ಮಿಯಾ ಖಲೀಫಾ ಲೆಬನಾನ್ ದಾಳಿಯ ಬಗ್ಗೆ ಆಕ್ರೋಶ 
ವಿದೇಶ

ಇಸ್ರೇಲ್-ಅಮೆರಿಕ ಭಯೋತ್ಪಾದಕ ರಾಷ್ಟ್ರಗಳು: ಲೆಬನಾನ್​ ಮೇಲಿನ ದಾಳಿಗೆ ಮಿಯಾ ಖಲೀಫಾ ಆಕ್ರೋಶ! Mia Khalifa

ಪ್ರಮುಖ ಮುಖ್ಯಾಂಶಗಳು

  • ಲೆಬನಾನ್ ಮೇಲೆ ಇಸ್ರೇಲ್​ ದಾಳಿ
  • ಮಿಯಾ ಖಲೀಫಾ ಲೆಬನಾನ್ ದಾಳಿಯ ಬಗ್ಗೆ ಆಕ್ರೋಶ
  • ಅಮೆರಿಕ ಮತ್ತು ಇಸ್ರೇಲ್​ ಭಯೋತ್ಪಾದಕ ದೇಶಗಳು
ಬೈರುತ್: ಲೆಬನಾನ್‌ನಲ್ಲಿ ಇತ್ತೀಚೆಗೆ ನಡೆದ ಭೀಕರ ವಾಯುದಾಳಿಗಳು ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ಈ ಬೆಳವಣಿಗೆಯ ಬೆನ್ನಲ್ಲೇ ಮಾಜಿ ನೀಲಿ ಚಿತ್ರಗಳ ನಟಿ ಮಿಯಾ ಖಲೀಫಾ (Mia Khalifa) ಅವರು ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಲೆಬನಾನ್ ಮೂಲದವರಾದ ಮಿಯಾ ಖಲೀಫಾ, ತನ್ನ ತಾಯ್ನಾಡಿನ ಮೇಲಿನ ದಾಳಿಯನ್ನು ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ಮತ್ತು ನರಮೇಧ ಎಂದು ಕರೆದಿದ್ದಾರೆ.

ಇದು ಯುದ್ಧವಲ್ಲ, ಭಯೋತ್ಪಾದನೆ

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ವೀಡಿಯೊವೊಂದನ್ನು ಹಂಚಿಕೊಂಡಿರುವ ಮಿಯಾ ಖಲೀಫಾ, ಇಸ್ರೇಲ್ ಮತ್ತು ಅಮೆರಿಕದ ಕ್ರಮಗಳನ್ನು ಕಟುವಾಗಿ ಟೀಕಿಸಿದ್ದಾರೆ. ಇದು ಯುದ್ಧ ಅಪರಾಧಗಳನ್ನು ನಿಷೇಧಿಸುವ ಎರಡು ದೇಶಗಳು ಜಾರಿಗೆ ತಂದ ಭಯೋತ್ಪಾದನೆಗಿಂತ ಕಡಿಮೆಯಿಲ್ಲ. ಅಮೆರಿಕ ಮತ್ತು ಇಸ್ರೇಲ್ ಭಯೋತ್ಪಾದಕ ಹಾಗೂ ಫ್ಯಾಸಿಸ್ಟ್ ರಾಷ್ಟ್ರಗಳಾಗಿವೆ. ಹೇಗ್‌ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಇವೆರಡಕ್ಕೂ ಒಂದು ದಿನ ವಿಚಾರಣೆ ಕಾಯುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ.
ದಾಳಿಯ ಪ್ರಮಾಣದ ಬಗ್ಗೆ ಮಾತನಾಡುತ್ತಾ ಭಾವುಕರಾದ ಅವರು, ದಶಕಗಳಿಂದ ನಮ್ಮ ಕಣ್ಣ ಮುಂದೆ ನರಮೇಧ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ. ಆದರೆ ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ಇದು ಮಿತಿಮೀರಿದೆ. ವಸತಿ ನಿಲಯಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಸ್ಮಶಾನಗಳ ಮೇಲೆಯೂ ಬಾಂಬ್ ಹಾಕಲಾಗುತ್ತಿದೆ. ಕದನ ವಿರಾಮದ ಘೋಷಣೆಯ ನಡುವೆಯೂ ಕೇವಲ 10 ನಿಮಿಷಗಳಲ್ಲಿ 160 ವಾಯುದಾಳಿಗಳು ನಡೆದಿವೆ ಎಂದರೆ ಇದನ್ನು ಏನೆಂದು ಕರೆಯಬೇಕು? ಎಂದು ಪ್ರಶ್ನಿಸಿದ್ದಾರೆ.

ಮಾನವೀಯತೆ ಎತ್ತ ಸಾಗುತ್ತಿದೆ?

ಪ್ರಸ್ತುತ ಜಗತ್ತಿನ ಪರಿಸ್ಥಿತಿಯನ್ನು ಡಿಸ್ಟೋಪಿಯನ್ (ಅರಾಜಕತೆ ಮತ್ತು ಸಂಕಟದ ಕಾಲ) ಎಂದು ಬಣ್ಣಿಸಿದ ಮಿಯಾ, ಒಂದೆಡೆ ನಾವು ಚಂದ್ರನ ಮೇಲೆ ವಾಸಿಸಲು ಜನರನ್ನು ಕಳುಹಿಸುವ ಬಗ್ಗೆ ಚರ್ಚಿಸುತ್ತಿದ್ದೇವೆ, ಮತ್ತೊಂದೆಡೆ ಮನುಷ್ಯರೇ ಪರಸ್ಪರ ಬಾಂಬ್ ಹಾಕಿಕೊಳ್ಳುತ್ತಿದ್ದಾರೆ. ಇದು ಹುಚ್ಚುತನದ ಪರಮಾವಧಿ. ನನ್ನ ಹೃದಯ ಲೆಬನಾನ್ ಜನರೊಂದಿಗಿದೆ, ಎಂದು ನೋವು ವ್ಯಕ್ತಪಡಿಸಿದ್ದಾರೆ. ತಾನು ಪಾವತಿಸುವ ತೆರಿಗೆ ಹಣ ತನ್ನದೇ ತಾಯ್ನಾಡಿನ ವಿನಾಶಕ್ಕೆ ಬಳಕೆಯಾಗುತ್ತಿರುವುದಕ್ಕೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಕದನ ವಿರಾಮದ ನಡುವೆಯೇ ಲೆಬನಾನ್‌ನಲ್ಲಿ ರಕ್ತಪಾತ

ಕುತೂಹಲಕಾರಿ ಸಂಗತಿಯೆಂದರೆ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮಕ್ಕೆ ಒಪ್ಪಂದವಾಗಿದೆ ಎಂದು ತಿಳಿಸಿದ್ದರು. ಆದರೆ, ಈ ಘೋಷಣೆಯ ಬೆನ್ನಲ್ಲೇ ಇಸ್ರೇಲ್ ತನ್ನ ಇತಿಹಾಸದಲ್ಲೇ ಲೆಬನಾನ್ ಮೇಲಿನ ಅತಿದೊಡ್ಡ ಸಂಘಟಿತ ದಾಳಿಯನ್ನು ನಡೆಸಿತು.
ಇಸ್ರೇಲಿ ಮಿಲಿಟರಿ ಮೂಲಗಳ ಪ್ರಕಾರ, ಕೇವಲ 10 ನಿಮಿಷಗಳಲ್ಲಿ 100 ಕ್ಕೂ ಹೆಚ್ಚು ಗುರಿಗಳನ್ನು ನಾಶಪಡಿಸಲಾಗಿದೆ. ಈ ದಾಳಿಯಲ್ಲಿ ಸುಮಾರು 250 ಕ್ಕೂ ಹೆಚ್ಚು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ರಾಜತಾಂತ್ರಿಕ ಬಿಕ್ಕಟ್ಟು ಮತ್ತು ನೆತನ್ಯಾಹು ನಿಲುವು

ಈ ದಾಳಿಯ ನಂತರ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇರಾನ್ ಪ್ರತಿಕಾರವಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ ಎಂದು ವರದಿಯಾಗಿದೆ. ಅತ್ತ ಅಮೆರಿಕವು, ಲೆಬನಾನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ನಿಲ್ಲಿಸುವುದು ಎಂದಿಗೂ ಕದನ ವಿರಾಮದ ಭಾಗವಾಗಿರಲಿಲ್ಲ ಎಂದು ಸ್ಪಷ್ಟ ಹೇಳಿಕೆ ನೀಡಿದ್ದಾರೆ, (ಏಜನ್ಸೀಸ್).