ಡೊನಾಲ್ಡ್ ಟ್ರಂಪ್​  
ವಿದೇಶ

ಅಮಾಯಕರು ಸಾಯೋದು ನನಗೂ ಇಷ್ಟವಿಲ್ಲ! ಆದ್ರೆ... ಡೆಡ್​ಲೈನ್​ ಸನ್ನಿಹಿತ; ಇರಾನ್​ಗೆ ಟ್ರಂಪ್​ ಕೊನೆಯ ಎಚ್ಚರಿಕೆ

ಪ್ರಮುಖ ಮುಖ್ಯಾಂಶಗಳು

  • ಇರಾನಿನ ನಾಗರಿಕತೆಯು ಇಂದು ರಾತ್ರಿಯೇ ಕೊನೆ
  • ಫೈನಲ್ ವಾರ್ನಿಂಗ್​ ಕೊಟ್ಟ ಅಮೆರಿಕ ಅಧ್ಯಕ್ಷ ದೊನಾಲ್ಡ್ ಟ್ರಂಪ್
  • ವಿದ್ಯುತ್ ಸ್ಥಾವರಗಳು ಮತ್ತು ತೈಲ ಕೇಂದ್ರಗಳನ್ನು ಉಡೀಸ್​ ಮಾಡುವುದಾಗಿ ಎಚ್ಚರಿಕೆ
ವಾಷಿಂಗ್ಟನ್​: ಹೊರ್ಮುಜ್ ಜಲಸಂಧಿ ತೆರೆಯಿರಿ ಎಂದು ಅಮೆರಿಕ ಅಧ್ಯಕ್ಷ ನೀಡಿದ್ದ 48 ಗಂಟೆಗಳ ಗಡುವು ಇದೀಗ ಕೊನೆಗೊಳ್ಳುವ ಹಂತಕ್ಕೆ ಬಂದಿದ್ದು, ಈ ನಿಟ್ಟಿನಲ್ಲಿ ಡೊನಾಲ್ಡ್​ ಟ್ರಂಪ್​, ಇರಾನ್​ಗೆ ಕೊನೆಯ ಬಾರಿ ಎಚ್ಚರಿಕೆಯನ್ನು ರವಾನಿಸಿದ್ದಾರೆ.
48 ಗಂಟೆಗಳೊಳಗೆ ಒಪ್ಪಂದ ಮಾಡಿಕೊಳ್ಳದಿದ್ದರೆ, ನುಡಿದಂತೆ ಸಂಪೂರ್ಣವಾಗಿ ನಾಶ ಮಾಡುವುದು ಖಚಿತ ಎಂದು ಟ್ರಂಪ್ ಈ ಹಿಂದೆಯೇ ಎಚ್ಚರಿಸಿದ್ದರು. ಇಷ್ಟಾದರೂ, ಡೆಡ್​ಲೈನ್​ ಮುಗಿಯುವ ಹಂತಕ್ಕೆ ತಲುಪಿದ್ದರೂ ಇರಾನ್ ಮಾತ್ರ ನಾವು ಇದಕ್ಕೆಲ್ಲ ಬಗ್ಗುವುದಿಲ್ಲ ಎಂದಿರುವುದು ಸದ್ಯ ಟ್ರಂಪ್​ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿಯೇ, ಇರಾನಿನ ನಾಗರಿಕರ ಸಾವನ್ನು ಮುಂದಿಟ್ಟು ವಾರ್ನಿಂಗ್ ನೀಡಿದ್ದಾರೆ.
ಮತ್ತೊಂದೆಡೆ, 14 ಮಿಲಿಯನ್‌ಗಿಂತಲೂ ಹೆಚ್ಚು ಇರಾನಿಯನ್ನರು ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಿದ್ದಾರೆ ಎಂದು ಇರಾನಿನ ಅಧ್ಯಕ್ಷ ಮಸೌದ್ ಪೆಶ್ಮೆರ್ಗಾ ಹೇಳಿರುವುದು ಅಚ್ಚರಿಯ ಬೆಳವಣಿಗೆ. ಇದನ್ನು ನೋಡಿದರೆ, ಯಾವುದೇ ಕಾರಣಕ್ಕೂ ನಾವು ನಿಮ್ಮ ಮಾತಿಗೆ ಅಥವಾ ಒಪ್ಪಂದಗಳಿಗೆ ತಲೆದೂಗುವುದಿಲ್ಲ ಎಂದು ಇರಾನ್​ ಗಟ್ಟಿಯಾಗಿ ಹೇಳಿದೆ. ಇದರಿಂದ ಕುಪಿತಗೊಂಡಿರುವ ಟ್ರಂಪ್​, 47 ವರ್ಷಗಳ ದಬ್ಬಾಳಿಕೆ, ಭ್ರಷ್ಟಾಚಾರ ಅಂತಿಮವಾಗಿ ಕೊನೆಗೊಳ್ಳುತ್ತದೆ ಎಂದು ನುಡಿದಿದ್ದಾರೆ.
ಇಂದು ರಾತ್ರಿ ಇರಾನ್​ನ ಇಡೀ ನಾಗರಿಕತೆಯು ಕೊನೆಗೊಳ್ಳುತ್ತದೆ. ಮುಂದೆಂದೂ ಅವರನ್ನು ವಾಪಾಸ್​ ಕರೆತರಲು ಸಾಧ್ಯವಿಲ್ಲ. ಇದೆಲ್ಲ ನಡೆಯಲಿ ಎಂದು ನಾನೇನೂ ಬಯಸುತ್ತಿಲ್ಲ. ಆದರೆ, ಬೇರೆ ದಾರಿಯಿಲ್ಲ. ದೇವರು ಇರಾನ್​ನ ಒಳ್ಳೆಯ ಜನರನ್ನು ಕಾಪಾಡಲಿ ಎಂದು ತಮ್ಮ ಟ್ರೂತ್​ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ,(ಏಜೆನ್ಸೀಸ್).