ಸಾಂದರ್ಭಿಕ ಚಿತ್ರ 
ವಿದೇಶ

ಒಂದು ಹನಿ ತೈಲವನ್ನೂ ರಫ್ತು ಮಾಡಲ್ಲ; ಅಮೆರಿಕಕ್ಕೆ ಇರಾನ್‌ ಖಡಕ್ ವಾರ್ನಿಂಗ್‌ | Iran warns America

ಪ್ರಮುಖ ಮುಖ್ಯಾಂಶಗಳು

  • ಅಮೆರಿಕದ ಆರ್ಥಿಕ ಯುದ್ಧ ಮುಂದುವರಿದರೆ ತೈಲ ರಫ್ತು ಬಂದ್​
  • ಹೋರ್ಮೊಜ್ ಮೂಲಕ ಸಂಚರಿಸುವ ಹಡಗುಗಳಿಗೆ ಸೇವಾ ಶುಲ್ಕ?
  • ಅಮೆರಿಕ ತನ್ನ ಬೇಡಿಕೆ ಈಡೇರಿಸುವವರೆಗೆ ಹೋರ್ಮೊಜ್ ತೆರೆಯಲ್ಲ ಎಂದ ಇರಾನ್‌
Iran warns America: ಅಮೆರಿಕ-ಇರಾನ್​ ಸಂಘರ್ಷ ದಿನದಿಂದ ದಿನಕ್ಕೆ ಮತ್ತಷ್ಟು ಹೆಚ್ಚಾಗುತ್ತಿರುವ ಬೆನ್ನಲ್ಲೇ ಇರಾನ್‌ ಖಡಕ್ ಎಚ್ಚರಿಕೆ ನೀಡಿದೆ. ಅಮೆರಿಕದ ಆರ್ಥಿಕ ಯುದ್ಧ ಮುಂದುವರಿದರೆ, ಒಂದು ಹನಿ ತೈಲವನ್ನೂ ರಫ್ತು ಮಾಡಲ್ಲ ಎಂದು ಇರಾನ್‌ ಹೇಳಿದೆ. ಇದೇ ವೇಳೆ ಜಾಗತಿಕ ತೈಲ ಸಾಗಣೆಗೆ ಅತ್ಯಂತ ಪ್ರಮುಖವಾಗಿರುವ ಹೋರ್ಮೊಜ್ ಜಲಸಂಧಿ ವಿಚಾರದಲ್ಲೂ ಟೆಹ್ರಾನ್ ತನ್ನ ನಿಲುವನ್ನು ಮತ್ತಷ್ಟು ಬಿಗಿಗೊಳಿಸಿದೆ.
ಇರಾನ್‌ ಭಾನುವಾರ, ಹೋರ್ಮೊಜ್ ಜಲಸಂಧಿಯಲ್ಲಿ ಸಂಚರಿಸಲು ಅನುಮತಿ ಪಡೆದ ದೇಶಗಳ ಹಡಗುಗಳಿಗೆ ವಿವಿಧ ಸೇವೆಗಳಿಗೆ ಶುಲ್ಕ ವಿಧಿಸುವ ನಿರ್ಧಾರ ಮಾಡಿದೆ. ಇರಾನ್‌ನ ರಾಷ್ಟ್ರೀಯ ಭದ್ರತಾ ಆಯೋಗದ ವಕ್ತಾರ ಇಬ್ರಾಹಿಂ ರೆಜಾಯೀ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಹಡಗುಗಳಿಗೆ ಯಾವೆಲ್ಲ ಸೇವೆಗಳಿಗೆ ಶುಲ್ಕ?

ಇರಾನ್‌ ಹೇಳಿಕೆಯಂತೆ, ಹೋರ್ಮೊಜ್ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳಿಗೆ ನ್ಯಾವಿಗೇಷನ್, ಪರಿಸರ, ಇಂಧನ, ವಿಮೆ ಹಾಗೂ ಸುರಕ್ಷತೆ ಸೇರಿದಂತೆ ವಿವಿಧ ಸೇವೆಗಳಿಗೆ ಶುಲ್ಕ ವಿಧಿಸಲಾಗುತ್ತದೆ. ಈ ನಿರ್ಧಾರ ‘ಹೋರ್ಮೊಜ್ ಜಲಸಂಧಿಯ ಭದ್ರತೆ ಮತ್ತು ಪ್ರಗತಿಗಾಗಿ ಕಾರ್ಯತಂತ್ರದ ಕ್ರಮ’ ಯೋಜನೆಯ ಆರ್ಟಿಕಲ್‌ 3ರ ಭಾಗವಾಗಿದೆ ಎಂದು ರೆಜಾಯೀ ತಿಳಿಸಿದ್ದಾರೆ. ಶುಲ್ಕವನ್ನು ಇರಾನಿ ರಿಯಾಲ್‌ ಮಾತ್ರವಲ್ಲದೆ, ಇರಾನ್‌ ಕೇಳುವ ಯಾವುದೇ ಕರೆನ್ಸಿಯಲ್ಲಿ ಪಾವತಿಸಬಹುದು ಎಂದು ಅವರು ಹೇಳಿದ್ದಾರೆ.

ಅಮೆರಿಕ ತನ್ನ ನಿಲುವು ಬದಲಿಸಬೇಕು

ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ನ ಕಾರ್ಯದರ್ಶಿ ಮೊಹ್ಸೆನ್ ರೆಜಾಯೀ ಕೂಡ ಹೋರ್ಮೊಜ್ ಜಲಸಂಧಿ ವಿಚಾರದಲ್ಲಿ ಅಮೆರಿಕಕ್ಕೆ ನೇರ ಸಂದೇಶ ನೀಡಿದ್ದಾರೆ. ಅಮೆರಿಕ ತನ್ನ ಬದ್ಧತೆಗಳನ್ನು ಈಡೇರಿಸಬೇಕು ಜತೆಗೆ ತನ್ನ ವರ್ತನೆಯನ್ನು ಬದಲಿಸುವವರೆಗೆ ಹೋರ್ಮೊಜ್ ಜಲಸಂಧಿ ತೆರೆಯಲ್ಲ. ಎಂದಿದ್ದಾರೆ. ಮುಂದುವರಿದು, ಅಮೆರಿಕ ಈಗ ಆರ್ಥಿಕ ಒತ್ತಡದ ಮೂಲಕ ಇರಾನ್‌ ಮೇಲೆ ಪರಿಣಾಮ ಬೀರುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಟ್ರಂಪ್‌ ಹೇಳಿದ್ದೇನು?

ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಕೂಡ ಹೋರ್ಮೊಜ್ ಜಲಸಂಧಿಯ ವಿಚಾರದಲ್ಲಿ ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ. ಹೋರ್ಮೊಜ್ ಮೇಲಿನ ಅಮೆರಿಕದ ನಿಯಂತ್ರಣವನ್ನು ಪ್ರತಿಬಿಂಬಿಸುವ ಚಿತ್ರವೊಂದನ್ನು ಹಂಚಿಕೊಂಡಿರುವ ಟ್ರಂಪ್‌, ಅದನ್ನು ‘ಹೊಸ ಯುಎಸ್ ಪ್ರದೇಶ’(NEW US Territory) ಎಂದು ಬಣ್ಣಿಸಿದ್ದಾರೆ.
ಹೀಗಾಗಿ, ಹೋರ್ಮೊಜ್ ಜಲಸಂಧಿ ಈಗ ಕೇವಲ ಜಲ ಮಾರ್ಗವಾಗಿ ಉಳಿದಿಲ್ಲ. ಇದು ಅಮೆರಿಕ-ಇರಾನ್ ನಡುವಿನ ಆರ್ಥಿಕ, ರಾಜತಾಂತ್ರಿಕ ಮತ್ತು ಸಂಘರ್ಷದ ಪ್ರಮುಖ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಇರಾನ್​ನ ಹೊಸ ಸೇವಾ ಶುಲ್ಕದ ನಿರ್ಧಾರ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ,(ಏಜೆನ್ಸೀಸ್​).