ಪಾಕಿಸ್ತಾನದ ಮಾಜಿ ಪ್ರಧಾನಿಯನ್ನು ಜೈಲಿನಲ್ಲಿ ನಿಧಾನವಾಗಿ ಕೊಲ್ಲಲಾಗುತ್ತಿದೆ ಎಂದು ಇಮ್ರಾನ್ ಖಾನ್ ಅವರ ಪುತ್ರರು ಆರೋಪಿಸಿದ್ದಾರೆ.
ಇಸ್ಲಾಮಾಬಾದ್: ಜಗತ್ತು ಕಂಡು ಶ್ರೇಷ್ಟ ಕ್ರಿಕೆಟ್ ಪಟು ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲಿರುವ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಈಗ ತಮ್ಮ ತಂದೆ ಇಮ್ರಾನ್ ಖಾನ್ (Imran Khan) ಆರೋಗ್ಯ ಸ್ಥಿತಿ ಹಾಗೂ ಅವರಿಗೆ ನೀಡುತ್ತಿರುವ ಹಿಂಸೆಯ ಕುರಿತು ಅವರ ಪುತ್ರರು ವಿಶ್ವದ ಮುಂದೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಖ್ಯಾತ ಬ್ರಿಟಿಷ್ ಪತ್ರಿಕೆಯೊಂದಿಗೆ ಮಾತನಾಡಿರುವ ಇಮ್ರಾನ್ ಖಾನ್ ಪುತ್ರರಾದ ಕಾಸಿಮ್ ಮತ್ತು ಸುಲೈಮಾನ್, ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ತಮ್ಮ ತಂದೆಯ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುತ್ತಾ ಅವರನ್ನು ನಿಧಾನವಾಗಿ ಕೊಲ್ಲುತ್ತಿದ್ದಾಗಿ ಆರೋಪಿಸಿದ್ದಾರೆ.
ಜೈಲಿನಲ್ಲಿ ತಂದೆಯನ್ನು ನಿಧಾನವಾಗಿ ಕೊಲ್ಲುತ್ತಿದ್ದಾರೆ!
ಕಳೆದ ಆರು ತಿಂಗಳಿಗೂ ಹೆಚ್ಚು ಕಾಲದಿಂದ ತಮ್ಮ ತಂದೆಯೊಂದಿಗೆ ಮಾತನಾಡಲು ಅಥವಾ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ ಎಂದು ಸುಲೈಮಾನ್ ಮತ್ತು ಕಾಸಿಮ್ ಬೇಸರ ವ್ಯಕ್ತಪಡಿಸಿದ್ದಾರೆ.
73 ವರ್ಷ ವಯಸ್ಸಿನ ಇಮ್ರಾನ್ ಖಾನ್ ಅವರನ್ನು ಕೇವಲ 6 ಅಡಿ ಉದ್ದ 8 ಅಡಿ ಅಗಲದ ಕತ್ತಲೆ ಕೋಣೆಯಲ್ಲಿ ಕೂಡಿಹಾಕಲಾಗಿದೆ ಎಂದು ಸುಲೈಮಾನ್ ದೂರಿದ್ದಾರೆ. ಜೈಲಿನಲ್ಲಿ ಖಾನ್ ಅವರ ಕಣ್ಣಿನ ಗಂಭೀರ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಇದರಿಂದಾಗಿ ಅವರ ಒಂದು ಕಣ್ಣಿನ ದೃಷ್ಟಿ ಸಂಪೂರ್ಣವಾಗಿ ಕಳೆದುಹೋಗುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ತಂದೆಯವರಿಗೆ ಓದಲು ಪುಸ್ತಕಗಳು, ಹೊರಗಿನ ಪ್ರಪಂಚದ ಸಂಪರ್ಕ ಹಾಗೂ ತಮ್ಮ ಆಯ್ಕೆಯ ವೈದ್ಯರನ್ನು ಭೇಟಿಯಾಗುವ ಅಧಿಕಾರವನ್ನೂ ನಿರಾಕರಿಸಲಾಗಿದೆ. ದೇಶದ ಮಾಜಿ ಪ್ರಧಾನಿವೊಬ್ಬರಿಗೆ ಮೂಲಭೂತ ಸೌಲಭ್ಯವನ್ನು ಕೂಡ ನೀಡಲಾಗುತ್ತಿಲ್ಲೆವೆಂದು ಆರೋಪಿಸಲಾಗಿದೆ.
ಅಸಿಮ್ ಮುನೀರ್ ವಿರುದ್ಧ ಗಂಭೀರ ಆರೋಪ
ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮತ್ತು ಇಮ್ರಾನ್ ಖಾನ್ ನಡುವಿನ ಹಳೆಯ ಹಗೆತನವೇ ಇಂದಿನ ಈ ದುಸ್ಥಿತಿಗೆ ಕಾರಣ ಎಂದು ಪುತ್ರರು ಆರೋಪಿಸಿದ್ದಾರೆ. 2022ರಲ್ಲಿ ಮುನೀರ್ ಸೇನಾ ಮುಖ್ಯಸ್ಥರಾದ ಬಳಿಕ ಉಂಟಾದ ರಾಜಕೀಯ ಸಂಘರ್ಷದಿಂದಾಗಿ ಖಾನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು. ಮುನೀರ್ ಅವರ ಆದೇಶದ ಮೇರೆಗೆ ಜೈಲಿನಲ್ಲಿ ಖಾನ್ ಅವರೊಂದಿಗೆ ಅತ್ಯಂತ ಕ್ರೂರವಾಗಿ ವರ್ತಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
2023 ರಿಂದ ಜೈಲಿನಲ್ಲಿರುವ ಇಮ್ರಾನ್ ಖಾನ್, ಭ್ರಷ್ಟಾಚಾರದ ವಿವಿಧ ಪ್ರಕರಣಗಳಲ್ಲಿ 14 ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದಾರೆ. ಆದರೆ, ತಮ್ಮ ಮೇಲಿನ ಎಲ್ಲಾ ಆರೋಪಗಳು ರಾಜಕೀಯ ಪ್ರೇರಿತ ಮತ್ತು ಸುಳ್ಳು ಎಂದು ಇಮ್ರಾನ್ ಖಾನ್ ಹಾಗೂ ಅವರ ಪಕ್ಷವಾದ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪದೇ ಪದೆ ಸ್ಪಷ್ಟಪಡಿಸುತ್ತ ಬಂದಿವೆ.
ಸರ್ಕಾರದ ಸ್ಪಷ್ಟನೆ ಏನು?
ಪುತ್ರರ ಈ ಎಲ್ಲಾ ಆರೋಪಗಳನ್ನು ಪಾಕಿಸ್ತಾನ ಸರ್ಕಾರ ತಳ್ಳಿಹಾಕಿದೆ. ಇಮ್ರಾನ್ ಖಾನ್ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಸಂಪೂರ್ಣ ಸುಳ್ಳು ಪ್ರಚಾರ ಎಂದು ಪಾಕ್ ಸರ್ಕಾರ ಹೇಳಿದೆ. ಜೈಲಿನಲ್ಲಿ ಖಾನ್ ಅವರಿಗೆ ಮನೆಯಲ್ಲಿ ಬೇಯಿಸಿದ ಊಟ, ಕುಡಿಯುವ ನೀರು, ವ್ಯಾಯಾಮದ ಉಪಕರಣಗಳು, ವೈದ್ಯಕೀಯ ತಪಾಸಣೆ ಮತ್ತು ಕುಟುಂಬದವರ ಭೇಟಿಯ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ, (ಏಜೆನ್ಸೀಸ್).