ಇರಾನ್-ಅಮೆರಿಕ ಪರಮಾಣು ಸಂಘರ್ಷ: ನೋವಿನ ದಿನಗಳು ಬರಲಿವೆ ಎಂದು ಗುಡುಗಿದ ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್: ಜಗತ್ತಿನ ಕಣ್ಣು ಈಗ ಸ್ವಿಟ್ಜರ್ಲೆಂಡ್‌ನ ಜಿನೀವಾ ಕಡೆಗೆ ನೆಟ್ಟಿದೆ. ಫೆಬ್ರವರಿ 17ರಂದು ಅಮೆರಿಕ(Donald Trump) ಮತ್ತು ಇರಾನ್ ಪ್ರತಿನಿಧಿಗಳು ಪರಮಾಣು ಒಪ್ಪಂದದ ಕುರಿತು ಮಾತುಕತೆಯ ಮೇಜಿನ ಮೇಲೆ ಕುಳಿತುಕೊಳ್ಳಲಿದ್ದಾರೆ. ಆದರೆ, ಈ ಮಾತುಕತೆಗೂ ಮುನ್ನವೇ ಉಭಯ ದೇಶಗಳ ನಡುವೆ ಶೀತಲ ಸಮರ ತೀವ್ರಗೊಂಡಿದೆ. ಇರಾನ್‌ನ ಉಪ ವಿದೇಶಾಂಗ ಸಚಿವ ಮಾಜಿದ್ ತಖ್ತ್-ರವಾಂಚಿ ಅವರು ನಿರ್ಬಂಧಗಳನ್ನು ತೆರವುಗೊಳಿಸಿದರೆ ಮಾತ್ರ ಒಪ್ಪಂದ ಎಂಬ ಕಠಿಣ ಷರತ್ತನ್ನು ಅಮೆರಿಕದ ಮುಂದೆ ಇಟ್ಟಿದ್ದಾರೆ.
ಇರಾನ್ ವಿಧಿಸಿದ ಷರತ್ತುಗಳೇನು..?
ಈ ಬಗ್ಗೆ ಸಂದರ್ಶನವೊದರಲ್ಲಿ ಮಾತನಾಡಿದ ಮಾಜಿದ್ ತಖ್ತ್-ರವಾಂಚಿ ಅವರು ಅಮೆರಿಕಕ್ಕೆ ನೇರ ಸವಾಲು ಹಾಕಿದ್ದಾರೆ.
ನಿರ್ಬಂಧಗಳ ತೆರವು: ಈಗ ಚೆಂಡು ಅಮೆರಿಕದ ಅಂಗಳದಲ್ಲಿದೆ. ವಾಷಿಂಗ್ಟನ್ ನಮ್ಮ ಮೇಲಿನ ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕಲು ಸಿದ್ಧವಿದ್ದರೆ ಮಾತ್ರ ನಾವು ಪರಮಾಣು ವಿಷಯಗಳ ಬಗ್ಗೆ ಚರ್ಚಿಸಲು ಸಿದ್ಧ ಎಂದು ರವಾಂಚಿ ಸ್ಪಷ್ಟಪಡಿಸಿದ್ದಾರೆ.
ಯುರೇನಿಯಂ ಪುಷ್ಟೀಕರಣ: ಅಮೆರಿಕವು ಈ ಹಿಂದೆ ಯುರೇನಿಯಂ ಪುಷ್ಟೀಕರಣವನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಆಗ್ರಹಿಸಿತ್ತು. ಆದರೆ, ಶೂನ್ಯ ಪುಷ್ಟೀಕರಣ ಎಂಬ ವಿಷಯವೇ ಈಗ ಚರ್ಚೆಯಲ್ಲಿಲ್ಲ. ಅದು ನಮ್ಮ ಹಕ್ಕು ಎಂದು ಇರಾನ್ ಖಡಾಖಡಿಯಾಗಿ ಹೇಳಿದೆ.
ಕ್ಷಿಪಣಿ ಕಾರ್ಯಕ್ರಮ: ಇರಾನ್ ತನ್ನ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮದ ಬಗ್ಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಪುನರುಚ್ಚರಿಸಿದೆ. ನಮ್ಮ ಕ್ಷಿಪಣಿಗಳು ನಮ್ಮ ರಕ್ಷಣಾ ಕವಚಗಳು, ನಾವು ಅದನ್ನು ಬಿಟ್ಟುಕೊಡುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ಡೆಡ್‌ಲೈನ್ ಮತ್ತು ಎಚ್ಚರಿಕೆ
ಶ್ವೇತಭವನದಲ್ಲಿ ಮಾತನಾಡಿದ ಅಧ್ಯಕ್ಷ ಟ್ರಂಪ್, ಇರಾನ್‌ನೊಂದಿಗಿನ ಮಾತುಕತೆಯನ್ನು ಸಕಾರಾತ್ಮಕ ಎಂದು ಕರೆದರೂ, ಅದರ ಹಿಂದೆಯೇ ಕಟು ಎಚ್ಚರಿಕೆಯನ್ನೂ ನೀಡಿದ್ದಾರೆ.
ಸೈನಿಕ ದಾಳಿಯ ಭೀತಿ: ನಮಗೆ ಒಪ್ಪಂದ ಬೇಕು. ಒಂದು ವೇಳೆ ಒಪ್ಪಂದವಾಗದಿದ್ದರೆ, ಮುಂದಿನ ದಿನಗಳು ಇರಾನ್‌ಗೆ ಅತ್ಯಂತ ನೋವಿನಿಂದ ಕೂಡಿರಲಿವೆ. ಅಂತಹ ಪರಿಸ್ಥಿತಿ ಬರಲಿ ಎಂದು ನಾನು ಬಯಸುವುದಿಲ್ಲ, ಆದರೆ ದಾಳಿ ಅನಿವಾರ್ಯವಾಗಬಹುದು ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಒಂದು ತಿಂಗಳ ಗಡುವು: ಮುಂದಿನ ಒಂದು ತಿಂಗಳೊಳಗೆ ಈ ಮಾತುಕತೆಗಳು ತಾರ್ಕಿಕ ಅಂತ್ಯ ಕಾಣಬೇಕು. ಕಾಲಹರಣ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಟ್ರಂಪ್ ಡೆಡ್‌ಲೈನ್ ವಿಧಿಸಿದ್ದಾರೆ.
ಜಿನೀವಾ ಮಾತುಕತೆ: ಏನೆಲ್ಲಾ ಆಗಬಹುದು..?
ಫೆಬ್ರವರಿ 17ರಂದು ಜಿನೀವಾದಲ್ಲಿ ನಡೆಯುವ ಸಭೆಯಲ್ಲಿ ಅಮೆರಿಕದ ಪರವಾಗಿ ಟ್ರಂಪ್ ಅವರ ನಿಕಟವರ್ತಿ ಜೇರೆಡ್ ಕುಶ್ನರ್ ಮತ್ತು ಮಧ್ಯಪ್ರಾಚ್ಯದ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಪಾಲ್ಗೊಳ್ಳುವ ಸಾಧ್ಯತೆಯಿದೆ. ಒಮನ್ ದೇಶವು ಈ ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸುತ್ತಿದೆ,(ಏಜೆನ್ಸೀಸ್).