ಇಸ್ಲಾಮಾಬಾದ್ ಸಂಧಾನ ಫೇಲ್! ನೆತನ್ಯಾಹು ಕೈಯಲ್ಲಿ ಪಶ್ಚಿಮ ಏಷ್ಯಾದ ನಕ್ಷೆ: ಹಿಸುಕಿ ಸಾಯಿಸುತ್ತೇವೆ ಎಂದಿದ್ದಾರೇಕೆ ಇಸ್ರೇಲ್ ಪ್ರಧಾನಿ..? 
ವಿದೇಶ

ಇಸ್ಲಾಮಾಬಾದ್ ಸಂಧಾನ ಫೇಲ್! ನೆತನ್ಯಾಹು ಕೈಯಲ್ಲಿ ಪಶ್ಚಿಮ ಏಷ್ಯಾದ ನಕ್ಷೆ: ಹಿಸುಕಿ ಸಾಯಿಸುತ್ತೇವೆ ಎಂದಿದ್ದಾರೇಕೆ ಇಸ್ರೇಲ್ ಪ್ರಧಾನಿ..? Benjamin Netanyahu

ಪ್ರಮುಖ ಮುಖ್ಯಾಂಶಗಳು

  • ಇಸ್ಲಾಮಾಬಾದ್‌ನಲ್ಲಿ 20 ಗಂಟೆಗಳ ಮಾತುಕತೆ ವಿಫಲ.
  • ಇರಾನ್ ವಿರುದ್ಧ "ಹಿಸುಕುವ ತಂತ್ರ" ಮುಂದುವರಿಯಲಿದೆ ಎಂದ ನೆತನ್ಯಾಹು.
  • ಅಣ್ವಸ್ತ್ರ ತಡೆಗೆ ದೀರ್ಘಾವಧಿ ಒಪ್ಪಂದಕ್ಕೆ ಇರಾನ್ ನಕಾರ.
  • ಹೋರ್ಮುಜ್ ಜಲಸಂಧಿ ವಿವಾದಕ್ಕೆ ಸಿಗದ ಪರಿಹಾರ.
ಟೆಲ್ ಅವಿವ್: ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮರೀಚಿಕೆಯಾಗುತ್ತಿದೆ. ಅಮೆರಿಕ ಮತ್ತು ಇರಾನ್ ನಡುವಿನ ಇಸ್ಲಾಮಾಬಾದ್ ಮಾತುಕತೆಗಳು ಸಂಪೂರ್ಣವಾಗಿ ಹಳಿ ತಪ್ಪಿದ ಬೆನ್ನಲ್ಲೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ಯುದ್ಧದ ಮುಂದಿನ ಭೀಕರ ಹಂತದ ಮುನ್ಸೂಚನೆ ನೀಡಿದ್ದಾರೆ. ಪಶ್ಚಿಮ ಏಷ್ಯಾದ ನಕ್ಷೆಯ ಮುಂದೆ ನಿಂತು ಮಾತನಾಡಿದ ನೆತನ್ಯಾಹು, ಇರಾನ್ ವಿರುದ್ಧದ ನಮ್ಮ ಅಭಿಯಾನ ಇನ್ನೂ ಮುಗಿದಿಲ್ಲ ಎಂದು ಗುಡುಗಿದ್ದಾರೆ.

ಬೆಂಕಿಯ ಉಂಗುರ ವರ್ಸಸ್ ಇಸ್ರೇಲ್ ವ್ಯೂಹ

ಇರಾನ್ ತನ್ನ ಮಿತ್ರಪಡೆಗಳಾದ ಹಮಾಸ್ (ಗಾಜಾ), ಹೆಜ್ಬೊಲ್ಲಾ (ಲೆಬನಾನ್) ಮತ್ತು ಇರಾಕ್, ಸಿರಿಯಾ ಹಾಗೂ ಯೆಮನ್‌ನ ಮಿಲಿಟಿಯಾಗಳ ಮೂಲಕ ಇಸ್ರೇಲ್ ಅನ್ನು ಸುತ್ತುವರಿಯಲು ಪ್ರಯತ್ನಿಸುತ್ತಿದೆ ಎಂದು ನೆತನ್ಯಾಹು ದೂರಿದ್ದಾರೆ.
ಇರಾನ್ ನಮ್ಮನ್ನು ಬೆಂಕಿಯ ಉಂಗುರದಿಂದ ಉಸಿರುಗಟ್ಟಿಸಲು ಪ್ರಯತ್ನಿಸಿತು. ಆದರೆ ಈಗ ನಾವು ಅವರನ್ನು ಹಿಸುಕುತ್ತಿದ್ದೇವೆ. ನಾವು ಮಾಡಬೇಕಾದ ಕೆಲಸ ಇನ್ನೂ ಬಾಕಿ ಇದೆ ಎಂದು ಇಸ್ರೇಲ್​ ಪ್ರಧಾನಿ ಎಚ್ಚರಿಸಿದ್ದಾರೆ. ಒಂದು ಕಾಲದಲ್ಲಿ ಇಸ್ರೇಲ್ ಅನ್ನು ಭೂಪಟದಿಂದ ಅಳಿಸಿಹಾಕುವುದಾಗಿ ಬೆದರಿಕೆ ಹಾಕುತ್ತಿದ್ದ ಟೆಹ್ರಾನ್, ಇಂದು ತನ್ನ ಉಳಿವಿಗಾಗಿ ಹೋರಾಡುತ್ತಿದೆ ಎಂದು ನೆತನ್ಯಾಹು ವ್ಯಂಗ್ಯವಾಡಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ನಡೆದಿದ್ದೇನು? ಸಂಧಾನಕ್ಕೆ ತಣ್ಣೀರು ಎರಚಿದ ರೆಡ್ ಲೈನ್
ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆದ 20 ಗಂಟೆಗಳ ಸುದೀರ್ಘ ಮಾತುಕತೆಗಳು ಯಾವುದೇ ಒಪ್ಪಂದವಿಲ್ಲದೆ ಅಂತ್ಯಗೊಂಡಿವೆ. ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಈ ಕುರಿತು ಮಾತನಾಡುತ್ತಾ, ನಾವು ನಮ್ಮ ಲಕ್ಷ್ಮಣ ರೇಖೆಗಳನ್ನು ಸ್ಪಷ್ಟಪಡಿಸಿದ್ದೇವೆ. ಯಾವುದಕ್ಕೆ ನಾವು ಒಪ್ಪುತ್ತೇವೆ ಮತ್ತು ಯಾವುದಕ್ಕೆ ಒಪ್ಪುವುದಿಲ್ಲ ಎಂಬುದು ಅವರಿಗೆ ತಿಳಿದಿದೆ. ಆದರೆ ಅವರು ನಮ್ಮ ಷರತ್ತುಗಳನ್ನು ಒಪ್ಪದಿರಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.

ವಿವಾದದ ಮುಖ್ಯ ಕೇಂದ್ರಬಿಂದುಗಳು

ಅಣ್ವಸ್ತ್ರ ಕಾರ್ಯಕ್ರಮ: ಇರಾನ್ ಅಣ್ವಸ್ತ್ರ ಸಾಮರ್ಥ್ಯವನ್ನು ಪಡೆಯದಂತೆ ತಡೆಯುವುದು ಅಮೆರಿಕದ ಮುಖ್ಯ ಗುರಿಯಾಗಿತ್ತು. ಕೇವಲ ತಾತ್ಕಾಲಿಕವಲ್ಲದೆ, ದೀರ್ಘಾವಧಿಯ ಬದ್ಧತೆಯನ್ನು ಅಮೆರಿಕ ಬಯಸಿತ್ತು.
ಹೋರ್ಮುಜ್ ಜಲಸಂಧಿ: ಜಾಗತಿಕ ತೈಲ ಪೂರೈಕೆಯ ಜೀವನಾಡಿಯಾಗಿರುವ ಈ ಮಾರ್ಗದ ಮೇಲೆ ಇರಾನ್ ಹೊಂದಿರುವ ನಿಯಂತ್ರಣದ ಬಗ್ಗೆ ಭಿನ್ನಾಭಿಪ್ರಾಯ ಉಂಟಾಯಿತು.

ಇರಾನ್ ಸ್ಪಷ್ಟನೆ: ಅಪನಂಬಿಕೆಯ ವಾತಾವರಣ

ಇನ್ನೊಂದೆಡೆ ಇರಾನ್ ವಿದೇಶಾಂಗ ಇಲಾಖೆಯ ವಕ್ತಾರ ಇಸ್ಮಾಯಿಲ್ ಬಘೈ, ನಾವು ಕೆಲವು ವಿಷಯಗಳಲ್ಲಿ ಒಮ್ಮತಕ್ಕೆ ಬಂದಿದ್ದೆವು, ಆದರೆ 2-3 ಪ್ರಮುಖ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಹಾಗೆಯೇ ಉಳಿದವು. 40 ದಿನಗಳ ಹೇರಲ್ಪಟ್ಟ ಯುದ್ಧದ ನಂತರ ನಡೆಯುತ್ತಿರುವ ಈ ಮಾತುಕತೆಗಳಲ್ಲಿ ಅಪನಂಬಿಕೆ ಮತ್ತು ಶಂಕೆ ಇರುವುದು ಸಹಜವಾಗಿದ್ದು. ಒಂದೇ ಸಭೆಯಲ್ಲಿ ಎಲ್ಲವೂ ಬಗೆಹರಿಯುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿದ್ದಾರೆ.

ಮುಂದಿನ ಹಂತವೇನು..? ಹೆಚ್ಚಿದ ಯುದ್ಧದ ಆತಂಕ

ಮಾತುಕತೆಗಳು ವಿಫಲವಾದ ಬೆನ್ನಲ್ಲೇ ನೆತನ್ಯಾಹು ಅವರ ಸ್ವರ ಕಠಿಣವಾಗಿರುವುದು ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳುವ ಸೂಚನೆ ನೀಡುತ್ತಿದೆ. ಅಮೆರಿಕ ತನ್ನ ಕಡೆಯಿಂದ ಅಂತಿಮ ಮತ್ತು ಅತ್ಯುತ್ತಮ ಆಫರ್ ನೀಡಿದ್ದರೂ ಇರಾನ್ ಹಿಂದೆ ಸರಿದಿರುವುದು ರಾಜತಾಂತ್ರಿಕ ವಿಫಲತೆಯನ್ನು ತೋರಿಸುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಇಸ್ರೇಲ್ ತನ್ನ ದಾಳಿಯನ್ನು ತೀವ್ರಗೊಳಿಸುವ ಸಾಧ್ಯತೆಯಿದೆ.
ಜಾಗತಿಕ ಪೂರೈಕೆ ಸರಪಳಿ ಮತ್ತು ತೈಲ ಬೆಲೆಗಳ ಮೇಲೆ ಈ ಬೆಳವಣಿಗೆಗಳು ಭೀಕರ ಪರಿಣಾಮ ಬೀರುವ ಸಾಧ್ಯತೆಯಿದ್ದು, ಇಡೀ ವಿಶ್ವವೇ ಈಗ ಪಶ್ಚಿಮ ಏಷ್ಯಾದ ಕಡೆಗೆ ಆತಂಕದಿಂದ ನೋಡುತ್ತಿದೆ,(ಏಜೆನ್ಸೀಸ್)​.