ಲೆಬನಾನ್ ಮೇಲೆ ಇಸ್ರೇಲ್ ಭೀಕರ ಮಾಯುದಾಳಿ
- ಮಧ್ಯಪ್ರಾಚ್ಯದಲ್ಲಿ ಕದನವಿರಾಮ ಘೋಷಣೆ
- ಲೆಬನಾನ್ ಮೇಲೆ ಇಸ್ರೇಲ್ ಭೀಕರ ಮಾಯುದಾಳಿ
- ಹತ್ತು ನಿಮಿಷದ ದಾಳಿಯಲ್ಲಿ 250 ಜನ ಮೃತ; 800 ಕ್ಕೂ ಅಧಿಕ ಜನ ಗಾಯ
- ನಾವು ದಾಳಿಯನ್ನು ನಿಲ್ಲಿಸುವುದಿಲ್ಲ: ಬೆಂಜಾಮಿನ್ ನೆತನ್ಯಾಹು
ಲೆಬನಾನ್: ಮಧ್ಯಪ್ರಾಚ್ಯದಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿದ್ದ ಸಂಘರ್ಷಕ್ಕೆ ಅಮೆರಿಕ ತಾತ್ಕಾಲಿಕ ತಡೆ ಎಂಬಂತೆ ಎರಡು ವಾರಗಳ ಕದನವಿರಾಮವನ್ನು ಘೋಷಿಸಿದೆ. ಆದರೆ ಈ ಸೀಸ್ಫೈರ್ನ್ನು ಗಾಳಿಗೆ ತೂರಿರುವ ಇಸ್ರೇಲ್, ಲೆಬನಾನ್ ಮೇಲೆ ದಾಳಿ (Israel Attack Lebanon) ಮುಂದುವರೆಸಿದೆ.
ಹತ್ತು ನಿಮಿಷದಲ್ಲಿ 100 ದಾಳಿ
ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಇಸ್ರೇಲ್, ದಕ್ಷಿಣ ಲೆಬನಾನ್‌ನ ಬೈರುತ್ ಮತ್ತು ಬೆಕಾ ಕಣಿವೆ ಪ್ರದೇಶದ ಮೇಲೆ ಕೇವಲ 10 ನಿಮಿಷಗಳಲ್ಲಿ ಸುಮಾರು 100 ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಈ ಭೀಕರ ದಾಳಿಯಲ್ಲಿ ಅಂದಾಜು 254 ಜನ ಮೃತಪಟ್ಟಿದ್ದು, 837 ಜನ ತೀವ್ರವಾಗಿ ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದೆ. ಲೆಬನಾನ್‌ನ ನಾಗರಿಕ ರಕ್ಷಣಾ ಸಂಸ್ಥೆಯ ಪ್ರಕಾರ, ಕದನ ವಿರಾಮದ ನಂತರ ಇಸ್ರೇಲ್ ನಡೆಸಿದ ಅತ್ಯಂತ ಭಯಾನಕ ದಾಳಿ ಇದಾಗಿದೆ ಎಂದು ಬಣ್ಣಿಸಲಾಗಿದೆ.
ಕದನ ವಿರಾಮದ ನಂತರ ದಾಳಿ ಏಕೆ ನಿಲ್ಲುತ್ತಿಲ್ಲ?
ಅಮೆರಿಕ ಕದನ ವಿರಾಮ ಘೋಷಿಸಿದ ನಂತರ ಇರಾನ್ ತನ್ನ 10 ಷರತ್ತುಗಳನ್ನು ಅಮೆರಿಕ ಮತ್ತು ಇಸ್ರೇಲ್ನ ಮುಂದಿಟ್ಟಿದ್ದು, ಈ ಷರತ್ತುಗಳನ್ನು ಉಭಯ ದೇಶಗಳು ಒಪ್ಪಿಕೊಂಡರೆ ಮಾತ್ರ ಶಾಂತಿಯನ್ನು ಸ್ಥಾಪಿಸಬಹುದು ಎಂದು ಇರಾನ್ ಸ್ಪಷ್ಟ ಪಡಿಸಿದೆ.
ಹಾಗೆಯೇ, ಇರಾನ್ ವಿಧಿಸಿರುವ ಷರತ್ತುಗಳಲ್ಲಿ ಲೆಬನಾನ್ ಮೇಲೆ ದಾಳಿ ಮಾಡಬಾರದು ಎಂಬ ಅಂಶವನ್ನು ಸಹ ಸೇರಿಸಿದೆ. ಲೆಬನಾನ್ ಮೇಲೆ ದಾಳಿ ಮುಂದುವರೆದರೆ ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಓಡಾಟಕ್ಕೆ ನಿರ್ಬಂಧ ವಿಧಿಸುವುದಾಗಿ ಇರಾನ್ ಎಚ್ಚರಿಕೆ ನೀಡಿದ್ದು, ಈ ದಾಳಿಯ ಬಳಿಕ ಹೊರ್ಮುಜ್ ಜಲಸಂಧಿ ಮತ್ತೆ ಸ್ಥಗಿತಗೊಳ್ಳಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಆದರೆ ಕದನ ವಿರಾಮದಲ್ಲಿ ಲೆಬನಾನ್‌ನ ಉಲ್ಲೇಖವನ್ನು ಅಮೆರಿಕ ಮತ್ತು ಇಸ್ರೇಲ್ ಒಪ್ಪಿಕೊಳ್ಳದಿರುವ ಕಾರಣ ಈ ದಾಳಿ ನಡೆದಿದೆ ಎನ್ನುವುದು ಜಾಗತಿಕ ರಾಜಕೀಯ ಪರಿಣಿತರ ಅಭಿಪ್ರಾಯವಾಗಿದೆ.
ನಾವು ದಾಳಿಯನ್ನು ಮುಂದುವರೆಸುತ್ತೇವೆ: ನೆತನ್ಯಾಹು
ಕದನ ವಿರಾಮದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಇಸ್ರೇಲ್ ಪ್ರಧಾನಿ, ಬೆಂಜಾಮಿನ್ ನೆತನ್ಯಾಹು, ನಾವು ಈ ಕದನ ವಿರಾಮವನ್ನು ಒಪ್ಪಿಕೊಳ್ಳತ್ತೇವೆ, ಆದರೆ ನಾವು ಲೆಬನಾನ್ ಮತ್ತು ಹೆಜ್ಬೊಲ್ಲಾ ಮೇಲೆ ದಾಳಿಯನ್ನು ಮುಂದುವರೆಸುತ್ತೇವೆಂದು ಸ್ಪಷ್ಟವಾಗಿ ಹೇಳಿದ್ದಾರೆ,(ಏಜನ್ಸೀಸ್).