ಇಸ್ರೇಲ್-ಹೆಜ್ಬೊಲ್ಲಾ ಕದನ ವಿರಾಮ: ಶಾಂತರಾಗಿ ಬುದ್ಧಿ ಬಳಸಿ ಎಂದು ಯಹೂದಿ ರಾಷ್ಟ್ರಕ್ಕೆ ಟ್ರಂಪ್ ಖಡಕ್ ವಾರ್ನಿಂಗ್!
ವಾಷಿಂಗ್ಟನ್: ಸ್ವಲ್ಪ ಶಾಂತರಾಗಿ, ಯೋಚಿಸಿ ಬುದ್ಧಿ ಬಳಸಿ ಕೆಲಸ ಮಾಡಿ ಎಂದು ಹೇಳುವ ಮೂಲಕ ತಾವೇ ಖುದ್ದಾಗಿ ಇಸ್ರೇಲ್ ಮೇಲೆ ಒತ್ತಡ ಹೇರಿ ಹೆಜ್ಬೊಲ್ಲಾ ಸಂಘಟನೆಯೊಂದಿಗೆ ಕದನ ವಿರಾಮ ಘೋಷಿಸುವಂತೆ ಮಾಡಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಬಹಿರಂಗಪಡಿಸಿದ್ದಾರೆ. ಲೆಬನಾನ್‌ನಲ್ಲಿ ಉಲ್ಬಣಗೊಂಡಿದ್ದ ಭೀಕರ ಹಿಂಸಾಚಾರವು ಮಧ್ಯಪ್ರಾಚ್ಯದ ಶಾಂತಿ ಮಾತುಕತೆ ಹಾಗೂ ಅಮೆರಿಕ-ಇರಾನ್ ನಡುವಿನ ರಾಜತಾಂತ್ರಿಕ ಪ್ರಯತ್ನಗಳಿಗೆ ಧಕ್ಕೆ ತರುತ್ತಿದ್ದ ಹಿನ್ನೆಲೆಯಲ್ಲಿ ತಾವು ಈ ಮಧ್ಯಸ್ಥಿಕೆ ವಹಿಸಿದ್ದಾಗಿ ಟ್ರಂಪ್ ಹೇಳಿದ್ದಾರೆ.
ಈ ಬಗ್ಗೆ ಎನ್‌ಬಿಸಿ ನ್ಯೂಸ್ ವಾಹಿನಿಗೆ ನೀಡಿದ ವಿಶೇಷ ದೂರವಾಣಿ ಸಂದರ್ಶನದಲ್ಲಿ ಈ ವಿಷಯ ಹಂಚಿಕೊಂಡಿರುವ ಟ್ರಂಪ್, ಇಸ್ರೇಲ್‌ನ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿ ಸಂಯಮ ಕಾಯ್ದುಕೊಳ್ಳುವಂತೆ ಒತ್ತಾಯಿಸಿದ್ದಾಗಿ ತಿಳಿಸಿದ್ದಾರೆ. ಆದರೆ, ತಾವು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ನೇರವಾಗಿ ಮಾತನಾಡಿದ್ದೀರಾ ಇಲ್ಲವೇ ಎಂಬುದನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.
ಅಮೆರಿಕ-ಕತಾರ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಜಾರಿ
ಲೆಬನಾನ್‌ನಲ್ಲಿ ಉಭಯ ಪಡೆಗಳ ನಡುವೆ ಭೀಕರ ರಾಕೆಟ್ ಮತ್ತು ವೈಮಾನಿಕ ದಾಳಿಗಳು ನಡೆದ ಬೆನ್ನಲ್ಲೇ, ಸ್ಥಳೀಯ ಕಾಲಮಾನ ಸಂಜೆ 4 ಗಂಟೆಗೆ ಕದನ ವಿರಾಮ ಜಾರಿಗೆ ಬಂದಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಅಮೆರಿಕ ಮತ್ತು ಕತಾರ್ ದೇಶಗಳ ರಾಜತಾಂತ್ರಿಕರು, ಇರಾನ್‌ನ ಸಹಕಾರದೊಂದಿಗೆ ಈ ಮಹತ್ವದ ಒಪ್ಪಂದವನ್ನು ಏರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಜ್ಬೊಲ್ಲಾ ಮೂಲಗಳು ಮತ್ತು ಇಸ್ರೇಲ್‌ನ ಉನ್ನತ ಅಧಿಕಾರಿಯೊಬ್ಬರು ಈ ಒಪ್ಪಂದವನ್ನು ಮಾಧ್ಯಮಗಳಿಗೆ ದೃಢಪಡಿಸಿದ್ದು, ಒಂದು ವೇಳೆ ಹೆಜ್ಬೊಲ್ಲಾ ನಮ್ಮ ಮೇಲೆ ದಾಳಿ ಮಾಡದಿದ್ದರೆ, ನಮಗೂ ಇದು ಯುದ್ಧದ ಸಮಯವಲ್ಲ. ಆದರೆ ನಮ್ಮ ಪಡೆಗಳು ದಕ್ಷಿಣ ಲೆಬನಾನ್ ಗಡಿಯಲ್ಲಿ ನಿಯೋಜನೆಗೊಂಡಿರುತ್ತವೆ ಎಂದು ಇಸ್ರೇಲ್ ತಿಳಿಸಿದೆ. ಕದನ ವಿರಾಮ ಜಾರಿಯಾದ ಮೊದಲ ಒಂದು ಗಂಟೆಯ ಅವಧಿಯಲ್ಲಿ ಇಸ್ರೇಲ್ ಕೆಲವು ವೈಮಾನಿಕ ದಾಳಿಗಳನ್ನು ನಡೆಸಿತಾದರೂ, ಸಂಜೆ 5 ಗಂಟೆಯ ನಂತರ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎಂದು ವರದಿಯಾಗಿದೆ.
ಇರಾನ್ ಜೊತೆಗಿನ ಅಣು ಮಾತುಕತೆಗೆ ಎದುರಾಗಿದ್ದ ಭೀತಿ
ಲೆಬನಾನ್‌ನಲ್ಲಿ ಭುಗಿಲೆದ್ದಿದ್ದ ಯುದ್ಧದ ಪರಿಸ್ಥಿತಿಯಿಂದಾಗಿ ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯಬೇಕಾಗಿದ್ದ ಅಮೆರಿಕ ಹಾಗೂ ಇರಾನ್ ನಡುವಿನ ಅತ್ಯಂತ ಪ್ರಮುಖ ರಾಜತಾಂತ್ರಿಕ ಮಾತುಕತೆಗಳು ಮುಂದೂಡಲ್ಪಟ್ಟಿದ್ದವು. ಇರಾನ್‌ನ ಅಣುಶಕ್ತಿ ಕಾರ್ಯಕ್ರಮ ಹಾಗೂ ಗಲ್ಫ್ ವಲಯದ ಪ್ರಮುಖ ಜಲಮಾರ್ಗವಾದ 'ಸ್ಟ್ರೈಟ್ ಆಫ್ ಹೊರ್ಮುಜ್ ಭದ್ರತೆಯ ದೃಷ್ಟಿಯಿಂದ ಈ ಮಾತುಕತೆ ಜಾಗತಿಕವಾಗಿ ಅತ್ಯಂತ ಮಹತ್ವದ್ದಾಗಿತ್ತು.
ಇತ್ತೀಚೆಗಷ್ಟೇ ಸಹಿ ಹಾಕಲಾದ ಮಧ್ಯಂತರ ಒಪ್ಪಂದದ ಪ್ರಕಾರ, ವಾಷಿಂಗ್ಟನ್ ಮತ್ತು ಟೆಹ್ರಾನ್ (ಇರಾನ್) ದೇಶಗಳು ಇರಾನ್ ಮೇಲಿನ ಆರ್ಥಿಕ ನಿರ್ಬಂಧಗಳ ಸಡಿಲಿಕೆ ಮತ್ತು ಪ್ರಾದೇಶಿಕ ಭದ್ರತೆಯ ಬಗ್ಗೆ ವಿಸ್ತೃತವಾಗಿ ಚರ್ಚಿಸಲು 60 ದಿನಗಳ ಕಾಲಾವಕಾಶವನ್ನು ನಿಗದಿಪಡಿಸಿಕೊಂಡಿವೆ. ಹೆಜ್ಬೊಲ್ಲಾ ಸಂಸದ ಹಸನ್ ಫದ್ಲಲ್ಲಾ ಮಾತನಾಡಿ, ಲೆಬನಾನ್‌ನಲ್ಲಿ ಸಂಪೂರ್ಣ ಕದನ ವಿರಾಮ ಜಾರಿಯಾಗದ ಹೊರತು ಮುಂದಿನ ಮಾತುಕತೆ ಸಾಧ್ಯವಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿತ್ತು ಎಂದಿದ್ದಾರೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ ಕೂಡ ಒಪ್ಪಂದದ ನಿಯಮಗಳನ್ನು ಜಾರಿಗೊಳಿಸುವ ಜವಾಬ್ದಾರಿ ಅಮೆರಿಕದ್ದೇ ಆಗಿದೆ ಎಂದು ಎಚ್ಚರಿಸಿದ್ದರು.
ಇರಾನ್ ಒಪ್ಪಂದವನ್ನು ಸಮರ್ಥಿಸಿಕೊಂಡ ಡೊನಾಲ್ಡ್ ಟ್ರಂಪ್
ಇರಾನ್‌ಗೆ ಅಮೆರಿಕ ಅತಿಯಾದ ರಿಯಾಯಿತಿಗಳನ್ನು ನೀಡುತ್ತಿದೆ ಎಂದು ಸ್ವಪಕ್ಷದ ನಾಯಕರಿಂದಲೇ ಕೇಳಿಬರುತ್ತಿರುವ ಟೀಕೆಗಳಿಗೆ ಡೊನಾಲ್ಡ್ ಟ್ರಂಪ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಈ ಯುದ್ಧದಿಂದಾಗಿ ಇರಾನ್ ಸಂಪೂರ್ಣವಾಗಿ ಧೂಳೀಪಟವಾಗಿದೆ ಮತ್ತು ದುರ್ಬಲಗೊಂಡಿದೆ. ನಾವು ಯಾವುದೇ ಹತಾಶೆಯಿಂದ ಈ ಮಾತುಕತೆಗೆ ಮುಂದಾಗಿಲ್ಲ, ಬದಲಿಗೆ ಇರಾನ್ ಅನಿವಾರ್ಯತೆಯಿಂದ ನಮ್ಮ ಬಳಿ ಬಂದಿದೆ. ಇರಾನ್ ಕಥೆ ಈಗ ಮುಗಿದಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಅಲ್ಲದೆ, ಈ ಒಪ್ಪಂದದಿಂದ ಇರಾನ್‌ಗೆ ಯಾವುದೇ ಆರ್ಥಿಕ ಲಾಭವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಟ್ರಂಪ್, ಮುಂದಿನ 60 ದಿನಗಳ ಕಾಲ ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತೇವೆ. ಅಲ್ಲಿಯವರೆಗೆ ಇರಾನ್‌ಗೆ ಒಂದು ಪೈಸೆ ಹಣವೂ ಸಿಗುವುದಿಲ್ಲ ಎಂದು ಬಿಗುವಿನ ಧೋರಣೆ ಪ್ರದರ್ಶಿಸಿದ್ದಾರೆ,(ಏಜೆನ್ಸೀಸ್).