ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಭೀಕರ ಯುದ್ಧದ(US-Iran War) ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ತಲೆದೋರಿರುವ ತೈಲ ಹಾಗೂ ಇಂಧನ ಬಿಕ್ಕಟ್ಟು ಈಗ ನೆರೆದೇಶ ಪಾಕಿಸ್ತಾನವನ್ನು ತೀವ್ರವಾಗಿ ಕಾಡಲಾರಂಭಿಸಿದೆ. ಜಗತ್ತಿನಾದ್ಯಂತ ಇಂಧನ ಬೆಲೆಗಳು ಗಗನಕ್ಕೇರುತ್ತಿದ್ದು, ಹಣದುಬ್ಬರ ನಿಯಂತ್ರಿಸಲು ಮತ್ತು ಆರ್ಥಿಕತೆಯನ್ನು ಸರಿದೂಗಿಸಲು ಪಾಕಿಸ್ತಾನ ಸರ್ಕಾರ ಈಗ ಕಠಿಣ 'ಉಳಿತಾಯ ಕ್ರಮ'ಗಳಿಗೆ (Austerity Measures) ಮುಂದಾಗಿದೆ. ಇದರ ಭಾಗವಾಗಿ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಇಂದಿನಿಂದಲೇ (ಜೂನ್ 2) ಅನ್ವಯವಾಗುವಂತೆ ಎಲ್ಲಾ ಮಾರುಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳನ್ನು ರಾತ್ರಿ 8 ಗಂಟೆಗೇ ಕಡ್ಡಾಯವಾಗಿ ಮುಚ್ಚುವಂತೆ ಜಿಲ್ಲಾಡಳಿತ ಆದೇಶಿಸಿದೆ.
ಇಸ್ಲಾಮಾಬಾದ್ ಡೆಪ್ಯುಟಿ ಕಮಿಷನರ್ ಇರ್ಫಾನ್ ಮೇಮನ್ ಅವರು ಸಾಮಾಜಿಕ ಜಾಲತಾಣ ‘X’ ಮೂಲಕ ಈ ಹೊಸ ನಿಯಮವನ್ನು ಪ್ರಕಟಿಸಿದ್ದಾರೆ. ವಾರದ ಎಲ್ಲಾ ದಿನಗಳಿಗೂ ಈ ನಿಯಮ ಅನ್ವಯವಾಗಲಿದ್ದು, ವ್ಯಾಪಾರಸ್ಥರು ಕಡ್ಡಾಯವಾಗಿ ನಿಯಮ ಪಾಲಿಸಬೇಕಿದೆ.
ಹೊಸ ನಿಯಮಗಳು ಮತ್ತು ವಿನಾಯಿತಿಗಳು
ಹೊಸ ಆದೇಶದ ಪ್ರಕಾರ, ಎಲ್ಲಾ ಮುಖ್ಯ ಮಾರುಕಟ್ಟೆಗಳು, ಅಂಗಡಿ ಮುಂಗಟ್ಟುಗಳು ಮತ್ತು ಶಾಪಿಂಗ್ ಮಾಲ್‌ಗಳು ರಾತ್ರಿ 8:00 ಗಂಟೆಗೆ ಮುಚ್ಚಲ್ಪಡುತ್ತವೆ. ಆದರೆ, ಸಾರ್ವಜನಿಕರ ಅನುಕೂಲಕ್ಕಾಗಿ ರೆಸ್ಟೋರೆಂಟ್‌ಗಳು, ದಿನಸಿ ಅಂಗಡಿಗಳು, ಬೇಕರಿಗಳು ಹಾಗೂ ಇತರ ಆಹಾರ ಮಳಿಗೆಗಳಿಗೆ ರಾತ್ರಿ 10:00 ಗಂಟೆಯವರೆಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಮದುವೆ ಮಂಟಪಗಳು ಮತ್ತು ಇತರೆ ಸಮಾರಂಭದ ಹಾಲ್‌ಗಳು ಸಹ ರಾತ್ರಿ 10 ಗಂಟೆಗೆ ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು. ಈ ನಿಯಮಗಳು ಖಾಸಗಿ ಆಸ್ತಿಗಳಲ್ಲಿ ನಡೆಯುವ ಸಭೆ-ಸಮಾರಂಭಗಳಿಗೂ ಅನ್ವಯವಾಗಲಿವೆ.
ತುರ್ತು ಸೇವೆಗಳಿಗೆ ವಿನಾಯಿತಿ
ಸಾರ್ವಜನಿಕ ಆರೋಗ್ಯ ಮತ್ತು ದೇಶದ ಆರ್ಥಿಕತೆಗೆ ಪೂರಕವಾಗಿರುವ ಪ್ರಮುಖ ಸೇವೆಗಳಿಗೆ ಈ ಇಂಧನ ನಿಯಂತ್ರಣ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಆಸ್ಪತ್ರೆಗಳು, ಫಾರ್ಮಸಿಗಳು (ಔಷಧಿ ಅಂಗಡಿಗಳು), ಪೆಟ್ರೋಲ್ ಪಂಪ್‌ಗಳು, ಹಾಲಿನ ಡೈರಿಗಳು, ಕ್ರೀಡಾ ಸಂಕೀರ್ಣಗಳು, ಕಾಲ್ ಸೆಂಟರ್‌ಗಳು ಹಾಗೂ ವಿದೇಶಿ ಗ್ರಾಹಕರಿಗೆ ಸೇವೆ ನೀಡುವ ಐಟಿ (IT) ಕಂಪನಿಗಳು ಎಂದಿನಂತೆ 24 ಗಂಟೆಯೂ ಕಾರ್ಯನಿರ್ವಹಿಸಬಹುದಾಗಿದೆ.
ಹಾರ್ಮುಜ್ ಜಲಸಂಧಿ ಬಂದ್; ಪಾಕಿಸ್ತಾನಕ್ಕೆ ಭಾರಿ ಹೊಡೆತ!
ಕಳೆದ ಫೆಬ್ರವರಿ 28 ರಂದು ಆರಂಭವಾದ ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧವು ಇಡೀ ಪಶ್ಚಿಮ ಏಷ್ಯಾದಲ್ಲಿ ತಲ್ಲಣ ಮೂಡಿಸಿದೆ. ಇರಾನ್ ದೇಶವು ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ 'ಸ್ಟ್ರಾಟಜಿಕ್ ಸ್ಟ್ರೈಟ್ ಆಫ್ ಹಾರ್ಮುಜ್' (Strait of Hormuz) ಅನ್ನು ಸಂಪೂರ್ಣವಾಗಿ ಬಂದ್ ಮಾಡಿದೆ. ಜಗತ್ತಿನ ಒಟ್ಟು ತೈಲ ಮತ್ತು ನೈಸರ್ಗಿಕ ಅನಿಲದ ಐದನೇ ಒಂದು ಭಾಗ ಈ ಮಾರ್ಗದ ಮೂಲಕವೇ ಏಷ್ಯಾದ ದೇಶಗಳಿಗೆ ಸರಬರಾಜಾಗುತ್ತಿತ್ತು. ಪಾಕಿಸ್ತಾನ ತನ್ನ ಇಂಧನ ಅಗತ್ಯಕ್ಕಾಗಿ ಹೆಚ್ಚಾಗಿ ಈ ಮಾರ್ಗವನ್ನೇ ನಂಬಿಕೊಂಡಿತ್ತು. ಸದ್ಯ ಕೆಲವು ತೈಲ ಟ್ಯಾಂಕರ್‌ಗಳಿಗೆ ಸಂಚರಿಸಲು ಅನುಮತಿ ಸಿಕ್ಕಿದ್ದರೂ, ಜಾಗತಿಕವಾಗಿ ಬೆಲೆ ಏರಿಕೆಯಾಗಿರುವುದರಿಂದ ಪಾಕಿಸ್ತಾನದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗುತ್ತಿದೆ.
ಸಾಮಾನ್ಯವಾಗಿ ಮಧ್ಯಾಹ್ನದ ಬಳಿಕವೇ ವ್ಯಾಪಾರ ಆರಂಭಿಸಿ, ತಡರಾತ್ರಿಯವರೆಗೆ ಅಂಗಡಿಗಳನ್ನು ತೆರೆಯುತ್ತಿದ್ದ ಪಾಕಿಸ್ತಾನದ ವರ್ತಕರು ಮತ್ತು ಉದ್ಯಮಿಗಳು ಸರ್ಕಾರದ ಈ ದಿಢೀರ್ ನಿರ್ಧಾರಕ್ಕೆ ತೀವ್ರ ಆಕ್ರೋಶ ಮತ್ತು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಆರ್ಥಿಕ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ,(ಏಜೆನ್ಸೀಸ್).