ವಿಶ್ವಯುದ್ಧದ ಬೆದರಿಕೆ... ಇರಾನಿನ ಹಿರಿಯ ಕಮಾಂಡರ್ ನೀಡಿದ ಹೇಳಿಕೆಗೆ ಬೆಚ್ಚಿಬಿದ್ದ ಜಗತ್ತು! Iran Threatens World War
- ಮಧ್ಯಪ್ರಾಚ್ಯದ ಸಂಘರ್ಷದ ಕಿಡಿಗಳು ಜಾಗತಿಕ ಮಟ್ಟದಲ್ಲಿ ಭೀತಿ ಹುಟ್ಟಿಸುತ್ತಿವೆ
- ಒಂದು ವೇಳೆ ಈ ಭಾಗದಲ್ಲಿ ಯುದ್ಧ ಮತ್ತೆ ಭುಗಿಲೆದ್ದರೆ, ಅದು ಕೇವಲ ಪ್ರಾದೇಶಿಕ ಯುದ್ಧವಾಗಿ ಉಳಿಯಲ್ಲ
- ಮತ್ತೆ ಯುದ್ಧ ಶುರುವಾದರೆ ಅದು ವಿಶ್ವಯುದ್ಧ ಆಗಿರಲಿದೆ ಎಂದು ಐಆರ್ಜಿಸಿ ಹಿರಿಯ ಕಮಾಂಡರ್ ವಾರ್ನಿಂಗ್
- ಈ ಸಂಘರ್ಷವು ಇಡೀ ವಿಶ್ವವನ್ನೇ ಆವರಿಸಿಕೊಳ್ಳಲಿದೆ ಎಂದು ಮೊಹಮ್ಮದ್-ರೆಜಾ ನಘ್ಧಿ ಎಚ್ಚರಿಕೆ
Iran Threatens World War : ಮಧ್ಯಪ್ರಾಚ್ಯದ ಸಂಘರ್ಷದ ಕಿಡಿಗಳು ಜಾಗತಿಕ ಮಟ್ಟದಲ್ಲಿ ಭೀತಿ ಹುಟ್ಟಿಸುತ್ತಿವೆ. ಒಂದು ವೇಳೆ ಈ ಭಾಗದಲ್ಲಿ ಯುದ್ಧ ಮತ್ತೆ ಭುಗಿಲೆದ್ದರೆ, ಅದು ಕೇವಲ ಪ್ರಾದೇಶಿಕ ಹೋರಾಟವಾಗಿ ಉಳಿಯದೆ 'ಜಾಗತಿಕ ಮಹಾಯುದ್ಧ'ಕ್ಕೆ ನಾಂದಿಯಾಗಲಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಹಿರಿಯ ಕಮಾಂಡರ್ ನೀಡಿರುವ ಎಚ್ಚರಿಕೆ ಈಗ ಇಡೀ ವಿಶ್ವದ ನಿದ್ದೆಗೆಡಿಸಿದೆ. ಅಸ್ಥಿರತೆಯ ಸುಳಿಯಲ್ಲಿರುವ ಗಲ್ಫ್ ರಾಷ್ಟ್ರಗಳ ಪರಿಸ್ಥಿತಿ ಮತ್ತು ಪ್ರಬಲ ರಾಷ್ಟ್ರಗಳ ನಡುವಿನ ಶೀತಲ ಸಮರವನ್ನು ಗಮನಿಸಿದರೆ, ಈ ಹೇಳಿಕೆಯು ಕೇವಲ ಬೆದರಿಕೆಯಾಗಿ ಉಳಿಯದೆ ಅಂತಾರಾಷ್ಟ್ರೀಯ ಭದ್ರತೆಗೆ ಎದುರಾಗಿರುವ ಗಂಭೀರ ಸವಾಲಾಗಿ ಗೋಚರಿಸುತ್ತಿದೆ.
ಮಧ್ಯಪ್ರಾಚ್ಯದಲ್ಲಿ ಸದ್ಯ ಜಾರಿಯಲ್ಲಿರುವ ಕದನ ವಿರಾಮವು ಅಂತ್ಯಗೊಂಡು, ಒಂದು ವೇಳೆ ಮತ್ತೆ ಯುದ್ಧ ಆರಂಭವಾದರೆ ಅದು 'ಜಾಗತಿಕ ಮಹಾಯುದ್ಧ'ವಾಗಿ ಪರಿಣಮಿಸಲಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಿರಿಯ ಕಮಾಂಡರ್ ಬ್ರಿಗೇಡಿಯರ್ ಜನರಲ್ ಮೊಹಮ್ಮದ್-ರೆಜಾ ನಘ್ಧಿ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಸಂಘರ್ಷವು ಕೇವಲ ಪ್ರಾದೇಶಿಕ ಮಟ್ಟಕ್ಕೆ ಸೀಮಿತವಾಗದೆ ಇಡೀ ವಿಶ್ವವನ್ನೇ ಆವರಿಸಿಕೊಳ್ಳಲಿದೆ ಎಂದು ಮೊಹಮ್ಮದ್-ರೆಜಾ ನಘ್ಧಿ ಅವರು ಎಚ್ಚರಿಸಿದ್ದಾರೆ. ಪ್ರಸ್ತುತ ಶಾಂತಿ ನೆಲೆಸಿದ್ದರೂ, ಯುದ್ಧದ ಕಾರ್ಮೋಡಗಳು ಸಂಪೂರ್ಣವಾಗಿ ಸರಿದಿಲ್ಲ ಎಂಬುದು ಅವರ ಈ ಹೇಳಿಕೆಯಿಂದ ಸ್ಪಷ್ಟವಾಗುತ್ತಿದೆ.
ಅತ್ಯಾಧುನಿಕ ಕ್ಷಿಪಣಿಗಳ ಬಳಕೆ
ಇರಾನ್ ತನ್ನ ರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾ, "ಈ ಬಾರಿ ಯುದ್ಧ ನಡೆದರೆ ನಾವು ಕೇವಲ ಈ ತಿಂಗಳಷ್ಟೇ ಸಿದ್ಧಪಡಿಸಿದ ಅತ್ಯಾಧುನಿಕ ಕ್ಷಿಪಣಿಗಳನ್ನು ಬಳಸಲಿದ್ದೇವೆ" ಎಂದು ನಘ್ಧಿ ಗುಡುಗಿದ್ದಾರೆ. ಹೊಸ ತಂತ್ರಜ್ಞಾನದೊಂದಿಗೆ ತಯಾರಾದ ಈ ಕ್ಷಿಪಣಿಗಳು ಇರಾನ್‌ನ ಸೇನಾ ಶಕ್ತಿಯನ್ನು ಜಗತ್ತಿಗೆ ತೋರಿಸಲಿವೆ ಎಂಬುದು ಅವರ ಉದ್ದೇಶವಾಗಿದೆ. ಬಲಿಷ್ಠ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಇರಾನ್ ಕಮಾಂಡರ್ ಅವರ ಈ ಮಾತುಗಳು ಅಂತರಾಷ್ಟ್ರೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿವೆ.
ಅಮೆರಿಕ-ಇರಾನ್ ನಡುವೆ ಕದನ ವಿರಾಮ ಏರ್ಪಟ್ಟ ಬಳಿಕ ತಣ್ಣಗಾಗಿದ್ದ ಜಾಗತಿಕ ತೈಲ ಸಾಗಣೆಯ ಹೃದಯಸ್ಥಾನ ಹೋರ್ಮುಜ್ ಜಲಸಂಧಿ ಮತ್ತೆ ಪ್ರಕ್ಷುಬ್ಧಗೊಂಡಿದೆ. ಎರಡನೇ ಸುತ್ತಿನ ಶಾಂತಿ ಸಭೆಗೂ ಮುನ್ನ ಇರಾನ್ ಈ ಕ್ರಮ ಕೈಗೊಂಡಿದೆ. ತನ್ನ ಬಂದರುಗಳ ಮೇಲೆ ಅಮೆರಿಕ ನೌಕಾಪಡೆ ದಿಗ್ಬಂಧನ ಹೇರಿದೆ ಎಂದು ಆರೋಪಿಸಿ ಇರಾನ್ ಶನಿವಾರ ಹೋರ್ಮುಜ್ ಅನ್ನು ಮತ್ತೆ ಬಂದ್ ಮಾಡಿದೆ. ಇದರ ಬೆನ್ನಲ್ಲೇ ಹೋರ್ಮುಜ್ ಹಾದಿಯಲ್ಲಿ ಸಂಚರಿಸುತ್ತಿದ್ದ ಭಾರತದ ಸೂಪರ್ ಟ್ಯಾಂಕರ್ ಸೇರಿದಂತೆ ಎರಡು ವಾಣಿಜ್ಯ ಹಡಗುಗಳ ಮೇಲೆ ಇರಾನಿ ಗನ್‌ಬೋಟ್‌ಗಳು ಗುಂಡು ಹಾರಿಸಿವೆ. ಇದರಿಂದಾಗಿ ಹಡಗುಗಳು ವಾಪಸಾಗಿವೆ.
ಖಮೇನಿ ಎಚ್ಚರಿಕೆ
ಶತ್ರುಗಳಿಗೆ 'ಹೊಸ ಕಹಿ ಸೋಲುಣಿಸಲು' ದೇಶದ ನೌಕಾಸೇನೆ ಸಿದ್ಧವಾಗಿದೆ ಎಂದು ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಎಚ್ಚರಿಸಿದ್ದಾರೆ. ಅಮೆರಿಕವು ಕಡಲ್ಗಳ್ಳತನದ ಕೃತ್ಯಗಳನ್ನು ಮುಂದುವರಿಸಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಆರೋಪಿಸಿದೆ. ಹೋರ್ಮುಜ್ ವಿಚಾರವಾಗಿ ಟ್ರಂಪ್ ಒಂದು ಗಂಟೆಯ ಅವಧಿಯಲ್ಲಿ ಏಳು ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಫೇರ್ ಬಿಲಿಬಾಫ್ ಟೀಕಿಸಿದ್ದಾರೆ.
ಇನ್ನು ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಶಾಂತಿ ಮಾತುಕತೆಯ ಬಗ್ಗೆ ಗೊಂದಲ ಮುಂದುವರಿದಿದ್ದು, ಕೊಲ್ಲಿ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಹಾಗೇ ಮುಂದುವರಿದಿದೆ, (ಏಜೆನ್ಸೀಸ್).