ಖಾಲಿಯಾಗಿಲ್ಲ ಇರಾನ್ ಬತ್ತಳಿಕೆ! ಯುದ್ಧ ನಿಂತರೂ ನಿಂತಿಲ್ಲ ಆತಂಕ: ಟೆಹ್ರಾನ್ನ ಹಿಡನ್ ಫೈರ್ ಪವರ್ ಕಂಡು ಬೆಚ್ಚಿಬಿದ್ದ ಅಮೆರಿಕ!
ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಕಿಚ್ಚು ಸದ್ಯಕ್ಕೆ ತಣ್ಣಗಾದಂತೆ ಕಾಣುತ್ತಿದ್ದರೂ, ಅಮೆರಿಕದ ಗುಪ್ತಚರ ಇಲಾಖೆಯ ಹೊಸ ವರದಿಯೊಂದು ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ. ವಾರಗಳ ಕಾಲ ನಡೆದ ಭೀಕರ ವೈಮಾನಿಕ ದಾಳಿಗಳ ಹೊರತಾಗಿಯೂ, ಇರಾನ್(Iran Missile Strength) ಇನ್ನೂ ಸಾವಿರಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತನ್ನ ಸುಪರ್ದಿಯಲ್ಲಿಟ್ಟುಕೊಂಡಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಇರಾನ್‌ನ ಕ್ಷಿಪಣಿ ಕಾರ್ಯಕ್ರಮವು ಸಂಪೂರ್ಣವಾಗಿ ಧ್ವಂಸಗೊಂಡಿದೆ ಮತ್ತು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದ ಬೆನ್ನಲ್ಲೇ, ಈ ಸ್ಫೋಟಕ ಮಾಹಿತಿ ಹೊರಬಿದ್ದಿರುವುದು ರಾಜತಾಂತ್ರಿಕ ವಲಯದಲ್ಲಿ ಸಂಚಲನ ಮೂಡಿಸಿದೆ.
ನೆಲದಡಿಯ ಅಭೇದ್ಯ ಕೋಟೆಗಳು
ವಾಲ್ ಸ್ಟ್ರೀಟ್ ಜರ್ನಲ್ (WSJ) ವರದಿಯ ಪ್ರಕಾರ, ಇರಾನ್‌ನ ಶೇ. 50ಕ್ಕೂ ಹೆಚ್ಚು ಮಿಸೈಲ್ ಲಾಂಚರ್‌ಗಳು (ಕ್ಷಿಪಣಿ ಉಡಾವಣಾ ವಾಹನಗಳು) ನಾಶವಾಗಿವೆ ಅಥವಾ ಹಾನಿಗೊಳಗಾಗಿವೆ. ಆದರೆ, ಇರಾನ್‌ನ ಅಸಲಿ ಶಕ್ತಿ ಅಡಗಿರುವುದು ಅದರ ನೆಲದಡಿಯ ಸುರಂಗಗಳಲ್ಲಿ ಎಂದು ತಿಳಿದು ಬಂದಿದೆ.
ಇಸ್ರೇಲ್ ಮತ್ತು ಅಮೆರಿಕದ ಪಡೆಗಳು ಇರಾನ್‌ನ ಸುರಂಗಗಳ ಪ್ರವೇಶ ದ್ವಾರಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದವು. ಇದರಿಂದಾಗಿ ಕ್ಷಿಪಣಿಗಳು ಹೊರಬರಲು ಸಾಧ್ಯವಾಗದೆ ನೆಲದಡಿಯಲ್ಲೇ ಸಿಲುಕಿಕೊಂಡಿವೆ. ಆದರೆ, ಈ ಮೂಲಸೌಕರ್ಯಗಳು ಇನ್ನೂ ಜೀವಂತವಾಗಿದ್ದು, ಇರಾನ್ ಅವುಗಳನ್ನು ಶೀಘ್ರವಾಗಿ ದುರಸ್ತಿ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ತಜ್ಞರು ಹೇಳಿದ್ದಾರೆ.
ಎಷ್ಟಿದೆ ಇರಾನ್ ಬಳಿ ಶಸ್ತ್ರಾಸ್ತ್ರ..?
ಯುದ್ಧದ ಭೀಕರ ಹೊಡೆತದ ನಂತರವೂ ಇರಾನ್ ಬಳಿ ಉಳಿದಿರುವ ಅಂದಾಜು ಶಸ್ತ್ರಾಸ್ತ್ರಗಳ ಪಟ್ಟಿ ಹೀಗಿದೆ.
ಬ್ಯಾಲಿಸ್ಟಿಕ್ ಕ್ಷಿಪಣಿಗಳು: ಯುದ್ಧಕ್ಕೆ ಮುನ್ನ ಇರಾನ್ ಬಳಿ ಅಂದಾಜು 2,500 ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳಿದ್ದವು. ಈಗಲೂ ಅದರ ಬಳಿ ಸುಮಾರು 1,000ಕ್ಕೂ ಹೆಚ್ಚು ಕ್ಷಿಪಣಿಗಳು ಸುರಕ್ಷಿತವಾಗಿವೆ.
ಶಾರ್ಟ್ ರೇಂಜ್ ಮಿಸೈಲ್ಸ್: ಸಾವಿರಾರು ಅಲ್ಪಾವಧಿ ಕ್ಷಿಪಣಿಗಳು ಇರಾನ್‌ನ ಗಡಿಭಾಗಗಳಲ್ಲಿ ಸನ್ನದ್ಧ ಸ್ಥಿತಿಯಲ್ಲಿವೆ.
ಕ್ರೂಸ್ ಕ್ಷಿಪಣಿಗಳು: ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕದ ಹಡಗುಗಳನ್ನು ಗುರಿಯಾಗಿಸಬಲ್ಲ ಕ್ರೂಸ್ ಕ್ಷಿಪಣಿಗಳ ಸಣ್ಣ ದಾಸ್ತಾನು ಇರಾನ್ ಬಳಿ ಇನ್ನೂ ಇದೆ.
ಡ್ರೋನ್ ಪಡೆ: ಇರಾನ್‌ನ ಸುಪ್ರಸಿದ್ಧ 'ಆತ್ಮಹತ್ಯಾ ಡ್ರೋನ್ ಪಡೆ ಅರ್ಧಕ್ಕಿಂತ ಹೆಚ್ಚು ನಾಶವಾಗಿದ್ದರೂ, ರಷ್ಯಾದ ಸಹಾಯದಿಂದ ಅವುಗಳನ್ನು ಮತ್ತೆ ಪಡೆಯುವ ಆಯ್ಕೆ ಇರಾನ್ ಮುಂದಿದೆ.
ದಾಳಿಯ ತೀವ್ರತೆ ಮತ್ತು ಮಿತಿ
ಅಮೆರಿಕ ಮತ್ತು ಇಸ್ರೇಲ್ ಈ ಯುದ್ಧದಲ್ಲಿ ಬರೋಬ್ಬರಿ 13,000ಕ್ಕೂ ಹೆಚ್ಚು ಮ್ಯೂನಿಷನ್‌ಗಳನ್ನು ಬಳಸಿ ಇರಾನ್‌ನ ಶಸ್ತ್ರಾಗಾರ, ನೌಕಾಪಡೆ ಮತ್ತು ರಕ್ಷಣಾ ಉದ್ಯಮಗಳನ್ನು ಗುರಿಯಾಗಿಸಿದ್ದವು.
ಇಸ್ರೇಲ್ ಅಧಿಕಾರಿಗಳ ಪ್ರಕಾರ, ಇರಾನ್‌ನ ಕ್ಷಿಪಣಿ ಉಡಾವಣಾ ಸಾಮರ್ಥ್ಯ ದಿನಕ್ಕೆ 50-60 ರಿಂದ 10-15 ಕ್ಕೆ ಇಳಿದಿದೆ.
ಆದರೂ, ಮಿಲಿಟರಿ ವಿಶ್ಲೇಷಕ ಕೆನ್ನೆತ್ ಪೋಲಾಕ್ ಅವರ ಪ್ರಕಾರ, ಇರಾನ್ ಮಿಲಿಟರಿ ಶಕ್ತಿಗಳನ್ನು ಮರುಸಂಘಟಿಸುವಲ್ಲಿ ಅತ್ಯಂತ ವೇಗವಾಗಿದ್ದು, ಇಸ್ರೇಲ್ ಹೊರತುಪಡಿಸಿ ಮಧ್ಯಪ್ರಾಚ್ಯದ ಇತರ ದೇಶಗಳಿಗಿಂತ ಹೆಚ್ಚು ಅಪಾಯಕಾರಿಯಾಗಿದೆ.
ಇಸ್ಲಾಮಾಬಾದ್ ಮಾತುಕತೆಯ ಮೇಲೆ ನೆರಳು
ಈ ಎಲ್ಲಾ ಬೆಳವಣಿಗೆಗಳ ನಡುವೆ, ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಜಾರೆಡ್ ಕುಶ್ನರ್ ಅವರ ನಿಯೋಗ ಇಸ್ಲಾಮಾಬಾದ್‌ನಲ್ಲಿ ಇರಾನ್ ಜೊತೆ ಸಂಧಾನ ನಡೆಸಲು ಸಿದ್ಧವಾಗಿದೆ. ನಮ್ಮ ಮಿಲಿಟರಿ ಯಶಸ್ಸು ಸಂಧಾನದ ಮೇಜಿನ ಮೇಲೆ ಅಮೆರಿಕಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಿದೆ ಎಂದು ಶ್ವೇತಭವನದ ವಕ್ತಾರ ಅನಾ ಕೆಲ್ಲಿ ಹೇಳಿದ್ದಾರೆ. ಆದರೆ, ಇರಾನ್ ತನ್ನ ಕ್ಷಿಪಣಿ ಬಲವನ್ನು ಪೂರ್ತಿಯಾಗಿ ಕಳೆದುಕೊಂಡಿಲ್ಲದಿರುವುದು ಅಮೆರಿಕಕ್ಕೆ ಒಂದು ಕಡೆ ತಲೆನೋವಾಗಿ ಪರಿಣಮಿಸಿದೆ.
ಮುಂದಿನ ಹಾದಿ
ಇರಾನ್ ಈಗ ತನ್ನ ಆರ್ಥಿಕತೆಯನ್ನು ಉಳಿಸಿಕೊಳ್ಳಲು ನಿರ್ಬಂಧಗಳ ತೆರವಿಗೆ ಪಟ್ಟು ಹಿಡಿದಿದೆ. ಒಂದು ವೇಳೆ ಈ ಸಂಧಾನ ವಿಫಲವಾದರೆ, ಇರಾನ್ ರಷ್ಯಾ ಅಥವಾ ಚೀನಾದ ಬೆಂಬಲದೊಂದಿಗೆ ತನ್ನ ಕ್ಷಿಪಣಿ ಸಾಮರ್ಥ್ಯವನ್ನು ಮೊದಲಿನಂತೆಯೇ ಬಲಪಡಿಸಿಕೊಳ್ಳುವ ಆತಂಕವಿದೆ.
ಒಟ್ಟಾರೆಯಾಗಿ, ಕದನ ವಿರಾಮದ ಮಾತುಗಳು ಕೇಳಿಬರುತ್ತಿದ್ದರೂ, ಇರಾನ್‌ನ ಈ ಹಿಡನ್ ಫೈರ್ ಪವರ್ ಪಶ್ಚಿಮ ಏಷ್ಯಾದಲ್ಲಿ ಕಾಯಂ ಶಾಂತಿಯ ಕನಸಿಗೆ ದೊಡ್ಡ ಸವಾಲಾಗಿದೆ,(ಏಜೆನ್ಸೀಸ್).