- ಇರಾನ್ ಹಾರ್ಮುಜ್ ಜಲಸಂಧಿ ಬಂದ್
- ಇದು ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿಗೆ ಸಂಪರ್ಕಿಸುವ ಸುಲಭ ಮಾರ್ಗ
- ಭಾರತೀಯ ಹಡಗುಗಳ ಸುರಕ್ಷಿತ ಸಾಗಣೆಗೆ ಇರಾನ್ 2 ಕಂಡೀಷನ್
ನವದೆಹಲಿ: ಇರಾನ್-ಇಸ್ರೇಲ್ ನಡುವಿನ ಭೀಕರ ಯುದ್ಧ ದಾಳಿಯಿಂದ ಸದ್ಯ ಭಾರತದಲ್ಲಿ ಕಳೆದ ಒಂದು ವಾರದಿಂದ ಅನಿಲ ಬಿಕ್ಕಟ್ಟು ತೀವ್ರವಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಸರಬರಾಜು ಸ್ಥಗಿತಗೊಂಡಿವೆ. ಇದರಿಂದ ಹೋಟೆಲ್ ಉದ್ಯಮವನ್ನೇ ನಂಬಿಕೊಂಡು ಬದುಕುತ್ತಿರುವ ಜನರು, ಹೋಟೆಲ್ಗಳನ್ನು ಬಂದ್ ಮಾಡುವ ಮೂಲಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರ ತೀವ್ರ ಗೋಳಾಟಕ್ಕೆ ಶೀಘ್ರವೇ ಬ್ರೇಕ್ ಬೀಳಲಿದೆ ಎನ್ನುವ ಮಧ್ಯೆ ಇರಾನ್ ಶಾಕ್ ಮೇಲೆ ಶಾಕ್ ನೀಡುತ್ತಿದೆ.
ಪ್ರಸ್ತುತ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಯಾವುದೇ ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಬಿಡಕೂಡದು ಎಂದು ರೇಡಿಯೋ ಎಚ್ಚರಿಕೆಗಳನ್ನು ನೀಡಿದೆ. ಇದರ ಪರಿಣಾಮವಾಗಿ ಪ್ರಮುಖ ಜಲಮಾರ್ಗವು ಸಂಪೂರ್ಣವಾಗಿ ಬಂದ್ ಆಗಿದೆ. ಭಾರತ ಸೇರಿದಂತೆ ತೈಲದ ಮೇಲೆ ಶೇ.50ರಿಂದ 60ರಷ್ಟು ಅವಲಂಬಿಸಿದ್ದ ಹಲವು ರಾಷ್ಟ್ರಗಳಿಗೆ ಈಗ ದಿಕ್ಕು ತೋಚದಂತಾಗಿದೆ. ಇರಾನ್ ತೆಗೆದುಕೊಂಡಿರುವ ಈ ಕಟು ನಿರ್ಧಾರವು ಭಾರತದಲ್ಲಿ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ಏರಿಸಿದೆ ಮತ್ತು ಡಿಮಾಂಡ್ ಕೂಡ ಹೆಚ್ಚಿಸಿದೆ.
ಇತ್ತೀಚಿನ ವರದಿ ಪ್ರಕಾರ, ಹಾರ್ಮುಜ್ ಜಲಸಂಧಿಯ ಮೂಲಕ ಭಾರತೀಯ ಹಡಗುಗಳ ಸುರಕ್ಷಿತ ಸಾಗಣೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಇರಾನ್ ಮತ್ತು ಭಾರತದ ಮಧ್ಯೆ ನಿರಂತರ ಮಾತುಕತೆಗಳು ನಡೆಯುತ್ತಿವೆ. ಸದ್ಯ ಎರಡು ಷರತ್ತುಗಳನ್ನು ಭಾರತದ ಮುಂದಿಟ್ಟಿರುವ ಇರಾನ್, ಫೆಬ್ರವರಿಯಲ್ಲಿ ವಶಪಡಿಸಿಕೊಂಡಿದ್ದ ಮೂರು ಇರಾನ್-ಸಂಬಂಧಿತ ಟ್ಯಾಂಕರ್‌ಗಳನ್ನು ಬಿಡುಗಡೆ ಮಾಡುವಂತೆ ತಿಳಿಸಿದೆ ಎಂದು ರಾಯಿಟರ್ಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಈ ಟ್ಯಾಂಕರ್‌ಗಳು ತಮ್ಮ ಗುರುತುಗಳನ್ನು ಮರೆಮಾಚಿವೆ, ಬದಲಾಯಿಸಿವೆ ಮತ್ತು ಸಮುದ್ರದಲ್ಲಿ ಅಕ್ರಮ ಹಡಗಿನಿಂದ ಹಡಗಿನ ವರ್ಗಾವಣೆಯನ್ನು ಕೈಗೊಂಡಿವೆ ಎಂದು ಭಾರತ ಆರೋಪಿಸಿ, ವಶಕ್ಕೆ ಪಡೆದಿತ್ತು. ಈಗ ಇದರ ಬಿಡುಗಡೆಯನ್ನು ಮೊದಲನೇ ಬೇಡಿಕೆಯಾಗಿ ಮುಂದಿಟ್ಟಿರುವ ಇರಾನ್, ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳ ಪೂರೈಕೆಯನ್ನು ಎರಡನೇ ಕಂಡೀಷನ್ ಆಗಿ ಕೋರಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).