ಇರಾನ್​ನಲ್ಲಿ ಖಮೇನಿ ವಿರುದ್ಧ ತೀವ್ರ ಪ್ರತಿಭಟನೆ  
ವಿದೇಶ

ಇರಾನ್​ನಲ್ಲಿ ತೀವ್ರ ಆಕ್ರೋಶ! ಖಮೇನಿ ಫೋಟೋಗೆ ಬಿದ್ದ ಬೆಂಕಿಯಿಂದಲೇ ಸಿಗರೇಟ್​ಗೆ ಲೈಟ್, ಮಹಿಳೆ ಕಿಡಿ​

ಪ್ರಮುಖ ಮುಖ್ಯಾಂಶಗಳು

  • ಇರಾನ್​ನಲ್ಲಿ ಮತ್ತೆ ಭುಗಿಲೆದ್ದಿರುವ ಪ್ರತಿಭಟನೆಗಳು
  • ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬೆಲೆಗಳು ದುಬಾರಿಯಾಗಿವೆ
  • ಖಮೇನಿ ಫೋಟೋಗೆ ಬೆಂಕಿ, ಆ ಅಗ್ನಿಯಿಂದಲೇ ಸಿಗರೇಟ್​ಗೆ ಕಿಡಿ
  • ಮಹಿಳೆಯ ಪ್ರತಿಭಟನಾ ಕಿಚ್ಚಿನ ಫೋಟೋ ವೈರಲ್
ಟೆಹ್ರಾನ್​: ಇರಾನ್‌ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಕ್ಷಣ ಕ್ಷಣಕ್ಕೂ ತೀವ್ರವಾಗುತ್ತಿದೆ. ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ವಿರುದ್ಧ ಘೋಷಣೆಗಳು ಜೋರಾಗಿದ್ದು, ಇರಾನ್‌ನಲ್ಲಿ ಜನರು ಸರ್ಕಾರವನ್ನು ಭಾರೀ ವಿರೋಧಿಸುತ್ತಿದ್ದಾರೆ. ಈ ಮಧ್ಯೆ, ಮಹಿಳೆಯೊಬ್ಬಳು ಪ್ರತಿಭಟನೆಯ ನೆಪದಲ್ಲಿ ಖಮೇನಿ ಫೋಟೋಗೆ ಬಿದ್ದ ಬೆಂಕಿಯಿಂದಲೇ ಸಿಗರೇಟ್​ ಲೈಟ್​ ಮಾಡಿಕೊಳ್ಳುತ್ತಿರುವ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
'ಸರ್ವಾಧಿಕಾರಿಗೆ ಸಾವು' ಮತ್ತು 'ಮುಲ್ಲಾಗಳು ತೊಲಗಬೇಕು' ಎಂಬ ಮುಂತಾದ ಘೋಷಣೆಗಳನ್ನು ಕೂಗುತ್ತಿರುವ ಪ್ರತಿಭಟನಾಕಾರರು, ತಮ್ಮ ಹೋರಾಟವನ್ನು ಇನ್ನೂ ತೀವ್ರಗೊಳಿಸುತ್ತಿದ್ದಾರೆ. ಈ ಪೈಕಿ ಮಹಿಳೆಯರು ವಿನೂತನ ರೀತಿಯಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಖಮೇನಿ ಅವರ ಮುಖವಿರುವ ಫೋಟೋಗಳಿಗೆ ಬೆಂಕಿ ಹಚ್ಚಿ, ಅದರಲ್ಲೇ ಸಿಗರೇಟ್ ಹಚ್ಚಿಕೊಳ್ಳುವ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಸರ್ಕಾರದ ವಿರುದ್ಧ ಭುಗಿಲೆದ್ದಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಇರಾನ್ ಅಧಿಕಾರಿಗಳು ಪ್ರಯತ್ನಿಸಿದರೂ, ಹೆಚ್ಚೆಚ್ಚು ಸಂಖ್ಯೆಯಲ್ಲಿ ಜನರು ಬೀದಿಗಿಳಿಯುತ್ತಿದ್ದಾರೆ. ಇಲ್ಲಿಯವರೆಗೆ, ಪ್ರತಿಭಟನೆಗಳಲ್ಲಿ 40ಕ್ಕೂ ಅಧಿಕ ಮಂದಿ ದುರಂತ ಅಂತ್ಯ ಕಂಡಿದ್ದು, 20 ಸಾವಿರಕ್ಕೂ ಹೆಚ್ಚು ಜನರು ಪೊಲೀಸ್​ ಕಸ್ಟಡಿಯಲ್ಲಿದ್ದಾರೆ. ಅಸಲಿಗೆ, ಇರಾನ್‌ನ ಸುಪ್ರೀಂ ನಾಯಕರ ಫೋಟೋವನ್ನು ಸುಡುವುದು ಇರಾನ್ ಕಾನೂನಿನಡಿಯಲ್ಲಿ ಗಂಭೀರ ಅಪರಾಧವೆಂದು ಪರಿಗಣಿಸಲಾಗಿದೆ.
ಪ್ರಸ್ತುತ ಇರಾನ್​ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬೆಲೆಗಳು ಬಲು ದುಬಾರಿಯಾಗಿವೆ. ಉದ್ಯೋಗ ಕೊರತೆ ಕಾಡುತ್ತಿದ್ದು, ಜೀವನ ನಿರ್ವಹಣೆ ವೆಚ್ಚ ದುಪ್ಪಟ್ಟಾಗಿದೆ. ಇದರಿಂದ ಬೇಸತ್ತಿರುವ ಜನರು ಅನೇಕ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ನಿನ್ನೆ (ಜ.08) ರೆಜಾ ಪಹ್ಲವಿ ಕರೆಗೆ ಸಾವಿರಾರು ಪ್ರತಿಭಟನಾಕಾರರು ಒಮ್ಮೆಲೆ ಬೀದಿಗೆ ಇಳಿದರು. ಇರಾನ್​ನ ಸುಪ್ರೀಂ ನಾಯಕ ಹಾಗೂ ಅಧ್ಯಕ್ಷ ಅಲಿ ಹೊಸೇನಿ ಖಮೇನಿ ಆಡಳಿತ ಬದಲಾವಣೆಗೆ ಭಾರೀ ಆಗ್ರಹಗಳು ಕೇಳಿಬರುತ್ತಿದ್ದು, ಇದು ಯಾವ ಹಂತಕ್ಕೆ ಹೋಗಿ ನಿಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).