ನೆತನ್ಯಾಹು ಪಕ್ಷಕ್ಕೇ ಮೈತ್ರಿ ಆಹ್ವಾನ ನೀಡಿ ಅಚ್ಚರಿ ಮೂಡಿಸಿದ ಐಸೆನ್‌ಕೋಟ್!  
ವಿದೇಶ

ಇಸ್ರೇಲ್ ರಾಜಕೀಯ ಬಿಕ್ಕಟ್ಟಿಗೆ ತೆರೆ ಎಳೆಯಲು ಪ್ಲಾನ್: ನೆತನ್ಯಾಹು ಪಕ್ಷಕ್ಕೇ ಮೈತ್ರಿ ಆಹ್ವಾನ ನೀಡಿ ಅಚ್ಚರಿ ಮೂಡಿಸಿದ ಐಸೆನ್‌ಕೋಟ್! | Eisenkot invites Netanyahu

ಟೆಹ್ರಾನ್: ಇಸ್ರೇಲ್‌ನ ಮುಂದಿನ ಸರ್ಕಾರ ರಚಿಸುವ ಜವಾಬ್ದಾರಿ ಹೊತ್ತಿರುವ ಯಶರ್ ಪಕ್ಷದ ಅಧ್ಯಕ್ಷ ಗಾಡಿ ಐಸೆನ್‌ಕೋಟ್, ಹಂಗಾಮಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷವನ್ನು ಮೈತ್ರಿ ಮಾತುಕತೆಗೆ ಆಹ್ವಾನಿಸಿದ್ದಾರೆ (Eisenkot invites Netanyahu). ಸಾಧ್ಯವಾದಷ್ಟು ವಿಶಾಲವಾದ ಸರ್ಕಾರ ರಚಿಸುವ ಹೊಸ ಪ್ರಯತ್ನವಾಗಿ ಈ ಮಹತ್ವದ ಸಭೆಯು ಇಂದಿನಿಂದ ಆರಂಭವಾಗಲಿದೆ.

ಕಳೆದ ಭಾನುವಾರವೂ ಉಭಯ ಪಕ್ಷಗಳ ನಡುವೆ ಸಭೆ ನಡೆದಿತ್ತಾದರೂ, ಏಕತಾ ಸರ್ಕಾರ ರಚಿಸುವ ನಿಟ್ಟಿನಲ್ಲಿ ಯಾವುದೇ ಪ್ರಗತಿ ಕಂಡುಬಂದಿರಲಿಲ್ಲ. ಅರಬ್ ಪಕ್ಷಗಳೊಂದಿಗಿನ ಸಹಕಾರವನ್ನು ಕಡಿದುಕೊಳ್ಳಬೇಕು ಮತ್ತು ತನ್ನ ಶಾಸಕಾಂಗ ಕಾರ್ಯಸೂಚಿಯನ್ನು ಸ್ಥಗಿತಗೊಳಿಸಬೇಕು ಎಂದು ಬಲಪಂಥೀಯ ಲಿಕುಡ್ ಪಕ್ಷವು ಐಸೆನ್‌ಕೋಟ್ ಬಣಕ್ಕೆ ಷರತ್ತು ವಿಧಿಸಿತ್ತು. ಆದಾಗ್ಯೂ, ಹೊಸ ಸರ್ಕಾರ ರಚಿಸಲು ಇರುವ ಪ್ರತಿಯೊಂದು ಆಯ್ಕೆಯನ್ನು ಪರಿಶೀಲಿಸುವ ಪ್ರಯತ್ನವಾಗಿ, ಇಂದಿನ ಸಭೆಯಿಂದ ಆರಂಭವಾಗುವ ಸುದೀರ್ಘ ಸರಣಿ ಮಾತುಕತೆಗಳಿಗೆ ಲಿಕುಡ್ ಪ್ರತಿನಿಧಿಗಳನ್ನು ಆಹ್ವಾನಿಸಲು ಗಾಡಿ ಐಸೆನ್‌ಕೋಟ್ ತಮ್ಮ ಸಂಧಾನ ತಂಡಕ್ಕೆ ಸೂಚಿಸಿದ್ದಾರೆ ಎಂದು ಯಶರ್ ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.

ಮತ್ತೊಂದು ಚುನಾವಣೆ ತಪ್ಪಿಸಲು ಐಸೆನ್‌ಕೋಟ್ ಪ್ರಯತ್ನ

ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಐಸೆನ್‌ಕೋಟ್, ವಿಶಾಲ ಆಧಾರಿತ ಸರ್ಕಾರ ರಚಿಸುವ ಪ್ರಯತ್ನಗಳು ಫಲ ನೀಡದಿದ್ದರೆ ರಾಷ್ಟ್ರೀಯ ತುರ್ತು ಸರ್ಕಾರ ರಚಿಸಲು ಮುಂದಾಗುವುದಾಗಿ ಎಚ್ಚರಿಸಿದ್ದಾರೆ. ಹೊಸ ಸರ್ಕಾರ ರಚನೆಯಾಗಬೇಕೇ ಅಥವಾ ನೆತನ್ಯಾಹು ಹಂಗಾಮಿ ಪ್ರಧಾನಿಯಾಗಿರುವಾಗಲೇ ಇಸ್ರೇಲ್ ಮತ್ತು ಅದರ ನಾಗರಿಕರನ್ನು ಮತ್ತೊಂದು ಚುನಾವಣೆಯ ಸುಳಿಗೆ ದೂಡಬೇಕೇ ಎಂಬುದನ್ನು ಸಂಸತ್ತಿನ ಎಲ್ಲಾ ಸದಸ್ಯರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಿರ್ಧರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ವಿಳಂಬ ಮಾಡುವುದು ಮೂರ್ಖತನವಾಗುತ್ತದೆ, ಇಸ್ರೇಲ್ ಹಾಗೂ ಮುಂದಿನ ಪೀಳಿಗೆಯ ಭವಿಷ್ಯ ಈಗ ಪಣಕ್ಕಿಡಲಾಗಿದೆ ಎಂದು ಅವರು ಪ್ರಮುಖವಾಗಿ ಉಲ್ಲೇಖಿಸಿದ್ದಾರೆ.

ನೆತನ್ಯಾಹು ಬಣಕ್ಕೆ ಮುಖಭಂಗ; ಮಟನ್ ಕಹಾನಾ ನೂತನ ಸ್ಪೀಕರ್

ಮತ್ತೊಂದೆಡೆ, ಇಸ್ರೇಲ್ ಸಂಸತ್ತಿನಲ್ಲಿ ಹಂಗಾಮಿ ಪ್ರಧಾನಿ ನೆತನ್ಯಾಹು ಅವರಿಗೆ ಭಾರಿ ಹಿನ್ನಡೆಯಾಗಿದೆ. ವಿರೋಧ ಪಕ್ಷದ ಮಿತ್ರ ಹಾಗೂ ಗಾಡಿ ಐಸೆನ್‌ಕೋಟ್ ಅವರ ಆಪ್ತ ಮಟನ್ ಕಹಾನಾ, ಇಸ್ರೇಲ್ ಸಂಸತ್ತಿನ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ನೆತನ್ಯಾಹು ನೇತೃತ್ವದ ನಿರ್ಗಮಿತ ಸರ್ಕಾರ ಜಾರಿಗೆ ತಂದಿದ್ದ ವಿವಾದಾತ್ಮಕ ನೀತಿಗಳನ್ನು ಹಿಂಪಡೆಯುವ ನಿಟ್ಟಿನಲ್ಲಿ ಇದೊಂದು ನಿರ್ಣಾಯಕ ಹೆಜ್ಜೆಯಾಗಿದೆ.

120 ಸದಸ್ಯ ಬಲದ ಸಂಸತ್ತಿನಲ್ಲಿ ಏಳು ಗಂಟೆಗಳ ಕಾಲ ನಡೆದ ಬಿರುಸಿನ ಚರ್ಚೆಯ ನಂತರ ನಡೆದ ಮತದಾನದಲ್ಲಿ, ಯಹೂದಿ ನೇತೃತ್ವದ ವಿರೋಧ ಪಕ್ಷಗಳು ಮತ್ತು ಅರಬ್ ಪಕ್ಷಗಳ ಬೆಂಬಲದೊಂದಿಗೆ ಕಹಾನಾ 66 ಮತಗಳನ್ನು ಪಡೆದು ಜಯಗಳಿಸಿದರು. ನೆತನ್ಯಾಹು ಬಣದ ಅಭ್ಯರ್ಥಿ ಓಫಿರ್ ಕಾಟ್ಜ್ ಕೇವಲ 52 ಮತಗಳನ್ನು ಪಡೆದು ಸೋಲನುಭವಿಸಿದರು. ಕಹಾನಾ ಅವರ ಆಯ್ಕೆ ಬದಲಾವಣೆಯ ಪರವಾಗಿರುವ ಸಂಪೂರ್ಣ ಬಹುಮತವನ್ನು ಪ್ರತಿಬಿಂಬಿಸುವ ಪ್ರಜಾಪ್ರಭುತ್ವದ ನಡೆ ಎಂದು ಐಸೆನ್‌ಕೋಟ್ ಬಣ್ಣಿಸಿದ್ದಾರೆ.

ಇತ್ತೀಚಿನ ಸಂಸತ್ ಚುನಾವಣೆಯಲ್ಲಿ ನೆತನ್ಯಾಹು ಸೋಲನುಭವಿಸಿದ ನಂತರ, ಇಸ್ರೇಲ್ ಅಧ್ಯಕ್ಷರು ಹೊಸ ಮೈತ್ರಿ ಸರ್ಕಾರ ರಚಿಸಲು ಐಸೆನ್‌ಕೋಟ್​ಗೆ ಆಹ್ವಾನ ನೀಡಿದ್ದರು. ಮೈತ್ರಿಕೂಟ ರಚಿಸಲು ಅವರಿಗೆ ಇನ್ನೂ ಐದು ವಾರಗಳ ಕಾಲಾವಕಾಶವಿದ್ದು, ಇದೇ ವೇಳೆ, ಅರಬ್ ಪಕ್ಷಗಳ ಬೆಂಬಲದೊಂದಿಗೆ ಸಂಸತ್ತಿನಲ್ಲಿ ಬಹುಮತ ಹೊಂದಿರುವ ಐಸೆನ್‌ಕೋಟ್ ಬಣವು, ಪ್ರಧಾನಿ ಹುದ್ದೆಗೆ ಅವಧಿ ಮಿತಿ ನಿಗದಿಪಡಿಸುವುದು, 2023ರ ಅಕ್ಟೋಬರ್ 7ರ ಹಮಾಸ್ ದಾಳಿಯ ಕುರಿತು ಸರ್ಕಾರಿ ತನಿಖೆ ನಡೆಸುವುದು ಮತ್ತು ನ್ಯಾಯಾಂಗದ ಅಧಿಕಾರವನ್ನು ಮೊಟಕುಗೊಳಿಸುವ ಕಾನೂನುಗಳನ್ನು ರದ್ದುಗೊಳಿಸುವ ಮಹತ್ವದ ಮಸೂದೆಗಳನ್ನು ಈಗಾಗಲೇ ಮಂಡಿಸಿದೆ(ಏಜೆನ್ಸೀಸ್​).