ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
ಟೆಲ್ಅವಿವ್: ಇರಾನ್ ಮತ್ತು ಅಮೆರಿಕ-ಇಸ್ರೇಲ್ ಸಂಘರ್ಷ ನಡೆಯುತ್ತಿರುವ ಮಧ್ಯೆಯೇ ಇರಾನ್ ತಮ್ಮ ಒಬ್ಬ ಪುತ್ರನನ್ನು ಕೊಲ್ಲಲು ಪ್ರಯತ್ನಿಸಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ಗಂಭೀರ ಆರೋಪ ಮಾಡಿದ್ದಾರೆ.
ಇಸ್ರೇಲ್‌ನ ಚಾನೆಲ್ 14ಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಮಾತನಾಡಿದ ಅವರು, ನಂಬಲಾಗದ ಘಟನೆ ಸಂಭವಿಸಿದೆ. ಇರಾನ್ ನನ್ನ ಒಬ್ಬ ಪುತ್ರನನ್ನು ಗುರಿಯಾಗಿಸಿಕೊಂಡಿದೆ. ಇಬ್ಬರು ಪುತ್ರರಲ್ಲಿ ಒಬ್ಬನನ್ನು ಕೊಲ್ಲಲು ಗಂಭೀರವಾಗಿ ಪ್ರಯತ್ನಿಸಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ನೆತನ್ಯಾಹು ತಮ್ಮ ಇಬ್ಬರು ಪುತ್ರರಾದ ಯೈರ್ ಮತ್ತು ಅವ್ನರ್ ಅವರಲ್ಲಿ ಯಾರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿಲ್ಲ. ಜೊರೆಗೆ ಇರಾನ್ ಯಾವಾಗ, ಎಲ್ಲಿ ಅಥವಾ ಹೇಗೆ? ಪ್ರಯತ್ನಿಸಿತು ಎಂಬುದನ್ನು ಸಹ ಅವರು ವಿವರವಾಗಿ ತಿಳಿಸಲಿಲ್ಲ.
ಇನ್ನೂ ಫೆಬ್ರವರಿಯಲ್ಲಿ ಯುದ್ಧ ಆರಂಭವಾದಾಗಿನಿಂದ ಹೆಚ್ಚಿದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ನೆತನ್ಯಾಹು ಅವರ ಆರೋಪಗಳು ಮಹತ್ವ ಪಡೆದಿದ್ದು, ನೆತನ್ಯಾಹು ಚುನಾವಣೆಯಲ್ಲಿ ಸೋತರೂ ಸಹ, ಕನಿಷ್ಠ ಐದು ವರ್ಷಗಳ ಕಾಲ ತಮ್ಮ ಪತ್ನಿ ಮತ್ತು ಪುತ್ರರಿಗೆ ಭದ್ರತೆ ಒದಗಿಸಲು ದೇಶಿಯ ಭದ್ರತಾ ಸಂಸ್ಥೆ ಶಿನ್ ಬೆಟ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.
ಮುಂಬರುವ ಚುನಾವಣೆಯಲ್ಲಿ ನೆತನ್ಯಾಹು ವಿರುದ್ಧ ಸ್ಪರ್ಧಿಸುತ್ತಿರುವ ಗಡಿ ಐಸೆನ್‌ಕೋಟ್‌ಗೆ ಶಿನ್ ಬೆಟ್ ಭದ್ರತೆ ನೀಡಲು ನಿರಾಕರಿಸಿದೆ ಎಂಬ ವರದಿಗ‘ಳು ಹರಿದಾಡುತ್ತಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ನೆತನ್ಯಾಹು, ಪ್ರಧಾನಿ ಹುದ್ದೆಗೆ ಸ್ಪರ್ಧಿಸುತ್ತಿರುವ ಯಾವುದೇ ಅಭ್ಯರ್ಥಿಗೆ ಸಾಕಷ್ಟು ಭದ್ರತೆ ಒದಗಿಸುವಂತೆ ಶಿನ್ ಬೆಟ್ ಮುಖ್ಯಸ್ಥರೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ (ಏಜೆನ್ಸೀಸ್).