Khamenei Residence | ಅಮೆರಿಕ-ಇಸ್ರೇಲ್ ಯುದ್ಧದ ಭೀಕರತೆ ಬಯಲು ಮಾಡಿದ ಆ 35 ಸೆಕೆಂಡ್‌ನ ವಿಡಿಯೋ 
ವಿದೇಶ

ಅಮೆರಿಕ-ಇಸ್ರೇಲ್ ಯುದ್ಧದ ಭೀಕರತೆ ಬಯಲು ಮಾಡಿದ ಆ 35 ಸೆಕೆಂಡ್‌ನ ವಿಡಿಯೋ; ಧ್ವಂಸಗೊಂಡ ಖಮೇನಿ ನಿವಾಸ ನೋಡಿ ಜಗತ್ತೇ ಶಾಕ್! | Khamenei Residence

ಟೆಹ್ರಾನ್: ಫೆಬ್ರವರಿ 28 ರಂದು ನಡೆದ ಅಮೆರಿಕ ಹಾಗೂ ಇಸ್ರೇಲ್ ಜಂಟಿ ವೈಮಾನಿಕ ದಾಳಿಗೆ ಬಲಿಯಾಗಿದ್ದ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಧ್ವಂಸಗೊಂಡ ನಿವಾಸದ (Khamenei Residence) ದೃಶ್ಯಾವಳಿಗಳನ್ನು ಇರಾನ್ ಸರ್ಕಾರಿ ವಾಹಿನಿ ಮತ್ತು ಅವರ ಅಧಿಕೃತ ವೆಬ್‌ಸೈಟ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರದರ್ಶಿಸಿವೆ.
35 ಸೆಕೆಂಡುಗಳ ಕಾಲಾವಧಿಯ ಈ ವಿಡಿಯೋ ತುಣುಕಿನಲ್ಲಿ, ಖಮೇನಿ ಅವರು ತಮ್ಮ ಸುದೀರ್ಘ ಆಡಳಿತಾವಧಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲು ಹಾಗೂ ಪ್ರಮುಖ ಧಾರ್ಮಿಕ ಸಭೆಗಳನ್ನು ನಡೆಸಲು ಬಳಸುತ್ತಿದ್ದ ಟೆಹ್ರಾನ್‌ನ ಇಮಾಮ್ ಖೊಮೇನಿ ಹುಸೈನಿಯಾ ಮುಖ್ಯ ಸಭಾಂಗಣ ಸಂಪೂರ್ಣವಾಗಿ ಧ್ವಂಸಗೊಂಡಿರುವುದನ್ನು ಕಾಣಬಹುದು.
ಯುದ್ಧದ ಆರಂಭಿಕ ದಿನದಲ್ಲೇ ನಡೆದ ಈ ತೀವ್ರ ಸ್ವರೂಪದ ದಾಳಿಯಲ್ಲಿ 86 ವರ್ಷದ ಅಲಿ ಖಮೇನಿ ಜೊತೆಗೆ, ಅವರ 14 ತಿಂಗಳ ಎಳೆಯ ಮೊಮ್ಮಗಳು ಸೇರಿದಂತೆ ಕುಟುಂಬದ ಕೆಲ ಸದಸ್ಯರು ಜೀವ ಕಳೆದುಕೊಂಡಿದ್ದರು. ಇದೇ ದಾಳಿಯಲ್ಲಿ ಅವರ ಮಗ ಹಾಗೂ ಸರ್ವೋಚ್ಚ ನಾಯಕರಾಗಿರುವ ಮೊಜ್ತಬಾ ಅಲಿ ಖಮೇನಿ ಅವರಿಗೂ ಗಂಭೀರ ಗಾಯಗಳಾಗಿದ್ದವು.

ಇರಾಕ್‌ನ ಪವಿತ್ರ ನಗರಗಳಲ್ಲಿ ಭಾರಿ ಮೆರವಣಿಗೆ

ಜುಲೈ 4 ರಂದು ಟೆಹ್ರಾನ್‌ನಲ್ಲಿ ಪ್ರಾರಂಭವಾದ ಆರು ದಿನಗಳ ಸುದೀರ್ಘ ರಾಷ್ಟ್ರೀಯ ಅಂತ್ಯಯಾತ್ರೆಯು ಜುಲೈ 9 ರಂದು ಖಮೇನಿಯ ಸ್ವಂತ ಊರಾದ ಮಶಾದ್‌ನ ಇಮಾಮ್ ರೆಜಾ ದರ್ಗಾದಲ್ಲಿ ನೆರವೇರುವ ದಫನ್ ಕ್ರಿಯೆಯೊಂದಿಗೆ ಪೂರ್ಣಗೊಳ್ಳಲಿದೆ. ಅಂತಿಮ ಸಂಸ್ಕಾರಕ್ಕೂ ಮುನ್ನ ರಾಷ್ಟ್ರಧ್ವಜ ಹೊದಿಸಿದ ಅವರ ಪಾರ್ಥಿವ ಶರೀರವನ್ನು ಇರಾಕ್‌ನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ನಜಾಫ್ ಮತ್ತು ಕರ್ಬಲಾಗೆ ಕೊಂಡೊಯ್ಯಲಾಯಿತು. ನಜಾಫ್‌ನ ಇಮಾಮ್ ಅಲಿ ದರ್ಗಾಕ್ಕೆ ಶರೀರವನ್ನು ತಂದ ವೇಳೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಬೆಂಬಲಿಗರು ಹಾಗೂ ಸಾರ್ವಜನಿಕರು ಅಂತಿಮ ಗೌರವ ಸಲ್ಲಿಸಿದರು.
ಕರ್ಬಲಾದಲ್ಲಿ ಮೆರವಣಿಗೆ ಪೂರ್ಣಗೊಂಡ ಬಳಿಕ ಅಂತಿಮ ಸಂಸ್ಕಾರಕ್ಕಾಗಿ ಶರೀರವನ್ನು ವಿಮಾನದ ಮೂಲಕ ಮತ್ತೆ ಇರಾನ್‌ಗೆ ತರಲಾಗಿದ್ದು, ಟೆಹ್ರಾನ್, ಖುಮ್, ನಜಾಫ್ ಹಾಗೂ ಕರ್ಬಲಾಗಳಲ್ಲಿ ಸಾಗಿಬಂದ ಈ ಅಂತ್ಯಯಾತ್ರೆಯಲ್ಲಿ ಪ್ರಪಂಚದ ವಿವಿಧ ರಾಷ್ಟ್ರಗಳ ರಾಜತಾಂತ್ರಿಕರು, ರಾಜಕೀಯ ಗಣ್ಯರು ಹಾಗೂ ಲಕ್ಷಾಂತರ ನಾಗರಿಕರು ಭಾಗವಹಿಸಿದ್ದರು.

ಅಂತ್ಯಕ್ರಿಯೆಯಿಂದ ದೂರವುಳಿದ ಖಮೇನಿ ಪುತ್ರ

ಕಳೆದ ಅನೇಕ ದಿನಗಳಿಂದ ತಂದೆಯ ಅಂತ್ಯಕ್ರಿಯೆಯ ಕಾರ್ಯಕ್ರಮಗಳು ನಡೆಯುತ್ತಿದ್ದರೂ, ಮೊಜ್ತಬಾ ಖಮೇನಿ ಮಾತ್ರ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ವೈಮಾನಿಕ ದಾಳಿಯ ವೇಳೆ ಗಾಯಗೊಂಡಿದ್ದರಿಂದ ಭದ್ರತೆಯ ದೃಷ್ಟಿಯಿಂದ ಪ್ರಸ್ತುತ ರಹಸ್ಯ ತಾಣದಲ್ಲಿಯೇ ನೆಲೆಸಿದ್ದಾರೆ ಎಂದು ಹೇಳಲಾಗಿದೆ(ಏಜೆನ್ಸೀಸ್​).