ಸದ್ದಿಲ್ಲದೆ ಇರಾನ್‌ಗೆ ಅಸ್ತ್ರ ನೀಡ್ತಿದೆಯಾ ಚೀನಾ? ಡ್ರ್ಯಾಗನ್‌ ವಿರುದ್ಧ ಟ್ರಂಪ್​ ಟ್ಯಾರಿಫ್​ ಬ್ರಹ್ಮಾಸ್ತ್ರ! ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನ 
ವಿದೇಶ

ಸದ್ದಿಲ್ಲದೆ ಇರಾನ್‌ಗೆ ಅಸ್ತ್ರ ನೀಡ್ತಿದೆಯಾ ಚೀನಾ? ಡ್ರ್ಯಾಗನ್‌ ವಿರುದ್ಧ ಟ್ರಂಪ್​ ಟ್ಯಾರಿಫ್​ ಬ್ರಹ್ಮಾಸ್ತ್ರ! ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನ | Trump Vs China

ವಾಷಿಂಗ್ಟನ್: ಇರಾನ್‌ನೊಂದಿಗೆ ಶಾಂತಿ ಮಾತುಕತೆಗಳು ವಿಫಲವಾದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Trump Vs China) ಚೀನಾಕ್ಕೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಇರಾನ್‌ಗೆ ಭುಜದ ಮೇಲೆ ಇಟ್ಟು ಹಾರಿಸುವ ವಿಮಾನ ವಿರೋಧಿ ಕ್ಷಿಪಣಿಗಳನ್ನು ಚೀನಾ ಪೂರೈಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಟ್ರಂಪ್ ಈ ಆರ್ಥಿಕ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದ್ದಾರೆ.

ಚೀನಾ ವಿರುದ್ಧ ಆರ್ಥಿಕ ಯುದ್ಧದ ಘೋಷಣೆ

ಫಾಕ್ಸ್ ನ್ಯೂಸ್‌ನ 'ಸಂಡೇ ಮಾರ್ನಿಂಗ್ ಫ್ಯೂಚರ್ಸ್' ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಯಾವ ದೇಶ ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತದೆಯೋ, ಆ ದೇಶದ ಸರಕುಗಳ ಮೇಲೆ ಶೇ. 50ರಷ್ಟು ಪ್ರತಿಶತ ಸುಂಕ ವಿಧಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ವಿಶೇಷವಾಗಿ ಚೀನಾವನ್ನು ಉದ್ದೇಶಿಸಿ ಮಾತನಾಡಿದ ಯುಎಸ್​ ಅಧ್ಯಕ್ಷ, ನನ್ನ ಮತ್ತು ಚೀನಾ ನಡುವೆ ಉತ್ತಮ ಸಂಬಂಧವಿದೆ, ಅವರು ಹಾಗೆ ಮಾಡುವುದಿಲ್ಲ ಎಂಬ ನಂಬಿಕೆಯಿದೆ. ಆದರೆ ಒಂದು ವೇಳೆ ನಾವು ಅವರನ್ನು ಹಿಡಿದರೆ, ಅವರು ಶೇ.50 ಟ್ಯಾರಿಫ್ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನಾಗರಿಕತೆಯೇ ನಾಶವಾಗಲಿದೆ: ಟ್ರಂಪ್ ವಿವಾದಾತ್ಮಕ ಹೇಳಿಕೆ

ಕಳೆದ ಏಪ್ರಿಲ್ 7 ರಂದು ಟ್ರಂಪ್ ನೀಡಿದ್ದ ಇಡೀ ನಾಗರಿಕತೆಯೇ ಇಂದು ರಾತ್ರಿ ಸಾಯಲಿದೆ, ಅದು ಮತ್ತೆಂದೂ ಮರಳಿ ಬರುವುದಿಲ್ಲ ಎಂಬ ಹೇಳಿಕೆಯು ಜಾಗತಿಕ ಮಟ್ಟದಲ್ಲಿ ತೀವ್ರ ಖಂಡನೆಗೆ ಗುರಿಯಾಗಿತ್ತು. ಆದರೆ, ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಟ್ರಂಪ್, ನನ್ನ ಆ ಹೇಳಿಕೆಯೇ ಇರಾನ್ ಅನ್ನು ಮಾತುಕತೆಯ ಮೇಜಿನ ಬಳಿ ತರುವಂತೆ ಮಾಡಿತು. ಈಗ ಅವರು ಮಾತುಕತೆಯಿಂದ ದೂರ ಹೋಗಿರಬಹುದು. ಆದರೆ ಅವರು ಮತ್ತೆ ಮರಳಿ ಬರುತ್ತಾರೆ ಮತ್ತು ನಾವು ಕೇಳಿದ್ದನ್ನೆಲ್ಲ ನೀಡುತ್ತಾರೆ ಎಂಬ ಭರವಸೆ ನನಗಿದೆ ಎಂದು ಭವಿಷ್ಯ ನುಡಿದಿದ್ದಾರೆ.

ವಿಫಲವಾದ 21 ಗಂಟೆಗಳ ಐತಿಹಾಸಿಕ ಮಾತುಕತೆ

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆದ 21 ಗಂಟೆಗಳ ಸುದೀರ್ಘ ಸಂಧಾನ ಸಭೆ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. 1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಉಭಯ ದೇಶಗಳ ನಡುವೆ ನಡೆದ ಮೊದಲ ಉನ್ನತ ಮಟ್ಟದ ನೇರ ಮಾತುಕತೆ ಇದಾಗಿತ್ತು.
ಅಮೆರಿಕದ ನಿಲುವು: ಅಮೆರಿಕದ ನಿಯೋಗದ ನೇತೃತ್ವ ವಹಿಸಿದ್ದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ನಾವು ನಮ್ಮ ಅತ್ಯುತ್ತಮ ಮತ್ತು ಅಂತಿಮ ಪ್ರಸ್ತಾಪವನ್ನು ನೀಡಿದ್ದೆವು. ಆದರೆ ಇರಾನ್ ನಮ್ಮ ಷರತ್ತುಗಳನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ. ಇದು ನಮಗಿಂತ ಇರಾನ್‌ಗೆ ದೊಡ್ಡ ಹಿನ್ನಡೆ ಎಂದು ಹೇಳಿದ್ದಾರೆ.
ಇರಾನ್ ಆರೋಪ: ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಘಾಲಿಬಾಫ್, ವಿಶ್ವಾಸ ವೃದ್ಧಿಸುವುದು ಅಮೆರಿಕದ ಜವಾಬ್ದಾರಿ ಎಂದಿದ್ದಾರೆ. ಇರಾನ್ ವಿದೇಶಾಂಗ ಸಚಿವಾಲಯವು ಅಮೆರಿಕವು ಅಕ್ರಮ ಮತ್ತು ಅತಿಯಾದ ಬೇಡಿಕೆಗಳನ್ನು ಇಡುತ್ತಿದೆ ಎಂದು ಆರೋಪಿಸಿದೆ.

ಹೋರ್ಮುಜ್ ಜಲಸಂಧಿಯ ಮೇಲೆ ನೌಕಾ ದಿಗ್ಬಂಧನ

ಮಾತುಕತೆ ವಿಫಲವಾದ ಕೆಲವೇ ಗಂಟೆಗಳಲ್ಲಿ, ಟ್ರಂಪ್ ಮತ್ತೊಂದು ಕಠಿಣ ನಿರ್ಧಾರ ಪ್ರಕಟಿಸಿದ್ದಾರೆ. ಹೋರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಮತ್ತು ಇರಾನ್‌ಗೆ ಟೋಲ್ ಪಾವತಿಸುವ ಪ್ರತಿಯೊಂದು ಹಡಗನ್ನು ತಡೆಯಲು ಅಮೆರಿಕ ನೌಕಾಪಡೆಗೆ ಸೂಚನೆ ನೀಡಿದ್ದಾರೆ. ಯಾವುದೇ ಹಡಗು ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಇರಾನ್‌ಗೆ ಅಕ್ರಮವಾಗಿ ಹಣ ಪಾವತಿಸಿದರೆ, ಅಂತಹ ಹಡಗುಗಳನ್ನು ಅಮೆರಿಕ ತಡೆಹಿಡಿಯಲಿದೆ ಎಂದು ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಜಾಗತಿಕ ತೈಲದ ಮೇಲೆ ಆತಂಕದ ನೆರಳು

ವಿಶ್ವದ ಒಟ್ಟು ತೈಲ ಮತ್ತು ಎಲ್‌ಎನ್‌ಜಿ ಪೂರೈಕೆಯ ಶೇ.20 ರಷ್ಟು ಹೋರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಈಗ ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನ ಮತ್ತು ಚೀನಾ ಮೇಲೆ ಹೇರಿರುವ ಟ್ಯಾರಿಫ್ ಬೆದರಿಕೆಗಳು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಕಂಪನ ಸೃಷ್ಟಿಸಿವೆ. ಒಂದು ವೇಳೆ ಇರಾನ್ ಪ್ರತಿಯಾಗಿ ಈ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಿದರೆ, ಜಗತ್ತು ಭೀಕರ ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿಯಾಗಬೇಕಾಗುತ್ತದೆ.
ಒಟ್ಟಾರೆಯಾಗಿ, ಟ್ರಂಪ್​ರ ಈ ಆಕ್ರಮಣಕಾರಿ ವಿದೇಶಾಂಗ ನೀತಿಯು ಇರಾನ್ ಮಾತ್ರವಲ್ಲದೆ, ಚೀನಾದೊಂದಿಗಿನ ಸಂಬಂಧವನ್ನೂ ಹದಗೆಡಿಸುವ ಸಾಧ್ಯತೆಯಿದೆ. ಯುದ್ಧದ ಭೀತಿಯ ನಡುವೆ ಜಗತ್ತು ಈಗ ಇಸ್ಲಾಮಾಬಾದ್‌ನಿಂದ ವಾಷಿಂಗ್ಟನ್‌ವರೆಗೆ ನಡೆಯುವ ರಾಜತಾಂತ್ರಿಕ ಚದುರಂಗದಾಟವನ್ನು ಕುತೂಹಲದಿಂದ ಗಮನಿಸುತ್ತಿದೆ,(ಏಜೆನ್ಸೀಸ್).