ಯುದ್ಧದಲ್ಲಿ ಶತ್ರುಗಳಿಗೆ ಭಾರಿ ಪೆಟ್ಟು: ಅಮೆರಿಕ-ಇಸ್ರೇಲ್ ವಿರುದ್ಧ ಗೆಲುವು ಸಾಧಿಸಿರುವುದಾಗಿ ಇರಾನ್ ಸುಪ್ರೀಂ ಲೀಡರ್ ಘೋಷಣೆ! Ayatollah Mojtaba Khamenei  
ವಿದೇಶ

ಯುದ್ಧದಲ್ಲಿ ಶತ್ರುಗಳಿಗೆ ಭಾರಿ ಪೆಟ್ಟು: ಅಮೆರಿಕ-ಇಸ್ರೇಲ್ ವಿರುದ್ಧ ಗೆಲುವು ಸಾಧಿಸಿರುವುದಾಗಿ ಇರಾನ್ ಸುಪ್ರೀಂ ಲೀಡರ್ ಘೋಷಣೆ! Ayatollah Mojtaba Khamenei

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದ ಯುದ್ಧದ ನಡುವೆ ಅಮೆರಿಕ ಮತ್ತು ಇಸ್ರೇಲ್ ದೇಶಗಳಿಗೆ ನಿರ್ಣಾಯಕ ಪೆಟ್ಟು ಬಿದ್ದಿದೆ ಎಂದ ಇರಾನ್‌
  • ಕದನ ವಿರಾಮ ಮಾತುಕತೆಗಳಲ್ಲಿ ಯಾವುದೇ ಪಾಸಿಟಿವ್​ ಪ್ರಗತಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ ಇರಾನ್ ಸರ್ಕಾರ
  • ಪ್ರಸ್ತುತ ಶತ್ರುಗಳು ಆಳವಾದ ಅವಮಾನ ಎದುರಿಸುತ್ತಿದ್ದಾರೆ ಎಂದ ಸುಪ್ರೀಂ ಲೀಡರ್ ಅಯತೊಲ್ಲಾ ಮೊಜ್ತಬಾ ಖಮೇನಿ
ತೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಯುದ್ಧದ ನಡುವೆ ಅಮೆರಿಕ ಮತ್ತು ಇಸ್ರೇಲ್ ದೇಶಗಳಿಗೆ "ನಿರ್ಣಾಯಕ ಪೆಟ್ಟು" ಬಿದ್ದಿದೆ ಎಂದು ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಮೊಜ್ತಬಾ ಖಮೇನಿ ( Ayatollah Mojtaba Khamenei ) ಗುರುವಾರ (ಜೂನ್​ 04) ಘೋಷಿಸಿದ್ದಾರೆ. ಇದೇ ಸಮಯದಲ್ಲಿ, ಕದನ ವಿರಾಮ ಮಾತುಕತೆಗಳಲ್ಲಿ ಯಾವುದೇ ಪಾಸಿಟಿವ್​ ಪ್ರಗತಿಯಾಗಿಲ್ಲ ಎಂದು ಇರಾನ್ ಸರ್ಕಾರ ಸ್ಪಷ್ಟಪಡಿಸಿದೆ.
ಇಸ್ಲಾಮಿಕ್ ಗಣರಾಜ್ಯದ ಸಂಸ್ಥಾಪಕ ಆಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ಪುಣ್ಯಸ್ಮರಣೆಯ ಅಂಗವಾಗಿ ತೆಹ್ರಾನ್‌ನಲ್ಲಿ ನಡೆದ ಸಮಾರಂಭದಲ್ಲಿ ಮೊಜ್ತಬಾ ಖಮೇನಿ ಪರವಾಗಿ ಸಂದೇಶವನ್ನು ಓದಲಾಯಿತು. ಇರಾನ್ ಮೇಲಿನ ಅಮೆರಿಕದ ಮಿಲಿಟರಿ ಕಾರ್ಯಾಚರಣೆಯನ್ನು ತಡೆಯಲು ಕೋರುವ ನಿರ್ಣಯವನ್ನು ಇತ್ತೀಚೆಗಷ್ಟೇ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಂಗೀಕರಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಕಳೆದ ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಇರಾನ್‌ನ ಮಾಜಿ ಸುಪ್ರೀಂ ಲೀಡರ್ ಹಾಗೂ ಮೊಜ್ತಬಾ ಅವರ ತಂದೆಯಾಗಿದ್ದ ಅಲಿ ಖಮೇನಿ ಮೃತಪಟ್ಟಿದ್ದರು. ಅದೇ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎನ್ನಲಾದ 56 ವರ್ಷದ ಪ್ರಸ್ತುತ ನಾಯಕ ಮೊಜ್ತಬಾ ಖಮೇನಿ ಅಂದಿನಿಂದ ಇಂದಿನವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇರಾನ್‌ನ ಇತಿಹಾಸದಲ್ಲಿ 1989 ರಿಂದಲೂ ಪ್ರತಿ ವರ್ಷ ಜೂನ್ 4 ರಂದು ಸುಪ್ರೀಂ ಲೀಡರ್ ಸಾಂಪ್ರದಾಯಿಕ ಭಾಷಣ ಮಾಡುವುದು ವಾಡಿಕೆಯಾಗಿತ್ತು, ಆದರೆ ಈ ಬಾರಿ ಗುರುವಾರ ನಡೆದ ಸಮಾರಂಭದಲ್ಲಿ ಮೊಜ್ತಬಾ ಖಮೇನಿ ಅವರ ಭಾವಚಿತ್ರವಿದ್ದ ಖಾಲಿ ಕುರ್ಚಿಯನ್ನಷ್ಟೇ ಇರಿಸಲಾಗಿತ್ತು ಎಂದು ಇರಾನ್ ಸರ್ಕಾರಿ ವಾಹಿನಿಯ ದೃಶ್ಯಾವಳಿಗಳು ತಿಳಿಸಿವೆ.
ಇನ್ನೂ ಮೊಜ್ತಬಾ ಖಮೇನಿ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಇರಾನ್​ ಜನತೆಗೆ ಸಂದೇಶ ಸಾರಿದ್ದಾರೆ. ದುಷ್ಟ ಶತ್ರು ಸಶಸ್ತ್ರ ಪಡೆಗಳೊಂದಿಗಿನ ಮುಖಾಮುಖಿಯಲ್ಲಿ ಸೋಲನ್ನು ಅನುಭವಿಸಿದ್ದಾನೆ. ಮಿಲಿಟರಿ ಯುದ್ಧಭೂಮಿಯಲ್ಲಿ ಮಾತ್ರವಲ್ಲದೆ, ಇರಾನ್‌ನ ಸಾರ್ವಜನಿಕ ಬೀದಿಗಳಲ್ಲೂ ಶತ್ರುಗಳಿಗೆ ನಿರ್ಣಾಯಕ ಪೆಟ್ಟು ಬಿದ್ದಿರುವುದರಿಂದ ಅವರು ಪ್ರಸ್ತುತ ತೀವ್ರವಾದ ಹಾಗೂ ಆಳವಾದ ಅವಮಾನವನ್ನು ಎದುರಿಸುತ್ತಿದ್ದಾರೆ ಎಂದಿದ್ದಾರೆ. ಈ ಮೂಲಕ ಅಮರಿಕ ಮತ್ತು ಇಸ್ರೇಲ್​ ವಿರುದ್ಧದ ಯುದ್ಧದಲ್ಲಿ ಜಯ ಗಳಿಸಿರುವುದಾಗಿ ಖಮೇನಿ ಘೋಷಣೆ ಮಾಡಿದ್ದಾರೆ.
ಶತ್ರುಗಳು ತಮ್ಮ ಹೈಬ್ರಿಡ್ ಯುದ್ಧದ ತಂತ್ರಗಳನ್ನು ಮುಖ್ಯವಾಗಿ ಎರಡು ಅಂಶಗಳ ಮೇಲೆ ಕೇಂದ್ರೀಕರಿಸಿದ್ದಾರೆ, ಒಂದು ಇರಾನ್ ಜನರ ಧೈರ್ಯವನ್ನು ಕುಗ್ಗಿಸುವುದು, ಮತ್ತೊಂದು ದೇಶದ ಅಧಿಕಾರಿಗಳ ನಿರ್ಧಾರಗಳಲ್ಲಿ ತಪ್ಪುಗಳಾಗುವಂತೆ ಮಾಡುವುದು. ಈ ಎರಡೂ ಉದ್ದೇಶಗಳಿಗಾಗಿ ಅವರು ದೇಶದಲ್ಲಿ ಅಪನಂಬಿಕೆ, ಹತಾಶೆ, ಭಯ ಮತ್ತು ಭಿನ್ನಾಭಿಪ್ರಾಯದ ಬೀಜಗಳನ್ನು ಬಿತ್ತುತ್ತಿದ್ದಾರೆ ಎಂದು ಖಮೇನಿ ಹೇಳಿದ್ದಾರೆ.
ಇಂತಹ ಕೆಟ್ಟ ಆಲೋಚನೆಗಳನ್ನು ಎದುರಿಸಲು ಪ್ರತಿಯೊಬ್ಬರೂ ದೃಢತೆ, ಒಳನೋಟ, ಒಗ್ಗಟ್ಟು ಮತ್ತು ಸಾಮರಸ್ಯವನ್ನು ಕಾಯ್ದುಕೊಳ್ಳುವ ಮೂಲಕ ಶತ್ರುಗಳ ದುಷ್ಟ ಸಂಚನ್ನು ಹತ್ತಿಕ್ಕಬೇಕು. ಅಮೆರಿಕ ನೇತೃತ್ವದ ಸಾಮ್ರಾಜ್ಯಶಾಹಿಯು ಕಳೆದ 80 ವರ್ಷಗಳಲ್ಲಿ 'ಇಸ್ರೇಲ್' ಎಂಬ ಮಿಲಿಟರಿ ನೆಲೆಯನ್ನು ನಿರ್ಮಿಸಿದೆ. ಅವರು ಕಲ್ಪಿಸಿಕೊಂಡಿರುವ ಗ್ರೇಟರ್ ಇಸ್ರೇಲ್‌ನ ಅಕ್ರಮ ಭೌಗೋಳಿಕತೆಯ ಪೂರ್ವ ಗಡಿಯಲ್ಲಿ ಇರಾನ್‌ನಂತಹ ಬಲಿಷ್ಠ ಮತ್ತು ಸ್ವತಂತ್ರ ದೇಶ ಅಸ್ತಿತ್ವದಲ್ಲಿರುವುದನ್ನು ಅವರು ಎಂದಿಗೂ ಒಪ್ಪುವುದಿಲ್ಲ ಎಂದು ಮೊಜ್ತಬಾ ಖಮೇನಿ ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಇರಾನ್ ದೇಶದ ಜನರಲ್ಲಿ ಅಪನಂಬಿಕೆ ಹಾಗೂ ನಿರಾಶೆಯನ್ನು ಮೂಡಿಸುವ ಯಾವುದೇ ಕ್ರಮ ಕೈಗೊಂಡರೂ, ಅದನ್ನು ಆ ದೇಶಕ್ಕೆ ಮತ್ತು ಅಲ್ಲಿನ ಜನರಿಗೆ ಮಾಡುವ ದ್ರೋಹ ಹಾಗೂ ಶತ್ರುಗಳಿಗೆ ನೀಡುವ ನೇರ ಬೆಂಬಲ ಎಂದೇ ಪರಿಗಣಿಸಲಾಗುತ್ತದೆ ಎಂದು ತಿಳಿಸಿರುವ ಮೊಜ್ತಬಾ ಖಮೇನಿ ಅವರು, ಇರಾನ್ ರಾಷ್ಟ್ರಕ್ಕೆ ಅಂತಿಮ ಜಯ ಸಿಗಲಿ ಹಾಗೂ ದೇಶವು ಪ್ರಗತಿ ಮತ್ತು ಭವ್ಯತೆಯ ಅತ್ಯುನ್ನತ ಶಿಖರವನ್ನು ತಲುಪುವಂತಾಗಲಿ ಎಂದು ದೇವರಲ್ಲಿ ಖಮೇನಿ ಪ್ರಾರ್ಥಿಸಿದ್ದಾರೆ, (ಏಜೆನ್ಸೀಸ್​).