ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಇಸ್ರೇಲ್ ಡೋಂಟ್ಕೇರ್?: ಲೆಬನಾನ್ ಮೇಲೆ ಭೀಕರ ವಾಯುದಾಳಿ, 16 ಜನರ ಸಾವು!
ಬೈರೂತ್: ಜಾಗತಿಕ ಆರ್ಥಿಕತೆ ಮತ್ತು ಮಧ್ಯಪ್ರಾಚ್ಯದ ಸ್ಥಿರತೆಗೆ ಮಾರಕವಾಗಿದ್ದ ಯುದ್ಧವನ್ನು ಕೊನೆಗಾಣಿಸಲು ಅಮೆರಿಕ ಮತ್ತು ಇರಾನ್ ನಡುವೆ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಬಿದ್ದ 24 ಗಂಟೆಗಳ ಒಳಗೇ ದೊಡ್ಡ ಆಘಾತ ಎದುರಾಗಿದೆ. ದಕ್ಷಿಣ ಲೆಬನಾನ್‌ನ(Israel Air strikes Lebanon) ನಬಾತಿಯಾ ಜಿಲ್ಲೆಯ ಮೇಲೆ ಇಸ್ರೇಲ್ ನಡೆಸಿರುವ ಭೀಕರ ವೈಮಾನಿಕ ಮತ್ತು ಫಿರಂಗಿ ದಾಳಿಯಲ್ಲಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಯು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ತಂದಿದ್ದ ಜಾಗತಿಕ ಶಾಂತಿ ಸೂತ್ರವನ್ನು ಗಾಳಿಗೆ ತೂರಿದಂತಾಗಿದ್ದು, ಇಡೀ ಒಪ್ಪಂದವೇ ಮುರಿದುಬೀಳುವ ಭೀತಿ ಎದುರಾಗಿದೆ.
ಇರಾನ್ ಬೆಂಬಲಿತ ಹೆಜ್ಬುಲ್ಲಾ ಉಗ್ರರನ್ನು ಮಟ್ಟಹಾಕುವ ಹೆಸರಿನಲ್ಲಿ ಇಸ್ರೇಲ್ ಈ ದಾಳಿಯನ್ನು ನಡೆಸಿದೆ. ಆದರೆ, ಈ ಹೊಸ ಬಿಕ್ಕಟ್ಟಿನಿಂದಾಗಿ ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯಬೇಕಿದ್ದ ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆಗಳು ಸದ್ಯಕ್ಕೆ ರದ್ದಾಗಿವೆ.
ಶಾಂತಿ ಒಪ್ಪಂದದ ಬೆನ್ನಲ್ಲೇ ರಕ್ತಪಾತ: ನಬಾತಿಯಾದಲ್ಲಿ ಭೀಕರ ದೃಶ್ಯ
ಲೆಬನಾನ್‌ನ ಅಧಿಕೃತ ರಾಷ್ಟ್ರೀಯ ಸುದ್ದಿ ಸಂಸ್ಥೆ (NNA) ನೀಡಿರುವ ವರದಿಯ ಪ್ರಕಾರ, ಇಸ್ರೇಲಿ ಯುದ್ಧ ವಿಮಾನಗಳು ಮತ್ತು ಡ್ರೋನ್‌ಗಳು ದಕ್ಷಿಣ ಲೆಬನಾನ್‌ನ ಹಲವು ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ರಾತ್ರೋರಾತ್ರಿ ಬಾಂಬ್ ದಾಳಿ ನಡೆಸಿವೆ. ನಬಾತಿಯಾ ನಗರ, ಕಫರ್ ಜೌಜ್, ಕಫರ್ ರೇಮನ್ ಮತ್ತು ಕಫರ್ ಸಿರ್ ಗ್ರಾಮಗಳಲ್ಲಿ ಇಸ್ರೇಲ್ ನಡೆಸಿದ ದಾಳಿಗೆ ಒಟ್ಟು 16 ಜನರು ಬಲಿಯಾಗಿದ್ದು, ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಇನ್ನೂ ಹಲವರು ಸಿಲುಕಿಕೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ಇತ್ತೀಚಿನ ತಿಂಗಳುಗಳಲ್ಲಿ ನಡೆದ ಅತ್ಯಂತ ಭೀಕರ ರಕ್ತಪಾತ ಇದಾಗಿದೆ ಎಂದು ಸ್ಥಳೀಯರು ಕಣ್ಣೀರು ಹಾಕಿದ್ದಾರೆ. ಇತ್ತ ಇಸ್ರೇಲ್ ಸೇನೆ ಮಾತ್ರ, ಹೆಜ್ಬುಲ್ಲಾ ಉಗ್ರರ ಸಕ್ರಿಯ ತಾಣಗಳ ಮೇಲಷ್ಟೇ ನಮ್ಮ ದಾಳಿ ಮುಂದುವರಿದಿದೆ ಎಂದು ಸಮರ್ಥಿಸಿಕೊಂಡಿದೆ.
ಒಪ್ಪಂದದಲ್ಲೇನಿತ್ತು?: ಇಸ್ರೇಲ್‌ನಿಂದ ನಿಯಮ ಉಲ್ಲಂಘನೆ ಆರೋಪ
ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಡಿಜಿಟಲ್ ಸಹಿ ಮಾಡಿದ್ದ 14 ಅಂಶಗಳ ಐತಿಹಾಸಿಕ ತಿಳುವಳಿಕಾ ಒಪ್ಪಂದದಲ್ಲಿ (MoU), ಲೆಬನಾನ್ ಒಳಗೊಂಡಂತೆ ಎಲ್ಲಾ ರಂಗಗಳಲ್ಲೂ ತಕ್ಷಣವೇ ಮತ್ತು ಶಾಶ್ವತವಾಗಿ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಪ್ರತಿಯಾಗಿ ಇರಾನ್ ಮೇಲಿನ ನಿರ್ಬಂಧಗಳನ್ನು ಸಡಿಲಿಸಲು ಅಮೆರಿಕ ಒಪ್ಪಿಕೊಂಡಿತ್ತು ಹಾಗೂ ಇರಾನ್ ತನ್ನ ಪರಮಾಣು ಅಸ್ತ್ರ ತಯಾರಿಕೆಯನ್ನು ಕೈಬಿಡುವುದಾಗಿ ಭರವಸೆ ನೀಡಿತ್ತು. ಆದರೆ, ಒಪ್ಪಂದ ಜಾರಿಗೆ ಬಂದ ಕೆಲವೇ ಗಂಟೆಗಳಲ್ಲಿ ಇಸ್ರೇಲ್ ದಾಳಿ ನಡೆಸಿರುವುದು ಇರಾನ್ ಸರ್ಕಾರವನ್ನು ಕೆರಳಿಸಿದೆ.
ಸ್ವಿಟ್ಜರ್ಲೆಂಡ್ ಮಾತುಕತೆ ರದ್ದು: ಜೆಡಿ ವ್ಯಾನ್ಸ್ ಪ್ರವಾಸ ಮುಂದೂಡಿಕೆ
ಲೆಬನಾನ್ ಮೇಲಿನ ಇಸ್ರೇಲ್ ದಾಳಿಯ ಬೆನ್ನಲ್ಲೇ ಜಾಗತಿಕ ರಾಜತಾಂತ್ರಿಕ ವಲಯದಲ್ಲೂ ಸಂಚಲನ ಮೂಡಿದೆ. ಈ ಶಾಂತಿ ಒಪ್ಪಂದಕ್ಕೆ ಅಂತಿಮ ರೂಪ ನೀಡಲು ಸ್ವಿಟ್ಜರ್ಲೆಂಡ್‌ನಲ್ಲಿ ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳ ನಡುವೆ ಸಭೆ ನಿಗದಿಯಾಗಿತ್ತು. ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಈ ಮಾತುಕತೆಯ ನೇತೃತ್ವ ವಹಿಸಬೇಕಿತ್ತು. ಆದರೆ, ಇಸ್ರೇಲ್‌ನ ನಿರಂತರ ದಾಳಿಯಿಂದಾಗಿ ಇರಾನ್ ತನ್ನ ನಿಯೋಗವನ್ನು ಕಳುಹಿಸಲು ನಿರಾಕರಿಸಿದೆ. ಪರಿಣಾಮವಾಗಿ, ಅಮೆರಿಕ ಉಪಾಧ್ಯಕ್ಷರು ತಮ್ಮ ಸ್ವಿಟ್ಜರ್ಲೆಂಡ್ ಪ್ರವಾಸವನ್ನು ಸದ್ಯಕ್ಕೆ ರದ್ದುಗೊಳಿಸಿದ್ದಾರೆ.
ಇದೇ ವೇಳೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ನಮ್ಮ ದೇಶದ ಮೇಲಿನ ಹೆಜ್ಬುಲ್ಲಾ ಭೀತಿ ಸಂಪೂರ್ಣವಾಗಿ ನಾಶವಾಗುವವರೆಗೂ ನಾವು ಲೆಬನಾನ್‌ನಿಂದ ಸೈನ್ಯವನ್ನು ಹಿಂಪಡೆಯುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ಇದು ಅಮೆರಿಕದ ಕೆಂಗಣ್ಣಿಗೂ ಕಾರಣವಾಗಿದೆ.
ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಕಣ್ಣು
ಈ ಒಪ್ಪಂದದ ಮೂಲಕ ಜಗತ್ತಿನ ಪ್ರಮುಖ ತೈಲ ಸಾರಿಗೆ ಮಾರ್ಗವಾದ 'ಸ್ಟ್ರೈಟ್ ಆಫ್ ಹೊರ್ಮುಜ್' ಅನ್ನು ಪುನಃ ಮುಕ್ತಗೊಳಿಸಲು ಯೋಜಿಸಲಾಗಿತ್ತು. ಆದರೆ ಇಸ್ರೇಲ್ ಮತ್ತು ಹೆಜ್ಬುಲ್ಲಾ ನಡುವಿನ ಕಳಗ ಮುಂದುವರಿದರೆ, ಮಧ್ಯಪ್ರಾಚ್ಯದ ಶಾಂತಿ ಕನಸು ನುಚ್ಚುನೂರಾಗಲಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಮತ್ತೆ ಏರಿಕೆಯಾಗುವ ಆತಂಕ ಎದುರಾಗಿದೆ. ಟ್ರಂಪ್ ತಂದಿದ್ದ ಈ ಬಿಗ್ ಡೀಲ್ ಅನ್ನು ಇಸ್ರೇಲ್ ಉಳಿಸಿಕೊಳ್ಳುತ್ತದೆಯೇ ಅಥವಾ ಇಡೀ ಒಪ್ಪಂದ ಮುರಿದುಬೀಳುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ,(ಏಜೆನ್ಸೀಸ್).