ಪಾಕ್​ ರಕ್ಷಣಾ ಪಡೆಗಳ ಮುಖ್ಯಸ್ಥ (CDS), ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ 
ವಿದೇಶ

ಪಾಕ್ ಸೇನೆಗೆ ಇಸ್ಲಾಮಿಕ್ ಬಣ್ಣ; ಆರ್ಥಿಕ ಬಿಕ್ಕಟ್ಟಿನ ನಡುವೆ ಧರ್ಮದ ಅಸ್ತ್ರ: ಮುನೀರ್ ನಿಗೂಢ ಹೇಳಿಕೆಯ ಹಿಂದಿನ ಮರ್ಮವೇನು..? Asim Munir

ಇಸ್ಲಾಮಾಬಾದ್​: ಪಾಕಿಸ್ತಾನ ಸೇನೆಯು ಕೇವಲ ಗಡಿ ಕಾಯುವ ಪಡೆಯಾಗಿ ಉಳಿಯದೆ, ಇಸ್ಲಾಂ ಧರ್ಮದ ರಕ್ಷಕನಾಗಿ ಕಾರ್ಯನಿರ್ವಹಿಸಲಿದೆ ಎಂದು ಪಾಕ್​ ರಕ್ಷಣಾ ಪಡೆಗಳ ಮುಖ್ಯಸ್ಥ (CDS), ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್(Asim Munir) ಹೇಳಿದ್ದಾರೆ. ಅಲ್ಲದೆ, ದೇಶದ ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಧಾರ್ಮಿಕ ಸ್ವರೂಪ ನೀಡುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಈ ಬಗ್ಗೆ ಇತ್ತೀಚೆಗೆ ದಿ ನ್ಯೂಸ್ ಇಂಟರ್‌ನ್ಯಾಷನಲ್ ಪತ್ರಿಕೆಯೊಂದಿಗೆ ಮಾತನಾಡಿದ ಮುನೀರ್, ಪಾಕಿಸ್ತಾನವು ಇಸ್ಲಾಂ ಹೆಸರಿನಲ್ಲಿ ಸೃಷ್ಟಿಯಾದ ದೇಶವಾಗಿದ್ದು, ಅದರ ಸೃಷ್ಟಿಯ ಉದಾತ್ತ ಉದ್ದೇಶವನ್ನು ಸಾಧಿಸುವ ಮಹತ್ವದ ಹಂತದಲ್ಲಿ ನಾವಿದ್ದೇವೆ ಎಂದು ಹೇಳಿದ್ದಾರೆ.

ಸೇನೆಯಲ್ಲಿ ಧಾರ್ಮಿಕ ಸಿದ್ಧಾಂತದ ಅಬ್ಬರ

ಅಸಿಮ್ ಮುನೀರ್ ಅಧಿಕಾರ ವಹಿಸಿಕೊಂಡ ನಂತರ ಸೇನೆಯಲ್ಲಿ ಮೌಲ್ವಿಗಳ ಮತ್ತು ಧಾರ್ಮಿಕ ಚಿಂತನೆಗಳ ಪ್ರಭಾವ ಗಣನೀಯವಾಗಿ ಹೆಚ್ಚಾಗಿದೆ. ಅಲ್ಲದೆ, ಸೈನಿಕರನ್ನು ಕೇವಲ ದೇಶಪ್ರೇಮಿಗಳನ್ನಾಗಿ ನೋಡುವ ಬದಲು ಇಸ್ಲಾಮಿಕ್ ಸಿದ್ಧಾಂತದ ಯೋಧರು ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.
ಪಾಕಿಸ್ತಾನವು ಇಸ್ಲಾಂ ತತ್ವಗಳ ಮೇಲೆ ಅಡಿಪಾಯ ಹೊಂದಿದೆ. ನಮ್ಮ ಸಶಸ್ತ್ರ ಪಡೆಗಳು ಕೇವಲ ಭೂಪ್ರದೇಶದ ರಕ್ಷಕರಲ್ಲ, ಬದಲಿಗೆ ಇಸ್ಲಾಮಿಕ್ ಅಸ್ಮಿತೆಯ ರಕ್ಷಕರು. ನಮ್ಮ ಪೂರ್ವಜರು ಯಾವ ಉದ್ದೇಶಕ್ಕಾಗಿ ಈ ದೇಶವನ್ನು ಕಟ್ಟಿದರೋ, ಆ ಉದ್ದೇಶವನ್ನು ಈಡೇರಿಸುವ ಸಮಯ ಬಂದಿದೆ ಎಂದು ಮುನೀರ್ ಗುಡುಗಿದ್ದಾರೆ.

ಮುನೀರ್ ನೀತಿಯ ಹಿಂದಿನ ಉದ್ದೇಶವೇನು?

ಜಾಗತಿಕ ರಾಜಕೀಯ ವಿಶ್ಲೇಷಕರ ಪ್ರಕಾರ, ಮುನೀರ್​ನ ಈ ಧಾರ್ಮಿಕ ಬಣ್ಣದ ಹಿಂದೆ ಎರಡು ಪ್ರಮುಖ ಕಾರಣಗಳಿವೆ:
ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಅಸ್ಥಿರತೆ ಹೆಚ್ಚಾಗಿರುವಾಗ, ಧರ್ಮದ ಹೆಸರಿನಲ್ಲಿ ಜನರನ್ನು ಮತ್ತು ಸೈನಿಕರನ್ನು ಒಗ್ಗೂಡಿಸಿ ಸೇನೆಯ ಅಧಿಕಾರವನ್ನು ಭದ್ರಪಡಿಸಿಕೊಳ್ಳುವುದು. ಕಾಶ್ಮೀರ ಮತ್ತು ಅಫ್ಘಾನಿಸ್ತಾನದ ಗಡಿಗಳಲ್ಲಿ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಮೂಲಕ ತನ್ನ ಕಾರ್ಯತಂತ್ರವನ್ನು ಜಾರಿಗೆ ತರುವುದು.

ಜಾಗತಿಕ ಆತಂಕ

ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ದೇಶದ ಸೇನೆಯು ಇಷ್ಟೊಂದು ತೀವ್ರವಾಗಿ ಧರ್ಮಾಂಧತೆಯತ್ತ ಸಾಗುತ್ತಿರುವುದು ಭಾರತ ಸೇರಿದಂತೆ ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದೆ. ಇದು ಪಾಕಿಸ್ತಾನವನ್ನು 1980ರ ದಶಕದ ಜಿಯಾ-ಉಲ್-ಹಕ್ ಅವರ ಕಾಲದ ಕಠಿಣ ಇಸ್ಲಾಮಿಕ್ ಕಾನೂನುಗಳತ್ತ ಕೊಂಡೊಯ್ಯುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಹದಗೆಟ್ಟಿರುವ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಯ ನಡುವೆ, ಮುನೀರ್ ಅವರ ಈ ಸಿದ್ಧಾಂತವು ದೇಶವನ್ನು ಮತ್ತಷ್ಟು ಅಂಧಕಾರಕ್ಕೆ ದೂಡಬಹುದು ಎಂಬ ಭೀತಿ ವ್ಯಕ್ತವಾಗಿದೆ,(ಏಜೆನ್ಸೀಸ್).