ಇರಾನ್‌ನಿಂದ ಕದನ ವಿರಾಮದ ಪ್ರಸ್ತಾವನೆ? ಟ್ರಂಪ್ ಹಾಕಿದ ಆ ಒಂದು ಕಂಡೀಷನ್ ಏನು?
ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವು ಅತ್ಯಂತ ಭೀಕರ ಹಂತ ತಲುಪಿರುವಾಗಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಸ್ಫೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಇರಾನ್‌ನ ಹೊಸ ಆಡಳಿತದ ಅಧ್ಯಕ್ಷ ಅಮೆರಿಕಕ್ಕೆ ಕದನ ವಿರಾಮದ ಮೊರೆ ಇಟ್ಟಿದ್ದಾರೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಆದರೆ, ಈ ಪ್ರಸ್ತಾವನೆಯನ್ನು ಒಪ್ಪಿಕೊಳ್ಳಲು ಟ್ರಂಪ್ ಒಂದು ಕಠಿಣ ಷರತ್ತನ್ನು ವಿಧಿಸಿದ್ದಾರೆ.
ಟ್ರಂಪ್ ಅವರ ಟ್ರುತ್ ಸೋಷಿಯಲ್' ಪೋಸ್ಟ್‌ನಲ್ಲಿ ಏನಿದೆ?
ಈ ಬಗ್ಗೆ ತಮ್ಮ ಟ್ರುತ್ ಸೋಷಿಯಲ್ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಇರಾನ್‌ನ ಹೊಸ ಆಡಳಿತದ ಅಧ್ಯಕ್ಷರು ಹಿಂದಿನವರಿಗಿಂತ ಹೆಚ್ಚು ಬುದ್ಧಿವಂತರು ಮತ್ತು ಕಡಿಮೆ ತೀವ್ರಗಾಮಿಯಾಗಿದೆ. ಅವರು ಅಮೆರಿಕಕ್ಕೆ ಕದನ ವಿರಾಮಕ್ಕಾಗಿ ಮನವಿ ಮಾಡಿದ್ದಾರೆ.
ಕಠಿಣ ಷರತ್ತು: ಹಾರ್ಮುಜ್ ಜಲಸಂಧಿಯು ಸಂಪೂರ್ಣವಾಗಿ ಮುಕ್ತವಾಗಿ, ಹಡಗುಗಳ ಸಂಚಾರಕ್ಕೆ ಯಾವುದೇ ಅಡೆತಡೆಯಿಲ್ಲದಂತಾದಾಗ ಮಾತ್ರ ನಾವು ಕದನ ವಿರಾಮದ ಬಗ್ಗೆ ಯೋಚಿಸುತ್ತೇವೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ವಿನಾಶದ ಎಚ್ಚರಿಕೆ: ಅಲ್ಲಿಯವರೆಗೆ ನಾವು ಇರಾನ್ ಅನ್ನು ಸರ್ವನಾಶ ಮಾಡುತ್ತಲೇ ಇರುತ್ತೇವೆ. ಅವರನ್ನು ಶಿಲಾಯುಗಕ್ಕೆ ತಳ್ಳುವವರೆಗೆ ನಮ್ಮ ದಾಳಿ ನಿಲ್ಲುವುದಿಲ್ಲ ಎಂದು ಅತ್ಯಂತ ಕಠಿಣ ಪದಗಳಲ್ಲಿ ಯುಎಸ್ ಅಧ್ಯಕ್ಷ ಎಚ್ಚರಿಸಿದ್ದಾರೆ.
ಗೊಂದಲ ಮೂಡಿಸಿದ 'ಹೊಸ ಅಧ್ಯಕ್ಷ' ಯಾರು?
ಟ್ರಂಪ್ ಅವರು ಇರಾನ್‌ನ ಯಾವ ನಾಯಕನನ್ನು ಉದ್ದೇಶಿಸಿ ಈ ಮಾತು ಹೇಳಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಮಹಮ್ಮದ್ ಬಾಘರ್ ಘಾಲಿಬಾಫ್: ಕಳೆದ ವಾರವಷ್ಟೇ ಟ್ರಂಪ್ ಅವರು ಇರಾನ್ ಸಂಸತ್ತಿನ ಸ್ಪೀಕರ್ ಘಾಲಿಬಾಫ್ ಅವರೊಂದಿಗೆ ಮಾತುಕತೆ ನಡೆಸುತ್ತಿರುವುದನ್ನು ದೃಢಪಡಿಸಿದ್ದರು. ಆದರೆ ಅವರು ಅಧ್ಯಕ್ಷರಲ್ಲ.
ಮಸೂದ್ ಪೆಜೆಶ್ಕಿಯನ್: ಇರಾನ್‌ನ ಅಧಿಕೃತ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರು ಬುಧವಾರವಷ್ಟೇ ನಮಗೆ ಭದ್ರತೆಯ ಭರವಸೆ ನೀಡಿದರೆ ನಾವು ಕದನ ವಿರಾಮಕ್ಕೆ ಸಿದ್ಧ ಎಂದು ಹೇಳಿಕೆ ನೀಡಿದ್ದರು. ಇವರನ್ನೇ ಟ್ರಂಪ್ ಉದ್ದೇಶಿಸಿರಬಹುದು ಎಂಬ ವಿಶ್ಲೇಷಣೆ ನಡೆಯುತ್ತಿದೆ.
ಹಾರ್ಮುಜ್ ಜಲಸಂಧಿ: ಟ್ರಂಪ್ ನಿಲುವಿನಲ್ಲಿ ಬದಲಾವಣೆ?
ಹಾರ್ಮುಜ್ ಜಲಸಂಧಿಯ ವಿಚಾರದಲ್ಲಿ ಟ್ರಂಪ್ ಅವರ ನಿಲುವು ಪದೇ ಪದೇ ಬದಲಾಗುತ್ತಿರುವುದು ಮಿತ್ರ ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದೆ.
ಕಳೆದ ವಾರ: ಹಡಗುಗಳಿಗೆ ದಾರಿ ಬಿಡದಿದ್ದರೆ ಇರಾನ್‌ನ ಇಂಧನ ಕೇಂದ್ರಗಳನ್ನು ಬಾಂಬ್ ಹಾಕಿ ಉಡಾಯಿಸುವುದಾಗಿ ಬೆದರಿಕೆ ಹಾಕಿದ್ದರು.
ನಿನ್ನೆ: ಹಾರ್ಮುಜ್ ಸಮಸ್ಯೆ ಬಗೆಹರಿಯದಿದ್ದರೂ ನಾವು ಯುದ್ಧ ನಿಲ್ಲಿಸಲು ಸಿದ್ಧ. ಇದು ನಮಗಿಂತ ಇತರ ದೇಶಗಳಿಗೆ ಹೆಚ್ಚು ತೊಂದರೆ ನೀಡುತ್ತಿದೆ, ಹಾಗಾಗಿ ಅವರೇ ಇದನ್ನು ಬಗೆಹರಿಸಿಕೊಳ್ಳಲಿ ಎಂಬ ಜಾರಿಕೆಯ ಹೇಳಿಕೆ ನೀಡಿದ್ದರು.
ಇಂದು: ಮತ್ತೆ ಹಾರ್ಮುಜ್ ಮುಕ್ತವಾಗದಿದ್ದರೆ ಕದನ ವಿರಾಮವಿಲ್ಲ ಎಂಬ ಪಟ್ಟು ಹಿಡಿದಿದ್ದಾರೆ.
ಮಧ್ಯಪ್ರಾಚ್ಯದ ಸಂಘರ್ಷವು ಎರಡನೇ ತಿಂಗಳಿಗೆ ಕಾಲಿಟ್ಟಿದ್ದು, ತೈಲ ಮಾರುಕಟ್ಟೆಯಲ್ಲಿ ತಲ್ಲಣ ಮುಂದುವರಿದಿದೆ. ಟ್ರಂಪ್ ಅವರ ಈ ಕದನವಿರಾಮದ ಹೇಳಿಕೆಯು ಯುದ್ಧ ಕೊನೆಗೊಳ್ಳುವ ಆಸೆಯನ್ನು ಚಿಗುರಿಸಿದೆಯಾದರೂ, ಅವರು ವಿಧಿಸಿರುವ ಹಾರ್ಮುಜ್ ಮುಕ್ತ ಷರತ್ತಿಗೆ ಇರಾನ್ ಒಪ್ಪುತ್ತದೆಯೇ ಎಂಬುದು ಈಗಿರುವ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ,(ಏಜೆನ್ಸೀಸ್).