ಇರಾನ್ vs ಇಸ್ರೇಲ್; ಮಧ್ಯಪ್ರಾಚ್ಯದ ಇಬ್ಬರು ಬಲಿಷ್ಠರ ನಡುವೆ ಯಾರ ಕೈ ಮೇಲು? ಅಂಕಿ-ಅಂಶದಲ್ಲಿದೆ ಬೆಚ್ಚಿಬೀಳಿಸುವ ಮಾಹಿತಿ!
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಎದ್ದಿರುವ ಬೆನ್ನಲ್ಲೇ, ಜಗತ್ತಿನ ಕಣ್ಣು ಈಗ ಇರಾನ್ ಮತ್ತು ಇಸ್ರೇಲ್‌ನ(Iran-Israel Military Power) ಮಿಲಿಟರಿ ಶಕ್ತಿಯ ಮೇಲಿದೆ. ಒಂದು ಕಡೆ ಅಪಾರ ಜನಸಂಖ್ಯೆ ಮತ್ತು ಕ್ಷಿಪಣಿ ಬಲ ಹೊಂದಿರುವ ಇರಾನ್ ಇದ್ದರೆ, ಇನ್ನೊಂದು ಕಡೆ ವಿಶ್ವದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅಪ್ರತಿಮ ವಾಯುಪಡೆ ಹೊಂದಿರುವ ಇಸ್ರೇಲ್ ಇದೆ. ಈ ಇಬ್ಬರು ವೈರಿಗಳ ನಡುವೆ ನೇರ ಯುದ್ಧ ನಡೆದರೆ ಯಾರು ಯಾರನ್ನು ಮಣಿಸಬಹುದು? ಇಲ್ಲಿವೆ ನೋಡಿ ಕಣ್ಣು ಕುಕ್ಕುವ ಸೇನಾ ಅಂಕಿ-ಅಂಶಗಳು.
1. ಮಾನವ ಸಂಪನ್ಮೂಲ: ಇರಾನ್ ಸಂಖ್ಯೆ ದೊಡ್ಡದು!
ಸೈನ್ಯದ ಸಂಖ್ಯಾಬಲದ ವಿಷಯಕ್ಕೆ ಬಂದರೆ ಇರಾನ್ ಬಹಳ ಮುಂದಿದೆ.
ಇರಾನ್: ಸರಿಸುಮಾರು 6,10,000 ಸಕ್ರಿಯ ಸೈನಿಕರನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 3,50,000 ಮೀಸಲು ಪಡೆ ಮತ್ತು 2,20,000 ಅರೆಸೇನಾ ಪಡೆಗಳನ್ನು ಹೊಂದಿದೆ. ಅಂದರೆ ಸುಮಾರು 12 ಲಕ್ಷಕ್ಕೂ ಅಧಿಕ ಸೈನಿಕರ ಬಲ ಇರಾನ್‌ನಲ್ಲಿದೆ.
ಇಸ್ರೇಲ್: ಇಸ್ರೇಲ್‌ನ ಸಕ್ರಿಯ ಪಡೆ ಕೇವಲ 1,70,000. ಆದರೆ, ತುರ್ತು ಪರಿಸ್ಥಿತಿಯಲ್ಲಿ ಯುದ್ಧಭೂಮಿಗೆ ಧುಮುಕಬಲ್ಲ 4,60,000 ಮೀಸಲು ಸೈನಿಕರು ಇಸ್ರೇಲ್‌ನ ನಿಜವಾದ ಶಕ್ತಿಯಾಗಿದೆ.
2. ವಾಯುಪಡೆ: ಇಸ್ರೇಲ್‌ನ ಅಧಿಪತ್ಯ
ಆಧುನಿಕ ಯುದ್ಧಗಳಲ್ಲಿ ವಾಯುಪಡೆಯೇ ನಿರ್ಣಾಯಕವಾಗಿದ್ದು. ಇಲ್ಲಿ ಇಸ್ರೇಲ್ ಅಧಿಪತ್ಯ ಸಾಧಿಸಿದೆ.
ಇಸ್ರೇಲ್: ಇಸ್ರೇಲ್ ಬಳಿ 600ಕ್ಕೂ ಹೆಚ್ಚು ವಿಮಾನಗಳಿವೆ. ಇದರಲ್ಲಿ 240ಕ್ಕೂ ಹೆಚ್ಚು ಅತ್ಯಾಧುನಿಕ ಫೈಟರ್ ಜೆಟ್‌ಗಳು ಇವೆ.
ಇರಾನ್: ಇರಾನ್ ಬಳಿ 550ಕ್ಕೂ ಹೆಚ್ಚು ವಿಮಾನಗಳಿದ್ದರೂ, ಫೈಟರ್ ಜೆಟ್‌ಗಳ ಸಂಖ್ಯೆ 190ಕ್ಕೆ ಸೀಮಿತವಾಗಿದೆ. ಇವುಗಳಲ್ಲಿ ಹೆಚ್ಚಿನವು ಹಳೆಯ ತಂತ್ರಜ್ಞಾನದವು ಎನ್ನಲಾಗಿದೆ.
3. ಭೂಸೇನೆ ಮತ್ತು ಟ್ಯಾಂಕರ್‌ಗಳು
ಭೂಮಿಯ ಮೇಲಿನ ಕಾಳಗದಲ್ಲಿ ಇರಾನ್ ಟ್ಯಾಂಕರ್‌ಗಳ ಸಂಖ್ಯೆ ಬೃಹತ್ ಆಗಿದೆ.
ಇರಾನ್: ಸುಮಾರು 1,700 ರಿಂದ 2,000 ಯುದ್ಧ ಟ್ಯಾಂಕರ್‌ಗಳನ್ನು ಹೊಂದಿದ್ದು, ಭೂಸೇನೆಯನ್ನು ಬಲಪಡಿಸಿದೆ.
ಇಸ್ರೇಲ್: ಇಸ್ರೇಲ್ ಬಳಿ 1,300 ಟ್ಯಾಂಕರ್‌ಗಳಿವೆ. ಆದರೆ ಇವುಗಳ ತಂತ್ರಜ್ಞಾನ ಮತ್ತು ಮರ್ಕಾವಾದಂತಹ ಟ್ಯಾಂಕ್‌ಗಳ ರಕ್ಷಣಾ ಕವಚ ಇರಾನ್‌ಗಿಂತ ಹೆಚ್ಚು ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ.
ಸೇನಾ ಶಕ್ತಿಯ ಹೋಲಿಕೆ ಪಟ್ಟಿ
ಸಕ್ರಿಯ ಸೈನಿಕರು; 6,10,000 - 1,70,000
ಒಟ್ಟು ವಿಮಾನಗಳು; 550+ - 600+
ಫೈಟರ್ ಜೆಟ್‌ಗಳು; 190 - 240
ಯುದ್ಧ ಟ್ಯಾಂಕರ್‌ಗಳು; 1,700 - 2,000 - 1,300
ಕ್ಷಿಪಣಿ ತಂತ್ರಜ್ಞಾನ; ಬೃಹತ್ ಬ್ಯಾಲಿಸ್ಟಿಕ್ ಕ್ಷಿಪಣಿಗಳು - ಐರನ್ ಡೋಮ್ (Iron Dome) ರಕ್ಷಣೆ
ನಿರ್ಣಾಯಕ ಅಂಶಗಳು: ಕ್ಷಿಪಣಿ vs ತಂತ್ರಜ್ಞಾನ
ಇರಾನ್ ವಿಶ್ವದ ಅತಿದೊಡ್ಡ ಕ್ಷಿಪಣಿ ಭಂಡಾರಗಳಲ್ಲಿ ಒಂದನ್ನು ಹೊಂದಿದೆ ಎಂದು ನಂಬಲಾಗಿದೆ. ಸಾವಿರಾರು ಕಿಲೋಮೀಟರ್ ದೂರದ ಗುರಿಯನ್ನು ತಲುಪಬಲ್ಲ ಇರಾನ್‌ನ ಕ್ಷಿಪಣಿಗಳು ಇಸ್ರೇಲ್‌ನ ಯಾವುದೇ ಭಾಗವನ್ನಾದರೂ ತಲುಪಬಲ್ಲವು. ಆದರೆ ಇಸ್ರೇಲ್ ಬಳಿ ಜಗತ್ತಿನ ಅತ್ಯಂತ ಯಶಸ್ವಿ ವಾಯು ರಕ್ಷಣಾ ವ್ಯವಸ್ಥೆ ಐರನ್ ಡೋಮ್ ಮತ್ತು ಆರೋ ಇದೆ. ಇದು ಶತ್ರು ಕ್ಷಿಪಣಿಗಳನ್ನು ಗಾಳಿಯಲ್ಲೇ ಹೊಡೆದುರುಳಿಸುತ್ತದೆ.
ಯಾರಿಗೆ ಜಯ..?
ಸಂಖ್ಯೆಯ ದೃಷ್ಟಿಯಿಂದ ಇರಾನ್ ದೊಡ್ಡದಾಗಿ ಕಂಡರೂ, ತಂತ್ರಜ್ಞಾನ ಮತ್ತು ಅಮೇರಿಕಾದ ಬೆಂಬಲದ ದೃಷ್ಟಿಯಿಂದ ಇಸ್ರೇಲ್ ಅಜೇಯವಾಗಿ ನಿಲ್ಲುತ್ತದೆ. ಈಗ ನಡೆಯುತ್ತಿರುವ ದಾಳಿ-ಪ್ರತಿ ದಾಳಿಗಳು ಕೇವಲ ಅಂಕಿ-ಅಂಶಗಳ ಆಟವಲ್ಲ, ಇದು ಇಡೀ ಮಧ್ಯಪ್ರಾಚ್ಯದ ಅಸ್ತಿತ್ವದ ಪ್ರಶ್ನೆಯಾಗಿದೆ,(ಏಜೆನ್ಸೀಸ್).