ಅಮೆರಿಕಕ್ಕೆ ಇರಾನ್ ಮಹಾ ಎಚ್ಚರಿಕೆ: ಯುದ್ಧ ಆರಂಭಿಸಿದರೆ ಇಡೀ ಮಧ್ಯಪ್ರಾಚ್ಯ ಭಸ್ಮವಾಗುತ್ತದೆ: ಆಯತೊಲ್ಲಾ ಅಲಿ ಖಮೇನಿ ಗುಡುಗು
ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ವಾಗ್ಯುದ್ಧ ಈಗ ಯುದ್ಧದ ಅಂಚಿಗೆ ಬಂದು ನಿಂತಿದೆ. ಇರಾನ್ ಮೇಲೆ ಅಮೆರಿಕ ಏನಾದರೂ ಮಿಲಿಟರಿ ದಾಳಿ ನಡೆಸಿದರೆ, ಅದು ಕೇವಲ ಇರಾನ್‌ಗೆ ಸೀಮಿತವಾಗದೆ ಇಡೀ ಮಧ್ಯಪ್ರಾಚ್ಯವನ್ನು ಆವರಿಸುವ ಮಹಾ ಯುದ್ಧವಾಗಿ ಪರಿಣಮಿಸಲಿದೆ ಎಂದು ಇರಾನ್ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ(Ayatollah Ali Khamenei) ಭಾನುವಾರ ತೀವ್ರ ಎಚ್ಚರಿಕೆ ನೀಡಿದ್ದಾರೆ.
ಇರಾನ್‌ನಲ್ಲಿ ನಡೆಯುತ್ತಿರುವ ಆಂತರಿಕ ಪ್ರತಿಭಟನೆಗಳ ದಮನದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅರೇಬಿಯನ್ ಸಮುದ್ರಕ್ಕೆ ಬೃಹತ್ ನೌಕಾಪಡೆಯನ್ನು ರವಾನಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ನಾವು ಯುದ್ಧದ ಪ್ರಚೋದಕರಲ್ಲ, ಆದರೆ...
86 ವರ್ಷದ ಖಮೇನಿ ಅವರು ಟೆಹ್ರಾನ್‌ನಲ್ಲಿ ಮಾತನಾಡುತ್ತಾ, ಅಮೆರಿಕನ್ನರು ಇದನ್ನು ತಿಳಿದುಕೊಳ್ಳಲಿ, ಒಂದು ವೇಳೆ ಅವರು ಯುದ್ಧ ಆರಂಭಿಸಿದರೆ, ಈ ಬಾರಿ ಅದು ಪ್ರಾದೇಶಿಕ ಯುದ್ಧವಾಗಲಿದೆ. ನಾವು ಯಾರ ಮೇಲೆಯೂ ಮೊದಲು ದಾಳಿ ಮಾಡಲು ಇಷ್ಟಪಡುವುದಿಲ್ಲ. ಆದರೆ ನಮ್ಮ ಮೇಲೆ ದಾಳಿ ಮಾಡುವವರಿಗೆ ಅಥವಾ ಕಿರುಕುಳ ನೀಡುವವರಿಗೆ ನಾವು ಸಿಡಿಲಿನಂತಹ ಏಟು ನೀಡಲಿದ್ದೇವೆ ಎಂದು ಗುಡುಗಿದ್ದಾರೆ.
ಅರೇಬಿಯನ್ ಸಮುದ್ರದಲ್ಲಿ ಅಮೆರಿಕದ ಅರ್ಮಾಡಾ
ಇರಾನ್ ಪ್ರಾಂತ್ಯದಲ್ಲಿ ಭದ್ರತೆ ಕಾಪಾಡುವ ನೆಪದಲ್ಲಿ ಅಮೆರಿಕವು ತನ್ನ ಬಲಿಷ್ಠ ವಿಮಾನವಾಹಕ ನೌಕೆ USS ಅಬ್ರಹಾಂ ಲಿಂಕನ್ ಮತ್ತು ಇತರ ಯುದ್ಧನೌಕೆಗಳನ್ನು ನಿಯೋಜಿಸಿದೆ. ಟ್ರಂಪ್ ಅವರ ಈ ನಡೆಯನ್ನು ಇರಾನ್ ಮಾನಸಿಕ ಯುದ್ಧ ಎಂದು ಕರೆದಿದೆ. ಆದರೂ, ಇರಾನ್ ಅಧಿಕಾರಿಗಳು ರಹಸ್ಯವಾಗಿ ಮಾತುಕತೆ ನಡೆಸಲು ಉತ್ಸುಕರಾಗಿದ್ದಾರೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.
ಹಾರ್ಮುಜ್ ಜಲಸಂಧಿಯಲ್ಲಿ ಇರಾನ್‌ನ ಸಮರಭ್ಯಾಸ
ಖಮೇನಿ ಅವರ ಎಚ್ಚರಿಕೆಯ ಬೆನ್ನಲ್ಲೇ ಇರಾನ್ ಸೇನೆಯು ಭಾನುವಾರ ಮತ್ತು ಸೋಮವಾರ ಜಗತ್ತಿನ ಪ್ರಮುಖ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ನೇರ ಗುಂಡಿನ ಸಮರಭ್ಯಾಸ ಹಮ್ಮಿಕೊಂಡಿದೆ.
ತೈಲದ ಹಾದಿ
ವಿಶ್ವದ ಒಟ್ಟು ತೈಲ ವ್ಯಾಪಾರದ ಐದನೇ ಒಂದು ಭಾಗ ಈ ಕಿರಿದಾದ ಮಾರ್ಗದ ಮೂಲಕವೇ ಸಾಗುತ್ತದೆ.
ಅಮೆರಿಕದ ವಾರ್ನಿಂಗ್
ಇರಾನ್‌ನ ಈ ಸಮರಭ್ಯಾಸವು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸಿದರೆ ಅಥವಾ ಅಮೆರಿಕದ ವಿಮಾನಗಳಿಗೆ ತೊಂದರೆ ನೀಡಿದರೆ ಪರಿಣಾಮ ನೆಟ್ಟಗಿರದು ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಎಚ್ಚರಿಸಿದೆ.
ಆಂತರಿಕ ದಂಗೆ ಮತ್ತು ಟ್ರಂಪ್ ಹಸ್ತಕ್ಷೇಪ
ಇರಾನ್‌ನಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ವಿರುದ್ಧ ಶುರುವಾದ ಪ್ರತಿಭಟನೆ ಈಗ ಇಸ್ಲಾಮಿಕ್ ಆಡಳಿತದ ವಿರುದ್ಧದ ಮಹಾಕ್ರಾಂತಿಯಾಗಿ ಬದಲಾಗಿದೆ. ಇರಾನ್ ಸರ್ಕಾರವು ಪ್ರತಿಭಟನಾಕಾರರ ಮೇಲೆ ನಡೆಸುತ್ತಿರುವ ದಮನಕಾರಿ ನೀತಿಯನ್ನು ಟ್ರಂಪ್ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಕರೆದು, ಇರಾನ್ ಮೇಲೆ ದಾಳಿಯ ಸುಳಿವು ನೀಡಿದ್ದಾರೆ. ಇದು ಇರಾನ್ ನಾಯಕರನ್ನು ಕೆರಳಿಸಿದೆ.
ಮಧ್ಯಪ್ರಾಚ್ಯದಲ್ಲಿ ಈಗ ಬೆಂಕಿಯ ಮೇಲೆ ಪೆಟ್ರೋಲ್ ಸುರಿದಂತಹ ಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಆರ್ಥಿಕ ಕುಸಿತದಿಂದ ತತ್ತರಿಸುತ್ತಿರುವ ಇರಾನ್, ಮತ್ತೊಂದೆಡೆ ಅಮೆರಿಕದ ಯುದ್ಧದ ಬೆದರಿಕೆ. ಹಾರ್ಮುಜ್ ಜಲಸಂಧಿಯಲ್ಲಿ ನಡೆಯುತ್ತಿರುವ ಸಮರಭ್ಯಾಸವು ಜಾಗತಿಕ ತೈಲ ಬೆಲೆಯ ಮೇಲೆ ಭಾರಿ ಪ್ರಭಾವ ಬೀರುವ ಸಾಧ್ಯತೆ ಇದೆ,(ಏಜೆನ್ಸೀಸ್).