ಗಲ್ಫ್​ ರಾಷ್ಟ್ರಗಳ ಮೇಲೆ ಇರಾನ್​ ದಾಳಿ 
ವಿದೇಶ

ಗಲ್ಫ್​ ರಾಷ್ಟ್ರಗಳ ಯುಎಸ್​ ಮಿಲಿಟರಿ ನೆಲೆಗಳು ಛಿದ್ರ! ಮೂರು ಹಂತಗಳ ಇರಾನ್​ ದಾಳಿ ಯಶಸ್ವಿ

ಪ್ರಮುಖ ಮುಖ್ಯಾಂಶಗಳು

  • ಮೂರು ಹಂತಗಳಲ್ಲಿ ಯುಎಸ್​ ಸೇನಾ ನೆಲೆಗಳ ಮೇಲೆ ಇರಾನ್​ ದಾಳಿ
  • ಗಲ್ಫ್​ ರಾಷ್ಟ್ರಗಳಲ್ಲಿರುವ ಅಮೆರಿಕ ಸೇನಾ ನೆಲೆಗಳು ಉಡೀಸ್​
ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಮೇಲೆ ಸೇಡು ತೀರಿಸಿಕೊಳ್ಳಲು ಪಣ ತೊಟ್ಟಿರುವ ಇರಾನ್, ಗಲ್ಫ್​ ರಾಷ್ಟ್ರಗಳಲ್ಲಿರುವ ಯುಎಸ್​ ಸೇನಾ ನೆಲೆಗಳು, ಇಂಧನ ಟ್ಯಾಂಕರ್​ಗಳನ್ನು ಮೂರು ಹಂತಗಳ ಸರಣಿ ದಾಳಿ ಮೂಲಕ ಛಿದ್ರಗೊಳಿಸಿದ್ದಾಗಿ ಖಚಿತಪಡಿಸಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸೋಮವಾರ (ಜು.13) ಜೋರ್ಡಾನ್, ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ಬೃಹತ್ ಪ್ರಮಾಣದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿರುವುದಾಗಿ ಅಧಿಕೃತವಾಗಿ ಘೋಷಿಸಿದೆ. ಈ ಕಾರ್ಯಾಚರಣೆಗೆ ಇರಾನ್ 'ಐ-ಫಾರ್-ಆನ್-ಐ' ಎಂದು ಹೆಸರಿಟ್ಟಿದೆ.
ಕಳೆದ 48 ಗಂಟೆಗಳಿಂದ ಶತ್ರುಗಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಇರಾನ್ ಸೇನೆ, ಮೊದಲ ಹಂತದ ದಾಳಿಯಲ್ಲಿ ಜೋರ್ಡಾನ್‌ನ ಡ್ರೋನ್ ಮತ್ತು ಕ್ಷಿಪಣಿಗಳಿಂದ 'ಪ್ರಿನ್ಸ್ ಹಸನ್' ವಾಯುನೆಲೆಯನ್ನು ಗುರಿಯಾಗಿಸಿ ಉಡೀಸ್​ ಮಾಡಿದೆ. ಈ ದಾಳಿಯಿಂದಾಗಿ ಅಲ್ಲಿನ ಹಲವು ಇಂಧನ ಟ್ಯಾಂಕರ್​ ಮತ್ತು ಸ್ಫೋಟಕ ವಸ್ತುಗಳ ಸಂಗ್ರಹಣಾ ಘಟಕಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ ಎಂದು ಇರಾನ್​ ಹೇಳಿಕೊಂಡಿದೆ.
ಎರಡನೇ ಹಂತದಲ್ಲಿ ಬಹ್ರೇನ್​ನ 'ಶೇಖ್ ಇಸಾ' ವಾಯುನೆಲೆಯ ಮೇಲೆ ದಾಳಿ ನಡೆಸಿದ್ದು, ಹೆಲಿಕಾಪ್ಟರ್ ತಪಾಸಣಾ ಘಟಕಗಳು, ಪಿ8 ಯುದ್ಧವಿಮಾನದ ಹ್ಯಾಂಗರ್ ಮತ್ತು ಅಮೆರಿಕದ ಪ್ರಮುಖ ಡ್ರೋನ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಅನ್ನು ಧ್ವಂಸ ಮಾಡಿದ್ದಾಗಿ ಸ್ಪಷ್ಟನೆ.
ಮೂರನೇ ಹಂತದಲ್ಲಿ ಕುವೈತ್‌ನ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ್ದು, ಇರಾನ್ ಪಡೆಗಳು ಕುವೈತ್‌ನ ಅಲಿ ಅಲ್-ಸಲೇಮ್ ವಾಯುನೆಲೆಯಲ್ಲಿದ್ದ ಪೇಟ್ರಿಯಾಟ್ ವಾಯು ರಕ್ಷಣಾ ವ್ಯವಸ್ಥೆ ಹಾಗೂ ಇಂಧನ ಟ್ಯಾಂಕ್‌ಗಳನ್ನು ಚಿಂದಿ ಉಡಾಯಿಸಿದೆ ಮತ್ತು ಅಹ್ಮದ್ ಅಲ್-ಜಾಬರ್ ಏರ್​​ಬೇಸ್​, ಅಮೆರಿಕದ ಎಫ್‌ಪಿಎಸ್ ರೇಡಾರ್ ವ್ಯವಸ್ಥೆಯನ್ನು ಧ್ವಂಸ ಮಾಡಲಾಗಿದೆ ಎಂದು ಹೇಳಿದೆ.

ಅಮೆರಿಕಕ್ಕೆ ಖಡಕ್​ ಎಚ್ಚರಿಕೆ

ಹೊರ್ಮುಜ್ ಜಲಮಾರ್ಗದಲ್ಲಿ ಯಾವುದೇ ರೀತಿಯ ವಿದೇಶಿ ಮಿಲಿಟರಿ ಹಸ್ತಕ್ಷೇಪವನ್ನು ಇನ್ಮುಂದೆ ಸಹಿಸುವುದಿಲ್ಲ ಎಂದಿರುವ ಇರಾನ್, ಅಮೆರಿಕಕ್ಕೆ ಖಡಕ್ ಎಚ್ಚರಿಕೆ ರವಾನಿಸಿದೆ. ಅಲ್ಲದೆ, ಈ ಪ್ರತಿಕಾರ ಕಾರ್ಯಾಚರಣೆ ಇನ್ನೂ ಮುಂದುವರಿಯಲಿದ್ದು, ಮುಂದಿನ ಹಂತಗಳ ದಾಳಿಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ಐಆರ್​ಜಿಸಿ ತಿಳಿಸಿದೆ,(ಏಜೆನ್ಸೀಸ್).