಲಯದಲ್ಲಿರುವ ಇಸ್ರೇಲ್ ಅಷ್ಟೇ ಅಲ್ಲದೆ ಅಮೆರಿಕದ ಮಿಲಿಟರಿ ನೆಲೆಗಳೂ ನಮ್ಮ ಟಾರ್ಗೆಟ್ ಆಗಲಿವೆ ಎಂದು ನೇರ ಜಾಗತಿಕ ಯುದ್ಧದ ಎಚ್ಚರಿಕೆ ನೀಡಿದೆ.
ಸದ್ಯ ಎರಡೂ ದೇಶಗಳು ಪರಸ್ಪರರ ಮೇಲೆ ದಾಳಿ ಮಾಡಿಕೊಂಡಿರುವುದರಿಂದ ಇಡೀ ವಿಶ್ವದ ಕಣ್ಣುಗಳು ಮಧ್ಯಪ್ರಾಚ್ಯದತ್ತ ನೆಟ್ಟಿದ್ದು, ಜಾಗತಿಕ ಮಾರುಕಟ್ಟೆ ಮತ್ತು ಕಚ್ಚಾ ತೈಲ ಬೆಲೆಗಳ ಮೇಲೆಯೂ ಇದು ಭಾರಿ ಪರಿಣಾಮ ಬೀರುವ ಆತಂಕ ಎದುರಾಗಿದೆ,(ಏಜೆನ್ಸೀಸ್).