ಅಮೆರಿಕಕ್ಕೆ ಇರಾನ್ ಮರ್ಮಾಘಾತ: ಹೊರ್ಮುಜ್ ಜಲಸಂಧಿ ಬಳಿ ಯುಎಸ್ ‘MQ-9 ರಿಪರ್ ಡ್ರೋನ್ ಹೊಡೆದುರುಳಿಸಿದ IRGC!
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಭೀತಿ ಆವರಿಸಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪಡೆಗಳು ಬುಧವಾರ ಮುಂಜಾನೆ ಹೊರ್ಮುಜ್ ಜಲಸಂಧಿಯ ಬಳಿ ಅಮೆರಿಕ ಸೇನೆಗೆ ಸೇರಿದ ಅತ್ಯಂತ ಆಧುನಿಕ MQ-9 ರಿಪರ್ (MQ-9 Reaper Shot Down) ಡ್ರೋನ್ ಅನ್ನು ಕ್ಷಿಪಣಿ ದಾಳಿಯ ಮೂಲಕ ಹೊಡೆದುರುಳಿಸಿವೆ. ಡ್ರೋನ್ ಆಕಾಶದಲ್ಲೇ ಹೊತ್ತಿ ಉರಿದು ನೆಲಕ್ಕೆ ಬೀಳುವ ಭೀಕರ ದೃಶ್ಯದ ವಿಡಿಯೋ ತುಣುಕುಗಳು ಈಗ ಜಾಗತಿಕ ಮಾಧ್ಯಮಗಳಲ್ಲಿ ಬಿಡುಗಡೆಯಾಗಿದ್ದು, ಭಾರಿ ಸಂಚಲನ ಮೂಡಿಸಿವೆ.
ಇರಾನ್‌ನ ಬುಶೆಹರ್ ಪ್ರಾಂತ್ಯದ ಜಾಮ್ ಕೌಂಟಿ ಆಕಾಶ ವ್ಯಾಪ್ತಿಯಲ್ಲಿ ಈ ವಾಯು ಸಂಘರ್ಷ ನಡೆದಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಈಗ ಮತ್ತೋಂದು ಹಂತಕ್ಕೆ ತಲುಪಿದೆ.
ಯುದ್ಧ ವಲಯಕ್ಕೆ ನುಗ್ಗಿದ್ದ ಅಮೆರಿಕದ ಅತ್ಯಾಧುನಿಕ ಶಿಕಾರಿ ಡ್ರೋನ್!
ಇರಾನ್‌ನ ಪ್ರಮುಖ ಸುದ್ದಿ ಸಂಸ್ಥೆಯಾದ ತಸ್ನಿಮ್ ವರದಿಯ ಪ್ರಕಾರ, ಪರ್ಷಿಯನ್ ಗಲ್ಫ್‌ನ ಉತ್ತರದ ಆಕಾಶ ಮಾರ್ಗವಾಗಿ ಅಮೆರಿಕದ ಈ ಬೇಹುಗಾರಿಕೆ ಡ್ರೋನ್ ಹೊರ್ಮುಜ್ ಜಲಸಂಧಿಯ ವಾಯು ವಲಯವನ್ನು ಪ್ರವೇಶಿಸಿತ್ತು. ಆ ಸಮಯದಲ್ಲಿ ಇರಾನ್ ಗಡಿಯಲ್ಲಿ ಈಗಾಗಲೇ ವಾಯು ಸಂಘರ್ಷ ಮತ್ತು ತೀವ್ರ ನಿಗಾ ಪ್ರಕ್ರಿಯೆಗಳು ನಡೆಯುತ್ತಿದ್ದವು. ಈ ಯುದ್ಧದ ಸನ್ನಿವೇಶದ ಮಧ್ಯೆ ಮಧ್ಯಪ್ರವೇಶಿಸುವ ಅಥವಾ ರಹಸ್ಯ ಮಾಹಿತಿ ಕದಿಯುವ ಉದ್ದೇಶದಿಂದಲೇ ಅಮೆರಿಕ ಈ ಡ್ರೋನ್ ಅನ್ನು ಕಳುಹಿಸಿತ್ತು ಎಂದು ಇರಾನ್ ಗಂಭೀರವಾಗಿ ಆರೋಪಿಸಿದೆ.
ಇರಾನ್ ಗಡಿಯನ್ನು ಅಮೆರಿಕದ ಡ್ರೋನ್ ಅತಿಕ್ರಮಿಸುತ್ತಿದ್ದಂತೆ ಕಾರ್ಯಪ್ರವೃತ್ತರಾದ ಐಆರ್‌ಜಿಸಿಯ ಆಧುನಿಕ ವಾಯು ರಕ್ಷಣಾ ಪಡೆಯ ಯೋಧರು ತಕ್ಷಣವೇ ಕ್ಷಿಪಣಿ ದಾಳಿ ನಡೆಸಿ ಅದನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇರಾನ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಕ್ಷಿಪಣಿ ತಗುಲಿದ ತಕ್ಷಣವೇ ಅಮೆರಿಕದ ಹೆಮ್ಮೆಯ ಡ್ರೋನ್ ಪಲ್ಟಿ ಹೊಡೆದು ಧಗಧಗನೆ ಉರಿಯುತ್ತಾ ಸಮುದ್ರದ ಕಡೆಗೆ ಬೀಳುವ ದೃಶ್ಯಗಳು ಸೆರೆಯಾಗಿವೆ.
ಇರಾನ್ ಖಡಕ್ ವಾರ್ನಿಂಗ್: ಗಡಿ ದಾಟಿದರೆ ಕಠಿಣ ಶಿಕ್ಷೆ ಖಚಿತ!
ಡ್ರೋನ್ ಹೊಡೆದುರುಳಿಸಿದ ಬೆನ್ನಲ್ಲೇ ಐಆರ್‌ಜಿಸಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಹೊರ್ಮುಜ್ ಜಲಸಂಧಿಯಲ್ಲಿ ವಾಯು ಸಂಘರ್ಷ ನಡೆಯುತ್ತಿದ್ದಾಗ, ಪರ್ಷಿಯನ್ ಗಲ್ಫ್ ಕಡೆಯಿಂದ ನಮ್ಮ ಯುದ್ಧ ವಲಯವನ್ನು ಪ್ರವೇಶಿಸಲು ಯತ್ನಿಸಿದ ಅಮೆರಿಕದ MQ-9 ಡ್ರೋನ್ ಅನ್ನು ನಮ್ಮ ವೀರ ಯೋಧರು ಬುಶೆಹರ್ ಪ್ರಾಂತ್ಯದ ಜಾಮ್ ಕೌಂಟಿ ಬಳಿ ಹೊಡೆದು ಉರುಳಿಸಿದ್ದಾರೆ. ನಮ್ಮ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಯತ್ನಿಸುವ ಯಾವುದೇ ಶಕ್ತಿಗಳಿಗೂ ಇದೇ ಗತಿ ಬರಲಿದೆ ಎಂದು ನೇರ ಎಚ್ಚರಿಕೆ ನೀಡಿದೆ.
ಅಮೆರಿಕದ ಮಿಲಿಟರಿ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಈ ಅತ್ಯಾಧುನಿಕ ಡ್ರೋನ್ ನಾಶವಾಗಿರುವುದು ವಾಷಿಂಗ್ಟನ್ ವಲಯದಲ್ಲಿ ತೀವ್ರ ಕಳವಳ ಮೂಡಿಸಿದೆ. ಜಾಗತಿಕ ತೈಲ ಸಾರಿಗೆಯ ಪ್ರಮುಖ ಕೇಂದ್ರವಾಗಿರುವ ಹೊರ್ಮುಜ್ ಜಲಸಂಧಿಯಲ್ಲೇ ಈ ಘಟನೆ ನಡೆದಿರುವುದರಿಂದ ಜಾಗತಿಕ ಮಾರುಕಟ್ಟೆಯ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ದಾಳಿಗೆ ಅಮೆರಿಕ ಸೇನೆ ಯಾವ ರೀತಿ ಪ್ರತಿಕಾರ ತೀರಿಸಿಕೊಳ್ಳಲಿದೆ ಎಂಬುದು ಈಗ ಇಡೀ ಜಗತ್ತಿನ ಕುತೂಹಲಕ್ಕೆ ಕಾರಣವಾಗಿದೆ,(ಏಜೆನ್ಸೀಸ್).