ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ
- ಇರಾನ್ ಮೇಲೆ ಇಸ್ರೇಲ್-ಯುಎಸ್ ಜಂಟಿಯಾಗಿ ಕ್ಷಿಪಣಿ ದಾಳಿ
- ಇರಾನ್ ಸುಪ್ರೀಂ ನಾಯಕ ಖಮೇನಿಯೇ ಮುಖ್ಯ ಟಾರ್ಗೆಟ್
- ಖಮೇನಿ ಅವರಿದ್ದ ಬಂಗಲೆ ಕ್ಷಿಪಣಿ ದಾಳಿಗೆ ಉಡೀಸ್
Iran-Israel Conflict: ಪ್ರಸ್ತುತ, ಮಧ್ಯಪ್ರಾಚ್ಯದಲ್ಲಿ ಭಾರೀ ಉದ್ವಿಗ್ನತೆ ಸೃಷ್ಟಿಯಾಗಿದ್ದು, ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ಕ್ಷಿಪಣಿ ದಾಳಿಗೆ ಇರಾನ್ ತತ್ತರಿಸಿದೆ. ಈ ದಾಳಿಯಲ್ಲಿ ಕೆಲವರು ಮೃತಪಟ್ಟಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಜಧಾನಿ ಟೆಹ್ರಾನ್‌ನಲ್ಲಿ ನಡೆದ ಇಸ್ರೇಲ್-ಅಮೆರಿಕ ಜಂಟಿ ದಾಳಿಯ ಮುಖ್ಯ ಗುರಿಯೇ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಮುಗಿಸುವುದು ಎಂದು ಅಂತಾರಾಷ್ಟ್ರೀಯ ವರದಿಗಳು ಉಲ್ಲೇಖಿಸಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ, ಸಾಮಾಜಿಕ ಜಾಲತಾಣಗಳಲ್ಲಿ ಖಮೇನಿ ಉಳಿದಿದ್ದ ಅರಮನೆಗೆ ಕ್ಷಿಪಣಿ ನುಗ್ಗಿ, ಛಿದ್ರಗೊಳಿಸಿರುವ ದೃಶ್ಯಗಳು ಲಭ್ಯವಾಗಿವೆ. ಇಸ್ರೇಲ್ ಗುರಿಗೆ ಅಧ್ಯಕ್ಷ ಮಸೌದ್ ಪೆಸೆಖಿಯಾನ್ ಕೂಡ ಗುರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಖಮೇನಿ ಕಚೇರಿಗಳ ಮೇಲೆ ಮೊದಲಿಗೆ ದಾಳಿ ನಡೆಸಿದ ಇಸ್ರೇಲ್-ಅಮೆರಿಕ, ನಂತರದಲ್ಲಿ ಅವರಿದ್ದ ಬಂಗಲೆಯನ್ನು ಗುರಿಯಾಗಿಸಿದೆ. ವರದಿಗಳ ಪ್ರಕಾರ, ಖಮೇನಿ ಟೆಹ್ರಾನ್‌ನಲ್ಲಿ ಇರಲಿಲ್ಲ. ಬದಲಿಗೆ ಈ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಪಡೆದಿದ್ದ ಅವರು, ಸುರಕ್ಷಿತ ಸ್ಥಳಕ್ಕೆ ದಾಳಿಗೂ ಮೊದಲೇ ಸ್ಥಳಾಂತರಗೊಂಡಿದ್ದಾಗಿ 'ರಾಯಿಟರ್ಸ್' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
'ಚಾನೆಲ್ 12 ವರದಿ' ಪ್ರಕಾರ, ಖಮೇನಿ ಅವರ ಬಂಗಲೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಇಲ್ಲಿ ಖಮೇನಿಯನ್ನು ಮಾತ್ರ ಟಾರ್ಗೆಟ್ ಮಾಡಿಕೊಳ್ಳದ ಇಸ್ರೇಲ್, ಇರಾನ್‌ನ ಎಲ್ಲಾ ಉನ್ನತ ನಾಯಕರನ್ನು ತನ್ನ ಹಿಟ್ಲಿಸ್ಟ್ ಪಟ್ಟಿಯಲ್ಲಿ ಸೇರಿಸತ್ತು ಎನ್ನಲಾಗಿದೆ. ಈಗ ಖಮೇನಿ ಅವರಿದ್ದ ಎನ್ನಲಾದ ಅರಮನೆಯ ಸ್ಯಾಟಿಲೈಟ್ ಫೋಟೋಗಳು ಹೊರಬಿದ್ದಿದ್ದು, ದಾಳಿಯ ಪರಿಣಾಮ ಹೇಗಿದೆ ಎಂಬುದನ್ನು ಒತ್ತಿ ಹೇಳುತ್ತಿವೆ,(ಏಜೆನ್ಸೀಸ್).