ಇರಾನ್ ಸರ್ವೋಚ್ಚ ನಾಯಕನ ವಿಮಾನವನ್ನು ಹೊಡೆದುರಳಿಸಿದ ಇಸ್ರೇಲ್​ 
ವಿದೇಶ

ಟೆಹ್ರಾನ್ ಮೇಲೆ ಇಸ್ರೇಲ್ ಬಾಂಬಿಂಗ್​: ಇರಾನಿನ ಸರ್ವೋಚ್ಚ ನಾಯಕನ ವಿಮಾನವನ್ನೇ ಹೊಡೆದುರಳಿಸಿದ ಮಿಸೈಲ್​ಗಳು!Israel Bombing

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿದ್ದು, ಪರಿಸ್ಥಿತಿ ದಿನೇದಿನೇ ಕೈಮೀರಿ ಹೋಗುತ್ತಿದೆ. ಇದೀಗ ಇಸ್ರೇಲ್ ರಕ್ಷಣಾ ಪಡೆ (IAF) ಇರಾನ್‌ನ ರಾಜಧಾನಿ ಟೆಹ್ರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ನಡೆಸಿದ ದಾಳಿ (Israel Bombing) ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಈ ದಾಳಿಯಲ್ಲಿ ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಬಳಸುತ್ತಿದ್ದ ವಿಶೇಷ ವಿಮಾನ ಧ್ವಂಸವಾಗಿದೆ ಎಂದು ಇಸ್ರೇಲ್ ಘೋಷಿಸಿದೆ.

ಇರಾನ್​ ನಾಯಕನ ವಿಮಾನ ಉಡೀಸ್​!

ಇಸ್ರೇಲ್ ಪಡೆಗಳ ಪ್ರಕಾರ, ಈ ವಿಮಾನ ಕೇವಲ ಒಂದು ಪ್ರಯಾಣದ ಸಾಧನವಾಗಿರಲಿಲ್ಲ. ಖಮೇನಿ ಮತ್ತು ಇರಾನ್‌ನ ಹಿರಿಯ ಅಧಿಕಾರಿಗಳು ಈ ವಿಮಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹಣೆ, ಹಣಕಾಸು ವ್ಯವಹಾರ ಮತ್ತು ಮಿತ್ರ ರಾಷ್ಟ್ರಗಳೊಂದಿಗೆ ಸಂಬಂಧ ಕಾಯ್ದುಕೊಳ್ಳಲು ಬಳಸುತ್ತಿದ್ದರು. ಈ ವಿಮಾನವನ್ನು ಹೊಡೆದುರುಳಿಸುವ ಮೂಲಕ ಇರಾನ್‌ನ ಪ್ರಾದೇಶಿಕ ಸಮನ್ವಯ ಸಾಮರ್ಥ್ಯಕ್ಕೆ ನಾವು ತೀವ್ರ ಹೊಡೆತ ನೀಡಿದ್ದೇವೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿಕೊಂಡಿದೆ.
16 ವಿಮಾನಗಳು ಭಸ್ಮ
ಈ ದಾಳಿ ಕೇವಲ ಒಂದು ವಿಮಾನಕ್ಕೆ ಸೀಮಿತವಾಗಿಲ್ಲ. ಈ ತಿಂಗಳ ಆರಂಭದಲ್ಲಿ ಇದೇ ಮೆಹ್ರಾಬಾದ್ ವಿಮಾನ ನಿಲ್ದಾಣದಲ್ಲಿ ಇಸ್ರೇಲ್ ಬರೋಬ್ಬರಿ 16 ವಿಮಾನಗಳನ್ನು ಹೊಡೆದುರುಳಿಸಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈ ವಿಮಾನಗಳನ್ನು ಬಳಸಿ ಲೆಬನಾನ್‌ನಲ್ಲಿರುವ ಹೆಜ್ಬೊಲ್ಲಾ ಉಗ್ರರಿಗೆ ಅಕ್ರಮವಾಗಿ ಶಸ್ತ್ರಾಸ್ತ್ರ ಮತ್ತು ಹಣವನ್ನು ಸಾಗಿಸುತ್ತಿತ್ತು ಎಂಬುದು ಇಸ್ರೇಲ್‌ನ ಆರೋಪ. ಇರಾನ್ ಕೆಲವು ವಿಮಾನಗಳನ್ನು ಮರೆಮಾಡಲು ಪ್ರಯತ್ನಿಸಿದರೂ, ಇಸ್ರೇಲ್‌ನ ಗುಪ್ತಚರ ಕಣ್ಣು ತಪ್ಪಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದೆ.

ಯುದ್ಧದ ಕಾವೇರುತ್ತಿರುವ ವಾತಾವರಣ

ಫೆಬ್ರವರಿ 28 ರಂದು ಅಲಿ ಖಮೇನಿ ಹತ್ಯೆಯಾದ ನಂತರ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಇದಕ್ಕೆ ಪ್ರತೀಕಾರವಾಗಿ ಇರಾನ್ ಈಗಾಗಲೇ ಹಲವು ಗಲ್ಫ್ ರಾಷ್ಟ್ರಗಳಲ್ಲಿ ಅಮೆರಿಕ ಮತ್ತು ಇಸ್ರೇಲ್ ಗುರಿಗಳ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸಿದೆ.
ಈ ಸಂಘರ್ಷದಿಂದಾಗಿ ಜಾಗತಿಕವಾಗಿ ಆರ್ಥಿಕ ಆತಂಕ ಶುರುವಾಗಿದೆ. ಪ್ರಪಂಚದ ಐದನೇ ಒಂದು ಭಾಗದಷ್ಟು ತೈಲ ಸರಬರಾಜು ಆಗುವ ಹಾರ್ಮುಜ್ ಜಲಸಂಧಿ (Strait of Hormuz) ಪ್ರದೇಶದಲ್ಲಿ ಸಂಚಾರ ಸ್ಥಗಿತಗೊಂಡಿದೆ. ಇದು ಜಾಗತಿಕ ತೈಲ ಮಾರುಕಟ್ಟೆ ಮತ್ತು ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಿದ್ದು, ಮುಂದೇನಾಗುವುದೋ ಎಂಬ ಭಯ ಎಲ್ಲೆಡೆ ಮನೆಮಾಡಿದೆ.

ಜಾಗತಿಕ ಆರ್ಥಿಕತೆಯ ಮೇಲೆ ಪ್ರಭಾವ

ಹಾರ್ಮುಜ್ ಜಲಸಂಧಿ ವಿಶ್ವದ ಅತ್ಯಂತ ನಿರ್ಣಾಯಕ ಸಮುದ್ರ ಮಾರ್ಗಗಳಲ್ಲಿ ಒಂದು. ಇಲ್ಲಿ ನಡೆಯುತ್ತಿರುವ ಈ ವಿದ್ಯಮಾನಗಳು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ. ಕೇವಲ ಎರಡು ದೇಶಗಳ ನಡುವಿನ ಜಗಳವಲ್ಲ, ಇದು ಇಡೀ ಪ್ರಪಂಚದ ಇಂಧನ ಭದ್ರತೆಯ ಮೇಲೆ ನೇರ ದಾಳಿ ಮಾಡುತ್ತಿದೆ ಎನ್ನುವುದು ತಜ್ಞರ ಆತಂಕವಾಗಿದೆ,(ಏಜನ್ಸೀಸ್​).