ದುಬೈ ಏರ್ಪೋರ್ಟ್​ ಮೇಲೆ ಡ್ರೋನ್​ ದಾಳಿ! Iran vs Israel War  
ವಿದೇಶ

ದುಬೈ ಏರ್​ಪೋರ್ಟ್​​​ ಮೇಲೆ ಡ್ರೋನ್​ ದಾಳಿ, ಬುರ್ಜ್​ ಖಲೀಫಾ ಬಳಿಯೂ ಸ್ಫೋಟ: ಆತಂಕದಲ್ಲಿ ಪ್ರವಾಸಿಗರು! Iran vs Israel War

ಪ್ರಮುಖ ಮುಖ್ಯಾಂಶಗಳು

  • ಇರಾನ್​ ಮೇಲೆ ಜಂಟಿಯಾಗಿ ದಾಳಿ ನಡೆಸಿದ ಅಮೆರಿಕ ಹಾಗೂ ಇಸ್ರೇಲ್​
  • ಇರಾನ್​ ಕೂಡ ದಾಳಿ ನಡೆಸುತ್ತಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀಕರ ಸನ್ನಿವೇಶ ಸೃಷ್ಟಿ
  • ಅಮೆರಿಕ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್​ ವಾಯುದಾಳಿ
Iran vs Israel War : ಇರಾನ್​ ಮೇಲೆ ಅಮೆರಿಕ ಹಾಗೂ ಇಸ್ರೇಲ್​ ಜಂಟಿಯಾಗಿ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್​ ಕೂಡ ದಾಳಿ ನಡೆಸುತ್ತಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀಕರ ಸನ್ನಿವೇಶ ಸೃಷ್ಟಿಯಾಗಿದೆ. ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿರುವ ಅಮೆರಿಕ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್​ ವಾಯುದಾಳಿ ನಡೆಸುತ್ತಿದೆ. ಅಲ್ಲದೆ, ಇತ್ತೀಚೆಗೆ ಅಮೆರಿಕ ಜತೆ ಹೆಚ್ಚು ಒಡನಾಟ ಹೊಂದಿರುವ ಯುನೈಟೆಡ್​ ಎಮಿರೇಟ್ಸ್​ ಅರಬ್​ ಮೇಲೆಯೂ ಇರಾನ್​ ತನ್ನ ಕೆಂಗಣ್ಣು ಬೀರಿದೆ. ಪ್ರವಾಸಿಗರ ಸ್ವರ್ಗ ಹಾಗೂ ಎಲ್ಲ ದೇಶಗಳ ಜನರ ನೆಚ್ಚಿನ ಪ್ರವಾಸಿ ತಾಣವಾಗಿರುವ ದುಬೈ ಮೇಲೆ ಇರಾನ್​ ದಾಳಿ ಮಾಡಿದೆ.
ದುಬೈನ ವಿಮಾನದ ಮೇಲೆ ಇರಾನ್​, ಡ್ರೋನ್​ ದಾಳಿ ನಡೆಸಿದೆ. ಇದರಿಂದ ದುಬೈನ ಸ್ಥಳೀಯ ಜನರು ಮಾತ್ರವಲ್ಲದೆ, ಲಕ್ಷಾಂತರ ಪ್ರವಾಸಿಗರು ಕೂಡ ಭಯದಲ್ಲಿ ಸಮಯ ಕಳೆಯುವಂತಾಗಿದೆ. ತಮ್ಮ ಪ್ರಾಣ ರಕ್ಷಣೆಗಾಗಿ ಪ್ರತೀ ಕ್ಷಣವೂ ಎಚ್ಚರದಿಂದ ಇರುಂವತಹ ಸನ್ನಿವೇಶ ನಿರ್ಮಾಣವಾಗಿದೆ. 
ಜಾಗತಿಕ ವಿಮಾನ ಹಾರಾಟಕ್ಕೆ ಅಡಚಣೆ
ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ದಾಳಿ ಮಾಡಿರುವುದರಿಂದ ಜಾಗತಿಕ ವಿಮಾನ ಹಾರಾಟಕ್ಕೆ ಅಡಚಣೆ ಉಂಟಾಗಿದೆ. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಗತ್ತಿನ ಕೇಂದ್ರ ಬಿಂದುವಾಗಿದೆ. ಏಕೆಂದರೆ, ಇದು ಅತ್ಯಂತ ವ್ಯೂಹಾತ್ಮಕ ಭೌಗೋಳಿಕ ಸ್ಥಳವಾಗಿದ್ದು, ಯುರೋಪ್, ಏಷ್ಯಾ ಮತ್ತು ಆಫ್ರಿಕಾ ಖಂಡಗಳ ನಡುವಿನ ಮಧ್ಯಬಿಂದುವಿನಲ್ಲಿದೆ. ಹೀಗಾಗಿ, ವಿಶ್ವದ ಜನಸಂಖ್ಯೆಯ ಗಣನೀಯ ಭಾಗವನ್ನು (ಸುಮಾರು 2/3 ರಷ್ಟು) ಕೇವಲ 8 ಗಂಟೆಗಳ ಒಳಗೆ ತಲುಪಬಹುದಾದ ಸ್ಥಳವಾಗಿದೆ. ಇದರಿಂದಾಗಿ ಎಮಿರೇಟ್ಸ್ ಏರ್‌ಲೈನ್ಸ್‌ನಂತಹ ವಿಮಾನಯಾನ ಸಂಸ್ಥೆಗಳು ಇಲ್ಲಿ ತಮ್ಮ ಮುಖ್ಯ ಹಬ್‌ನ್ನ ನಿರ್ಮಿಸಿ, ಪ್ರಪಂಚದಾದ್ಯಂತದ ನಗರಗಳ ನಡುವೆ ಸಂಪರ್ಕ ಕಲ್ಪಿಸುವಲ್ಲಿ ಅತ್ಯುತ್ತಮ ಟ್ರಾನ್ಸಿಟ್ ಪಾಯಿಂಟ್ ಆಗಿದೆ. ಜಗತ್ತಿನ ಅನೇಕ ವಿಮಾನಗಳು ದುಬೈ ಏರ್​ಪೋರ್ಟ್​ ಮೂಲಕವೇ ಹಾದು ಹೋಗುತ್ತವೆ. ಅಂದರೆ, ಪ್ರತಿದಿನ ಸುಮಾರು 1,200 ರಿಂದ 1,250 ವಿಮಾನಗಳ ಹಾರಾಟ ನಡೆಸುತ್ತದೆ. 2025ರಲ್ಲಿ ಸುಮಾರು 4,54,800 ವಿಮಾನಗಳು ಹಾರಾಟ ನಡೆಸಿದವು. ಇದೀಗ ಅದೇ ವಿಮಾನ ನಿಲ್ದಾಣ ಮೇಲೆ ದಾಳಿ ಮಾಡಿರುವುದರಿಂದ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಅನೇಕ ವಿಮಾನಗಳ ಹಾರಾಟ ರದ್ದಾಗಿದೆ. ಬೇರೆ ದೇಶಗಳಿಂದ ಬರುವ ವಿಮಾನಗಳಿಗೂ ಅಡಚಣೆ ಉಂಟಾಗಿದ್ದು, ಸಂಪೂರ್ಣ ವಿಮಾನಯಾನ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ಅಲ್ಲದೆ, ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಪ್ರವಾಸಿಗರು ಉಸಿರು ಬಿಗಿ ಹಿಡಿದುಕೊಂಡು ಸಮಯ ಕಳೆಯಬೇಕಾದ ಪರಿಸ್ಥಿತಿ ಎದುರಾಗಿದೆ.

ದುಬೈನಲ್ಲಿ ಸಿಲುಕಿದ ಪ್ರವಾಸಿಗರು

ಅಂದಹಾಗೆ, ದುಬೈ ಪ್ರವಾಸಿಗರ ಸ್ವರ್ಗ ಅನ್ನೋದನ್ನ ವಿಶೇಷವಾಗಿ ಹೇಳಬೇಕಿಲ್ಲ. ವಿಶ್ವದ ಅತಿ ಎತ್ತರದ ಕಟ್ಟಡ ಸೇರಿದಂತೆ ಅನೇಕ ಪ್ರವಾಸಿ ತಾಣಗಳನ್ನು ಹೊಂದಿರುವ ದುಬೈಗೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. 2025ರಲ್ಲಿ 19.59 ಮಿಲಿಯನ್ (ಸುಮಾರು 1.96 ಕೋಟಿ) ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸ್ವಾಗತಿಸಿತು. ಇದು ಹಿಂದಿನ ವರ್ಷ ಅಂದರೆ 2024ಕ್ಕಿಂತಲೂ ಶೇ. 5 ರಷ್ಟು ಹೆಚ್ಚು. ಪ್ರವಾಸಿಗರ ವಿಚಾರದಲ್ಲಿ ಕಳೆದ ಮೂರು ವರ್ಷಗಳಿಂದ ದುಬೈ ದಾಖಲೆ ಸೃಷ್ಟಿಸುತ್ತಿದೆ. ಕಳೆದ ಡಿಸೆಂಬರ್‌ ಒಂದರಲ್ಲೇ 2.04 ಮಿಲಿಯನ್ ಪ್ರವಾಸಿಗರು ಬಂದರು. ಇದರಿಂದಾಗಿ ದುಬೈ ವಿಶ್ವದ ಅಗ್ರಗಣ್ಯ ಪ್ರವಾಸಿ ತಾಣಗಳಲ್ಲಿ ಒಂದಾಗಿ ಮುಂದುವರೆದಿದೆ. ಇದೀಗ, ಇರಾನ್​, ದುಬೈ ವಿಮಾನ ನಿಲ್ದಾಣದ ಮೇಲೆ ಬಾಂಬ್​ ದಾಳಿ ಮಾಡಿರುವುದರಿಂದ ಲಕ್ಷಾಂತರ ಪ್ರವಾಸಿಗರು ದುಬೈನಲ್ಲೇ ಸಿಲುಕಿಕೊಂಡಿದ್ದಾರೆ. ವಿಮಾನ ಹಾರಾಟ ರದ್ದಾಗಿರುವುದರಿಂದ ವಾಪಸ್​ ತಮ್ಮ ದೇಶಗಳಿಗೆ ತೆರಳಲು ಸಾಧ್ಯವಾಗದೇ ಆತಂಕದಲ್ಲಿ ಪ್ರವಾಸಿಗರು ದಿನ ದೂಡುತ್ತಿದ್ದಾರೆ. ಭಾರತದಿಂದ ಹೋದ ಅನೇಕ ಪ್ರವಾಸಿಗರು ಕೂಡ ದುಬೈನಲ್ಲೇ ಸಿಲುಕಿದ್ದಾರೆ. ಆದರೆ, ಶೀಘ್ರದಲ್ಲೇ ಪರಿಸ್ಥಿತಿ ಸಹಜ ಸ್ಥಿತಿಗೆ ಬರಲಿದೆ. ಏಕೆಂದರೆ, ಇರಾನ್​ನ ಗುರಿ ದುಬೈ ಆಗಲಿ ಅಥವಾ ಅರಬ್​ ದೇಶಗಳಾಗಲಿ ಅಲ್ಲ, ಅಲ್ಲಿರುವ ಅಮೆರಿಕ ಮಿಲಿಟರಿ ನೆಲೆಗಳ ಮೇಲೆ ಮಾತ್ರ. ಹೀಗಾಗಿ, ಇನ್ನೆರೆಡು ದಿನಗಳಲ್ಲಿ ವಿಮಾನ ಹಾರಾಟ ಎಂದಿನಂತೆ ಇರಲಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಬುರ್ಜ್​ ಖಲೀಫಾ ಸಮೀಪ ಬಾಂಬ್​ ದಾಳಿ

ವಿಶ್ವದ ಅತಿ ಎತ್ತರದ ಕಟ್ಟಡ ಮತ್ತು ದುಬೈನ ಹೆಮ್ಮೆಯ ಬುರ್ಜ್ ಖಲೀಫಾ ಬಳಿ ಭಾರಿ ಸ್ಫೋಟ ಸಂಭವಿಸಿದೆ. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. 828 ಮೀಟರ್ ಎತ್ತರದ ಈ ಪ್ರತಿಷ್ಠಿತ ಕಟ್ಟಡದ ಬಳಿ ಇರಾನಿನ ಡ್ರೋನ್​ನಿಂದ ದಾಳಿ ನಡೆದಿದೆ. ಇದರಿಂದಾಗಿ ಆ ಪ್ರದೇಶದಲ್ಲಿ ದಟ್ಟವಾದ ಹೊಗೆ ತುಂಬಿಕೊಂಡಿತು. ಬುರ್ಜ್ ಖಲೀಫಾವನ್ನು ಗುರಿಯಾಗಿರಿಸಿಕೊಂಡು ಡ್ರೋನ್​ ಹಾರಿಸುವಂತೆ ಕಾಣುತ್ತದೆ. ಆದರೆ, ಡ್ರೋನ್​ ಸಮೀಪಿಸುತ್ತಿದ್ದಂತೆ ಅದನ್ನು ಹೊಡೆದುರುಳಿಸಲಾಗಿದೆ. ಆದರೂ, ಡ್ರೋನ್​ ಕೆಳಗೆ ಬಿದ್ದ ಪರಿಣಾಮ ಬುರ್ಜ್​ ಖಲೀಫಾ ಸಮೀಪ ದಟ್ಟ ಹೊಗೆ ಕಾಣಿಸಿಕೊಂಡಿತು. ಇನ್ನೂ ಮುನ್ನೆಚ್ಚರಿಕೆ ಕ್ರಮವಾಗಿ, ಅಧಿಕಾರಿಗಳು ಮೊದಲೇ ಕಟ್ಟಡವನ್ನು ಸ್ಥಳಾಂತರಿಸಿದ್ದರು.
ದುಬೈನ ಇತರ ಭಾಗಗಳಲ್ಲಿಯೂ ಸ್ಫೋಟಗಳು ಸಂಭವಿಸಿದ್ದು, ಭೀತಿ ಮೂಡಿಸಿದೆ. ಪ್ರತಿಷ್ಠಿತ ಪಾಮ್ ಜುಮೇರಾ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಿಂದ ಕಟ್ಟಡವೊಂದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತು. ಘಟನೆಯಲ್ಲಿ ಹಲವಾರು ಜನರು ಗಾಯಗೊಂಡರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮತ್ತೊಂದೆಡೆ, ಜನನಿಬಿಡ ಪ್ರದೇಶದಲ್ಲಿ ಇರಾನಿನ ಶಹೀದ್ ಡ್ರೋನ್ ಎರಡು ಕಟ್ಟಡಗಳ ನಡುವೆ ಅಪ್ಪಳಿಸಿ ಭಾರಿ ಸ್ಫೋಟ ಸಂಭವಿಸಿದೆ. ಸದ್ಯ ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಆವರಿಸಿದ್ದು, ಅನಿಶ್ಚಿತತೆ ಮುಂದುವರಿದಿದೆ. ಇದು ಯಾವಾಗ ಸಹಜ ಸ್ಥಿತಿಗೆ ಮರಳುತ್ತೆ ಅನ್ನೋದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್​).