ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಡಿ!; ಅಮೆರಿಕದ ಹೈಟೆಕ್ MQ-1 ಡ್ರೋನ್ ಹೊಡೆದುರುಳಿಸಿದ ಇರಾನ್!  
ವಿದೇಶ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಡಿ!; ಅಮೆರಿಕದ ಹೈಟೆಕ್ MQ-1 ಡ್ರೋನ್ ಹೊಡೆದುರುಳಿಸಿದ ಇರಾನ್! Iran shoots down US MQ-1 drone

ಟೆಹ್ರಾನ್: ಗಲ್ಫ್ ವಲಯದಲ್ಲಿ ಯುದ್ಧದ ಭೀತಿ ಮತ್ತಷ್ಟು ಉಲ್ಬಣಗೊಂಡಿದೆ. ಅಮೆರಿಕದ ಪ್ರಮುಖ ಕಣ್ಗಾವಲು ಹಾಗೂ ದಾಳಿ ನಡೆಸುವ ಯುದ್ಧ ಡ್ರೋನ್ ಎಂಕ್ಯೂ-೧ (Iran shoots down US MQ-1 drone) ಅನ್ನು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ವಾಯು ರಕ್ಷಣಾ ಪಡೆಗಳು ಭಾನುವಾರ ಮುಂಜಾನೆ ಕ್ಷಿಪಣಿ ದಾಳಿಯ ಮೂಲಕ ಹೊಡೆದುರುಳಿಸಿವೆ. ಇರಾನ್‌ನ ಗಡಿಯೊಳಗೆ ನುಗ್ಗಿ ವಿನಾಶಕಾರಿ ಕಾರ್ಯಾಚರಣೆ ನಡೆಸಲು ಯತ್ನಿಸುತ್ತಿದ್ದ ವೇಳೆ ಈ ಡ್ರೋನ್ ಅನ್ನು ಗುರುತಿಸಿ ಆಕಾಶದಲ್ಲೇ ಧ್ವಂಸ ಮಾಡಲಾಗಿದೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮಗಳು ಜಾಗತಿಕವಾಗಿ ಸುದ್ದಿಯನ್ನು ಬಿತ್ತರಿಸಿವೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಅಮೆರಿಕದ ಮತ್ತೊಂದು ಅತ್ಯಾಧುನಿಕ ‘MQ-9’ ಡ್ರೋನ್ ಅನ್ನು ಹೊಡೆದುರುಳಿಸಿದ್ದ ಇರಾನ್, ಈಗ ಎರಡನೇ ಬಾರಿಗೆ ಅಮೆರಿಕದ ರಕ್ಷಣಾ ವ್ಯವಸ್ಥೆಗೆ ಭೀಕರ ಪೆಟ್ಟು ನೀಡಿದೆ.

ಸುಧಾರಿತ ಆಂಟಿ-ಮಿಸೈಲ್ ದಾಳಿಗೆ ಹಾರಿದ ಡ್ರೋನ್; ಅಮೆರಿಕ ಸೌನತ್!

ಇರಾನ್‌ನ ಅರೆ-ಅಧಿಕೃತ ಸುದ್ದಿ ಸಂಸ್ಥೆ ‘ತಸ್ನಿಮ್’ ವರದಿ ಮಾಡಿರುವ ಪ್ರಕಾರ, ಭಾನುವಾರ ಮುಂಜಾನೆ ಅಮೆರಿಕ ಮಿಲಿಟರಿಗೆ ಸೇರಿದ ಯುದ್ಧ ಡ್ರೋನ್ ಇರಾನ್‌ನ ಪ್ರಾದೇಶಿಕ ವಾಯುಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿತ್ತು. ಅಲ್ಲದೆ, ಇರಾನ್‌ನ ರಹಸ್ಯ ಮಿಲಿಟರಿ ನೆಲೆಗಳ ಮೇಲೆ ಕಣ್ಣಿಡಲು ಮತ್ತು ದಾಳಿ ನಡೆಸುವ ಗುರಿಯೊಂದಿಗೆ ಇದು ಬಂದಿತ್ತು ಎನ್ನಲಾಗಿದೆ. ಇದನ್ನು ತಕ್ಷಣವೇ ಪತ್ತೆಹಚ್ಚಿದ ಇರಾನ್‌ನ ಸುಧಾರಿತ ವಾಯು ರಕ್ಷಣಾ ರೇಡಾರ್ ವ್ಯವಸ್ಥೆಗಳು, ಅತ್ಯಾಧುನಿಕ ಡಿಫೆನ್ಸ್ ಕ್ಷಿಪಣಿಗಳನ್ನು ಉಡಾಯಿಸುವ ಮೂಲಕ ಡ್ರೋನ್ ಅನ್ನು ಸಂಪೂರ್ಣವಾಗಿ ನಾಶಪಡಿಸಿವೆ.
ಇಷ್ಟೇ ಅಲ್ಲದೆ, ತಮ್ಮ ವಾಯುಪ್ರದೇಶಕ್ಕೆ ನುಗ್ಗಿದ್ದ ಅಮೆರಿಕದ ಫೈಟರ್ ಜೆಟ್ ಒಂದರ ಮೇಲೂ ಇರಾನ್ ಪಡೆಗಳು ಭೀಕರವಾಗಿ ಗುಂಡಿನ ದಾಳಿ ನಡೆಸಿರುವುದಾಗಿ ವರದಿಯಾಗಿದೆ. ಈ ಘಟನೆಯ ಕುರಿತು ಅಮೆರಿಕದ ರಕ್ಷಣಾ ಇಲಾಖೆ 'ಪೆಂಟಗನ್' ಕಡೆಯಿಂದ ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲವಾದರೂ, ಗಲ್ಫ್ ವಲಯದಲ್ಲಿ ಭೀಕರ ಉದ್ವಿಗ್ನತೆ ಸೃಷ್ಟಿಯಾಗಿದೆ.

ಹೊರ್ಮುಜ್ ಜಲಸಂಧಿಯ ಮೇಲೆ ಕಂಪ್ಲೀಟ್ ಕಂಟ್ರೋಲ್; ಜಾಗತಿಕ ತೈಲ ಮಾರುಕಟ್ಟೆಗೆ ಆಪತ್ತು?

ಡ್ರೋನ್ ಹೊಡೆದುರುಳಿಸಿದ ಬೆನ್ನಲ್ಲೇ, ಜಾಗತಿಕ ವ್ಯಾಪಾರದ ಜೀವನಾಡಿಯಾಗಿರುವ 'ಹೊರ್ಮುಜ್ ಜಲಸಂಧಿಯ ಮೇಲೆ ಇರಾನ್ ತನ್ನ ಸಂಪೂರ್ಣ ಸಾರ್ವಭೌಮತ್ವವನ್ನು ಘೋಷಿಸಿದೆ. ಇರಾನ್‌ನ ಖಾತಮ್ ಅಲ್-ಅನ್ಬಿಯಾ ಕೇಂದ್ರ ಕಚೇರಿಯು ಕಟ್ಟುನಿಟ್ಟಿನ ಮಿಲಿಟರಿ ಆದೇಶ ಹೊರಡಿಸಿದ್ದು, ಹೊರ್ಮುಜ್ ಜಲಸಂಧಿಯ ಸಂಪೂರ್ಣ ನಿಯಂತ್ರಣ ಇರಾನ್ ಸಶಸ್ತ್ರ ಪಡೆಗಳ ಕೈಯಲ್ಲಿದೆ. ಇನ್ಮುಂದೆ ಈ ಮಾರ್ಗದಲ್ಲಿ ಚಲಿಸುವ ಯಾವುದೇ ದೇಶದ ವಾಣಿಜ್ಯ ಹಡಗುಗಳು, ಯುದ್ಧ ನೌಕೆಗಳು ಹಾಗೂ ತೈಲ ಟ್ಯಾಂಕರ್‌ಗಳು ಕಡ್ಡಾಯವಾಗಿ ಇರಾನ್ ನೌಕಾಪಡೆಯಿಂದ ಪೂರ್ವ ಅನುಮತಿ ಪಡೆಯಲೇಬೇಕು ಎಂದು ವಾರ್ನಿಂಗ್ ನೀಡಿದೆ.
ನಿಗದಿಪಡಿಸಿದ ಮಾರ್ಗವನ್ನು ಬಿಟ್ಟು ಬೇರೆ ಕಡೆ ಚಲಿಸಿದರೆ ಅಥವಾ ನಿಯಮ ಉಲ್ಲಂಘಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇರಾನ್ ಎಚ್ಚರಿಸಿದೆ. ಇರಾನ್‌ನ ಈ ಆಕ್ಷನ್ ಪ್ಲಾನ್‌ನಿಂದಾಗಿ ಜಾಗತಿಕ ಇಂಧನ ಮತ್ತು ತೈಲ ಸಾಗಣೆಗೆ ಭಾರಿ ಕುತ್ತು ಬಂದೊದಗಿದೆ.
ಅಮೆರಿಕ ಇತ್ತೀಚೆಗೆ ಇರಾನ್ ನೆಲೆಗಳ ಮೇಲೆ ನಡೆಸಿದ ಸ್ವಯಂ ರಕ್ಷಣೆ ದಾಳಿಗೆ ಪ್ರತಿಕಾರವಾಗಿ ತಾನು ಯಾವುದೇ ರೀತಿಯ ಕಠಿಣ ಕ್ರಮ ಕೈಗೊಳ್ಳಲು ಸಿದ್ಧ ಎಂದು ಇರಾನ್ ಘೋಷಿಸಿರುವುದು ಮುಂಬರುವ ದಿನಗಳಲ್ಲಿ ಮೂರನೇ ಮಹಾಯುದ್ಧದ ಮುನ್ಸೂಚನೆಯಂತೆ ಕಾಣಿಸುತ್ತಿದೆ,(ಏಜೆನ್ಸೀಸ್​).