ಯುರೋಪ್ನಲ್ಲಿ ಗರಿಷ್ಠ ತಾಪಮಾನ
- ಯುರೋಪ್ ಖಂಡವನ್ನೇ ಅಲುಗಾಡಿಸುತ್ತಿದೆ 'ಒಮೆಗಾ ಬ್ಲಾಕ್'
- ಮೋಡಗಳು ರಚನೆಯಿಲ್ಲ, ಮಳೆ ಬೀಳುತ್ತಿಲ್ಲ
- ಹಿಂದೆಂದೂ ಕಾಣದ ಉಷ್ಣಾಂಶಕ್ಕೆ ಜನರು ಹೈರಾಣ
Europe: ಇಡೀ ಜಗತ್ತಿಗೆ ಎಲ್ ನಿನೋ ಪ್ರಭಾವ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ದೇಶದಲ್ಲಿ ವಾಡಿಕೆಯಂತೆ ಬೀಳಬೇಕಿದ್ದ ಮಳೆ ಜೂನ್ ಕೊನೆ ವಾರವಾದರೂ ಸುರಿಯದಿರುವುದು ಸದ್ಯ ಭಾರಿ ಆತಂಕಕ್ಕೆ ಕಾರಣವಾಗಿದೆ. ಮುಂಗಾರಿನ ಪ್ರವೇಶಕ್ಕೆ ಸೂಕ್ತ ಸಮಯವಾಗಿದ್ದರೂ ಭಾರತ ಮಾತ್ರವಲ್ಲದೇ ಹಲವು ರಾಷ್ಟ್ರಗಳು ವಿಪರೀತ ಉಷ್ಣಾಂಶದಿಂದ ಅಕ್ಷರಶಃ ತತ್ತರಿಸಿವೆ. ಈ ಸಾಲಿನಲ್ಲಿ ಯುರೋಪ್ ಖಂಡ ಸಂಪೂರ್ಣವಾಗಿ ನಲುಗಿ ಹೋಗಿದೆ.
ಕಳೆದ ಕೆಲವು ದಿನಗಳಿಂದ ಯುರೋಪ್ನಲ್ಲಿ ಹಿಂದೆಂದೂ ಕಾಣದ ಬಿಸಿಲಿನ ಬೇಗ ಕಾಡಲಾರಂಭಿಸಿದೆ. ಫ್ರಾನ್ಸ್, ಜರ್ಮನಿ, ಯುನೈಟೈಡ್ ಕಿಂಗ್ಡಮ್, ಸ್ವಿಟ್ಜರ್ಲೆಂಡ್ ಮತ್ತು ರೊಮೇನಿಯಾ ಸೇರಿದಂತೆ ಹಲವಾರು ದೇಶಗಳಲ್ಲಿ ಗರಿಷ್ಠತೆ ಮೀರಿದ ತಾಪಮಾನ ದಾಖಲಾಗುತ್ತಿದೆ. ತುರ್ತು ಸೇವೆಗಳು ಸಹ ತೀವ್ರ ಒತ್ತಡದಲ್ಲಿವೆ ಮತ್ತು ಸಾರಿಗೆ ವ್ಯವಸ್ಥೆಯು ಅಸ್ತವ್ಯಸ್ತಗೊಂಡಿದೆ. ಸ್ವಿಟ್ಜರ್ಲೆಂಡ್‌ನಲ್ಲಿರುವ ಪರಮಾಣು ವಿದ್ಯುತ್ ಸ್ಥಾವರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಕೆಲವೆಡೆ ಕಚೇರಿ ಮತ್ತು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಈಗಾಗಲೇ ಯುರೋಪ್ ಸೇರಿ ಹಲವು ದೇಶಗಳಲ್ಲಿ ರೆಡ್ ಅಲರ್ಟ್ ನೀಡಲಾಗಿದ್ದು, ಜನರು ಮನೆಯಿಂದ ಹೊರಬರುವುದು ಕಷ್ಟಕರವಾಗಿದೆ. ಹವಾಮಾನ ಶಾಸ್ತ್ರಜ್ಞರ ಪ್ರಕಾರ, ಈ ಅಸಾಮಾನ್ಯ ತಾಪಮಾನಕ್ಕೆ ಮುಖ್ಯ ಕಾರಣವೇ ಒಮೆಗಾ ಬ್ಲಾಕ್ ಎಂಬ ಅಪರೂಪದ ಹವಾಮಾನ ಸ್ಥಿತಿ ಎನ್ನಲಾಗಿದೆ. ಅಷ್ಟಕ್ಕೂ ಏನಿದು? ಇದರಿಂದ ಮೋಡ ರಚನೆಗೆ ಅಡ್ಡಿಯಾಗುತ್ತಾ? ಎಂಬ ಪ್ರಶ್ನೆಗೆ ಹೀಗಿದೆ ಉತ್ತರ.
ಅಷ್ಟಕ್ಕೂ ಏನಿದು?
ಒಮೆಗಾ ಬ್ಲಾಕ್ ಎನ್ನುವುದು ಗ್ರೀಕ್ ಅಕ್ಷರ. ಸಾಮಾನ್ಯವಾಗಿ ಪಶ್ಚಿಮದಿಂದ ಪೂರ್ವಕ್ಕೆ ಬೀಸುವ ಜೆಟ್ ಸ್ಟ್ರೀಮ್ ಗಾಳಿಯ ಹರಿವನ್ನು ಈ ಅಧಿಕ ಒತ್ತಡದ ವ್ಯವಸ್ಥೆಯು ನಿರ್ಬಂಧಿಸುತ್ತದೆ. ಪರಿಣಾಮವಾಗಿ, ಒಂದೇ ಪ್ರದೇಶದಲ್ಲಿನ ಹವಾಮಾನ ಪರಿಸ್ಥಿತಿಗಳು ದಿನಗಳವರೆಗೆ ಮತ್ತು ಕೆಲವು ಸಂದರ್ಭಗಳಲ್ಲಿ ವಾರಗಳವರೆಗೆ ಬದಲಾಗದೆ ಇರುತ್ತವೆ. ಈ ಸ್ಥಿತಿಯಿಂದಾಗಿ, ಅಟ್ಲಾಂಟಿಕ್ ಮಹಾಸಾಗರದಿಂದ ಬರುವ ತಂಪು ಗಾಳಿಯು ಯುರೋಪ್ ಅನ್ನು ಪ್ರವೇಶಿಸಲು ಸಾಧ್ಯವಿಲ್ಲ. ಅಲ್ಲದೆ, ಅಧಿಕ ಒತ್ತಡದ ಪರಿಣಾಮದಿಂದಾಗಿ, ಮೋಡಗಳು ರಚನೆಯಾಗುತ್ತಿಲ್ಲ, ಮಳೆ ಸುರಿಯುತ್ತಿಲ್ಲ.
ಮಳೆಯ ಮುನ್ಸೂಚನೆ ಇಲ್ಲ
ಈ ವಿಪರೀತ ತಾಪಮಾನದಿಂದ ಯುರೋಪಿನ ಅನೇಕ ರಾಷ್ಟ್ರಗಳು ತೀವ್ರ ಸಂಕಷ್ಟಗಳನ್ನು ಎದುರಿಸುತ್ತಿವೆ. ಜರ್ಮನಿಯು ಇತಿಹಾಸದಲ್ಲಿಯೇ 41.3 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದೆ. ಯುಕೆ ಮತ್ತು ಸ್ವಿಟ್ಜರ್‌ಲ್ಯಾಂಡ್ ಜೂನ್‌ನಲ್ಲಿ ಇದುವರೆಗಿನ ಅತ್ಯಂತ ಬಿಸಿಯಾದ ಉಷ್ಣಾಂಶವನ್ನು ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಫ್ರೆಂಚ್ ರಾಜಧಾನಿ ಪ್ಯಾರಿಸ್‌ನಲ್ಲಿ ಎಮರ್ಜೆನ್ಸಿ ಕಾಲ್ಗಳು ಶೇ.80ರಷ್ಟು ಹೆಚ್ಚಾಗಿದೆ. ಮಾರ್ಸೆಲ್ಲೆ ನಗರದಲ್ಲಿ ಶಾಖದಿಂದಾಗಿ ಕಾರಿನಲ್ಲಿದ್ದ ಮಗು ಮೃತಪಟ್ಟಿತು.
ಮುಂದಿನ ದಿನಗಳಲ್ಲಿ ಪಶ್ಚಿಮ ಯುರೋಪಿನಲ್ಲಿ ತಾಪಮಾನವು ಸ್ವಲ್ಪ ತಗ್ಗುವ ನಿರೀಕ್ಷೆಯಿದ್ದರೂ, ಒಮೆಗಾ ಬ್ಲಾಕ್ ಪೂರ್ವಕ್ಕೆ ಚಲಿಸುತ್ತಿದ್ದಂತೆ ಮುಂದಿನ ವಾರ ಮಧ್ಯ ಯುರೋಪ್ ಮತ್ತು ಬಾಲ್ಕನ್‌ಗಳಲ್ಲಿ ಹೆಚ್ಚಿನ ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಭವಿಷ್ಯ ನುಡಿದಿದ್ದಾರೆ. ಆದಾಗ್ಯೂ, ತಾಪಮಾನವು ತಣ್ಣಗಾದರೂ ಸಹ, ಶಾಖದ ಅಲೆಯು ಇನ್ನೂ ಕೆಲ ದಿನಗಳವರೆಗೆ ಮುಂದುವರಿಯಬಹುದು ಎನ್ನಲಾಗಿದೆ,(ಏಜೆನ್ಸೀಸ್).